ಅಧಿಕಾರಿ, ಜನಪ್ರತಿನಿಧಿಗಳ ನಿರ್ಲಕ್ಷ್ಯ:ದುರಸ್ತಿಯಾಗದ ಶುದ್ಧ ನೀರಿನ ಘಟಕ–ರಸ್ತೆ..!

ಶನಿವಾರ, ಮೇ 25, 2019
27 °C
ಗ್ರಾಮಸ್ಥರ ಆಕ್ರೋಶ

ಅಧಿಕಾರಿ, ಜನಪ್ರತಿನಿಧಿಗಳ ನಿರ್ಲಕ್ಷ್ಯ:ದುರಸ್ತಿಯಾಗದ ಶುದ್ಧ ನೀರಿನ ಘಟಕ–ರಸ್ತೆ..!

Published:
Updated:
Prajavani

ಕೊಲ್ಹಾರ: ತಾಲ್ಲೂಕಿನ ರೋಣಿಹಾಳ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಿರೇಗರಸಂಗಿ ಹಾಗೂ ಚಿಕ್ಕಗರಸಂಗಿ ಗ್ರಾಮಗಳ ಮುಖ್ಯ ರಸ್ತೆ ಹದಗೆಟ್ಟು ಹಲ ವರ್ಷಗಳೇ ಗತಿಸಿವೆ. ಇನ್ನೂ ಗ್ರಾಮದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ಹೋಗಿ ಏಳು ತಿಂಗಳು ಗತಿಸಿದೆ.

ಈ ಸಮಸ್ಯೆಗಳನ್ನು ಸರಿಪಡಿಸಬೇಕಾದ ಗ್ರಾಮ ಪಂಚಾಯ್ತಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸಿರುವುದಕ್ಕೆ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಿರೇಗರಸಂಗಿ ಹಾಗೂ ಚಿಕ್ಕಗರಸಂಗಿ ಅವಳಿ ಗ್ರಾಮಗಳಂತೆ ಅಕ್ಕಪಕ್ಕದಲ್ಲಿರುವ ಗ್ರಾಮಗಳು. ಕೊಲ್ಹಾರ ಪಟ್ಟಣದಿಂದ ಕೆಲವೇ ಕಿ.ಮೀ.ಗಳ ಅಂತರದಲ್ಲಿವೆ. ಈ ಗ್ರಾಮಗಳ ಮುಖ್ಯ ರಸ್ತೆ ಹಲ ವರ್ಷಗಳಿಂದ ಸಂಪೂರ್ಣ ಹದಗೆಟ್ಟು ಹೋಗಿದೆ.

ನಿತ್ಯವೂ ಈ ರಸ್ತೆಯಲ್ಲಿ ಸಂಚರಿಸುವ ಅನೇಕ ವಾಹನ ಸವಾರರು ಬಿದ್ದು ಗಾಯಗೊಂಡಿದ್ದಾರೆ. ಇಂದಿಗೂ ಭಯದಲ್ಲೇ ಸಂಚಾರ ನಡೆಸುವಂತಾಗಿದೆ. ಸ್ವತಃ ಗ್ರಾಮ ಪಂಚಾಯ್ತಿ ಅಧ್ಯಕ್ಷರೇ, ಇಲ್ಲಿ ಸಂಚರಿಸುವಾಗ ಬಿದ್ದಿದ್ದಾರೆ. ಈ ಕುರಿತು ಹಲ ಬಾರಿ ದೂರು ನೀಡಿದರೂ; ಪಂಚಾಯ್ತಿ ಆಡಳಿತ ಸ್ಪಂದಿಸಿ, ದುರಸ್ತಿ ಮಾಡುತ್ತಿಲ್ಲ ಎಂಬ ಆರೋಪ ಗ್ರಾಮಸ್ಥರದ್ದಾಗಿದೆ.

ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಯೋಜನೆಯಡಿಯಲ್ಲಿ ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಶುದ್ಧ ಕುಡಿಯುವ ನೀರಿನ ಘಟಕವನ್ನು ಹಿರೇಗರಸಂಗಿ ಮುಖ್ಯರಸ್ತೆಯಲ್ಲಿ ನಿರ್ಮಿಸಿದೆ.

ಆದರೆ, ಈ ಘಟಕ ಕಾರ್ಯ ನಿರ್ವಹಿಸಿದ್ದು ತುಂಬಾನೇ ವಿರಳ. ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಇದ್ದೂ ಇಲ್ಲದಂತಾಗಿದೆ. ಕೆಲ ಕಿಡಿಗೇಡಿಗಳ ಕೃತ್ಯದಿಂದಾಗಿ, ಘಟಕದ ನಾಣ್ಯ ಸಂಗ್ರಹದ ಪೆಟ್ಟಿಗೆ ಕಿತ್ತು ಹೋಗಿದೆ.

ಇನ್ನೂ ಗ್ರಾಮದಲ್ಲಿ ಸೂಕ್ತ ಚರಂಡಿ ವ್ಯವಸ್ಥೆಯಿಲ್ಲದ ಕಾರಣ ಆರ್.ಓ. ಘಟಕದ ಹಿಂದಿರುವ ಎರಡು ನೀರಿನ ಟ್ಯಾಂಕ್‌ನಿಂದ ಹರಿದು ಬರುವ ನೀರು, ಘಟಕದ ಪಕ್ಕದಲ್ಲೇ ನಿಲ್ಲುತ್ತಿದ್ದು, ಸುತ್ತಮುತ್ತಲೂ ದುವಾರ್ಸನೆ ಹಬ್ಬಿದೆ. ಇದರಿಂದ ಗ್ರಾಮಸ್ಥರಲ್ಲಿ ಅನಾರೋಗ್ಯದ ಭೀತಿ ಕಾಡುತ್ತಿದೆ ಎಂದು ಗ್ರಾಮದ ಯುವಕ ವಿದ್ಯಾಸಾಗರ ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.

ಹದಗೆಟ್ಟಿರುವ ರಸ್ತೆ ಹಾಗೂ ಶುದ್ಧ ಕುಡಿಯುವ ನೀರಿನ ಘಟಕವನ್ನು ಶೀಘ್ರ ದುರಸ್ತಿಗೊಳಿಸಬೇಕು. ಅಲ್ಲದೇ ಗ್ರಾಮದಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಕಲ್ಪಿಸುವಂತೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯ್ತಿಯವರಿಗೆ ಹಲವು ಬಾರಿ ದೂರು ನೀಡಿದರೂ; ಸರಿಪಡಿಸುವುದಾಗಿ ಹೇಳುತ್ತಾರೆ ಹೊರತು, ಸಮಸ್ಯೆ ಸರಿಪಡಿಸುತ್ತಿಲ್ಲ ಎಂದು ಗ್ರಾಮಸ್ಥರಾದ ಹನುಮಂತ ಹಿರೆಕುರುಬರ ದೂರಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !