ಮಳೆ: ಉರುಳಿದ ವಿದ್ಯುತ್ ಕಂಬಗಳು

7
ಮುಂಗಾರು ಚುರುಕು; ಮನೆಗಳಿಗೆ ಭಾಗಶಃ ಹಾನಿ

ಮಳೆ: ಉರುಳಿದ ವಿದ್ಯುತ್ ಕಂಬಗಳು

Published:
Updated:
ಮಲ್ಪೆ–ಉಡುಪಿ ಮುಖ್ಯರಸ್ತೆಯ ಕೂರಗಜ್ಜ ದೇವಸ್ಥಾನ ಬಳಿ ಭಾರಿ ಮಳೆಗೆ ಬೃಹತ್ ಗಾತ್ರದ ಮರಬಿದ್ದು ಸಾರ್ವಜನಿಕರಿಗೆ ತೊಂದರೆಯಾಗಿತ್ತು. ಜೆಸಿಬಿ ಮೂಲಕ ಮರವನ್ನು ತೆರವುಗೊಳಿಸಲಾಯಿತು

ಉಡುಪಿ: ಕೆಲದಿನಗಳಿಂದ ಬಿಡುವುಕೊಟ್ಟಿದ್ದ ಮಳೆ ಮಂಗಳವಾರ ಮತ್ತೆ ಬಿರುಸಾಗಿ ಸುರಿಯಿತು. ಸೂರ್ಯ ಉದಯಿಸುವ ಮುನ್ನವೇ ಆರಂಭವಾಗಿದ್ದ ಮಳೆ ಕತ್ತಲು ಕವಿಯುವವರೆಗೂ ಸುರಿದು ಜನಜೀವನಕ್ಕೆ ತೊಂದರೆಯಾಯಿತು.

ಸೋಮವಾರ  ರಾತ್ರಿ ಕೆಲಹೊತ್ತು ಬಿರುಗಾಳಿ ಸಹಿತ ಮಳೆ ಸುರಿಯಿತು. ಬೆಳಿಗ್ಗೆ ಮಳೆಯ ಅಬ್ಬರ ಕಡಿಮೆಯಾದರೂ ಜಿಟಿಜಿಟಿ ಸುರಿಯುತ್ತಲೇ ಇತ್ತು. ಪರಿಣಾಮ, ಮಕ್ಕಳು ಶಾಲೆಗಳಿಗೆ ತೆರಳಲು ಸಮಸ್ಯೆಯಾಯಿತು. ರೇನ್‌ ಕೋಟ್ ಧರಿಸಿದ್ದ ವಿದ್ಯಾರ್ಥಿಗಳು ಮಳೆಯಲ್ಲೇ ಶಾಲೆಗೆ ಸಾಗುತ್ತಿದ್ದ ದೃಶ್ಯ ಕಂಡುಬಂತು. 

ಬಿಸಿಲಿನ ದರ್ಶನ ಇಲ್ಲ: ದಿನವಿಡಿ ಮೋಡಕವಿದ ವಾತಾವರಣ ಇದ್ದಿದ್ದರಿಂದ ಸೂರ್ಯನ ದರ್ಶನವಾಗಲೇ ಇಲ್ಲ. ಮಳೆ ಜತೆಗೆ ತಂಪಾದ ಗಾಳಿ ಬೀಸಿ ಚಳಿಗಾಲದ ಅನುಭವವಾಯ್ತು. ಸುರಿಯುತ್ತಲೇ ಇದ್ದ ಮಳೆಯಿಂದಾಗಿ, ಉದ್ಯೋಗಿಗಳು ಕಚೇರಿಗೆ ತೆರಳಲು, ಸಾರ್ವಜನಿಕರು ನಿತ್ಯದ ಕೆಲಸ ಕಾರ್ಯಗಳನ್ನು ಮಾಡಲು ಮಳೆ ಅಡ್ಡಿಯಾಯಿತು. ಮಾರುಕಟ್ಟೆಯಲ್ಲಿ ವ್ಯಾಪಾರವೂ ಮಂಕಾಗಿತ್ತು.

ಚರಂಡಿಗಳಲ್ಲಿ ಹೂಳು ತುಂಬಿಕೊಂಡಿದ್ದ ಪರಿಣಾಮ ಮಳೆನೀರು ಸರಾಗವಾಗಿ ಹರಿಯದೆ ಹಲವು ರಸ್ತೆಗಳಲ್ಲಿ ನೀರು ನಿಂತಿತ್ತು. ಮತ್ತೊಂದೆಡೆ ಆದಿಉಡುಪಿ ಬಳಿಯ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳ್ಳದ ಪರಿಣಾಮ, ಮಲ್ಪೆ, ಕುಂದಾಪುರ, ಮಂಗಳೂರಿಗೆ ತೆರಳಬೇಕಿದ್ದ ಸವಾರರು ತೊಂದರೆ ಅನುಭವಿಸಿದರು. ಸರ್ವೀಸ್ ರಸ್ತೆಯಲ್ಲಿ ದೊಡ್ಡ ಗುಂಡಿಗಳು ನಿರ್ಮಾಣವಾಗಿದ್ದು, ಮಳೆ ನೀರು ತುಂಬಿಕೊಂಡು ದಾರಿ ಕಾಣದಂತಾಗಿತ್ತು. ಹಿಂದೆ, ಹಲವರು ಬಿದ್ದು ಗಾಯಮಾಡಿಕೊಂಡಿದ್ದು, ಮಳೆಗಾಲವಾಗಿರುವುದರಿಂದ ಸಮಸ್ಯೆ ಬಿಗಡಾಯಿಸಿದೆ ಎನ್ನುತ್ತಾರೆ ಸ್ಥಳೀಯರು.

ಮತ್ತೊಂದೆಡೆ ರಾತ್ರಿ ಸುರಿದ ಬಿರುಗಾಳಿ ಮಳೆ ಜಿಲ್ಲೆಯ ಹಲವು ಭಾಗಗಳಲ್ಲಿ ಅವಾಂತರ ಸೃಷ್ಟಿಸಿದೆ. ಕುಂದಾಪುರ ತಾಲ್ಲೂಕಿನ ಹಲವೆಡೆ ಮರಗಳು ಬಿದ್ದಿದ್ದು, 30 ವಿದ್ಯುತ್ ಕಂಬಗಳು ಧರೆಗುರುಳಿವೆ.

ಹೆಬ್ರಿಯಲ್ಲೂ ಹಲವು ಮನೆಗಳಿಗೆ ಭಾಗಶಃ ಹಾನಿ ಸಂಭವಿಸಿದೆ.ಉಡುಪಿ ನಗರ ವ್ಯಾಪ್ತಿಯಲ್ಲೂ ಮರದ ಕೊಂಬೆಗಳು ಮುರಿದುಬಿದ್ದು ಸಂಚಾರಕ್ಕೆ ಕೆಲಕಾಲ ತೊಂದರೆಯಾಗಿತ್ತು. 12 ವಿದ್ಯುತ್ ಕಂಬಗಳು ಬಿದ್ದಿದ್ದು, ಯಾವುದೇ ಪ್ರಾಣಾಪಾಯವಾಗಿಲ್ಲ. ನಗರದಲ್ಲಿ ಕೆಲಕಾಲ ವಿದ್ಯುತ್ ವ್ಯತ್ಯಯ ಉಂಟಾಗಿತ್ತು. ಕೂಡಲೇ ಸಿಬ್ಬಂದಿ ಸ್ಥಳಕ್ಕೆ ತೆರಳಿ ಸಮಸ್ಯೆಯನ್ನು ಬಗೆಹರಿಸಿದ್ದಾರೆ ಎಂದು ‘ಪ್ರಜಾವಾಣಿ’ಗೆ ಬೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿದರು.

ಮಲ್ಪೆ–ಉಡುಪಿ ಮುಖ್ಯರಸ್ತೆಯ ಕೂರಗಜ್ಜ ದೇವಸ್ಥಾನ ಬಳಿ ಭಾರಿಮಳೆಗೆ ಬೃಹತ್ ಗಾತ್ರದ ಮರಬಿದ್ದು ಸಾರ್ವಜನಿಕರಿಗೆ ತೊಂದರೆಯಾಗಿತ್ತು. ಸ್ಥಳೀಯ ಮುಖಂಡ ಸುಂದರ್ ಜೆ.ಕಲ್ಮಾಡಿ ಜೆಸಿಬಿ ಮೂಲಕ ಮರವನ್ನು ತೆರವುಗೊಳಿಸಿದರು. ಮುಂಗಾರು ಚುರುಕಾಗಿದ್ದು, ಉಡುಪಿ ನಗರಕ್ಕೆ ನೀರು ಪೂರೈಸುಬ ಬಜೆ ಜಲಾಶಯಕ್ಕೆ ಹೆಚ್ಚಿನ ನೀರು ಹರಿದು ಬರುತ್ತಿದ್ದು, ಜಲಾಶಯ ಬಹುತೇಕ ಭರ್ತಿಯಾಗಿದೆ. ಕೃಷಿ ಚಟುವಟಿಕೆಗಳೂ ಚುರುಕು ಗೊಂಡಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !