ರಸ್ತೆ ಅಭಿವೃದ್ಧಿಗೆ ‘ಮುಖ್ಯಮಂತ್ರಿ ಗ್ರಾಮೀಣ ಸುಮಾರ್ಗ’

ಗುರುವಾರ , ಜೂನ್ 27, 2019
26 °C
ಗಾರ್ಡ್‌ ಹುದ್ದೆಗಳು ನೇಮಕ: ಅರಣ್ಯವಾಸಿ ಅಭ್ಯರ್ಥಿಗಳಿಗೆ ಶೇ 30 ಮೀಸಲು

ರಸ್ತೆ ಅಭಿವೃದ್ಧಿಗೆ ‘ಮುಖ್ಯಮಂತ್ರಿ ಗ್ರಾಮೀಣ ಸುಮಾರ್ಗ’

Published:
Updated:

ಬೆಂಗಳೂರು: ‘ಮುಖ್ಯಮಂತ್ರಿ ಗ್ರಾಮೀಣ ಸುಮಾರ್ಗ’ ಕಾರ್ಯಕ್ರಮದಡಿ 20 ಸಾವಿರ ಕಿ.ಮೀ ರಸ್ತೆಗಳನ್ನು ಮೂರು ಹಂತಗಳಲ್ಲಿ, ಮೂರು ವರ್ಷಗಳಲ್ಲಿ ಡಾಂಬರೀಕರಣ ಮಾಡಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.

ಯೋಜನೆಯಡಿ 24,246 ಕಿ.ಮೀ ರಸ್ತೆಗಳನ್ನು ಆದ್ಯತಾ ಗ್ರಾಮೀಣ ರಸ್ತೆ ಎಂದು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಪೈಕಿ 4,246 ಕಿ.ಮೀ ರಸ್ತೆ ಉತ್ತಮವಾಗಿದ್ದು, ಅವುಗಳನ್ನು ಹಾಗೆಯೇ ನಿರ್ವಹಣೆ ಮಾಡಲು ನಿಶ್ಚಯಿಸಲಾಗಿದೆ ಎಂದು ಪಂಚಾಯತ್‌ ರಾಜ್ ಸಚಿವ ಕೃಷ್ಣ ಬೈರೇಗೌಡ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

ಈ ಯೋಜನೆಗೆ ಐದು ವರ್ಷಗಳಲ್ಲಿ ₹7,182 ಕೋಟಿ ವೆಚ್ಚ ಮಾಡಲಾಗುವುದು. 2019–20 ರ ಸಾಲಿಗೆ ₹600 ಕೋಟಿ ವೆಚ್ಚ ಮಾಡಲಾಗುವುದು. ರಸ್ತೆಗಳ ಮರು ಡಾಂಬರೀಕರಣದ ಆದ್ಯತೆಯನ್ನು ರಸ್ತೆಯ ವಸ್ತುಸ್ಥಿತಿ ಆಧರಿಸಿ ಆಯ್ಕೆ ಮಾಡಲಾಗುವುದು ಎಂದು ವಿವರಿಸಿದರು.

‘ಪ್ರಧಾನ್‌ಮಂತ್ರಿ ಗ್ರಾಮೀಣ ಸಡಕ್‌ ಯೋಜನಾ’ ಅಡಿ ರಾಜ್ಯಕ್ಕೆ ಹಣ ಬಂದಿಲ್ಲ. ಆದರೂ ರಾಜ್ಯದಲ್ಲಿ 56,325 ಕಿ.ಮೀ ಉದ್ದದ ಗ್ರಾಮೀಣ ರಸ್ತೆಗಳ ಡಾಂಬರೀಕರಣ ಮಾಡಿದ್ದೇವೆ. ಪ್ರಧಾನ್‌ಮಂತ್ರಿ ಗ್ರಾಮೀಣ ಸಡಕ್ ಯೋಜನೆಯ 3 ನೇ ಹಂತದ ಯೋಜನೆಯಲ್ಲಿ ಕೇಂದ್ರ ಸರ್ಕಾರ ಮಾರ್ಗ ಸೂಚಿ ಹೊರಡಿಸಿದ್ದು, ಅದರ ಕೆಲವು ಮಾನದಂಡಗಳನ್ನು ಆಧರಿಸಿ ಮುಖ್ಯಮಂತ್ರಿ ಗ್ರಾಮೀಣ ಸುಮಾರ್ಗ ಕಾರ್ಯಕ್ರಮ ಜಾರಿಗೆ ತರುತ್ತಿದ್ದೇವೆ ಎಂದರು.

ಸಂಪುಟದ ಪ್ರಮುಖ ನಿರ್ಧಾರಗಳು:

* ಅರಣ್ಯ ಇಲಾಖೆ ಗಾರ್ಡ್‌ ಹುದ್ದೆಗಳ ನೇಮಕಾತಿಯಲ್ಲಿ ಅರಣ್ಯವಾಸಿ ಅಭ್ಯರ್ಥಿಗಳಿಗೆ ಶೇ 30 ರಷ್ಟು ಮೀಸಲು.  ಅರಣ್ಯ ಸಂರಕ್ಷಣೆಗೆ ಇದರಿಂದ ಅನುಕೂಲವಾಗುತ್ತದೆ.

* ಬಾದಾಮಿಯಲ್ಲಿ ರಾಜ್ಯ ಹೆದ್ದಾರಿ 44 ರಲ್ಲಿ 147 ನೇ ಕಿ.ಮೀ.ನಿಂದ 165 ಕಿ.ಮೀ.ವರೆಗೆ ಹೆದ್ದಾರಿ ಅಭಿವೃದ್ಧಿ ಕಾಮಗಾರಿಗೆ ₹ 35 ಕೋಟಿ.

* ರಾಜ್ಯ ನವೋದ್ಯಮ ನೀತಿಗೆ ಕೇಂದ್ರ ಸರ್ಕಾರದ ನವೋದಯ ನೀತಿಯ ಕೆಲವು ಅಂಶಗಳ ಸೇರ್ಪಡೆ ಮಾಡಲು ಕಾನೂನಿಗೆ ತಿದ್ದುಪಡಿಗೆ ನಿರ್ಧಾರ.

* ರಾಮನಗರದಲ್ಲಿ ರಾಜೀವ್‌ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಆಡಳಿತ ಕಟ್ಟಡ ಹೊರತು ಪಡಿಸಿ ಉಳಿದ ಕಟ್ಟಡಗಳ ನಿರ್ಮಾಣಕ್ಕೆ ₹ 473 ಕೋಟಿ ಟೆಂಡರ್‌ ನೀಡಲು ಒಪ್ಪಿಗೆ. 750 ಮತ್ತು 250 ಹಾಸಿಗೆ ಸಾಮರ್ಥ್ಯಗಳ ಎರಡು ಆಸ್ಪತ್ರೆಗಳು, ಮೆಡಿಕಲ್, ನ‌ರ್ಸಿಂಗ್‌, ಫಾರ್ಮಸಿ ಕಾಲೇಜು ಮತ್ತು ಹಾಸ್ಟೆಲ್‌ ಕಟ್ಟಡಗಳು, ವಸತಿ ಗೃಹಗಳ ನಿರ್ಮಾಣಕ್ಕೆ ಹಣ ಬಳಕೆ.

*ಗೋಕಾಕ್‌ ತಾಲ್ಲೂಕಿನ ಕಲ್ಲಮರಡಿಯಲ್ಲಿ ₹ 161 ಕೋಟಿ ವೆಚ್ಚದ ಏತ ನೀರಾವರಿ ನಿರ್ಮಾಣಕ್ಕೆ ಅನುಮತಿ.

* ತುಮಕೂರಿನಲ್ಲಿ ಹೇಮಾವತಿ ನೀರು ಹರಿಸಲು ತುಮಕೂರು ಬ್ರಾಂಚ್‌ ನಾಲೆ ದುರಸ್ತಿ ಮಾಡಲು ₹ 475 ಕೋಟಿ ಬಿಡುಗಡೆಗೆ ಒಪ್ಪಿಗೆ. ಇದರಡಿ 0ದಿಂದ 72 ಕಿ.ಮೀ.ವರೆಗೆ ಹಾಗೂ ವೈ ಕೆನಾಲ್‌ನ 18 ರಿಂದ 20 ನೇ ಕಿ.ಮೀ ಮಧ್ಯೆ ನಾಲೆ ಆಧುನೀಕರಣ. ಮೊದಲ ಹಂತದಲ್ಲಿ ₹ 250 ಕೋಟಿ, ಎರಡನೇ ಹಂತದಲ್ಲಿ ₹ 225 ಕೋಟಿ ಬಿಡುಗಡೆ ಮಾಡಲಾಗುವುದು.

* ಕುಣಿಗಲ್‌ಗೆ ಹೇಮಾವತಿ ನೀರು ಹರಿಸಲು ಹೇಮಾವತಿ ಬ್ರಾಂಚ್ ಕೆನಾಲ್‌ನಿಂದ ಪೈಪ್‌ಲೈನ್‌ ಅಳವಡಿಸಲಾಗುವುದು. ಇದಕ್ಕೆ ₹ 614 ಕೋಟಿ ವೆಚ್ಚವಾಗಲಿದೆ. ಒಟ್ಟು 34.5 ಕಿ.ಮೀ ಪೈಪ್‌ಲೈನ್‌ ಅಳವಡಿಸಲಾಗುತ್ತದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 1

  Frustrated
 • 1

  Angry

Comments:

0 comments

Write the first review for this !