ಗುಂಡ್ಲುಪೇಟೆ ತಾಲ್ಲೂಕು ಕಚೇರಿ: ಆರ್ಟಿಸಿಗೆ ಮುಗಿಬಿದ್ದ ರೈತರು

ಗುಂಡ್ಲುಪೇಟೆ: ಸಾಲಮನ್ನಾ ಪ್ರಯೋಜನ ಪಡೆಯಲು ಬ್ಯಾಂಕ್ಗಳಿಗೆ ಆರ್ಟಿಸಿ ನೀಡಬೇಕಿರುವುದರಿಂದ ಸೋಮವಾರ ರೈತರು ತಾಲ್ಲೂಕು ಕಚೇರಿಯಲ್ಲಿ ಆರ್ಟಿಸಿಗಾಗಿ ಮುಗಿಬಿದ್ದರು.
ತಾಲ್ಲೂಕು ಕಚೇರಿಯಲ್ಲಿ ಒಂದು ಕೌಂಟರ್ನಲ್ಲಿ ಆರ್ಟಿಸಿ ನೀಡಲಾಗುತ್ತಿದ್ದು, ಬೆಳಿಗ್ಗೆಯಿಂದಲೇ ರೈತರು ಸರದಿ ಸಾಲಿನಲ್ಲಿ ನಿಂತಿದ್ದರು. ಕೌಂಟರ್ನ ಕಿಟಕಿಯ ಮೇಲೆ ನಿಂತಿದ್ದ ದೃಶ್ಯ ಕಂಡುಬಂತು.
ಸರ್ವರ್ ತೊಂದರೆಯಿಂದಾಗಿ ಆರ್ಟಿಸಿ ನೀಡುವುದು ತಡವಾಗುತ್ತಿತ್ತು. ಇದರಿಂದ ಬೇಸತ್ತ ರೈತರು ಸಿಬ್ಬಂದಿ ಮೇಲೆ ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ಬಂದ ತಹಸೀಲ್ದಾರ್ ಭಾರತಿ, ‘ಎಲ್ಲರಿಗೂ ಆರ್ಟಿಸಿ ನೀಡಲಾಗುತ್ತದೆ. ಸಾವಧಾನದಿಂದ ಪಡೆದುಕೊಳ್ಳಬೇಕು’ ಎಂದು ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಹಂಗಳ ಗ್ರಾಮದ ರೈತ ರಾಜಪ್ಪ, ‘ಒಂದು ಆರ್ಟಿಸಿ ಪಡೆಯಲು ದಿನಗಟ್ಟಲೇ ಕಾಯಬೇಕಿದೆ. ಬೆಳಿಗ್ಗೆಯಿಂದ ಕಾಯುತ್ತಿದ್ದೇನೆ. ಆದರೆ, ಇಲ್ಲಿನ ಸಿಬ್ಬಂದಿಯು ಸರ್ವರ್, ಇಂಟರ್ನೆಟ್ ತೊಂದರೆ ಎಂಬ ಕಾರಣ ಹೇಳುತ್ತಿದ್ದಾರೆ’ ಎಂದು ದೂರಿದರು.
ಕಾಂಗ್ರೆಸ್ ಜಿಲ್ಲಾ ಘಟಕದ ಕಾರ್ಯದರ್ಶಿ ಲಕ್ಕೂರು ಗಿರೀಶ್ ಮಾತನಾಡಿ, ‘ರೈತರು ಎಲ್ಲ ಕೆಲಸಗಳನ್ನು ಬಿಟ್ಟು ಇದೇ ಕಾರಣಕ್ಕೆ ಬರುತ್ತಾರೆ. ಅವರಿಗೆ ತೊಂದರೆ ಆಗದಂತೆ ಆರ್ಟಿಸಿ ನೀಡಬೇಕು’ ಎಂದು ಒತ್ತಾಯಿಸಿದರು.