ರೋಬೊ ಅಜಿತ್‌ 2.0

ಬುಧವಾರ, ಜೂನ್ 26, 2019
23 °C

ರೋಬೊ ಅಜಿತ್‌ 2.0

Published:
Updated:
Prajavani

ಜಪಾನ್‌ ರಾಜಧಾನಿ ಟೋಕಿಯೊದಲ್ಲಿ 2020 ರಲ್ಲಿ ನಡೆಯುವ ಒಲಿಂಪಿಕ್ಸ್‌ ‘ತಂತ್ರಜ್ಞಾನದಿಂದ ರೂಪುಗೊಳ್ಳಲಿರುವ ಹೊಸತನದ ಕ್ರೀಡಾಕೂಟ’ ವಾಗಲಿದೆ ಎಂಬ ಮಾಹಿತಿ ಎಲ್ಲೆಡೆ ಹರಿದಾಡುತ್ತಿದೆ. ಹೇಳಿಕೇಳಿ ಜಪಾನ್‌ ತಂತ್ರಜ್ಞಾನದಲ್ಲಿ ಮುಂಚೂಣಿ ಯಲ್ಲಿರುವ ರಾಷ್ಟ್ರ. ಹೀಗಾಗಿಯೇ ಅಲ್ಲಿ ತಂತ್ರಜ್ಞರು ಮಾಯಾಲೋಕವನ್ನೇ ಸೃಷ್ಟಿಸಬಹುದು ಎನ್ನುವ ಅಂದಾಜಿನಲ್ಲಿ ಎಲ್ಲರೂ ಕುತೂಹಲಿಗಳಾಗಿದ್ದಾರೆ. ಜತೆಗೆ ಒಲಿಪಿಂಕ್ಸ್‌ ನಡೆಯುವ ಕ್ರೀಡಾಗ್ರಾಮದಲ್ಲಿ ನೆರವಾಗಲು ರೋಬೊಗಳದ್ದೇ ಕಾರುಬಾರು ಎನ್ನುವ ಮಾಹಿತಿ ಕೂಡ ಕೇಳಿ ಬರುತ್ತಿದೆ. ಇದು ನಮ್ಮೆಲ್ಲರ ಕುತೂಹಲವನ್ನು ಇಮ್ಮಡಿಗೊಳಿಸಿದೆ.

ಹೌದು! ರೋಬೊಗಳೆಂದರೆ ನಮಗೆ ಕುತೂಹಲವೇ. ಇವುಗಳ ಕುರಿತ ಕಥೆ, ಸಿನಿಮಾ, ಅದರ ಕೆಲಸದ ವೈಖರಿ ಎಲ್ಲವೂ ನಮಗೆ ಅಚ್ಚುಮೆಚ್ಚು. ಭವಿಷ್ಯದಲ್ಲಿ ರೋಬೊ ಕೂಡ ನಮ್ಮೊಂದಿಗೆ ಒಟ್ಟಿಗೆ ಹೆಜ್ಜೆ ಹಾಕುವ ದಿನಗಳು ದೂರವಿಲ್ಲವೇನೋ ಅನ್ನಿಸುತ್ತಿದೆ. ಆ ನಿಟ್ಟಿನಲ್ಲಿ ನಿರಂತರವಾಗಿ ಸಂಶೋಧನೆಗಳು ನಡೆಯುತ್ತಿವೆ. ಅಲ್ಲೊಮ್ಮೆ ಇಲ್ಲೊಮ್ಮೆ ರೋಬೊ ಬಳಕೆಯ ಸುದ್ದಿಯನ್ನು ಓದಿರುತ್ತೇವೆ. ಇದಕ್ಕೆ ಪೂರಕವಾಗಿ ಹುಬ್ಬಳ್ಳಿಯ ಕೆ.ಎಲ್‌.ಇ ತಾಂತ್ರಿಕ ವಿಶ್ವವಿದ್ಯಾಲಯದ ಅಟೊಮೇಷನ್‌ ಮತ್ತು ರೊಬೊಟಿಕ್ಸ್‌ ವಿಭಾಗದ  ಮೂವರು ಎಂಜಿನಿಯರಿಂಗ್‌ ವಿದ್ಯಾರ್ಥಿಗಳು (ಈಗಷ್ಟೇ ಕೊನೆಯ ಸೆಮಿಸ್ಟರ್‌ ಪರೀಕ್ಷೆ ಮುಗಿಸಿದ್ದಾರೆ.) ನಿತ್ಯ ಬದುಕಿನಲ್ಲಿ ಉಪಯೋಗವಾಗುವಂತಹ ಮನುಷ್ಯರ ತರಹದ ರೋಬೊ(humanoid robot)ವೊಂದನ್ನು ಅಭಿವೃದ್ಧಿಪಡಿಸಿದ್ದಾರೆ.

‘ಸೋಲಿಲ್ಲದವನು’ ಎಂಬ ಅರ್ಥದಲ್ಲಿ ‘ಅಜಿತ್ 2.0’ ಎಂದು ಹೆಸರಿಡಲಾಗಿರುವ ಈ ರೋಬೊ ವನ್ನು ಸತತ ಆರು ತಿಂಗಳ ಪರಿಶ್ರಮದೊಂದಿಗೆ ಸುಮಾರು ₹12 ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಿದ್ದಾರೆ. ಇದೊಂದು ಕಾಲೇಜಿನ ‘ಫ್ಲಾಗ್‌ಷಿಪ್‌ ಪ್ರಾಜೆಕ್ಟ್‌’ ಎನ್ನಲಾಗುತ್ತಿದೆ. ಅಟೊಮೇಷನ್‌ ಮತ್ತು ರೋಬೊಟಿಕ್ಸ್‌ ವಿಭಾಗದ ಮುಖ್ಯಸ್ಥ ಪ್ರೊ.ಅರುಣ್‌ ಗಿರಿಯಾಪುರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಾದ ಅಕ್ಷಯ್‌ ಡಿ.ಆರ್‌., ಕಾರ್ತೀಕ್‌ ಹೊಳೆಯಣ್ಣನವರ ಹಾಗೂ ಸುಬ್ರಹ್ಮಣ್ಯ ಗಾಂವ್ಕರ್ ಮಾನಿಗದ್ದೆ ಈ ರೋಬೊ ತಯಾರಿಗೆ ಶ್ರಮಿಸಿದ್ದಾರೆ.

ವಿಮಾನ ನಿಲ್ದಾಣದಲ್ಲಿ, ಮೆಟ್ರೊ ಸ್ಟೇಷನ್‌ಗಳಲ್ಲಿ, ಆಸ್ಪತ್ರೆಗಳಲ್ಲಿ, ಬ್ಯಾಂಕ್‌ಗಳಲ್ಲಿ ಮನೆಗಳಲ್ಲಿ ಹೀಗೆ ಎಲ್ಲಿ ಬೇಕಾದಲ್ಲಿ ಈ ರೋಬೊ ಬಳಕೆ ಮಾಡಬಹುದು. ಮನೆಯಲ್ಲಿ ಒಂಟಿಯಾಗಿರುವ ವೃದ್ಧರಿಗೆ ಸಕಾಲದಲ್ಲಿ ಔಷಧಿಯನ್ನು ನೆನಪಿಸುವುದು, ಅವರು ಅನಾರೋಗ್ಯದಿಂದ ಕುಸಿದು ಬಿದ್ದರೆ ಅವರ ಫೋಟೊ ತೆಗೆದು ಸಂಬಂಧಪಟ್ಟವರಿಗೆ ಮೊಬೈಲ್‌ ಮೂಲಕ ತುರ್ತು ಸಂದೇಶ ಕಳುಹಿಸುವುದು, ಬ್ಯಾಂಕ್‌ಗಳಲ್ಲಿ ಗ್ರಾಹಕರಿಗೆ ನೆರವಾಗುವುದು... ಹೀಗೆ ವಿವಿಧ ಕೆಲಸಗಳಲ್ಲಿ ಇವನ್ನು ಬಳಸಿಕೊಳ್ಳಬಹುದು.

‘ಇದು ಮನುಷ್ಯರ ತರಹವೇ ಕೆಲಸ ಮಾಡುತ್ತದೆ. ನಡೆದಾಡುತ್ತದೆ, ಡಾನ್ಸ್ ಮಾಡುತ್ತದೆ, ನೀವು ಹೇಳಿದ ಆಜ್ಞೆಗಳನ್ನು ಪಾಲಿಸುತ್ತದೆ. ಸ್ಥಳವನ್ನು ಮ್ಯಾಪಿಂಗ್‌ ಮಾಡಿಕೊಂಡು ಜ್ಞಾಪಕದಲ್ಲಿಟ್ಟುಕೊಳ್ಳುತ್ತದೆ. ಮನೆಯೊಳಗಡೆ ಒಡಾಡಿ ನಿಮ್ಮ ಕೆಲಸಗಳನ್ನು ಮಾಡಿಕೊಡುತ್ತದೆ. ನಿಮ್ಮ ಮೊಬೈಲ್‌, ಬೀಗದ ಕೀ, ಫೈಲ್‌ ಇತ್ಯಾದಿ ಹುಡುಕಿಕೊಡುತ್ತದೆ.ಮಕ್ಕಳಿಗೆ ನೆರವಾಗುತ್ತದೆ. ನಿಮಗೆ ಏನಾದರೂ ಪ್ರಶ್ನೆಗಳಿದ್ದರೆ ಗೂಗಲ್‌ ಸರ್ಚ್ ಮೂಲಕ ಪತ್ತೆ ಮಾಡಿಕೊಡುತ್ತದೆ. ಒಟ್ಟಿನಲ್ಲಿ ನಿಮಗೆ ಬೇಕಾದ ಪ್ರೋಗ್ರಾಮಿಂಗ್‌ಗಳನ್ನು ರೂಪಿಸಿ ಇದರಲ್ಲಿ ಇನ್‌ಸ್ಟಾಲ್ ಮಾಡಿಕೊಂಡರೆ ಸಾಕು’ ಎನ್ನುತ್ತಾರೆ ಇದನ್ನು ನಿರ್ಮಾಣ ಮಾಡಿದ ವಿದ್ಯಾರ್ಥಿಗಳು.

‘ಲಿನಕ್ಸ್’ ಆಪರೇಟಿಂಗ್‌ ಸಿಸ್ಟಂ ಹೊಂದಿರುವ ಈ ರೋಬೊದಲ್ಲಿ ಎರಡು ಬ್ಯಾಟರಿಗಳಿದ್ದು ಕಾಲ ಕಾಲಕ್ಕೆ ಚಾರ್ಜ್‌ ಮಾಡಬೇಕು. ಇಂಟೆಲ್‌ ಎನ್‌ಯುಸಿ ಕಂಪ್ಯೂಟರ್‌ ಇದೆ.  ಕೈ, ಕಾಲು ಆಡಿಸಲು ಬಳಸಿರುವ ‘ಡೈನಾಮಿಕ್ಸೆಲ್‌’ ಅನ್ನು ವಿದೇಶದಿಂದ ಆಮದು ಮಾಡಿಕೊಳ್ಳಲಾಗಿದೆ. ಕೇವಲ ಒಂದು ಸ್ವಿಚ್‌ ಆನ್‌ ಮಾಡುವ ಮೂಲಕ ಈ ರೋಬೊ ಚಾಲನೆ ಪಡೆದುಕೊಳ್ಳುವಷ್ಟು ಸುಲಭವಾಗಿ ರೂಪುಗೊಳಿಸಲಾಗಿದೆ.

2018ರಲ್ಲಿ ದಕ್ಷಿಣ ಕೊರಿಯಾದಲ್ಲಿ ನಡೆದ ತಂತ್ರಜ್ಞಾನ ಸಮ್ಮೇಳನದಲ್ಲಿ ರೋಬೊ ‘ಅಜಿತ್ 2.0’ವನ್ನು ಪ್ರದರ್ಶಿಸಲಾಗಿದ್ದು ಕೆಎಲ್‌ಇ ವಿದ್ಯಾರ್ಥಿಗಳು ಈ ರೋಬೊ ಮೂಲಕ ಭಾರತವನ್ನು ಪ್ರತಿನಿಧಿಸಿದ್ದರು. ‘ನಮ್ಮ ದೇಶದ ಇತರೆ ಯಾವ ಎಂಜಿನಿಯರಿಂಗ್‌ ಕಾಲೇಜಿನವರೂ ಇಂತಹ ರೋಬೊ ಅಭಿವೃದ್ಧಿಪಡಿಸಿಕೊಂಡು ತಂದಿರಲಿಲ್ಲ. ಇದು ನಮಗೆ ಖುಷಿ ತಂದಿದೆ’ ಎನ್ನುತ್ತಾರೆ ಈ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದ ಅಕ್ಷಯ್‌ ಹಾಗೂ ಕಾರ್ತೀಕ್‌.

‘ಸದ್ಯಕ್ಕೆ ಇದನ್ನು ತಯಾರಿಸಲು ವೆಚ್ಚ ಹೆಚ್ಚಿದ್ದರೂ ದೊಡ್ಡ ಮಟ್ಟದಲ್ಲಿ ತಯಾರು ಮಾಡಿದರೆ ಉತ್ಪಾದನಾ ವೆಚ್ಚ ಕಡಿಮೆಯಾಗಬಹುದು. ನಿರಂತರವಾಗಿ ರೋಬೊ ಮೇಲೆ ಸಂಶೋಧನೆಗಳನ್ನು ಮಾಡಲಾಗುತ್ತದೆ. ಹೀಗಾಗಿ ಮುಂಬರುವ ದಿನಗಳಲ್ಲಿ ಕಡಿಮೆ ವೆಚ್ಚದಲ್ಲಿ  ಬಹೂಪಯೋಗಿ ರೋಬೊ ಹೊರಬರಬಹುದು’ ಎನ್ನುವ ಆಶಾಭಾವನೆ ವಿದ್ಯಾರ್ಥಿಗಳದ್ದು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !