ಭಾನುವಾರ, ನವೆಂಬರ್ 17, 2019
21 °C
ತಾತಗುಣಿ ಎಸ್ಟೇಟ್‌ನಲ್ಲಿ ಚಿತ್ರನಗರಿ ನಿರ್ಮಿಸುವ ಪ್ರಸ್ತಾವಕ್ಕೆ ಕಲಾವಿದರ ಆಕ್ರೋಶ

ರೋರಿಚ್ ಎಸ್ಟೇಟ್: ಫಿಲ್ಮ್‌ಸಿಟಿ ಮೂಲಕ ಸಿಟಿ ಮಾರ್ಕೆಟ್ ಆಗಲು ಬಿಡೆವು

Published:
Updated:
Prajavani

ಬೆಂಗಳೂರು: ರೋರಿಚ್‌ ಮತ್ತು ದೇವಿಕಾರಾಣಿ ಎಸ್ಟೇಟ್‌ನಲ್ಲಿ ಚಿತ್ರನಗರಿ ನಿರ್ಮಾಣ ಪ್ರಸ್ತಾವಕ್ಕೆ ಚಿತ್ರಕಲಾವಿದರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ‘ಫಿಲ್ಮ್‌ಸಿಟಿ ಮೂಲಕ ಎಸ್ಟೇಟ್‌ ಅನ್ನು ಸಿಟಿ ಮಾರ್ಕೆಟ್ ಆಗಲು ಬಿಡುವುದಿಲ್ಲ’ ಎಂದು ಎಚ್ಚರಿಕೆ ನೀಡಿದ್ದಾರೆ.

ರಷ್ಯಾದ ಖ್ಯಾತ ಚಿತ್ರ ಕಲಾವಿದ, ನೋಬೆಲ್ ಪ್ರಶಸ್ತಿ ಪುರಸ್ಕೃತ ನಿಕೋಲಸ್ ರೋರಿಚ್ ಮತ್ತು ಬರಹಗಾರ್ತಿ ಹೆಲೆನಾ ಅವರ ಮಗ ಸ್ವೆಟಾಸ್ಲೋವ್ ರೋರಿಚ್. ಇವರು 1904ರಲ್ಲಿ ರಷ್ಯಾದಲ್ಲಿ ಜನಿಸಿದರು. ಸ್ವೆಟಾಸ್ಲೋವ್ ಕೂಡ ತಂದೆಯಂತೆ ಚಿತ್ರಕಲೆಯನ್ನು ಕರಗತ ಮಾಡಿಕೊಂಡರು.

ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ನಟಿ ದೇವಿಕಾರಾಣಿ ಅವರನ್ನು ಸ್ವೆಟಾಸ್ಲೋವ್ ರೋರಿಚ್ 1945ರಲ್ಲಿ ಮದುವೆಯಾದರು. ಹಿಮಾಚಲ ಪ್ರದೇಶದ ಮೊನಾಲಿಯಲ್ಲಿ ಈ ದಂಪತಿ ಕೆಲಕಾಲ ನೆಲೆಸಿದ್ದರು. ಚಿತ್ರರಂಗದ ಕೆಲ ಬೆಳವಣಿಗೆಗಳಿಂದ ಬೇಸತ್ತಿದ್ದ ದೇವಿಕಾರಾಣಿ ಎಲ್ಲವನ್ನು ಮರೆಯಲು, ಜನ ಜಂಗುಳಿಯಿಂದ ದೂರ ಉಳಿಯಲು ನಿರ್ಧರಿಸಿದರು. ಅದರಂತೆ ಕನಕಪುರ ರಸ್ತೆಯಲ್ಲಿನ ತಾತಗುಣಿ ಸಮೀಪ 468 ಎಕರೆ 33 ಗುಂಟೆ ವಿಸ್ತಾರದ ಎಸ್ಟೇಟ್‌ ಖರೀದಿಸಿದರು.

‘ಈ ಸ್ಥಳದಲ್ಲಿ ಕುಳಿತು ಸ್ವೆಟಾಸ್ಲೋವ್ ರೋರಿಚ್ ರಚಿಸಿದ ವರ್ಣಚಿತ್ರಗಳು ದೇಶ–ವಿದೇಶಗಳಲ್ಲಿ ಖ್ಯಾತಿ ಪಡೆದವು. ರಷ್ಯಾ ಮತ್ತು ಭಾರತೀಯ ಸಂಸ್ಕೃತಿಗಳ ಪರಸ್ಪರ ವಿನಿಮಯಕ್ಕೆ ರೋರಿಚ್ ಅವರು ಸೇತುವೆಯಂತೆ ಕೆಲಸ ಮಾಡಿದ್ದರು’ ಎಂಬುದನ್ನು ಅವರ ಒಡನಾಡಿಯೂ ಆಗಿದ್ದ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಹಾಲಿ ಕಾರ್ಯದರ್ಶಿ ಎಂ.ಜೆ.ಕಮಲಾಕ್ಷಿ ನೆನಪಿಸಿಕೊಳ್ಳುತ್ತಾರೆ.

‘ಪರಿಷತ್ತಿನ ಟ್ರಸ್ಟಿಯೂ ಆಗಿ ಅವರು ಕೆಲಸ ಮಾಡಿದ್ದರು. ಚಿತ್ರಕಲಾ ಕಾಲೇಜು ಆರಂಭಿಸುವಾಗ ಅದು ಹೇಗಿರಬೇಕು, ವಿದ್ಯಾರ್ಥಿಗಳಿಗೆ ಯಾವ ರೀತಿಯ ತರಬೇತಿ ಸಿಗಬೇಕು ಎಂಬೆಲ್ಲಾ ಸಲಹೆಗಳನ್ನು ನೀಡಿದ್ದರು. ಅಂತಹವರು ಬದುಕಿದ್ದ ಜಾಗ ಪ್ರಶಾಂತವಾಗಿ ಇರಲು ಬಿಡಬೇಕು. ಅಲ್ಲಿ ಚಿತ್ರನಗರಿ ನಿರ್ಮಾಣ ಮಾಡಲಾಗುತ್ತಿದೆ ಎಂಬ ಸುದ್ದಿ ಕೇಳಿದಾಗಿನಿಂದ ಸಂಕಟವಾಗುತ್ತಿದೆ’ ಎಂದು ಕಮಲಾಕ್ಷಿ ನೊಂದುಕೊಂಡರು.

‘ರಷ್ಯಾದಲ್ಲಿ ಜನರು ಅವರ ಕಲಾಕೃತಿಗಳನ್ನು ಸರತಿ ಸಾಲಿನಲ್ಲಿ ನಿಂತು ನೋಡುತ್ತಾರೆ. ನಮ್ಮ ಸಂಸ್ಕೃತಿಯನ್ನು ನಮಗಿಂತ ಚೆನ್ನಾಗಿ ಚಿತ್ರಿಸಿದ ರೋರಿಚ್ ಅವರನ್ನು ನಾವು ಮರೆತಿದ್ದೇವೆ. ಹೀಗಾಗಿ ಅವರ ನೆನಪಿನಾಗಿ ಅಲ್ಲಿಯೇ ವಸ್ತುಸಂಗ್ರಹಾಲಯ ಮತ್ತು ಆರ್ಟ್‌ ಗ್ಯಾಲರಿಯನ್ನು ನಿರ್ಮಿಸಬೇಕು. ಈ ಇಬ್ಬರು ಅಪ್ರತಿಮ ಕಲಾವಿದರ ಬಗ್ಗೆ ಮುಂದಿನ ಪೀಳಿಗೆ ತಿಳಿದುಕೊಳ್ಳುವ ಅವಕಾಶ ಆಗುವಂತೆ ಪಾರಂಪರಿಕ ಮತ್ತು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಬೇಕು. ಅದನ್ನು ಬಿಟ್ಟು ಫಿಲ್ಮ್‌ ಸಿಟಿ ಮಾಡಿ ಅದನ್ನು ಸಿಟಿ ಮಾರ್ಕೆಟ್‌ ಮಾಡಬಾರದು’ ಎಂದು ಮನವಿ ಮಾಡಿದರು.

‘ಬೆಂಗಳೂರಿನಲ್ಲೇ ಚಿತ್ರನಗರಿ ನಿರ್ಮಾಣ ಮಾಡಬೇಕಿದ್ದರೆ ಬೇರೆ ಜಾಗವನ್ನು ಸರ್ಕಾರ ನೋಡಿಕೊಳ್ಳಲಿ. ರೋರಿಚ್–ದೇವಿಕಾರಾಣಿ ಎಸ್ಟೇಟ್‌ಗೆ ಮಾತ್ರ ಕೈ ಹಾಕಬಾರದು’ ಎಂದು ಒತ್ತಾಯಿಸಿದರು.

ಹೋರಾಟ ನಡೆಸಬೇಕಾದೀತು: ಕೆ.ಟಿ.ಶಿವಪ್ರಸಾದ್
‘ರೋರಿಚ್ ಎಸ್ಟೇಟ್‌ನಲ್ಲಿ ಚಿತ್ರನಗರಿ ನಿರ್ಮಿಸಲು ಮುಂದಾದರೆ ಸರ್ಕಾರದ ವಿರುದ್ಧ ಹೋರಾಟ ನಡೆಸಬೇಕಾದೀತು’ ಎಂದು ಖ್ಯಾತ ಚಿತ್ರ ಕಲಾವಿದ ಕೆ.ಟಿ. ಶಿವಪ್ರಸಾದ್ ಎಚ್ಚರಿಸಿದರು.

‘ಪ್ರಜಾವಾಣಿ’ ಜತೆ ಮಾತನಾಡಿದ ಅವರು, ‘ಅದೊಂದು ಸುಂದರ ತಾಣ. ಆನೆ ಕಾರಿಡಾರ್ ಕೂಡ ಆ ಎಸ್ಟೇಟ್‌ನಲ್ಲಿ ಹಾದು ಹೋಗುತ್ತದೆ. ಅಪರೂಪದ ವನ್ಯಜೀವಿಗಳು ಇಲ್ಲಿನ ಕೆರೆಗಳನ್ನು ನಂಬಿಕೊಂಡಿವೆ. ಇದಕ್ಕೆ ಧಕ್ಕೆಯಾಗಲು ಬಿಡುವುದಿಲ್ಲ’ ಎಂದರು.

‘ಚಿತ್ರನಗರಿ ಹೆಸರಿನಲ್ಲಿ ಈ ಭೂಮಿಯನ್ನು ಕಬಳಿಸಲು ಕೆಲವರು ಹೊಂಚು ಹಾಕಿರಬಹುದು. ಅಷ್ಟು ಸುಲಭಕ್ಕೆ ಈ ಭೂಮಿ ಕಬಳಿಸಲು ಬಿಡುವುದಿಲ್ಲ. ಹಾಗೊಂದು ವೇಳೆ ಸರ್ಕಾರ ಮುಂದುವರಿದರೆ ಕಲಾವಿದರು ಮಾತ್ರವಲ್ಲ, ಎಲ್ಲರು ಸೇರಿ ಹೋರಾಟ ನಡೆಸುತ್ತೇವೆ’ ಎಂದು ಹೇಳಿದರು.

ಹಾಳು ಮಾಡುವ ಹುನ್ನಾರ: ಪ.ಸ. ಕುಮಾರ್
‘ಕಂಠೀರವ ಸ್ಟುಡಿಯೊ, ಬಾಲಕೃಷ್ಣ ಸ್ಟುಡಿಯೊ, ಅಬ್ಬಯ್ಯ ನಾಯ್ಡು ಸ್ಟುಡಿಯೊ ರೀತಿಯಲ್ಲೇ ರೋರಿಚ್ ಎಸ್ಟೇಟ್ ಜಾಗವನ್ನೂ ಹಾಳು ಮಾಡುವ ಹುನ್ನಾರ ನಡೆದಿದೆ’ ಎಂದು ಹಿರಿಯ ಕಲಾವಿದ ಪ.ಸ. ಕುಮಾರ್ ‌ಅಸಮಾಧಾನ ವ್ಯಕ್ತಪಡಿಸಿದರು.

‘ಇರುವ ಸ್ಟುಡಿಯೊಗಳನ್ನು ಅಭಿವೃದ್ಧಿಪಡಿಸುವ ಬದಲು ರೋರಿಚ್ ಎಸ್ಟೇಟ್ ಮೇಲೆ ಸರ್ಕಾರ ಕಣ್ಣು ಹಾಕಿರುವುದು ಸರಿಯಲ್ಲ’ ಎಂದು ಅವರು ‘‍‍‍ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಪ್ರವಾಹ ಸಂತ್ರಸ್ತರು ಬೀದಿಯಲ್ಲಿದ್ದಾರೆ. ಅವರಿಗೆ ಪುನರ್ವಸತಿ ಕಲ್ಪಿಸುವ ಬಗ್ಗೆ ಸರ್ಕಾರ ಆಸಕ್ತಿ ವಹಿಸಲಿ. ಚಿತ್ರನಗರಿ ಬೇಕು ಎಂದು ಸರ್ಕಾರವನ್ನು ಕೇಳಿದ್ದಾದರೂ ಯಾರು’ ಎಂದು ಪ್ರಶ್ನಿಸಿದರು.

‘ಚಿತ್ರನಗರಿ ಹೆಸರಿನಲ್ಲಿ ಭೂಮಿ ಹಸ್ತಾಂತರ ಮಾಡಿಕೊಂಡು ಸರ್ಕಾರಗಳು ಬದಲಾದರೆ ಫಿಲ್ಮ್ ಸಿಟಿಯೂ ಆಗುವುದಿಲ್ಲ, ಜಾಗವೂ ಉಳಿಯುವುದಿಲ್ಲ’ ಎಂದು ಆತಂಕ ವ್ಯಕ್ತಪಡಿಸಿದರು.

‘ಸರ್ಕಾರ ಈ ನಿರ್ಧಾರ ಕೈಬಿಟ್ಟು ರೋರಿಚ್ ಎಸ್ಟೇಟ್‌ನಲ್ಲಿ ಅವರ ಹೆಸರಿನಲ್ಲಿ ಆರ್ಟ್‌ ಗ್ಯಾಲರಿ ನಿರ್ಮಿಸಲಿ’ ಎಂದು ಒತ್ತಾಯಿಸಿದರು.

ಪ್ರತಿಕ್ರಿಯಿಸಿ (+)