ಗುರುವಾರ , ನವೆಂಬರ್ 21, 2019
20 °C

15 ದಿನಗಳಲ್ಲಿ 3.2 ಲಕ್ಷ ಮಂದಿಗೆ ಡಿ.ಎಲ್

Published:
Updated:

ಬೆಂಗಳೂರು: ಸಂಚಾರ ನಿಯಮ ಉಲ್ಲಂಘಿಸುವವರಿಗೆ ವಿಧಿಸುವ ದಂಡದ ಮೊತ್ತ ಹೆಚ್ಚಳ ಮಾಡಿದಾಗಿನಿಂದ, ಚಾಲನಾ ಪರವಾನಗಿ ಸೇರಿ ವಿವಿಧ ದಾಖಲೆಗಳನ್ನು ಮಾಡಿಸಲು ಆರ್‌ಟಿಒ ಕಚೇರಿಗಳಲ್ಲಿ ಜನ ಮುಗಿಬೀಳುತ್ತಿದ್ದಾರೆ.

‘ಸೆಪ್ಟೆಂಬರ್‌ 1ರಿಂದ 15ರವರೆಗೆ ಅರ್ಜಿ ಸಲ್ಲಿಸಿದ್ದ ರಾಜ್ಯದ 3.2 ಲಕ್ಷ ಮಂದಿ ಚಾಲನಾ ಪರವಾನಗಿ (ಡಿ.ಎಲ್) ಪಡೆಯಲು ಅರ್ಹರಾಗಿದ್ದಾರೆ’ ಎಂದು ಸಾರಿಗೆ ಇಲಾಖೆಯ ಜಂಟಿ ಆಯುಕ್ತ ಶಿವರಾಜ್ ಪಾಟೀಲ ತಿಳಿಸಿದರು.

‘ಸಾಮಾನ್ಯ ದಿನಗಳಲ್ಲಿ ತಿಂಗಳಿಗೆ 3.2 ಲಕ್ಷ ಡಿ.ಎಲ್ ನೀಡುತ್ತಿವೆ. ಸೆಪ್ಟೆಂಬರ್‌ನಲ್ಲಿ ಅದರ ಪ್ರಮಾಣ ಹೆಚ್ಚಾಗಿದೆ. ಮೈಸೂರಿನಲ್ಲಿ ಭಾನುವಾರ ನಡೆಸಿದ ವಿಶೇಷ ಅಭಿಯಾನದಲ್ಲಿ 2,000 ಮಂದಿ ಡಿ.ಎಲ್‌.ಗಾಗಿ ಅರ್ಜಿ ಸಲ್ಲಿಸಿದ್ದಾರೆ’ ಎಂದರು.

‘ರಾಜ್ಯದ ಎಲ್ಲ ಆರ್‌ಟಿಒ ಕಚೇರಿ ಎದುರು ಜನಸಂದಣಿ ಕಂಡುಬರುತ್ತಿದೆ. ಡಿ.ಎಲ್‌ಗೆ ಅರ್ಹರಾದವರಿಗೆ ಸ್ಮಾರ್ಟ್‌ಕಾರ್ಡ್‌ ವಿತರಿಸಲಾಗುತ್ತಿದೆ. ಬೇಡಿಕೆಗೆ ತಕ್ಕಷ್ಟು ಸ್ಮಾರ್ಟ್‌ಕಾರ್ಡ್‌ಗಳನ್ನು ನೀಡಲು ಪೂರೈಕೆದಾರರನ್ನು ಕೋರಿದ್ದೇವೆ’ ಎಂದು ಹೇಳಿದರು.

5 ಲಕ್ಷ ಪ್ರಮಾಣ ಪತ್ರ ವಿತರಣೆ: ವಾಹನಗಳ ಮಾಲಿನ್ಯ ತಪಾಸಣೆ ಮಾಡಿಸುವವರ ಸಂಖ್ಯೆಯೂ ಹೆಚ್ಚುತ್ತಿದೆ. ಬೆಂಗಳೂರಿನಲ್ಲಿ ಸೆಪ್ಟೆಂಬರ್ 1ರಿಂದ 15ರವರೆಗೆ 5 ಲಕ್ಷಕ್ಕೂ ಹೆಚ್ಚು ಮಂದಿ ವಾಹನ ತಪಾಸಣೆ ಮಾಡಿಸಿದ್ದಾರೆ.

‘ಬೆಂಗಳೂರಿನಲ್ಲಿ 385 ವಾಯು ಮಾಲಿನ್ಯ ತಪಾಸಣಾ ಕೇಂದ್ರಗಳಿವೆ. ಆಗಸ್ಟ್‌ನಲ್ಲಿ 2.35 ಲಕ್ಷ ಮಂದಿ ಪರೀಕ್ಷೆ ಮಾಡಿಸಿದ್ದರು. ಸೆಪ್ಟೆಂಬರ್‌ ಅಂತ್ಯಕ್ಕೆ 7.77 ಲಕ್ಷ ಆಗುವ ಸಾಧ್ಯತೆ ಇದೆ’ ಎಂದು ಅಧಿಕಾರಿಯೊಬ್ಬರು ಹೇಳಿದರು.

‘ವಾಯು ಮಾಲಿನ್ಯ ತಪಾಸಣೆ ಮಾಡಿಸಲು ದ್ವಿಚಕ್ರ ವಾಹನಗಳಿಗೆ ₹ 50, ಮೂರು ಚಕ್ರದ ವಾಹನಗಳಿಗೆ ₹ 60, ನಾಲ್ಕು ಚಕ್ರ ಹಾಗೂ ಡೀಸೆಲ್ ವಾಹನಗಳಿಗೆ ₹ 125 ಇದೆ. ತಪಾಸಣಾ ಪ್ರಮಾಣ ಪತ್ರ ಇಲ್ಲದಿದ್ದರೆ 10,000 ದಂಡ ವಿಧಿಸಲಾಗುತ್ತಿದೆ. ಅದೇ ಕಾರಣಕ್ಕೆ ಹೆಚ್ಚು ಜನ ವಾಹನಗಳ ತಪಾಸಣೆ ಮಾಡಿಸುತ್ತಿದ್ದಾರೆ’ ಎಂದು ತಿಳಿಸಿದರು.

ಪ್ರತಿಕ್ರಿಯಿಸಿ (+)