ವಜ್ರದ ಹರಳು ವಶಕ್ಕೆ ಕೋರಿದ್ದ ಮಹಿಳೆಯ ಮನವಿ ವಜಾಗೊಳಿಸಿದ ಹೈಕೋರ್ಟ್

7
ಕಟ್ಟಡ ಕೆಡವಿದಾಗ ದೊರೆತಿದ್ದ ವಜ್ರಗಳ ಗಂಟು

ವಜ್ರದ ಹರಳು ವಶಕ್ಕೆ ಕೋರಿದ್ದ ಮಹಿಳೆಯ ಮನವಿ ವಜಾಗೊಳಿಸಿದ ಹೈಕೋರ್ಟ್

Published:
Updated:

ಬೆಂಗಳೂರು: ಮೂರು ದಶಕಗಳ ಹಿಂದೆ ನಗರದ ಕೆ.ಎಚ್.ರಸ್ತೆಯ ಹಳೆಯ ಕಟ್ಟಡವೊಂದರ ಗೋಡೆಯಲ್ಲಿ ಪತ್ತೆಯಾಗಿದ್ದ ಸಾವಿರಕ್ಕೂ ಹೆಚ್ಚು ವಜ್ರದ ಹರಳುಗಳನ್ನು ತಮ್ಮ ವಶಕ್ಕೆ ನೀಡುವಂತೆ ಕೋರಿ ಮಹಿಳೆಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ಈ ಸಂಬಂಧ ತಮಿಳುನಾಡಿನ ಧರ್ಮಪುರ ಜಿಲ್ಲೆಯ ಕಡತ್ತೂರು ನಿವಾಸಿ ಉಮಾ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಆರ್.ದೇವದಾಸ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಜಾ ಮಾಡಿದೆ.

ವಿಚಾರಣೆ ವೇಳೆ ಸರ್ಕಾರದ ಪರ ವಕೀಲ ಟಿ.ಎಸ್.ಮಹಾಂತೇಶ್‌, ‘ಟ್ರೆಷರ್ ಟ್ರೋವ್ ಅಧಿನಿಯಮದ ಪ್ರಕಾರ, ನಿಧಿ ದೊರೆತ ಸ್ಥಳದ ಮಾಲೀಕ ಅಥವಾ ನಿಧಿ ಪತ್ತೆ ಹಚ್ಚುವವರಿಗೆ ಮಾತ್ರ ದೊರೆತ ನಿಧಿಯಲ್ಲಿ ಪಾಲು ಕೊಡಬೇಕಿದೆ’ ಎಂದು ತಿಳಿಸಿದರು.

‘ಪ್ರಕರಣದಲ್ಲಿ ಅರ್ಜಿದಾರರು ನಿಧಿ ದೊರೆತ ಸ್ಥಳದ ಮಾಲೀಕರೂ ಅಲ್ಲ ಅಥವಾ ನಿಧಿ ಪತ್ತೆ ಹಚ್ಚಿದವರೂ ಅಲ್ಲ. ಹೀಗಾಗಿ, ಅವರಿಗೆ ಹರಳು ನೀಡಲು ಅವಕಾಶವಿಲ್ಲ’ ಎಂದು ವಾದ ಮಂಡಿಸಿದರು.

ಈ ವಾದ ಪುರಸ್ಕರಿಸಿದ ನ್ಯಾಯಪೀಠವು ಅರ್ಜಿ ವಜಾಗೊಳಿಸಿದೆ.

ವಜ್ರದ ಹರಳುಗಳ ಒಟ್ಟು ಮೌಲ್ಯ ₹ 22 ಲಕ್ಷಕ್ಕೂ ಅಧಿಕ ಎಂದು ಅಂದಾಜಿಸಲಾಗಿತ್ತು.

ಪ್ರಕರಣವೇನು?: 1988ರಲ್ಲಿ ನಗರದ ಕೆ.ಎಚ್.ರಸ್ತೆಯ ಹಳೆಯ ಕಟ್ಟಡವೊಂದನ್ನು ನೆಲಸಮಗೊಳಿಸಲಾಗಿತ್ತು. ಕಟ್ಟಡದ ಗೋಡೆ ಕೆಡವಿದಾಗ ಕೂಲಿ ಕಾರ್ಮಿಕ ರಾಜು ಎಂಬುವರಿಗೆ 84 ಕ್ಯಾರೆಟ್‌ ಹಾಗೂ 97 ಸೆಂಟ್‌ಗಳ 1,246 ಬಿಳಿಯ ವಜ್ರದ ಹರಳು ಪತ್ತೆಯಾಗಿದ್ದವು.

ಇವುಗಳನ್ನು ರಾಜು, ಅಪ್ಪಾಸ್ವಾಮಿ ಮತ್ತು ಚಕ್ರವರ್ತಿ ಎಂಬುವರಿಗೆ ಮಾರಾಟ ಮಾಡಿದ್ದ.  ಈ ವಿಷಯ ತಿಳಿಯುತ್ತಿದ್ದಂತೆಯೇ, ಕಟ್ಟಡ ಕೆಡವಲು ಗುತ್ತಿಗೆ ಪಡೆದಿದ್ದ  ಮೊಹಮ್ಮದ್ ವಾಸಿಂ ಪೊಲೀಸರಿಗೆ ದೂರು ನೀಡಿದ್ದರು. ದೂರು ಸ್ವೀಕರಿಸಿದ್ದ ಪೊಲೀಸರು ಚಕ್ರವರ್ತಿಯಿಂದ ವಜ್ರದ ಹರಳುಗಳನ್ನು ವಶಕ್ಕೆ ಪಡೆದಿದ್ದರು. ಇದಾದ ಹಲವು ವರ್ಷಗಳ ಬಳಿಕ ಚಕ್ರವರ್ತಿ ಸಾವನ್ನಪ್ಪಿದ್ದರು.

ನಂತರ ಚಕ್ರವರ್ತಿಯ ಪತ್ನಿ ಉಮಾ, ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ, ಪತಿಯಿಂದ ವಶಕ್ಕೆ ಪಡೆದಿದ್ದ ವಜ್ರದ ಹರಳುಗಳನ್ನು, ‘ನನ್ನ ವಶಕ್ಕೆ ಕೊಡಿ’ ಎಂದು ಕೋರಿದ್ದರು.

ಈ ಅರ್ಜಿಯನ್ನು ಜಿಲ್ಲಾಧಿಕಾರಿ 2009ರ ಡಿಸೆಂಬರ್ 15ರಂದು ವಜಾಗೊಳಿಸಿದ್ದರು. ಇದನ್ನು ಪ್ರಶ್ನಿಸಿ ಉಮಾ ಹೈಕೋರ್ಟ್‌ಗೆ ರಿಟ್‌ ಅರ್ಜಿ ಸಲ್ಲಿಸಿದ್ದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !