ದಾಖಲೆ ಸಮೇತ ಸಾಬೀತಿಗೆ ಆಹ್ವಾನ; ಸವಾಲು

ಗುರುವಾರ , ಏಪ್ರಿಲ್ 25, 2019
22 °C
ಗೃಹ ಸಚಿವ ಎಂ.ಬಿ.ಪಾಟೀಲ ವಿರುದ್ಧ ಬಿಜೆಪಿ ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ ಗುಡುಗು

ದಾಖಲೆ ಸಮೇತ ಸಾಬೀತಿಗೆ ಆಹ್ವಾನ; ಸವಾಲು

Published:
Updated:

ವಿಜಯಪುರ: ‘ನಿರಂತರವಾಗಿ ಅಧಿಕಾರದಲ್ಲಿದ್ದೀರಿ. ನಿಮ್ಮ ಕುಟುಂಬದ ರಾಜಕಾರಣಕ್ಕೆ ಅಧಿಕಾರ ಸಿಕ್ಕಿದೆ. ಜಿಲ್ಲೆಗೆ ನಿಮ್ಮ ಕೊಡುಗೆ ಏನು..?’ ಎಂದು ಮುದ್ದೇಬಿಹಾಳದ ಬಿಜೆಪಿ ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ, ಗೃಹ ಸಚಿವ ಎಂ.ಬಿ.ಪಾಟೀಲ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

‘ಆಧುನಿಕ ಭಗೀರಥರೇ ಯಾವ ಕ್ಷೇತ್ರದ ನೀರಾವರಿಗೆ ನೀವು ಕೊಡುಗೆ ನೀಡಿದ್ದೀರಿ. ಐದು ವರ್ಷದ ಅವಧಿಯಲ್ಲಿ ಎಷ್ಟು ಎಕರೆ ಭೂಮಿಗೆ ನೀರು ಹರಿಸಿದ್ದೀರಿ ಎಂದು ಹೇಳಿ. ಅಲ್ಲಿಯೇ ಮಾಧ್ಯಮ ಸಂವಾದ ಏರ್ಪಡಿಸುವೆ. ದಾಖಲೆಗಳೊಂದಿಗೆ ನಿಮ್ಮ ಎಲ್ಲವನ್ನೂ ಬಿಚ್ಚಿಡುವೆ’ ಎಂದು ಶುಕ್ರವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸವಾಲು ಹಾಕಿದರು.

‘ಬಂಗಾರದ ಚಮಚ ಬಾಯಲ್ಲಿ ಇಟ್ಟುಕೊಂಡು ಹುಟ್ಟಿದ ನಿಮಗೆ ರೈತರ ಸಂಕಷ್ಟ ಅರ್ಥವಾಗಿದೆಯಾ ? ಹೈಕಮಾಂಡ್‌ನಲ್ಲಿ ಯಾವ ರೀತಿ ಪ್ರಭಾವಿ ಇದ್ದೀರಿ ಎಂಬುದು ಜಗಜ್ಜಾಹೀರುಗೊಂಡಿದೆ. ಅದರ ಮೂಲಕವೇ ಸಚಿವಗಿರಿ ಪಡೆದಿದ್ದೀರಿ’ ಎಂದು ಲೇವಡಿ ಮಾಡಿದರು.

‘ಮಹಾರಾಷ್ಟ್ರ, ಆಂಧ್ರಪ್ರದೇಶದ ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಡಲು ನಿಮ್ಮ ಅವಧಿಯಲ್ಲಿ ಪ್ಯಾಕೇಜ್‌ ವ್ಯವಸ್ಥೆಯಡಿ ಗ್ಲೋಬಲ್ ಟೆಂಡರ್‌ ಕರೆದಿದ್ದೆ ನಿಮ್ಮ ಸಾಧನೆ. ಇಲ್ಲಿಯವರೆಗೂ ಕಾಲುವೆ ಕಾಮಗಾರಿ ಪೂರ್ಣಗೊಂಡಿಲ್ಲ. ಭೂಸ್ವಾಧೀನ ಪಡಿಸಿಕೊಂಡ ಭೂಮಿಗೆ ಪರಿಹಾರ ಸಿಕ್ಕಿಲ್ಲ. ನೀವೊಬ್ಬ ಟೆಂಡರ್‌ ಎಕ್ಸ್‌ಪರ್ಟ್‌. ಇದಕ್ಕೆ ಟೆಕ್ನಿಕಲ್‌ ಎಕ್ಸ್‌ಪರ್ಟ್‌ ಕಂಪನಿ ರೂಪಿಸಿಕೊಂಡು, ಕೆಲಸ ನಿರ್ವಹಿಸಿದ್ದೇ ನಿಮ್ಮ ಸಾಧನೆ’ ಎಂದು ನಡಹಳ್ಳಿ ಕಟು ಶಬ್ದಗಳಲ್ಲಿ ಹರಿಹಾಯ್ದರು.

‘ಜಿಗಜಿಣಗಿ ನಿವೃತ್ತಿ ಹೊಂದಲಿ ಎಂದು ಹೇಳುತ್ತೀರಿ. ಆದರೆ ಕೆಲ ದಿನಗಳಲ್ಲೇ ನಿಮ್ಮ ಮಗನೇ ಕುಟುಂಬ ರಾಜಕಾರಣದ ಕುಡಿಯಾಗಿ ನಿಮಗೆ ನಿವೃತ್ತಿ ಕೇಳಬಹುದು’ ಎಂಬ ನೆನಪಿರಲಿ ಎಂದು ಹೇಳಿದರು.

ನಕಲಿ ಕುಟುಂಬ:

‘ಭಾರತ್‌ ಮಾತಾಕೀ ಜೈ... ಎನ್ನುವುದು ಬಿಜೆಪಿ ಸಿದ್ಧಾಂತ. ನೆಹರು, ಇಂದಿರಾ, ರಾಜೀವ್‌, ಸೋನಿಯಾ, ರಾಹುಲ್ ಇದೀಗ ಪ್ರಿಯಾಂಕ ಗಾಂಧಿಗೆ ಜೈ ಎನ್ನುವುದು ಕಾಂಗ್ರೆಸ್‌ ಸಿದ್ದಾಂತ. ಕಾಂಗ್ರೆಸ್‌ನ ಈ ಗಾಂಧಿ ಕುಟುಂಬ ನಕಲಿ. ಮೂಲ ಗಾಂಧಿ ಕುಟುಂಬ ಆ ಹೆಸರಿನಿಂದಲೇ ಗುರುತಿಸಿಕೊಳ್ಳದಾಗಿದೆ’ ಎಂದು ನಡಹಳ್ಳಿ ಇದೇ ಸಂದರ್ಭ ವಾಗ್ದಾಳಿ ನಡೆಸಿದರು.

ಇದೀಗ ಅಸ್ತಿತ್ವದಲ್ಲಿರುವ ದೇಶದ್ರೋಹದ ಕಾಯ್ದೆಯನ್ನು ಬದಲಾಯಿಸುವುದಾಗಿ ಹೇಳಿರುವ ಕಾಂಗ್ರೆಸ್‌ ದೇಶದ್ರೋಹಿ ಪಕ್ಷ ಎಂದು ಶಾಸಕರು ಟೀಕಿಸಿದರು.

ವಸೂಲಿ ಎತ್ತು:

‘ವಿಜಯಪುರದಲ್ಲಿ ಜೋಡೆತ್ತಿಲ್ಲ. ಮೂರು ಎತ್ತುಗಳಿವೆ. ಒಂದು ಕಳ್ಳೆತ್ತು. ಇನ್ನೊಂದು ಟಕ್ಕೆತ್ತು. ಮತ್ತೊಂದು ವಸೂಲಿ ಎತ್ತು. ಈ ಮೂರು ಎತ್ತುಗಳು ಯಾವು ಎಂಬುದು ಜಿಲ್ಲೆಯ ಜನರಿಗೆ ಅರಿವಾಗಲಾರಂಭಿಸಿದೆ’ ಎಂದು ನಡಹಳ್ಳಿ ವ್ಯಂಗ್ಯವಾಡಿದರು.

‘ವಸೂಲಿ ಎತ್ತು ತನಗೆ ಸಂಬಂಧವಿಲ್ಲದಿದ್ದರೂ ಇಂದಿಗೂ ಚೆನ್ನಾಗಿ ಮೇಯುತ್ತಿದೆ. ಈ ಎತ್ತಿನ ಮನೆಗೆ ಈಗಲೂ ಗುತ್ತಿಗೆದಾರರು ಹುಡುಕಿಕೊಂಡು ಹೋಗಿ ಪಾಳಿ ಹಚ್ಚಿ ನಿಲ್ಲುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಸಾಕ್ಷಿ ಸಮೇತ ಇದನ್ನು ಬಹಿರಂಗಪಡಿಸುವೆ’ ಎಂದು ನಡಹಳ್ಳಿ ತಿಳಿಸಿದರು.

ಸ್ವಾಮಿ ಕೊಡುಗೆ ಏನು ?

ಮುಖ್ಯಮಂತ್ರಿಯಾದ ಬಳಿಕ ಎಚ್‌.ಡಿ.ಕುಮಾರಸ್ವಾಮಿ ವಿಜಯಪುರ ಜಿಲ್ಲೆಗೆ ಎರಡು ಬಾರಿ ಭೇಟಿ ನೀಡಿದ್ದಾರೆ. ಒಮ್ಮೆ ಸ್ವಪಕ್ಷೀಯ ಶಾಸಕರ ಪುತ್ರಿ ಲಗ್ನಕ್ಕೆ. ಇನ್ನೊಮ್ಮೆ ಅವರೇ ಆಯೋಜಿಸಿದ್ದ ಬಂಜಾರಾ ಸಮಾವೇಶಕ್ಕೆ. ಜನರ ಕಷ್ಟ–ಸುಖ ಆಲಿಸಲು ಇನ್ಯಾವಾಗ ಬಂದಿದ್ದಾರೆ ಎಂದು ಶಾಸಕರು ಪ್ರಶ್ನಿಸಿದರು.

‘ಇಂದಿಗೂ ಮಂಡ್ಯ ಅಭಿವೃದ್ಧಿಗೊಂಡಿಲ್ಲ ಎಂದು ಮುಖ್ಯಮಂತ್ರಿಯೇ ಹೇಳಿದ್ದಾರೆ. ಹಿಂಗಾದರೆ ನಮ್ಮ ವಿಜಯಪುರದ ಕಥೆ ಇನ್ನೇಂಗೆ. ಸರ್ಕಾರದ ಎರಡನೇ ಸ್ಥಾನದಲ್ಲಿ ನೀವಿದ್ದೀರಿ. ಸಿಎಂ ಸ್ವಾಮಿ ಎಷ್ಟು ದುಡ್ಡು ಕೊಟ್ಟಿದ್ದಾರೆ ಎಂಬುದನ್ನು ನೀವೇ ಹೇಳಿ’ ಎಂದು ಗೃಹ ಸಚಿವರನ್ನು ನಡಹಳ್ಳಿ ಪ್ರಶ್ನಿಸಿದರು.

ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ, ಮುಖಂಡರಾದ ಮಲಕೇಂದ್ರಗೌಡ, ಕೃಷ್ಣಾ ಗುನ್ಹಾಳಕರ, ಸತೀಶ ಡೋಬಳೆ, ಪಾಪುಸಿಂಗ್ ರಜಪೂತ, ವಿಜಯ ಜೋಶಿ ಪತ್ರಿಕಾಗೋಷ್ಠಿಯಲ್ಲಿದ್ದರು.

ನಡಹಳ್ಳಿ ಹೇಳಿಕೆ ಹಾಸ್ಯಾಸ್ಪದ: ಸಂಬಣ್ಣಿ

ಪತ್ನಿಗೆ ಟಿಕೆಟ್‌ ಸಿಗದಿದ್ದಕ್ಕೆ ಬಿಜೆಪಿಗೆ ಸೇರ್ಪಡೆಯಾದ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಕುಟುಂಬ ರಾಜಕಾರಣದ ಬಗ್ಗೆ ಹೇಳಿಕೆ ನೀಡಿರುವುದು ಹಾಸ್ಯಾಸ್ಪದ ಎಂದು ಜಿಲ್ಲಾ ಕಾಂಗ್ರೆಸ್ ಸೇವಾದಳದ ಅಧ್ಯಕ್ಷ ಡಾ.ಗಂಗಾಧರ ಸಂಬಣ್ಣಿ ಟೀಕಿಸಿದ್ದಾರೆ.

ನಡಹಳ್ಳಿ ಸವಾಲಿಗೆ ಉತ್ತರಿಸಬೇಕಾದ ಅಗತ್ಯವಿಲ್ಲ. ಅವರ ಮತ ಕ್ಷೇತ್ರದ ರೈತರನ್ನೇ ಕೇಳಿದರೆ ಉತ್ತರ ನೀಡುತ್ತಾರೆ. ಎಂ.ಬಿ.ಪಾಟೀಲ ಸ್ವಯಂಘೋಷಿತ ಹೋರಾಟಗಾರರಲ್ಲ. ಅವರ ನೀರಾವರಿ ಸಾಧನೆ ಮೆಚ್ಚಿ ಬಿಜೆಪಿಯ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅಧ್ಯಕ್ಷತೆಯ ಸಿದ್ಧೇಶ್ವರ ಸಂಸ್ಥೆ ಅಪಾರ ಜನಸ್ತೋಮದ ನಡುವೆ ‘ಆಧುನಿಕ ಭಗೀರಥ’ ಬಿರುದು ಕೊಟ್ಟಿದೆ ಎಂಬುದು ನೆನಪಿರಲಿ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಡಹಳ್ಳಿ ಸೀಝನ್‌ ರಾಜಕಾರಣಿ. ಕಾಲ-ಕಾಲಕ್ಕೆ ಕ್ಷೇತ್ರಗಳನ್ನು, ಪಕ್ಷಗಳನ್ನು ಬದಲಾಯಿಸಿ, ಆಯಾ ಸಂದರ್ಭಕ್ಕೆ ತಕ್ಕಂತೆ ಹೊಗುಳುವುದು, ತೆಗಳುವ ಗಿಮಿಕ್ ಮಾಡುತ್ತಾರೆ ಎಂದು ಸಂಬಣ್ಣಿ ಟೀಕಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !