ಮಂಗಳವಾರ, ನವೆಂಬರ್ 19, 2019
29 °C
ರಷ್ಯಾ ಅಧ್ಯಕ್ಷ ಪುಟಿನ್, ಪ್ರಧಾನಿ ನರೇಂದ್ರ ಮೋದಿ ಮಾತುಕತೆ

ಆಂತರಿಕ ವಿಷಯದಲ್ಲಿ ‘ಹೊರಗಿನವರ ಹಸ್ತಕ್ಷೇಪ’ಕ್ಕೆ ವಿರೋಧ

Published:
Updated:

ವ್ಲಾದಿವೋಸ್ಟೋಕ್‌ (ಪಿಟಿಐ):‘ಯಾವುದೇ ದೇಶದ ಆಂತರಿಕ ವಿಷಯದಲ್ಲಿ ಹೊರಗಿನವರು ಹಸ್ತಕ್ಷೇಪ ಮಾಡುವುದು ಇಲ್ಲವೇ ಪ್ರಭಾವ ಬೀರುವುದನ್ನು ಭಾರತ ಹಾಗೂ ರಷ್ಯಾ ವಿರೋಧಿಸುತ್ತವೆ’ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಇಲ್ಲಿ ಹೇಳಿದರು.

‘ಪೌರ್ವಾತ್ಯ ಆರ್ಥಿಕ ವೇದಿಕೆ (ಈಸ್ಟರ್ನ್‌ ಎಕನಾಮಿಕ್‌ ಫೋರಂ)ನ ಎರಡು ದಿನಗಳ ಸಮಾವೇಶದಲ್ಲಿ ಪಾಲ್ಗೊಳ್ಳುವ ಸಲುವಾಗಿ ಬುಧವಾರ ಇಲ್ಲಿ ಬಂದಿಳಿದ ಅವರು, ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಅವರೊಂದಿಗೆ ಮಾತುಕತೆ ನಡೆಸಿದ ನಂತರ ಮಾಧ್ಯಮದೊಂದಿಗೆ ಮಾತನಾಡಿದರು.

ರಷ್ಯಾದ ಪೂರ್ವ ಭಾಗದ ಪ್ರಾಂತ್ಯಕ್ಕೆ ಭೇಟಿ ನೀಡುತ್ತಿರುವ ಭಾರತದ ಮೊದಲ ಪ್ರಧಾನಿಯಾಗಿರುವ ಮೋದಿ, ತೈಲ ಮತ್ತು ಅನಿಲ, ಅಣುಶಕ್ತಿ, ರಕ್ಷಣಾ ಕ್ಷೇತ್ರ, ಬಾಹ್ಯಾಕಾಶ ಮತ್ತು ಸಮುದ್ರಮಾರ್ಗದ ಮೂಲಕ ಸಂಪರ್ಕ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಉಭಯ ದೇಶಗಳ ಸಹಕಾರ ವೃದ್ದಿ ಸಂಬಂಧ ಚರ್ಚೆ ನಡೆಸಲಿದ್ದಾರೆ. 

ಪರಸ್ಪರ ಹೊಗಳಿಕೆ ವ್ಯಕ್ತಪಡಿಸಿದ ಮೋದಿ, ಪುಟಿನ್ 

ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ನನ್ನ ಆತ್ಮೀಯ ಗೆಳೆಯ ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು  ಹೇಳಿದರೆ, ಭಾರತದ ಪ್ರಧಾನಿ ಮೋದಿ ನನ್ನ ಉತ್ತಮ ಗೆಳೆಯ ಎಂದು ಹೇಳುವುದರ ಮೂಲಕ ಎರಡೂ ರಾಷ್ಟ್ರಗಳ ನಾಯಕರು ಪರಸ್ಪರ ಹೊಗಳಿಕೆ ವ್ಯಕ್ತಪಡಿಸಿದ್ದಾರೆ.

ಈ ಸಮಾವೇಶದಲ್ಲಿ ಭಾಗವಹಿಸಲು ಅವಕಾಶ ನೀಡಿದ ವ್ಲಾದಿಮಿರ್ ಪುಟಿನ್ ಅವರಿಗೆ ನಾನು ತುಂಬಾ ಆಭಾರಿಯಾಗಿದ್ದೇನೆ. ನಮ್ಮಿಬ್ಬರ ಸಹಕಾರ ಮತ್ತೊಂದು ಮಹತ್ತರವಾದ ಘಟ್ಟಕ್ಕೆ ತಲುಪಿದೆ. ಇಂಧನ ಸೇರಿದಂತೆ ಹಲವು ಕ್ಷೇತ್ರದಲ್ಲಿ ಎರಡೂ ರಾಷ್ಟ್ರಗಳು ಪರಸ್ಪರ ಬಂಡವಾಳ ಹೂಡಿಕೆ, ಜಂಟಿ ಸಹಯೋಗದಲ್ಲಿ ನಾಗರಿಕ ವಿಮಾನ ತಯಾರಿಕೆ ಕುರಿತು ಚರ್ಚಿಸಿದ್ದೇವೆ. ಪ್ರಮುಖ ಒಪ್ಪಂದಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಪ್ರಧಾನಿ ಮೋದಿ ತಿಳಿಸಿದರು. 

ಜಪಾನಿನ ಪ್ರಧಾನಿ ಶಿಜೊ ಅಬೆ, ಮಂಗೋಲಿಯನ್ ಅಧ್ಯಕ್ಷ ಖಲ್ತಮಾ ಬಟ್ಟಲ್ಗಾ, ಮಲೇಷ್ಯಾ ಪ್ರಧಾನಿ ಮಹತಿರ್ ಮಹಮದ್ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಎಲ್ಲಾ ರಾಷ್ಟ್ರಗಳ ಪ್ರಮುಖರಿಗಿಂತ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಹೆಚ್ಚು ಸಮಯ ಕಳೆದದ್ದು ವಿಶೇಷವಾಗಿತ್ತು.

ಸೈಬೀರಿಯಾ ಪಕ್ಷಿಗಳ ಕುರಿತು ಚರ್ಚೆ

ರಷ್ಯಾ ಮತ್ತು ಭಾರತ ಸ್ನೇಹ ಪ್ರಕೃತಿಯಲ್ಲಿಯೂ ಮುಂದುವರಿದಿದೆ. ಸೈಬೀರಿಯಾ ಪಕ್ಷಿಗಳು ನಮ್ಮ ತವರು ರಾಜ್ಯ ಗುಜರಾತ್‌ಗೆ ಪ್ರತಿ ವರ್ಷ ಆಗಮಿಸುತ್ತವೆ. ಅಲ್ಲದೆ, ಹುಲಿ ಸಂರಕ್ಷಣೆ ಕುರಿತು ಪ್ರಾಣಿ ಪ್ರಿಯ ಪುಟಿನ್ ಜೊತೆ ಚರ್ಚಿಸುವುದಾಗಿ ಮೋದಿ ತಿಳಿಸಿದರು. 

ಭಾರತ ರಷ್ಯಾದಿಂದ ಶಸ್ತ್ರಾಸ್ತ್ರ ಖರೀದಿಸುವ ಪ್ರಮುಖ ರಾಷ್ಟ್ರವಾಗಿದೆ. ಎರಡೂ ದೇಶಗಳ ನಡುವೆ 2018ರಲ್ಲಿ 11 ಬಿಲಿಯನ್ ಡಾಲರ್‌ಗಳಷ್ಟು ವಹಿವಾಟು ನಡೆದಿದೆ. ರಷ್ಯಾ ಹಾಗೂ ಭಾರತ 2015ರಲ್ಲಿ ಕಮೋವ್ ಕ-226 ಹೆಲಿಕಾಪ್ಟರ್ ತಯಾರಿಕೆಯ ಕುರಿತು ಜಂಟಿ ಒಪ್ಪಂದ ಮಾಡಿಕೊಂಡಿವೆ.

ಪ್ರತಿಕ್ರಿಯಿಸಿ (+)