ಅಪಘಾತ ತಗ್ಗಿಸಲು ತಂತ್ರಜ್ಞಾನ ಬಳಕೆ

7

ಅಪಘಾತ ತಗ್ಗಿಸಲು ತಂತ್ರಜ್ಞಾನ ಬಳಕೆ

Published:
Updated:
Prajavani

ಬೆಂಗಳೂರು: ‘ಬೆಂಗಳೂರಿನಲ್ಲಿ ಹೆಚ್ಚು ಅಪಘಾತಗಳು ಸಂಭವಿಸುವ 49 ಸ್ಥಳಗಳನ್ನು ಗುರುತಿಸಿದ್ದೇವೆ. ತಂತ್ರಜ್ಞಾನದ ಮಾರ್ಗೋಪಾಯಗಳಿಂದ ಅವುಗಳನ್ನು ಅಪಘಾತ ಮುಕ್ತವಾಗಿಸುತ್ತಿದ್ದೇವೆ’ ಎಂದು ಗೃಹ ಸಚಿವ ಎಂ.ಬಿ.ಪಾಟೀಲ ಹೇಳಿದರು.

ಬೆಂಗಳೂರು ಸಂಚಾರ ಪೊಲೀಸ್‌ ಮತ್ತು ಸಾರಿಗೆ ಇಲಾಖೆಯ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ‘30ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ–2019’ ಉದ್ಘಾಟಿಸಿ ಅವರು ಮಾತನಾಡಿದರು.

‘ರಸ್ತೆ ಸುರಕ್ಷತೆ ಎಂಬುದು ಸಂಚಾರ ಪೊಲೀಸರಿಗೆ ಮಾತ್ರ ಸಂಬಂಧಿಸಿದ್ದಲ್ಲ. ಪ್ರತಿಯೊಬ್ಬರಿಗೂ ಸಂಚಾರ ನಿಯಮಗಳ ಪ್ರಾಥಮಿಕ ಅರಿವು ಇರಬೇಕು. ರಾಜ್ಯದಲ್ಲಿ ಪ್ರತಿವರ್ಷ 4 ಸಾವಿರಕ್ಕೂ ಹೆಚ್ಚು ರಸ್ತೆ ಅಪಘಾತಗಳು ಸಂಭವಿಸುತ್ತಿವೆ. ಪ್ರತಿದಿನ ಕನಿಷ್ಠ ಇಬ್ಬರು ಅಪಘಾತದಲ್ಲಿ ಸಾವನ್ನಪ್ಪುತ್ತಿದ್ದಾರೆ. ಬೆಂಗಳೂರಿನಲ್ಲಿಯೇ 2018ರಲ್ಲಿ 611 ಜನ ಮೃತಪಟ್ಟಿದ್ದಾರೆ’ ಎಂದು ತಿಳಿಸಿದರು.

ಬಿಎಂಟಿಸಿ ಅಧ್ಯಕ್ಷರೂ ಆಗಿರುವ ಎನ್‌.ಎ.ಹ್ಯಾರಿಸ್‌, ‘ನನ್ನ ಶಾಂತಿನಗರ ವಿಧಾನಸಭಾ ಕ್ಷೇತ್ರದಲ್ಲಿ ಹಲವಾರು ಪ್ರತಿಷ್ಠಿತ ಶಾಲೆಗಳು ಇವೆ. ಆ ಶಾಲಾ ಮಕ್ಕಳನ್ನು ಕರೆದುಕೊಂಡು ಬರುವ ಬಸ್‌ಗಳನ್ನು ರಸ್ತೆಯಲ್ಲೇ ನಿಲ್ಲಿಸಲಾಗುತ್ತಿದೆ. ಇದರಿಂದ ವಿಪರೀತ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳೋಣವೆಂದರೆ, ರಸ್ತೆಗಳ ವಿಸ್ತರಣೆಗೂ ಸ್ಥಳಾವಕಾಶವಿಲ್ಲ’ ಎಂದು ಅಳಲು ಹೇಳಿಕೊಂಡರು.

ಹೆಚ್ಚುವರಿ ಪೊಲೀಸ್‌ ಕಮಿಷನರ್‌(ಅಪರಾಧ) ಅಲೋಕ್‌ಕುಮಾರ್‌, ‘ಕುಡಿದು ಚಾಲನೆ, ವೇಗದ ಚಾಲನೆ, ಚಾಲನೆ ವೇಳೆ ಮೊಬೈಲ್‌ ಬಳಕೆ, ಹೆಲ್ಮೆಟ್‌ ಇಲ್ಲದೆ ಸವಾರಿ, ಪಥ ಶಿಸ್ತು ಇಲ್ಲದೆ ಚಾಲನೆ ಮಾಡುವ ಪ್ರಕರಣಗಳು ಹೆಚ್ಚುತ್ತಿವೆ. ಅವುಗಳನ್ನು ತಗ್ಗಿಸಲು ಹಲವಾರು ಅಭಿಯಾನಗಳನ್ನು ಮಾಡಿದ್ದೇವೆ. ದೇಶದಲ್ಲಿ ವರ್ಷವೊಂದರಲ್ಲಿ 1.50 ಲಕ್ಷ ಜನ ರಸ್ತೆ ಅಪಘಾತಗಳಲ್ಲಿ ಸಾಯುತ್ತಿದ್ದಾರೆ’ ಎಂದು ಮಾಹಿತಿ ನೀಡಿದರು.

ಉದ್ಘಾಟನಾ ಕಾರ್ಯಕ್ರಮದಲ್ಲಿ ವಿವಿಧ ಶಾಲೆಗಳ ಮಕ್ಕಳು ಆಕರ್ಷಕ ಪಥ ಸಂಚಲನ ನಡೆಸಿದರು. ಸಂಚಾರ ನಿರ್ವಹಣೆಯಲ್ಲಿ ಉತ್ತಮ ಕಾರ್ಯ ನಿರ್ವಹಿಸಿದ ನಗರ ಸಂಚಾರ ಪೊಲೀಸ್‌ ಸಿಬ್ಬಂದಿಗೆ ಪಾರಿತೋಷಕಗಳನ್ನು ನೀಡಿ ಗೌರವಿಸಲಾಯಿತು.

**

ಪೊಲೀಸ್‌ ಸಿಬ್ಬಂದಿಗೆ ಅನುಕೂಲವಾಗುಂತೆ ಅಶೋಕನಗರದ ಸುಲೈವಾನ್‌ ಮೈದಾನವನ್ನು ಅಭಿವೃದ್ಧಿಪಡಿಸಬೇಕು.
– ಎನ್‌.ಎ.ಹ್ಯಾರಿಸ್‌, ಶಾಸಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !