ರೋಡ್ ಟ್ರಿಪ್ಪು ಬಲು ಸಲೀಸು

7

ರೋಡ್ ಟ್ರಿಪ್ಪು ಬಲು ಸಲೀಸು

Published:
Updated:
Deccan Herald

ಪ್ರವಾಸ ಸಂಬಂಧಿತ  ಸಮಸ್ಯೆಗಳಿಗೆ ಪರಿಹಾರದ ರೂಪವಾಗಿ ‘ರೋಡ್ ಟ್ರಿಪ್ಪರ್ಸ್ ಕ್ಲಬ್’ (ಆರ್‌ಟಿಸಿ) ಫೆಬ್ರುವರಿಯಲ್ಲಿ ಅಸ್ತಿತ್ವಕ್ಕೆ ಬಂದಿದೆ. ಅದರ ಬೆಂಗಳೂರು ಶಾಖೆಯೂ ಆಗಸ್ಟ್‌ನಲ್ಲಿ ಪ್ರಾರಂಭವಾಗಿದೆ. ರಸ್ತೆಗಳ ಮೂಲಕ ಪ್ರವಾಸಕ್ಕೆ ಹೋಗಬಯಸುವವರಿಗೆ ಅಗತ್ಯವಾದ ಮಾಹಿತಿಯ ಕಣಜ ಈ ಕ್ಲಬ್.

ಯಾವ ಸ್ಥಳಕ್ಕೆ ಹೇಗೆ ಹೋಗಬಹುದು, ಯಾವ ಮಾರ್ಗದಲ್ಲಿ ತೆರಳಿದರೆ ಆ ಸ್ಥಳವನ್ನು ಬೇಗ ತಲುಪಬಹುದು, ಸುರಕ್ಷಿತ ಮಾರ್ಗ ಯಾವುದು ಎಂಬಿತ್ಯಾದಿ ವಿಷಯಗಳನ್ನು ತಿಳಿಸುತ್ತದೆ. ಈ ನೆರವು ಪಡೆಯಲು ಆಸಕ್ತರು ಮಾಡಬೇಕಿರುವುದು ಕ್ಲಬ್‌ನ ಸದಸ್ಯತ್ವ ಪಡೆಯಬೇಕು. ಜೊತೆಗೆ ಅದು ಆಯೋಜಿಸುವ ರೋಡ್ ಟ್ರಿಪ್‌ಗಳಲ್ಲಿ ಪಾಲ್ಗೊಳ್ಳಬೇಕು.

ಈ ಕ್ಲಬ್‌ ಸ್ಥಾಪಕರು ರುಚಿಕ್ ಗಾಂಧಿ, ದೀಪಕ್ ಅನಂತ್ ಮತ್ತು ವಿನೀತ್ ರಾಜನ್. ದೆಹಲಿ, ನಾಸಿಕ್, ಔರಂಗಾಬಾದ್, ನಾಗಪುರ, ಗುವಾಹಟಿ, ಹೈದರಾಬಾದ್, ಮುಂಬೈ, ಕೋಲ್ಕತ್ತ ಹಾಗೂ ಚೆನ್ನೈನಲ್ಲೂ ಕ್ಲಬ್‌ನ ಶಾಖೆಗಳಿವೆ.

‘ರೋಡ್‌ ಟ್ರಿಪ್ಪರ್ಸ್‌ ಸಮುದಾಯವನ್ನು ಇನ್ನೂ ದೊಡ್ಡ ಮಟ್ಟಕ್ಕೆ ಬೆಳೆಸುವ ಸಲುವಾಗಿ ಹಲವೆಡೆ ಶಾಖೆಗಳನ್ನು ಆರಂಭಿಸಲಿದ್ದೇವೆ. ಕಳೆದ ಎಂಟು ತಿಂಗಳಲ್ಲಿ ನಾವು 120 ಬಾರಿ ಪ್ರವಾಸಗಳನ್ನು ಕೈಗೊಂಡಿದ್ದೇವೆ’ ಎನ್ನುತ್ತಾರೆ ದೀಪಕ್.

ಆರ್‌ಟಿಸಿ ಆಲೋಚನೆ ಹುಟ್ಟಿದ್ಹೇಗೆ?

‘ಕ್ಲಬ್ ಆರಂಭಕ್ಕೂ ಮುನ್ನ ಸ್ನೇಹಿತರ ಜೊತೆಗೆ ಪ್ರವಾಸಕ್ಕೆ ಹೋಗುತ್ತಿದ್ದೆವು. ಆಗೆಲ್ಲ, ಸಾಕಷ್ಟು ತೊಂದರೆಗಳನ್ನು ಎದುರಿಸಿದ್ದೆವು. ಸರಿಯಾಗಿ ಸಿದ್ಧತೆ ನಡೆಸದೆ, ಹಾದಿ ತಪ್ಪಿ ಬೇರೆ ಎಲ್ಲೆಲ್ಲೋ ಹೋಗಿ ಫಜೀತಿ ಅನುಭವಿಸಿದ್ದುಂಟು. ಹೋದ ಕಡೆಯಲ್ಲಿ ಊಟ ಹಾಗೂ ವಾಸ್ತವ್ಯಕ್ಕೆ ತೊಂದರೆ ಎದುರಿಸಿದ್ದೆವು. ಇಂತಹ ಹಲವು ಸಮಸ್ಯೆಗಳಿಂದ ನಮ್ಮಲ್ಲಿ ರೋಡ್ ಟ್ರಿಪ್ಪರ್ಸ್‌ ಕ್ಲಬ್ ಹುಟ್ಟು ಹಾಕುವ ಆಲೋಚನೆ ಬಿತ್ತಿತು’ ಎನ್ನುತ್ತಾರೆ ದೀಪಕ್ ಅನಂತ್.

‘ಕ್ಲಬ್ ವತಿಯಿಂದ ಆಗಾಗ ರೋಡ್ ಟ್ರಿಪ್‌ಗಳನ್ನು ಆಯೋಜಿಸುತ್ತೇವೆ. ನಾವು ಕರೆದೊಯ್ಯುವ ಬಹುತೇಕ ಸ್ಥಳಗಳ ಬಗ್ಗೆ ಎಷ್ಟೋ ಮಂದಿಗೆ ಗೊತ್ತೇ ಇರುವುದಿಲ್ಲ’ ಎಂದು ಮಾಹಿತಿ ನೀಡುತ್ತಾರೆ.

‘ಕೆಲಸದ ಒತ್ತಡಗಳಿಂದ ಸಾಕಷ್ಟು ಮಂದಿ ಬೇಸತ್ತಿರುತ್ತಾರೆ. ಬಿಡುವಿಲ್ಲದ ಕೆಲಸ ಕಾರ್ಯಗಳಿಂದ ಹೊರಗಡೆ ಹೋಗಲು ಸರಿಯಾದ ಯೋಜನೆ ರೂಪಿಸಲಾಗದೇ ಕೆಲವರು ಪ್ರವಾಸಕ್ಕೆ ಹೋಗುವುದನ್ನು ಕೈಬಿಡುತ್ತಾರೆ. ಇನ್ನೂ ಕೆಲವರು, ಮೈಂಡ್ ಫ್ರೆಶ್‌ಗಾಗಿ ವಾರಾಂತ್ಯದಲ್ಲಿ ಹೊರಗೆ ಹೋಗಬಯಸುತ್ತಾರೆ. ಅಂಥವರಿಗೆ ನಾವು ಆಯೋಜಿಸುವ ರೋಡ್ ಟ್ರಿಪ್‌ಗಳು ಸೂಕ್ತ’ ಎನ್ನುತ್ತಾರೆ.

ಅಪರಿಚಿತರ ಜತೆ ಬೆರೆಯುವ ಅವಕಾಶ

‘ರೋಡ್ ಟ್ರಿಪ್‌ಗೆ ಹೆಸರು ನೋಂದಾಯಿಸಿಕೊಂಡು ಈ ಹಿಂದೆ ಕೊಡೈಕೆನಾಲ್‌ಗೆ ಪ್ರವಾಸಕ್ಕೆ ಹೋಗಿದ್ದೆ. ಹಿಂದೆಂದೂ ನಾನು ಅಂತಹ ಪ್ರವಾಸದ ಅನುಭವ ಪಡೆದಿರಲಿಲ್ಲ. ಅದೊಂದು ಅದ್ಭುತ ಪ್ರಯಾಣವಾಗಿತ್ತು. ಪ್ರವಾಸಕ್ಕೆ ಬಂದಿದ್ದ ಯಾರೊಬ್ಬರನ್ನು ನಾನು ಈ ಹಿಂದೆ ನೋಡಿಯೇ ಇರಲಿಲ್ಲ. ಅವರೆಲ್ಲರ ಪರಿಚಯವಾಯಿತು. ಆ ಪರಿಚಯ ಸ್ನೇಹಕ್ಕೆ ತಿರುಗಿದೆ’ ಎನ್ನುತ್ತಾರೆ ಕಳೆದ ಬಾರಿ ಕ್ಲಬ್ ಆಯೋಜಿಸಿದ್ದ ರೋಡ್ ಟ್ರಿಪ್‌ನಲ್ಲಿ ಪಾಲ್ಗೊಂಡಿದ್ದ ಧೀರಜ್ ಶೆಣೈ.

‘ಪ್ರತಿ 12 ವರ್ಷಕ್ಕೊಮ್ಮೆ ಅರಳುವ ನೀಲಿಕುರಿಂಜಿ ಹೂವನ್ನು ನೋಡುವ ಅವಕಾಶವೂ ಸಿಕ್ಕಿತ್ತು. ಆ ಹೂವನ್ನು ಕಂಡು ನಾನು ಪುಳಕಿತನಾಗಿದ್ದೆ. ಅದು ನನ್ನ ಜೀವನದಲ್ಲಿ ಅವಿಸ್ಮರಣೀಯ ಕ್ಷಣವಾಗಿತ್ತು. ಅದೆಲ್ಲದಕ್ಕೂ ಕಾರಣ ಆರ್‌ಟಿಸಿ. ಅದರೊಟ್ಟಿಗೆ ಇನ್ನೂ ಹಲವು ಟ್ರಿಪ್‌ಗಳಿಗೆ ಹೋಗಲು ಬಯಸುತ್ತೇನೆ’ ಎನ್ನುತ್ತಾರೆ.

‘ಪ್ರವಾಸದ ವೇಳೆ ಯಾವುದೇ ತೊಂದರೆಯಾಗದಂತೆ ಕ್ಲಬ್‌ನ ಸದಸ್ಯರು ಎಚ್ಚರ ವಹಿಸಿದ್ದರು. ಪ್ರಯಾಣ, ವಾಸ್ತವ್ಯದ ವರೆಗೂ ಎಲ್ಲ ಜವಾಬ್ದಾರಿಗಳನ್ನು ಅವರೇ ಹೊತ್ತುಕೊಂಡಿದ್ದರಿಂದ ನಿರಾತಂಕವಾಗಿ ಪ್ರವಾಸದ ಕ್ಷಣಗಳನ್ನು ಆನಂದಿಸಿದೆ’ ಎನ್ನುತ್ತಾರೆ ಕ್ಲಬ್‌ನ ಮತ್ತೊಬ್ಬ ಸದಸ್ಯರು.‌

ಈ ಬಾರಿ ಎಲ್ಲಿಗೆ ಪ್ರಯಾಣ?

ಪ್ರಕೃತಿ ವಿಕೋಪದಿಂದ ನಲುಗಿದ್ದ ಕೊಡಗಿನ ಪ್ರಸಿದ್ಧ ತಾಣಗಳ ಜೊತೆಗೆ ಅಷ್ಟಾಗಿ ಹೊರಜಗತ್ತಿಗೆ ಗೊತ್ತಿರದ ಸ್ಥಳಗಳಿಗೆ ಈ ಬಾರಿ ರೋಡ್ ಟ್ರಿಪ್‌ ಆಯೋಜಿಸಲಾಗಿದೆ. ಬೆಂಗಳೂರಿನ ಯಲಚೇನಹಳ್ಳಿ ಮೆಟ್ರೊ ನಿಲ್ದಾಣದಿಂದ ಪ್ರಯಾಣ ಆರಂಭವಾಗಲಿದ್ದು, ಕೊಡಗಿನ ತಲುಪುವ ವೇಳೆ ರಸ್ತೆ ಮಧ್ಯೆ ಸಿಗುವ ಹಲವು ತಾಣಗಳ ಪರಿಚಯವನ್ನೂ ಪ್ರವಾಸಿಗರಿಗೆ ಮಾಡಿಸಲಾಗುತ್ತದೆ. ಈ ಟ್ರಿಪ್‌ಗೆ ಈಗಾಗಲೇ, 3 ಸಾವಿರಕ್ಕೂ ಅಧಿಕ ಮಂದಿ, ಹೆಸರು ನೋಂದಾಯಿಸಿಕೊಂಡಿದ್ದಾರೆ.

ಸಂಪರ್ಕ: 75066 42382

ವೆಬ್‌ಸೈಟ್ ವಿಳಾಸ: https://roadtrippersclub.com/

ಏನೆಲ್ಲಾ ಸೌಲಭ್ಯವಿದೆ

ಕ್ಲಬ್ ನೇತೃತ್ವದಲ್ಲಿ ಪ್ರವಾಸಕ್ಕೆ ಹೋಗುವುದರಿಂದ ಒತ್ತಡ ಕಡಿಮೆಯಾಗುತ್ತದೆ. ನಿಗದಿಯಾದ ಹಣ ಪಾವತಿಸಿದರೆ, ಸಂಚಾರಕ್ಕೆ ವಾಹನ, ವಾಸ್ತವ್ಯ, ಕಾಫಿ, ಟೀ, ಕಾಲಕಾಲಕ್ಕೆ ಊಟದ ವ್ಯವಸ್ಥೆಯನ್ನು ಕ್ಲಬ್ ಮಾಡುತ್ತದೆ. ಅದರ ಜೊತೆಗೆ ಅಪರಿಚಿತ ಸ್ಥಳಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ. ರಾತ್ರಿ ವೇಳೆ ಪ್ರವಾಸದ ಬಗ್ಗೆ ಪ್ರತಿಯೊಬ್ಬರಿಂದ ಅನಿಸಿಕೆ ಹಾಗೂ ಮುಕ್ತವಾಗಿ ಯಾವುದೇ ವಿಚಾರದ ಬಗ್ಗೆ ಮಾತನಾಡಲು ವೇದಿಕೆ ಕಲ್ಪಿಸಿಕೊಡಲಾಗುತ್ತದೆ.

ಒಂದು ವೇಳೆ ಪ್ರವಾಸಿಗರ ವಾಹನಗಳು ಕೆಟ್ಟು ಹೋದರೆ, ಕ್ಲಬ್‌ನ ಸದಸ್ಯರೇ ಅವುಗಳನ್ನು ರಿಪೇರಿ ಮಾಡಿಸುತ್ತಾರೆ. ಇಲ್ಲವಾದರೆ, ಪರ್ಯಾಯ ವ್ಯವಸ್ಥೆಯನ್ನು ಮಾಡುತ್ತಾರೆ. ಪ್ರವಾಸಿಗರ ಸುರಕ್ಷೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ.

5 ವರ್ಷ ಮೇಲ್ಪಟ್ಟವರಿಂದ ಹಿರಿಯರ ವರೆಗೆ ರೋಡ್ ಟ್ರಿಪ್‌ಗಳಲ್ಲಿ ಪಾಲ್ಗೊಳ್ಳಬಹುದು.  ಸಾಕುನಾಯಿಗಳನ್ನೂ ಟ್ರಿಪ್‌ಗಳಿಗೆ ಕರೆದುಕೊಂಡು ಹೋಗಬಹುದು. ರೋಡ್ ಟ್ರಿಪ್‌ ಹೆಸರೇ ಸೂಚಿಸುವಂತೆ ಈ ಪ್ರವಾಸಗಳು ರಸ್ತೆ ಮಾರ್ಗ ಬಳಸಿ ಸಾಗುತ್ತವೆ. ಬೈಕ್, ಕಾರು, ಜೀಪ್ ಹಾಗೂ ಬಸ್ಸುಗಳ ಮೂಲಕ ಪ್ರಯಾಣ ಸಾಗಲಿದೆ. ಬಾಡಿಗೆಗೆ ವಾಹನಗಳು ಬೇಕಿದ್ದರೆ, ಅದರ ಜವಾಬ್ದಾರಿಯನ್ನೂ ಕ್ಲಬ್ ಹೊರಲಿದೆ.

 

Tags: 

ಬರಹ ಇಷ್ಟವಾಯಿತೆ?

 • 7

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !