ರಸ್ತೆಯಲ್ಲೇ ಪಾರ್ಟಿ; ಹೆಡ್‌ ಕಾನ್‌ಸ್ಟೆಬಲ್ ಮೇಲೆ ಹಲ್ಲೆ

6
ರಿಯಲ್ ಎಸ್ಟೇಟ್ ಏಜೆಂಟ್‌ ಸೇರಿ ನಾಲ್ವರ ಬಂಧನ

ರಸ್ತೆಯಲ್ಲೇ ಪಾರ್ಟಿ; ಹೆಡ್‌ ಕಾನ್‌ಸ್ಟೆಬಲ್ ಮೇಲೆ ಹಲ್ಲೆ

Published:
Updated:
Deccan Herald

ಬೆಂಗಳೂರು: ನಡುರಸ್ತೆಯಲ್ಲಿ ಮದ್ಯದ ಪಾರ್ಟಿ ಮಾಡುತ್ತಿದ್ದುದನ್ನು ಪ್ರಶ್ನಿಸಿದ ಎಚ್‌ಎಎಲ್‌ ಠಾಣೆಯ ಹೆಡ್‌ ಕಾನ್‌ಸ್ಟೆಬಲ್ ಸುಂದರ್‌ ರಾಜ್ ಅವರ ತಲೆಗೆ ಬಿಯರ್‌ ಬಾಟಲಿಯಿಂದ ಹಲ್ಲೆ ಮಾಡಿದ ಆರೋಪದಡಿ ರಿಯಲ್ ಎಸ್ಟೇಟ್ ಏಜೆಂಟ್ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

ಮುನೇಕೊಳಲಿನ ಗುರುಪ್ರಸಾದ್, ಗೌತಮ್ ರೆಡ್ಡಿ, ಪ್ರಶಾಂತ್‌ ರೆಡ್ಡಿ ಹಾಗೂ ಸೂರ್ಯ ಪ್ರಕಾಶ್ ಬಂಧಿತರು. ನಾಲ್ವರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

‘ಆರೋಪಿ ಗುರುಪ್ರಸಾದ್, ರಿಯಲ್ ಎಸ್ಟೇಟ್ ಏಜೆಂಟ್‌. ಪ್ರಶಾಂತ್‌ ರೆಡ್ಡಿ, ವಿಮೆ ಕಂಪನಿಯೊಂದರ ಏಜೆಂಟ್‌. ಮತ್ತೊಬ್ಬ ಆರೋಪಿ ಸೂರ್ಯ ಪ್ರಕಾಶ್, ಆಟೊ ಚಾಲಕ. ಗೌತಮ್ ರೆಡ್ಡಿ, ನಿರುದ್ಯೋಗಿ. ಈ ನಾಲ್ವರು ಬುಧವಾರ ರಾತ್ರಿ ಕುಂದಲಹಳ್ಳಿ ಗೇಟ್ ಸಮೀಪ ಕಾರು ನಿಲ್ಲಿಸಿಕೊಂಡು ಅಬ್ಬರದ ಸಂಗೀತ ಹಾಕಿಕೊಂಡು ಪಾರ್ಟಿ ಮಾಡುತ್ತಿದ್ದರು. ಸ್ಥಳೀಯರಿಗೆ ಕಿರಿಕಿರಿಯನ್ನುಂಟು ಮಾಡುತ್ತಿದ್ದರು. ಆ ಬಗ್ಗೆ ನಿವಾಸಿಯೊಬ್ಬರು, ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿದ್ದರು’ ಎಂದು ಪೊಲೀಸರು ಹೇಳಿದರು.

‘ರಾತ್ರಿ ಗಸ್ತಿನಲ್ಲಿದ್ದ ಸುಂದರ್ ರಾಜ್ ಹಾಗೂ ಕಾನ್‌ಸ್ಟೆಬಲ್ ಬಸವರಾಜ್, ಹೊಯ್ಸಳ ವಾಹನದಲ್ಲಿ ಸ್ಥಳಕ್ಕೆ ಹೋಗಿದ್ದರು. ಅವರ ಜತೆಗೂ ಜಗಳ ತೆಗೆದಿದ್ದ ಆರೋಪಿಗಳು, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಒಬ್ಬಾತ, ಬಿಯರ್‌ ಬಾಟಲಿಯಿಂದ ಸುಂದರ್‌ ರಾಜ್‌ ಅವರ ತಲೆಗೆ ಹೊಡೆದಿದ್ದ. ರಕ್ಷಣೆಗೆ ಹೋದ ಕಾನ್‌ಸ್ಟೆಬಲ್, ಸ್ಥಳೀಯರ ಸಹಾಯದಿಂದ ಇಬ್ಬರು ಆರೋಪಿಗಳನ್ನು ಹಿಡಿದುಕೊಂಡಿದ್ದರು. ಇನ್ನಿಬ್ಬರು, ಕಾರಿನಲ್ಲಿ ಪರಾರಿಯಾಗಿದ್ದರು’ ಎಂದು ಹೇಳಿದರು.

ಕಾರು ಗುದ್ದಿಸಿದರು: ರಕ್ತಸ್ರಾವದಿಂದ ಬಳಲುತ್ತಿದ್ದ ಸುಂದರ್‌ ರಾಜ್‌ ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿದ್ದ ಪೊಲೀಸರು, ಆರೋಪಿಗಳ ಪತ್ತೆಗಾಗಿ ರಾತ್ರಿಯಿಡೀ ಕಾರ್ಯಾಚರಣೆ ನಡೆಸಿದರು. ಗುರುವಾರ ನಸುಕಿನಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದರು.

‘ಮಾರತ್ತಹಳ್ಳಿ ಸೇತುವೆ ಬಳಿ ನಾಕಾಬಂದಿ ಹಾಕಲಾಗಿತ್ತು. ಅಲ್ಲೀಗೆ ಬಂದ ಆರೋಪಿಗಳ ಕಾರನ್ನು ಸಿಬ್ಬಂದಿ ತಡೆಯಲು ಯತ್ನಿಸಿದ್ದರು. ಅವರ ಮೇಲೆಯೇ ಕಾರು ಹತ್ತಿಸಲು ಯತ್ನಿಸಿದ್ದ ಆರೋಪಿಗಳು, ಅಲ್ಲಿಂದ ತಪ್ಪಿಸಿಕೊಂಡಿದ್ದರು. ಸಿಬ್ಬಂದಿ ಬೆನ್ನಟ್ಟಿದ್ದರು. ಆರೋಪಿಗಳು, ಎಚ್‌ಎಎಲ್‌ ವಿಮಾನ ನಿಲ್ದಾಣದ ತಡೆಗೋಡೆಗೆ ಕಾರು ಗುದ್ದಿಸಿದ್ದರು. ಕೆಟ್ಟು ನಿಂತ ಕಾರಿನಿಂದ ಇಳಿದು ಪರಾರಿ ಆಗುತ್ತಿದ್ದಾಗಲೇ ಅವರನ್ನು ಸಿಬ್ಬಂದಿ ಸೆರೆಹಿಡಿದರು’ ಎಂದು ವೈಟ್‌ಫೀಲ್ಡ್‌ ವಿಭಾಗದ ಡಿಸಿಪಿ ಅಬ್ದುಲ್ ಅಹದ್ ತಿಳಿಸಿದರು.

Tags: 

ಬರಹ ಇಷ್ಟವಾಯಿತೆ?

 • 3

  Happy
 • 1

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !