ಪೊಲೀಸರಿಬ್ಬರ ಕೈ ಕಚ್ಚಿ ರೌಡಿ ಪರಾರಿ

7

ಪೊಲೀಸರಿಬ್ಬರ ಕೈ ಕಚ್ಚಿ ರೌಡಿ ಪರಾರಿ

Published:
Updated:

ಬೆಂಗಳೂರು: ತನ್ನನ್ನು ಹಿಡಿಯಲು ಬಂದ ಪೊಲೀಸರಿಬ್ಬರ ಕೈ ಕಚ್ಚಿ ರೌಡಿ ವೆಂಕಟೇಶ್ ಅಲಿಯಾಸ್ ಕಾಡು ಎಂಬಾತ ಪರಾರಿಯಾಗಿದ್ದು, ಆ ಸಂಬಂಧ ನಂದಿನಿ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಮಹಾಲಕ್ಷ್ಮಿ ಲೇಔಟ್ ಠಾಣೆಯ ಅಪರಾಧ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಕಾನ್‌ಸ್ಟೆಬಲ್‌ಗಳಾದ ಯೂಸುಫ್ ದಿಗ್ಗೇವಾಡಿ ಹಾಗೂ ಬೀರೇಶ್ ಭರಡಿ, ಸೆಪ್ಟೆಂಬರ್ 29ರಂದು ರಾತ್ರಿ ವೆಂಕಟೇಶ್‌ನನ್ನು ಬಂಧಿಸಲು ಹೋಗಿದ್ದರು. ಅದೇ ವೇಳೆಯೇ ಆರೋಪಿ ಅವರಿಬ್ಬರ ಕೈ ಕಚ್ಚಿ ಗಾಯವನ್ನುಂಟು ಮಾಡಿದ್ದು, ಕಾನ್‌ಸ್ಟೆಬಲ್‌ಗಳು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ’ ಎಂದು ನಂದಿನಿ ಲೇಔಟ್ ಪೊಲೀಸರು ತಿಳಿಸಿದರು.

’ಘಟನೆ ಸಂಬಂಧ ಯೂಸುಫ್‌ ಅವರ ಹೇಳಿಕೆ ಆಧರಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಯ ಸಂಬಂಧಿಕರು ಹಾಗೂ ಸ್ನೇಹಿತರನ್ನು ವಿಚಾರಣೆಗೆ ಒಳಪಡಿಸಿ, ಆತನ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದೇವೆ’ ಎಂದು ಹೇಳಿದರು.

‘ಸುಲಿಗೆ, ಕೊಲೆಗೆ ಯತ್ನ, ಜೀವ ಬೆದರಿಕೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ವೆಂಕಟೇಶ್‌ನ ವಿರುದ್ಧ ರೌಡಿ ಪಟ್ಟಿ ತೆರೆಯಲಾಗಿದೆ. ಅಷ್ಟಾದರೂ ಆತ, ಅಪರಾಧ ಕೃತ್ಯ ಎಸಗುವುದನ್ನು ಮುಂದುವರಿಸಿದ್ದ. ಪೊಲೀಸರಿಂದ ತಪ್ಪಿಸಿಕೊಂಡು ಓಡಾಡುತ್ತಿದ್ದ. ಆತನನ್ನು ಪತ್ತೆ ಹಚ್ಚುವ ಕೆಲಸಕ್ಕೆ ಯೂಸುಫ್ ಹಾಗೂ ಬೀರೇಶ್ ಅವರನ್ನು ನಿಯೋಜಿಸಲಾಗಿತ್ತು’ ಎಂದು ಅವರು ವಿವರಿಸಿದರು.

‘ಆರೋಪಿ, ನಂದಿನಿ ಲೇಔಟ್‌ನ ಸರಸ್ವತಿ ಸಮುದಾಯ ಭವನದ ಸಮೀಪ ಓಡಾಡುತ್ತಿದ್ದ. ಆ ಮಾಹಿತಿ ತಿಳಿದು ಸ್ಥಳಕ್ಕೆ ಹೋಗಿದ್ದ ಕಾನ್‌ಸ್ಟೆಬಲ್‌ಗಳು, ಆತನನ್ನು ಹಿಡಿದುಕೊಳ್ಳಲು ಮುಂದಾಗಿದ್ದರು. ಆರೋಪಿ, ಅವರಿಬ್ಬರ ಮೇಲೂ ಮಚ್ಚು ಬೀಸಿ ಕೊಲೆಗೆ ಯತ್ನಿಸಿದ್ದ. ಮಚ್ಚಿನಿಂದ ತಪ್ಪಿಸಿಕೊಂಡ ಕಾನ್‌ಸ್ಟೆಬಲ್‌ಗಳು, ಆರೋಪಿಯನ್ನು ಹಿಡಿದುಕೊಂಡಿದ್ದರು. ಅವಾಗಲೇ ಆರೋಪಿ, ಅವರಿಬ್ಬರ ಕೈಗಳಿಗೆ ಬಾಯಿಯಿಂದ ಕಚ್ಚಿ ತಪ್ಪಿಸಿಕೊಂಡು ಹೋದ. ಸ್ಥಳಕ್ಕೆ ಹೋಗಿದ್ದ ಹೊಯ್ಸಳ ಗಸ್ತು ವಾಹನದ ಸಿಬ್ಬಂದಿ ಕಾನ್‌ಸ್ಟೆಬಲ್‌ಗಳನ್ನು ಆಸ್ಪತ್ರೆಗೆ ದಾಖಲಿಸಿದ್ದರು’ ಎಂದು ಮಾಹಿತಿ ನೀಡಿದರು. 

 

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !