ಭಾನುವಾರ, ಡಿಸೆಂಬರ್ 15, 2019
21 °C
ಗ್ರಾಮಾಭಿವೃದ್ಧಿಯ ಗಾಂಧಿ !

ಗ್ರಾಮಾಭಿವೃದ್ಧಿಯ ಗಾಂಧಿ!

ಎಂ. ಮಹೇಶ Updated:

ಅಕ್ಷರ ಗಾತ್ರ : | |

Deccan Herald

ಖಾದಿ ಚೆಡ್ಡಿ–ಅಂಗಿ‌, ತಲೆಗೊಂದು ಗಾಂಧಿ ಟೋಪಿ, ಬಗಲಲ್ಲಿ ಬಟ್ಟೆ ಚೀಲ ತೂಗು ಹಾಕಿಕೊಂಡು, ಮನಸ್ಸಿನ ತುಂಬಾ ಗ್ರಾಮ ಸ್ವರಾಜ್ಯದ ಕನಸು ತುಂಬಿಕೊಂಡು ಕಾಲ್ಬಲದಿಂದಲೇ ಓಡಾಡುತ್ತಾರೆ. ವಾಸಕ್ಕೆ ಮನೆ ಇಲ್ಲ. ಆದರೂ ‘ಹಳ್ಳಿಯಲ್ಲೂ, ದಿಲ್ಲಿಯಲ್ಲೂ ನಮ್ಮ ಹಳ್ಳಿಗರದ್ದೇ ಸರ್ಕಾರ ಆಗಬೇಕು’ ಎನ್ನುತ್ತಾ ಊರೂರು ಸುತುತ್ತಾರೆ ಸಂಘಟನೆ ಮಾಡುತ್ತಾರೆ. ಹೆಸರಲ್ಲಿ ‘ಶಿವಾಜಿ’, ಕೆಲಸದಲ್ಲಿ ‘ಅರಸು’ ತರಹ. ಅವರೇ ಕಟ್ಟಣಬಾವಿಯ ಶಿವಾಜಿ ಕಾಗಣೀಕರ.

ಸಮಾನತೆ, ಸಾಮಾಜಿಕ ನ್ಯಾಯ ಹಾಗೂ ಗ್ರಾಮೀಣಾಭಿವೃದ್ಧಿಯ ಚಿಂತನೆ, ಆದರ್ಶ, ತತ್ವಗಳಿಗೆ ದನಿಯಾಗಿ ನಿರಂತರವಾಗಿ ಹೋರಾಡುತ್ತಿರುವ ಅವರು ವಿಜ್ಞಾನ ಪದವಿ ಪೂರ್ಣಗೊಳಿಸಲಿಲ್ಲ; ಆದರೆ, ಸಮಾಜ ವಿಜ್ಙಾನ, ಒಡನಾಟದಲ್ಲಿ ಅವರ ಜ್ಙಾನ ಸಂಪಾದನೆ ಯಾವ ಪದವಿಗೂ ಕಡಿಮೆ ಇಲ್ಲ. ತಮ್ಮನ್ನು ಸಂಪೂರ್ಣವಾಗಿ ಸಮಾಜಕ್ಕೆಂದೇ ಸಮರ್ಪಿಸಿಕೊಂಡಿರುವ ಅವರದ್ದು ಸರಳ ಜೀವನ. ಸುಸ್ಥಿರ ಬದುಕು. ‘ಐದು ವರ್ಷಕ್ಕೆ ಒಂದು ಹಳ್ಳಿ ಅಭಿವೃದ್ಧಿಪಡಿಸಬೇಕು’ ಎನ್ನುವ ಗುರಿ ಇಟ್ಟುಕೊಂಡು, ಅದನ್ನು ತಲುಪುತ್ತಲೇ ಬಂದಿದ್ದಾರೆ. ಜನರ ಸಹಭಾಗಿತ್ವದೊಂದಿಗೆ ಕಟ್ಟಣಭಾವಿ ಸುತ್ತ ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವಲ್ಲಿ ಯಶಸ್ವಿಯೂ ಆಗುತ್ತಿದ್ದಾರೆ.

ಹುಟ್ಟಿ ಬೆಳೆದಿದ್ದು ಬಡ ಕುಟುಂಬದಲ್ಲಿ. ಬೆಳಗಾವಿ ಭಾಗದಲ್ಲಿ ಕನ್ನಡ ಶಾಲೆಗಳು ಇಲ್ಲದ ಕಾಲದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಮಠಾಠಿಯಲ್ಲಿ ಕಲಿತರು ಶಿವಾಜಿ. ಬಿ.ಎಸ್ಸಿ ಪದವಿಗೆ ಸೇರಿದರೂ, ಸಾಮಾಜಿಕ ಚಳವಳಿಯ ಸೆಳೆತದಿಂದಾಗಿ ಪದವಿ ಕಲಿಕೆಯನ್ನು ಮೊಟಕುಗೊಳಿಸಿ ಸಾನೇ ಗುರೂಜಿ, ಜಯಪ್ರಕಾಶ ನಾರಾಯಣ, ವಸಂತ ಪಾಳಸೇಕರ, ಅಣ್ಣಾ ಹಜಾರೆ, ಮೋಹನ ಹೀರಾಬಾಯಿ ಹೀರಾಲಾಲ ಮೊದಲಾದವರ ಸಾಮಾಜಿಕ ಚಳವಳಿ, ಕಾಳಜಿ ಹಾಗೂ ಚಿಂತನೆಗಳ ಪ್ರಭಾವದಿಂದ ಸೇವೆ ಮಾಡಲು ಮುಂದಾದವರು. ಈ ಸೇವಾ ಕಾರ್ಯಕ್ಕೆ ಸಂಸಾರದ ಜಂಟಾಟಗಳು ಅಡ್ಡಿಯಾಗದಿರಲೆಂದು ಮದುವೆಯ ಗೊಡವೆಗೇ ಹೋಗಿಲ್ಲ.

ಜಾತಿ, ಶ್ರೇಣೀಕೃತ ವ್ಯವಸ್ಥೆಯಿಂದ ಜಿಗುಪ್ಸೆಗೊಂಡವರು ಶಿವಾಜಿ. ಇದಕ್ಕೆಲ್ಲಾ ಶಿಕ್ಷಣವೇ ಪರಿಹಾರವೆಂದು ಭಾವಿಸಿದವರು; ಶಿಕ್ಷಣದಿಂದಲೇ ಸಮಾಜದಲ್ಲಿ ತಿಳಿವಳಿಕೆ ಮೂಡಿಸಲು ಸಾಧ್ಯವೆಂದು ಅರಿತು ಶಿಕ್ಷಕನಾಗಲು ಬಯಸಿದ್ದರು. ಇಂದಿನ ಶಿಕ್ಷಣ ವ್ಯವಸ್ಥೆ ಬಗ್ಗೆ ಬೇಸರ ವ್ಯಕ್ತಪಡಿಸುತ್ತಾ 1968–68ರಲ್ಲಿ ಸರ್ವೋದಯ ಗೆಳೆಯರ ಬಳಗ, ಜನ ಜಾಗರಣ ಸಂಸ್ಥೆ ಮೂಲಕ ರಾತ್ರಿ ಶಾಲೆಗಳನ್ನು ಆರಂಭಿಸಿದರು. ಬೇಡ, ಮರಾಠ ಹಾಗೂ ಕುರುಬ ಸಮುದಾಯದವರೇ ಹೆಚ್ಚಿನಸಂಖ್ಯೆಯಲ್ಲಿ ವಾಸವಿರುವ ಅರಣ್ಯ ಪ್ರದೇಶದ ಹಳ್ಳಿಗಳಲ್ಲಿ ವಾಸ ಮಾಡಿ, ಬೈಸಿಕಲ್‌ನಲ್ಲಿ ಸುತ್ತಾಡುತ್ತಾ ಶೈಕ್ಷಣಿಕ ಜಾಗೃತಿ ಮೂಡಿಸಿದವರು.

ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎನ್ನುವಂತೆ ಗ್ರಾಮೀಣ ಮಹಿಳೆಯರಿಗೆ ರಾತ್ರಿ ಶಾಲೆಗಳನ್ನು ತೆರೆದರು. ಸತತ 10 ವರ್ಷಗಳವರೆಗೆ ನಡೆಸಿದರು. ಅವರಲ್ಲಿ ಅಕ್ಷರ ಕ್ರಾಂತಿಯ ಜತೆಗೆ, ವಿಚಾರದ ದೀಪ ಪ್ರಜ್ವಲನೆಗೆ ಕಾರಣವಾದವರು. ಅವರ ಸಾಮಾಜಿಕ, ಆರ್ಥಿಕ ಸಂಗತಿಗಳತ್ತ ಹೆಚ್ಚಿನ ಒತ್ತು ನೀಡಿ ಸ್ವಾವಲಂಬನೆಗೆ ಪ್ರೇರಣೆಯಾದರು.

ಹಳ್ಳಿಗಳಲ್ಲಿ ಅಡುಗೆ ಮಾಡಲು ಕಟ್ಟಿಗೆಗಳನ್ನು ಬಳಕೆ ಮಾಡುತ್ತಿದ್ದದು ಕಾಡು ನಾಶಕ್ಕೆ ಕಾರಣವಾಗುತ್ತಿತ್ತು. ಒಲೆ ಮುಂದೆ ಕುಳಿತ ಮಹಿಳೆಯರು ವಿವಿಧ ರೋಗಗಳಿಗೆ ತುತ್ತಾಗುತ್ತಿದ್ದರು. ಇದನ್ನು ಅರಿತ ಶಿವಾಜಿ, ಹೊಗೆಮುಕ್ತ ಅಡುಗೆಯತ್ತ ಜಾಗೃತಿಗೆ ಮುಂದಾದರು. ಹೊಗೆ ರಹಿತ ಒಲೆಗೆ ಗೋಬರ್ ಗ್ಯಾಸ್ ಉತ್ತಮ ಪರಿಹಾರವೆಂದು ಅರಿತು, ಮಹಾರಾಷ್ಟ್ರದ ತ್ರಯಂಬಕೇಶ್ವರದಲ್ಲಿ ತರಬೇತಿ ಪಡೆದು ಬಂದವರು. ಗೋಬರ್ ಗ್ಯಾಸ್ ಒಲೆಯ ಬಳಕೆ ಬಗ್ಗೆ ಸಮಾಜಕ್ಕೆ ತಿಳಿಸಿದವರು. ಸರ್ಕಾರೇತರ ಸಂಸ್ಥೆಯೊಂದಿಗೆ ಒಡಬಂಡಿಕೆ ಮಾಡಿಕೊಂಡು ‘ದೀನಬಂಧು’ ಎಂಬ ಸರಳ ಗೋಬರ್ ಘಟಕಗಳನ್ನು ಆಂದೋಲನದ ರೀತಿ 14 ಸಾವಿರಕ್ಕೂ ಹೆಚ್ಚಿನ ಜನರಿಗೆ ತಲುಪಿಸಿದರು. ಆಗ ಗೋಬರ್ ಗ್ಯಾಸ್ ಬಳಕೆಯಲ್ಲಿ ಕರ್ನಾಟಕ ರಾಜ್ಯ ಪ್ರಥಮ ಸ್ಥಾನದಲ್ಲಿತ್ತು. ಶಿವಾಜಿ ಅವರು ಆಂದೋಲನ ಕೈಗೊಂಡಿದ್ದ ಬೆಳಗಾವಿಯ ಕಡೋಲಿ ಗ್ರಾಮ ರಾಜ್ಯದಲ್ಲಿಯೇ ಪ್ರಥಮ ಸ್ಥಾನದಲ್ಲಿತ್ತು.

ಅಣ್ಣಾ ಹಜಾರೆ ಅನುಯಾಯಿ :

ಅದು 78–80ರ ದಶಕದ ನಡುವಿನ ಅವಧಿ. ತೀರ ಬರಗಾಲ. ಕಟ್ಟಣಭಾವಿಯಲ್ಲಿ ರಾತ್ರಿವೇಳೆ ಬಾವಿಯಳ ಆಳಕ್ಕಿಳಿದು ಲೋಟದಲ್ಲಿ ನೀರು ಬಗೆದು ಬಿಂದಿಗೆ ತುಂಬಿಸಿಕೊಳ್ಳುವಷ್ಟು ನೀರಿಗೆ ಬರ. ಒಂದು ಕಾಲದಲ್ಲಿ ಹುಲಿ ಓಡಾಡುವಷ್ಟು ದಟ್ಟವಾದ ಕಾಡು ಇದ್ದ ಜಾಗ, ಈಗ ಬಟ್ಟ ಬಯಲಾಗಿದ್ದೇ ಇಂಥ ಬರಕ್ಕೆ ಕಾರಣ ಎಂದು ಅರಿತಿದ್ದ ಶಿವಾಜಿ, ಜನರನ್ನು ಜಾಗೃತಿಗೊಳಿಸಿ, ಸುತ್ತಲಿನ ಗುಡ್ಡಗಳಲ್ಲಿ ಮಳೆ ನೀರು ಇಂಗಿಸಲು ಸಜ್ಜುಗೊಳಿಸಿದರು. ಇದಕ್ಕಾಗಿ ರಾಳೆಗಾಂವ್ ಸಿದ್ಧಿಯಲ್ಲಿ ಅಣ್ಣಾ ಹಜಾರೆ ಕೈಗೊಂಡಿರುವ ಕಾರ್ಯಗಳನ್ನು ಹಳ್ಳಿಯ ಜನರನ್ನು ಕರೆದೊಯ್ದರು.

ಪ್ರವಾಸಕ್ಕೆ ಹೋಗಿ ಬಂದಿದ್ದು ಜನರ ಮನಸ್ಸಲ್ಲಿ ನೀರಿಂಗಿಸುವ ಆಸಕ್ತಿ ಬೆಳೆಸಿತು. ಊರಿಗೆ ಬಂದವರೇ ನೀರಿಂಗಿಸುವ ರಚನೆಗಳ ನಿರ್ಮಾಣ ಶುರುವಾಯಿತು. ಮರಗಳನ್ನು ನೆಟ್ಟರು. ಸಮಪಾತಳಿ ಬದುಗಳನ್ನು ನಿರ್ಮಿಸಿದರು. ನಾಲ್ಕು ವರ್ಷ ಕಳೆಯುವುದರಲ್ಲಿ ಸಾವಿರಾರು ಗೇರು ಮರಗಳು ಬೆಳದು ನಿಂತವು. ಇಂಗಿದ ಮಳೆ ನೀರು ಬಾವಿಗಳಲ್ಲಿ ಒರತೆಯಾಗಿ ಕಾಣಿಸಿಕೊಂಡಿತು.

ನಂತರದ ದಿನಗಳಲ್ಲಿ ಜನಧನ ಸಂಸ್ಥೆ ಹಾಗೂ ಗ್ರೀನ್ ಸೇವಿಯರ್ಸ್‌ ಸಂಸ್ಥೆಗಳ ಸಹಯೋಗದಲ್ಲಿ ಕೆರೆಗಳ ಸುತ್ತ ಹಾಗೂ ಒಡ್ಡುಗಳ ಮೇಲೆ ಸಸಿಗಳನ್ನು ನೆಡುವ, ಪೋಷಿಸುವ ಯೋಜನೆ ಕೈಗೊಂಡಿದ್ದಾರೆ. ಅರಣ್ಯ ಪ್ರದೇಶ, ರೈತರ ಜಮೀನು ಹಾಗೂ ಖಾಲಿ ಜಾಗಗಳಲ್ಲಿ 3 ಲಕ್ಷಕ್ಕೂ ಹೆಚ್ಚಿನ ಸಸಿಗಳನ್ನು ನೆಟ್ಟು ಬೆಳೆಸಿದ್ದಾರೆ.

ಉದ್ಯೋಗ ಖಾತ್ರಿಯ ಲಾಭ :

ಉದ್ಯೋಗ ಖಾತ್ರಿ ಯೋಜನೆಯನ್ನು ಕೂಲಿ ಕಾರ್ಮಿಕರ ಚಳವಳಿಯನ್ನಾಗಿಸಿ ಬೆಳಗಾವಿ ಹಾಗೂ ಹುಕ್ಕೇರಿ ತಾಲ್ಲೂಕುಗಳಲ್ಲಿ ಜನಜಾಗೃತಿ ಮೂಡಿಸಿದರು. ಕಾರ್ಮಿಕರಿಗೆ ಸರ್ಕಾರದ ಯೋಜನೆಯ ಲಾಭ ದೊರೆಯುವಂತೆ ಮಾಡಿದ್ದಾರೆ. ಕೂಲಿ ಕಾರ್ಮಿಕರ ಸಂಪರ್ಕದಿಂದಾಗಿ ದೊಡ್ಡ ಸಂಘಟನೆಯೇ ಸಿದ್ಧವಾಗಿದೆ. ಈ ಕೂಲಿ ಕಾರ್ಮಿಕರಲ್ಲಿ ಬಹುತೇಕರು (ಶೇ 60) ಮಹಿಳೆಯರೇ ಇದ್ದಾರೆ. ಈ ಸಂಘಟನೆಯಿಂದಾಗಿ, ಹುಕ್ಕೇರಿ ತಾಲ್ಲೂಕಿನ 10 ಪಂಚಾಯ್ತಿಗಳ ವ್ಯಾಪ್ತಿಯಲ್ಲಿ 2500 ಹಾಗೂ ಬೆಳಗಾವಿ ತಾಲ್ಲೂಕಿನ 13 ಪಂಚಾಯ್ತಿಗಳ ವ್ಯಾಪ್ತಿಯಲ್ಲಿ 3000 ಮಂದಿ ಕೂಲಿಕಾರರು ಸದಸ್ಯರಾಗಿದ್ದಾರೆ. ‘ಮೊಹಲ್ಲಾ, ಗಲ್ಲಿಗಳಲ್ಲಿ ಸಭೆ ನಡೆಸಿ ಅರಿವು ಮೂಡಿಸಲು ಬಹಳಷ್ಟ ಸಮಯ ಬೇಕಾಯಿತು. ಉದ್ಯೋಗ ಚೀಟಿ ಕೊಡಿಸುವುದಕ್ಕೂ ಅಧಿಕಾರಿಗಳೊಂದಿಗೆ ಸಂಘರ್ಷವನ್ನೇ ಮಾಡಬೇಕಾಯಿತು. ಧರಣಿ ನಡೆಸಬೇಕಾಯಿತು’ ಎಂದು ನೆನಪಿಸಿಕೊಳ್ಳುತ್ತಾರೆ ಶಿವಾಜಿ.

ನರೆಗಾ ಜತೆಗೆ ಸಾವಯವ ಕೃಷಿ ಪ್ರಚಾರಾಂದೋಲನ ಆರಂಭಿಸಿದ್ದಾರೆ ಅವರು. ಪರಿಣಾಮವಾಗಿ ಹುಕ್ಕೇರಿ ಹಾಗೂ ಬೆಳಗಾವಿ ತಾಲ್ಲೂಕುಗಳಲ್ಲಿ ಸಾವಯವ ಕೃಷಿಕರ ಸಂಖ್ಯೆ ಹೆಚ್ಚಿದೆ. 2009–10ರಲ್ಲಿ ಜೀವನ ಶಿಕ್ಷಣ ಪ್ರತಿಷ್ಠಾನ ಸಂಸ್ಥೆ ಸ್ಥಾಪಿಸಿ ರೈತರು ಹಾಗೂ ಕೂಲಿಕಾರ್ಮಿಕರ ಮಕ್ಕಳ ಶಿಕ್ಷಣಕ್ಕಾಗಿ 14 ಶಿಕ್ಷಣ ಪಾಲನಾ ಕೇಂದ್ರಗಳನ್ನು ಪ್ರಾರಂಭಿಸಿದ್ದಾರೆ. ಇವರ ನೇತೃತ್ವದಲ್ಲಿ ಕಟ್ಟಣಬಾವಿ, ಬೋರಾಮಟ್ಟಿ ಹಾಗೂ ಕಾಕತಿ ಸಮೀಪ ಹೊಸದಾಗಿ ಕರೆ ಅಭಿವೃದ್ಧಿಪಡಿಸಲಾಗಿದೆ. 10–12 ಕೆರೆಗಳ ಹೂಳೆತ್ತಲಾಗಿದೆ.

ಜನಸಹಭಾಗಿತ್ವದೊಂದಿಗೆ ಗ್ರಾಮೀಣ ಅಭಿವೃದ್ಧಿಗೆ ದುಡಿಯುತ್ತಿರುವ ಈ ಹಿರಿಯ ಜೀವ, ‘ಎಲ್ಲಿಯೂ ನಿಲ್ಲದಿರು, ಮನೆಯನೆಂದು ಕಟ್ಟದಿರು, ಓ ಅನಂತವಾಗಿರು’ ಎಂಬ ತತ್ವ ಪಾಲಿಸುತ್ತಿದೆ. ಅವರಿಗೆ ಈಗ ಊರು ಎನ್ನುವುದಿಲ್ಲ; ಮನೆಯೂ ಇಲ್ಲ! ಕಾರ್ಯಕರ್ತರ ಮನೆಗಳಲ್ಲಿ ವಾಸ. ತಿರುಗಾಟವೇ ಜೀವನ. ದೂರದ ಊರಿಗೆ ಬಸ್ಸಿನಲ್ಲೇ ಓಡಾಟ. ಅವರನ್ನು ಖುದ್ಧು ಭೇಟಿಯಾಗೇ ಮಾತಾಡಬೇಕು. ಏಕೆಂದರೆ ಅವರು ಮೊಬೈಲ್ ಫೋನ್ ಇಟ್ಟುಕೊಂಡಿಲ್ಲ!

ಸಂತಸವಿದೆ; ನೋವೂ ಇದೆ!:

ಶಿವಾಜಿ ಕಾಗಣೀಕರ ಅವರ ಗ್ರಾಮೀಣ ಅಭಿವೃದ್ಧಿಯ ಸೇವೆಗೆ ರಾಜ್ಯ ಸರ್ಕಾರ ಪ್ರಸಕ್ತ ಸಾಲಿನ ‘ಡಿ. ದೇವರಾಜ ಅರಸು’ ಪ್ರಶಸ್ತಿ ನೀಡಿ ಗೌರವಿಸಿದೆ. ‘ಪ್ರಶಸ್ತಿ ಬಂದ ನಂತರ, ನಿಮಗೆ ಏನನ್ನಿಸಿತು’ ಎಂದು ಶಿವಾಜಿಯವರನ್ನು ಕೇಳಿದರೆ, ‘ಒಂದು ಕಡೆ ಸಂತೋಷ. ಇದರೊಂದಿಗೆ ದುಃಖವೂ ಆಗಿದೆ. ಸರ್ಕಾರಗಳು ಪರಿಸರ ಸಂರಕ್ಷಣೆಗೆ ನೀಡಬೇಕಾಗಿದ್ದಷ್ಟು ಪ್ರಮಾಣದಲ್ಲಿ ಆದ್ಯತೆ ಕೊಟ್ಟಿಲ್ಲ ಎನ್ನುವುದು ನನ್ನ ನೋವಿಗೆ ಕಾರಣ’ ಎಂದು ಬೇಸರ ವ್ಯಕ್ತಪಡಿಸಿದರು.

‘ಸರ್ಕಾರ ಹೇಳುತ್ತದೆ: ಪ್ರಕೃತಿಯಲ್ಲಿ ಸಮತೋಲನ ಕಾಪಾಡಿಕೊಳ್ಳುವುದಕ್ಕಾಗಿ ಶೇ 33ರಷ್ಟು ಅರಣ್ಯ ಪ್ರದೇಶವಿರಬೇಕು. ಆದರೆ, ಶೇ 11ರಷ್ಟು ಮಾತ್ರ ಇದೆಯಂತೆ. ಹಾಗಾದರೆ ಶೇ 22ರಷ್ಟು ಎಲ್ಲಿಗೆ ಹೋಯಿತು? ಕದ್ದವರು ಯಾರು? ಹೀಗಾದರೆ ಪರಿಸರವನ್ನು ಕಾಪಾಡಿಕೊಳ್ಳುವುದು ಹೇಗೆ’ ಎನ್ನುವ ಪ್ರಶ್ನೆ ಅವರದು.

‘ಕುಡಿಯುವ ನೀರಿಗೆ ಹಾಹಾಕಾರ. ವಾಯುಮಾಲಿನ್ಯ ಪ್ರಮಾಣದಲ್ಲಿ ಹೆಚ್ಚಳ. ಶೇ70ರಷ್ಟು ಮಂದಿಗೆ ನಿಜವಾಗಿಯೂ ಸ್ವಾತಂಂತ್ರ್ಯ ದೊರೆತಿಲ್ಲ. ಇದೆಲ್ಲವನ್ನೂ ನೆನೆದಾಗ ಪ್ರಶಸ್ತಿಯ ಖುಷಿಗಿಂತ ಬೇಸರವೇ ಜಾಸ್ತಿ ಕಣ್ಮುಂದೆ ಬರುತ್ತದೆ. ಹಾಗೆಂದು ನಾನು ನಿರಾಶವಾದಿಯಲ್ಲ. ಬದಲಾವಣೆ ನನ್ನಿಂದಲೇ ಆರಂಭವಾಗಬೇಕು. ಇದಕ್ಕಾಗಿ ಪರಿಸರ ಸಂರಕ್ಷಣೆ ಕೆಲಸಕ್ಕೆ ಆದ್ಯತೆ ನೀಡಿದ್ದೇನೆ’ ತನ್ನ ಸಂಕಲ್ಪನವನ್ನು ಹೇಳಿಕೊಂಡರು.

‘ಉದ್ಯೋಗ ಖಾತ್ರಿ ಯೋಜನೆ ಹಳ್ಳಿಗಳ ಅಭಿವೃದ್ಧಿಗೆ ವರದಾನ. ಇದನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು. ಹಳ್ಳಿಗಳಲ್ಲೇ ಉದ್ಯೋಗ ನೀಡಿ ಆರ್ಥಿಕ ಸ್ವಾವಲಂಬಿಯಾಗಲು ಸಹಕಾರಿ. ಅದಕ್ಕಾಗಿಯೇ ಹೆಚ್ಚು ಜಾಗೃತಿ ಮೂಡಿಸುತ್ತಿದ್ದೇನೆ. ಈಗ ಮಹಿಳೆಯರು ಉದ್ಯೋಗ ಕೇಳಿಕೊಂಡು ಬರುತ್ತಿದ್ದಾರೆ. ದುಡಿಯುವ ಕೈಗಳಿಗೆ ಉದ್ಯೋಗ ಚೀಟಿ ಕೊಡಿಸಲು ಹೋರಾಟ ಮುಂದುವರಿಸುತ್ತೇನೆ’ ಎಂದು ಭವಿಷ್ಯದ ದಾರಿಯನ್ನು ಶಿವಾಜಿ ಕಾಗಣೀಕರ್ ತೆರೆದಿಟ್ಟರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು