ರೋಬೊ: ಜೂನಿಯರ್‌ ಚಾಂಪಿಯನ್‌ಗಳು ಸಿಡ್ನಿಗೆ

7

ರೋಬೊ: ಜೂನಿಯರ್‌ ಚಾಂಪಿಯನ್‌ಗಳು ಸಿಡ್ನಿಗೆ

Published:
Updated:
Prajavani

‘ಇಂಡಿಯನ್ ರೋಬೊ ಕಪ್ ಜೂನಿಯರ್ ಫೌಂಡೇಷನ್’ ಆಯೋಜಿಸಿದ್ದ ಆರನೇ ಆವೃತ್ತಿಯ ‘ರೋಬೊ ಕಪ್ ಜ್ಯೂನಿಯರ್’ ಅಂತರರಾಷ್ಟ್ರೀಯ ಚಾಂಪಿಯನ್‌ಶಿಪ್‌ನ ರಾಷ್ಟ್ರೀಯ ಸ್ಪರ್ಧೆ ಶನಿವಾರ ಮತ್ತು ಭಾನುವಾರ ಬನ್ನೇರುಘಟ್ಟದ ಗ್ರೀನ್‌ವುಡ್ ಶಾಲೆಯಲ್ಲಿ ನಡೆಯಿತು.

ವಲಯ ಮಟ್ಟದ ಸ್ಪರ್ಧೆಗಳಲ್ಲಿ ಆಯ್ಕೆಯಾಗಿದ್ದ ಬೆಂಗಳೂರು, ದೆಹಲಿ, ಜೈಪುರ, ಇಂದೋರ್‌, ಹೈದರಾಬಾದ್‌, ಪುನೆ, ಚೆನ್ನೈ ಸೇರಿದಂತೆ ದೇಶದ ವಿವಿಧ ಭಾಗಗಳ 60 ಶಾಲಾ ತಂಡಗಳ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ‘ಆನ್ ಸ್ಟೇಜ್ ಡಾನ್ಸ್‌’, ‘ರೆಸ್ಕ್ಯೂ ಲೇನ್’, ‘ರೆಸ್ಕ್ಯೂ ಮೇಜ್’ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆದವು. ಪ್ರಾಥಮಿಕ, ಮಾಧ್ಯಮಿಕ ಶಾಲೆಗಳ 19 ವರ್ಷದೊಳಗಿನ ವಿದ್ಯಾರ್ಥಿಗಳಿಗೆ ಮಾತ್ರ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿತ್ತು.

ಮೊದಲ ಸ್ಥಾನ ಗಳಿಸಿದ ನಾಲ್ಕು ಶಾಲೆಗಳು ಹಾಗೂ ಅತ್ಯುತ್ತಮ ಪ್ರದರ್ಶನ ನೀಡಿದ 11 ಶಾಲಾ ತಂಡಗಳನ್ನು (ಒಟ್ಟು 15) ಆಯ್ಕೆ ಮಾಡಲಾಯಿತು. ಈ ಶಾಲಾ ತಂಡಗಳು ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆಯಲಿರುವ ಸ್ಪರ್ಧೆಯಲ್ಲಿ ಭಾಗವಹಿಸಲಿವೆ. ಬರುವ ಜುಲೈ ತಿಂಗಳಲ್ಲಿ ಸ್ಪರ್ಧೆ ನಡೆಯಲಿದೆ. 

ಚಿಕ್ಕಬಳ್ಳಾಪುರದ ಬಿಜಿಎಸ್ ವರ್ಲ್ಡ್ ಸ್ಕೂಲ್ ‘ಆನ್ ಸ್ಟೇಜ್ ಡಾನ್ಸ್‌’ ಸ್ಪರ್ಧೆ ವಿಭಾಗದಲ್ಲಿ, ಸರ್ಜಾಪುರದ ಗ್ರೀನ್ ವುಡ್ ಮತ್ತು ನೊಯಿಡಾದ ಶಿವನಾಡ್ ಪಬ್ಲಿಕ್ ಸ್ಕೂಲ್ ‘ರೆಸ್ಕ್ಯೂ ಲೇನ್’ ವಿಭಾಗದಲ್ಲಿ ಹಾಗೂ ದೆಹಲಿಯ ಬಾಲ್ ಭಾರತಿ ಸ್ಕೂಲ್ ‘ರೆಸ್ಕ್ಯೂ ಮೇಜ್’ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದವು.

ಅಂಗಾಂಗಗಳ ದಾನದ ಮಹತ್ವ ಸಾರುವ ರೋಬೊಗಳ ನೃತ್ಯ ರೂಪಕದ ಮೂಲಕ ಪ್ರದರ್ಶಿಸಿದ ಬಿಜಿಎಸ್ ವರ್ಲ್ಡ್ ಸ್ಕೂಲ್‌ನ ವಿದ್ಯಾರ್ಥಿಗಳು ಗಮನ ಸೆಳೆದರು. ಪ್ಲಾಸ್ಟಿಕ್‌ ವಸ್ತುಗಳನ್ನು ಸಮುದ್ರದಲ್ಲಿ ಎಸೆಯುವುದರಿಂದ ಜಲಚರಗಳ ಮೇಲಾಗುವ ದುಷ್ಪರಿಣಾಮಗಳ ಕುರಿತು ರೋಬೊಗಳ ಮೂಲಕ ಜಾಗೃತಿ ಸಂದೇಶ ರವಾನಿಸಿದ ಗ್ರೀನ್‌ವುಡ್‌ ಶಾಲೆಯ ವಿದ್ಯಾರ್ಥಿಗಳು ಮೆಚ್ಚುಗೆಗೆ ಪಾತ್ರರಾದರು. ಕೃಷ್ಣನ ಅವತಾರ, ನವಿಲು ಮತ್ತಿತರ ಮಾದರಿಯ ರೋಬೊಗಳನ್ನು ಸಿದ್ಧಪಡಿಸಿದ್ದ ಶಾಲಾ ಮಕ್ಕಳು ಗಮನ ಸೆಳೆದರು.

‘ರೋಬೊ ತಯಾರಿಸುವ ವಿಧಾನ, ರೋಬೊ ತಂತ್ರಜ್ಞಾನ ಅಭಿವೃದ್ಧಿಪಡಿಸುವುದು ಹಾಗೂ ವಿವಿಧ ಬಗೆಯ ರೋಬೊಗಳನ್ನು ತಯಾರಿಸಲು ವಿದ್ಯಾರ್ಥಿಗಳನ್ನು ಸಿದ್ಧಪಡಿಸುವ ಉದ್ದೇಶದಿಂದ ಈ ರೀತಿಯ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ’ ಎಂದು ಇಂಡಿಯನ್ ರೋಬೊ ಕಪ್ ಜೂನಿಯರ್‌ ಫೌಂಡೇಷನ್‌ ಅಧ್ಯಕ್ಷ ಡೇವಿಡ್ ಪ್ರಕಾಶ್ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !