‘16,079 ಎಕರೆ ಒತ್ತುವರಿ ತೆರವು ಎಲ್ಲಿ?’

ಬುಧವಾರ, ಜೂನ್ 26, 2019
29 °C
30 ದಿನಗಳಲ್ಲಿ ವರದಿ ಸಲ್ಲಿಸಲು ಜಿಲ್ಲಾಧಿಕಾರಿಗೆ ಕಂದಾಯ ಸಚಿವ ಆರ್.ವಿ. ದೇಶಪಾಂಡೆ ತಾಕೀತು

‘16,079 ಎಕರೆ ಒತ್ತುವರಿ ತೆರವು ಎಲ್ಲಿ?’

Published:
Updated:
Prajavani

ಬೆಂಗಳೂರು: ‘ನಗರದಲ್ಲಿ ಸರ್ಕಾರಿ ಭೂಮಿ ಒತ್ತುವರಿ ತೆರವು ಮಾಡಿರುವ 16,079 ಎಕರೆ ಜಾಗ ಎಲ್ಲಿದೆ ಎಂಬುದನ್ನು ತೋರಿಸಿ’ ಎಂದು ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಅವರು ಜಿಲ್ಲಾಧಿಕಾರಿ ಬಿ.ಎಂ. ವಿಜಯಶಂಕರ್‌ ಅವರಿಗೆ ಸೂಚಿಸಿದರು.

ನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳು ನೀಡಿದ ಮಾಹಿತಿ ಕೇಳಿ ದೇಶಪಾಂಡೆ, ಸಂಸದ ಡಿ.ಕೆ. ಸುರೇಶ್, ಶಾಸಕ ಎಸ್‌.ಟಿ. ಸೋಮಶೇಖರ್ ಹಾಗೂ ಇತರರು ಆಶ್ಚರ್ಯ ವ್ಯಕ್ತಪಡಿಸಿದರು.

‘ಎ.ಟಿ. ರಾಮಸ್ವಾಮಿ ವರದಿ ಪ್ರಕಾರ ಒತ್ತುವರಿ ಆಗಿರುವ ಭೂಮಿಯಲ್ಲಿ ಎಷ್ಟು ಎಕರೆ ತೆರವುಗೊಳಿಸಲಾಗಿದೆ ಎಂಬ ಮಾಹಿತಿ ನೀಡಿ’ ಎಂದು ದೇಶಪಾಂಡೆ ಸೂಚಿಸಿದರು.

‘ಒತ್ತುವರಿ ಆಗಿರುವ 22,199 ಎಕರೆಯಲ್ಲಿ 16,451 ಎಕರೆಯನ್ನು ತೆರವುಗೊಳಿಸಲು ಸಾಧ್ಯವಿದೆ. ಈ ಪೈಕಿ, 16,079 ಎಕರೆಯನ್ನು ತೆರವುಗೊಳಿಸಿ ತಂತಿ ಬೇಲಿಯನ್ನೂ ಹಾಕಿಸಲಾಗಿದೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ಡಿ.ಕೆ. ಸುರೇಶ್, ‘16,079 ಎಕರೆ ಎಂದರೆ ಒಂದು ಹೋಬಳಿಯಷ್ಟು ಆಗುತ್ತದೆ. ತೆರವಾಗಿದೆ ಎಂದು ಕಾಗದದ ಮೇಲೆ ಬರೆದುಕೊಂಡು ಬಂದರೆ ಸಾಲದು. ವಾಸ್ತವವಾಗಿ ಏನಾಗಿದೆ ಹೇಳಿ’ ಎಂದರು.

‘ಇಷ್ಟು ಭೂಮಿಯನ್ನು ತೆರವು ಮಾಡಿಸಿರುವ ಬಗ್ಗೆ ನನಗೆ ಅನುಮಾನ ಇದೆ. ಒತ್ತುವರಿ ತೆರವಿಗೆ ಎಲ್ಲಾ ರೀತಿಯ ಬೆಂಬಲವನ್ನೂ ಸರ್ಕಾರ ನೀಡಲಿದೆ. 30 ದಿನಗಳಲ್ಲಿ ತೆರವುಗೊಳಿಸಿರುವ ವರದಿ ನೀಡಬೇಕು’ ಎಂದು ಜಿಲ್ಲಾಧಿಕಾರಿಗೆ ದೇಶಪಾಂಡೆ ತಾಕೀತು ಮಾಡಿದರು.

‘ಬೆಂಗಳೂರು ನಗರ ಜಿಲ್ಲೆ ವಿಸ್ತಾರದಲ್ಲಿ ಚಿಕ್ಕದಿದೆ. ಆದರೂ, ಅಧಿಕಾರಿಗಳು ಪ್ರವಾಸ ಮಾಡುವುದಿಲ್ಲ ಎಂಬ ದೂರಿದೆ. ನಾಳೆಯಿಂದಲೇ ಜಿಲ್ಲೆಯಲ್ಲಿ ಪ್ರವಾಸ ಮಾಡಿ ಜನರ ಸಮಸ್ಯೆಗಳನ್ನು ಸ್ಥಳದಲ್ಲೇ ಪರಿಹರಿಸಬೇಕು. ಉಪವಿಭಾಗಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲೇ ಮನೆ ಮಾಡಿಕೊಂಡು ವಾಸ್ತವ್ಯ ಇರಬೇಕು’ ಎಂದು ನಿರ್ದೇಶನ ನೀಡಿದರು.

ಕಡತ ವಿಲೇವಾರಿ ಅಭಿಯಾನ: ಕಡತ ವಿಲೇವಾರಿ ಅಭಿಯಾನವನ್ನು ಇದೇ 24ರಿಂದ 30ರವರೆಗೆ ರಾಜ್ಯದಾದ್ಯಂತ ನಡೆಸಲಾಗುತ್ತಿದೆ. ಬಾಕಿ ಇರುವ ಎಲ್ಲಾ ಕಡತಗಳ ವಿಲೇವಾರಿ ಕೆಲಸವನ್ನಷ್ಟೇ ಸಿಬ್ಬಂದಿ ಮಾಡಲಿದ್ದಾರೆ ಎಂದರು.

‘ಎಲ್ಲಾ ಜಿಲ್ಲೆಗಳಲ್ಲೂ ಕಂದಾಯ ಅದಾಲತ್‌ಗಳು ನಡೆಯುತ್ತಿವೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಮಾತ್ರ ನಿಲ್ಲಿಸಲಾಗಿದೆ. ಇದಕ್ಕೆ ಕಾರಣ ಏನು’ ಎಂದು ಪ್ರಶ್ನಿಸಿದ ಸಚಿವರು, ‘ಜುಲೈ 1ರಿಂದ ಕಂದಾಯ ಅದಾಲತ್‌ ಮತ್ತೆ ಆರಂಭವಾಗಬೇಕು’ ಎಂದು ತಾಕೀತು ಮಾಡಿದರು.

ತಹಶೀಲ್ದಾರ್‌ಗಳಿಗೆ ಅಮಾನತು ಎಚ್ಚರಿಕೆ
ಖಾತಾ ನೈಜತೆ ಗುರುತಿಸುವಿಕೆ ಮತ್ತು ಸರ್ಕಾರಿ ಭೂಮಿ ಒತ್ತುವರಿ ತೆರವು ಕಾರ್ಯದಲ್ಲಿ ಆಸಕ್ತಿ ವಹಿಸದ ಉಪವಿಭಾಗಾಧಿಕಾರಿ ಮತ್ತು ತಹಶೀಲ್ದಾರ್‌ಗಳನ್ನು ತರಾಟೆಗೆ ತೆಗೆದುಕೊಂಡ ದೇಶಪಾಂಡೆ, ಏಳು ದಿನಗಳಲ್ಲಿ ಪ್ರಗತಿ ಕಾಣದಿದ್ದರೆ ಅಮಾನತು ಮಾಡುವುದಾಗಿ ಎಚ್ಚರಿಕೆ ನೀಡಿದರು.

‘ಖಾತಾ ನೈಜತೆ ಪ್ರಗತಿ ಕುಂಠಿತವಾಗಲು ತಹಶೀಲ್ದಾರ್‌ಗಳ ನಿರ್ಲಕ್ಷ್ಯ ಕಾರಣ. ಎಷ್ಟು ಬಾರಿ ನೆನಪಿನ ಪತ್ರಗಳನ್ನು ಕಳುಹಿಸಿದರೂ ಪ್ರತಿಕ್ರಿಯೆಯನ್ನೇ ನೀಡುವುದಿಲ್ಲ. ಇದರಿಂದಾಗಿ ಜನರು ತೊಂದರೆ ಅನುಭವಿಸುವಂತಾಗಿದೆ. ದಾಖಲೆಗಳನ್ನು ಹಿಡಿದು ಜನ ಕಚೇರಿ ತಿರುಗುವುದು ತಪ್ಪಿಲ್ಲ’ ಎಂದು ‌ವಿಶೇಷ ಜಿಲ್ಲಾಧಿಕಾರಿ ಸುಷ್ಮಾ ಗೊಡಬೋಲೆ ತಿಳಿಸಿದರು.

ಇದರಿಂದ ಮತ್ತಷ್ಟು ಅಸಮಾಧಾನಗೊಂಡ ಸಚಿವರು, ‘ಮೂರು ದಿನಗಳಲ್ಲಿ ಉಪವಿಭಾಗಾಧಿಕಾರಿ ಮತ್ತು ತಹಶೀಲ್ದಾರ್‌ಗಳ ಸಭೆ ನಡೆಸಿ ಅವರನ್ನು ಸರಿದಾರಿಗೆ ತನ್ನಿ. ಏಳು ದಿನಗಳ ನಂತರ ಮತ್ತೊಮ್ಮೆ ನಾನೇ ಸಭೆ ನಡೆಸುತ್ತೇನೆ. ಅಷ್ಟರಲ್ಲಿ ಬಾಕಿ ಕೆಲಸಗಳನ್ನು ಮುಗಿಸದವರನ್ನು ಅಶಿಸ್ತು ಎಂದು ಪರಿಗಣಿಸಿ ಅಮಾನತುಗೊಳಿಸಿ ಆದೇಶಿಸುತ್ತೇನೆ’ ಎಂದು ಎಚ್ಚರಿಕೆ ನೀಡಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 10

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !