ಸೋಮವಾರ, ನವೆಂಬರ್ 18, 2019
20 °C

ಅಮೆರಿಕ ಜತೆ ಉತ್ತಮ ಸಂಬಂಧ ನಿರೀಕ್ಷಿಸಿಲ್ಲ: ರಷ್ಯಾ

Published:
Updated:
Prajavani

ಮಾಸ್ಕೊ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್ ಬೋಲ್ಟನ್ ಅವರನ್ನು ವಜಾಗೊಳಿಸಿದ ಬಳಿಕವೂ ವಾಷಿಂಗ್ಟನ್‌ ಜತೆಗಿನ ಸಂಬಂಧದಲ್ಲಿ ಯಾವುದೇ ಸುಧಾರಣೆ ನಿರೀಕ್ಷಿಸಿಲ್ಲ ಎಂದು ರಷ್ಯಾ ಬುಧವಾರ ಹೇಳಿದೆ.

‘ಅಮೆರಿಕ ಆಡಳಿತದಲ್ಲಿ ಈ ರೀತಿಯ ಬದಲಾವಣೆಗಳು ಹಿಂದೆ ಸಾಕಷ್ಟು ಬಾರಿ ಆಗಿವೆ. ಆಗಲೂ ಎರಡೂ ದೇಶಗಳ ನಡುವಿನ ಸಂಬಂಧದಲ್ಲಿ ಸುಧಾರಣೆಗಳೇನು ಆಗಿಲ್ಲ. ಹೀಗಾಗಿ ಈ ಬಾರಿಯೂ ನಿರೀಕ್ಷೆಗಳೇನೂ ಇಲ್ಲ’ ಎಂದು ರಷ್ಯಾದ ಉಪ ವಿದೇಶಾಂಗ ಸಚಿವ ಸೆರ್ಗಿ ರ್‍ಯಾಬ್ಕೊವ್‌ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಉತ್ತರ ಕೊರಿಯಾ ಮತ್ತು ಇರಾನ್‌ ದೇಶಗಳ ವಿಷಯ ಸೇರಿದಂತೆ ಹಲವು ವಿಚಾರಗಳಲ್ಲಿ ಬೋಲ್ಟನ್‌ ಮತ್ತು ಟ್ರಂಪ್‌ ನಡುವೆ ಭಿನ್ನಾಭಿಪ್ರಾಯಗಳಿದ್ದವು. ಈ ಕಾರಣಕ್ಕಾಗಿ ಟ್ರಂಪ್‌ ಮಂಗಳವಾರ ಬೋಲ್ಟನ್‌ ಅನ್ನು ವಜಾಗೊಳಿಸಿದ್ದರು.

ನಿರ್ಧಾರ ಸ್ವಾಗತಾರ್ಹ: ಬೊಗಾಟಾ
(ಎಪಿ): ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್‌ ಬೋಲ್ಟನ್‌ ಅವರನ್ನು ವಜಾಗೊಳಿಸಿರುವುದನ್ನು ವೆನಿಜುವೆಲಾ ಸಮಾಜವಾದಿ ಸರ್ಕಾರ ಸ್ವಾಗತಿಸಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು, ‘ಅಮೆರಿಕ ವಿಧಿಸುತ್ತಿದ್ದ ತೈಲ ನಿರ್ಬಂಧದಲ್ಲಿ ಬೋಲ್ಟನ್‌ ಪಾತ್ರವಿದೆ. ಜತೆಗೆ ಸಮಾಜವಾದಿ ಸರ್ಕಾರದ ಅಧ್ಯಕ್ಷ ನಿಕೋಲಸ್‌ ಮಡುರೋ ಅವರ ವಿರುದ್ಧ ನಿತ್ಯವೂ ಸಾಮಾಜಿಕ ಜಾಲತಾಣದಲ್ಲಿ ಟೀಕಿಸುತ್ತಿದ್ದ ಬೋಲ್ಟನ್‌ ವಜಾಗೊಂಡಿರುವುದು ಸ್ವಾಗತಾರ್ಹ’ ಎಂದಿದ್ದಾರೆ.

ಪ್ರತಿಕ್ರಿಯಿಸಿ (+)