ಸಿಗದ ಕಾಯಮಾತಿ: ಪೌರಕಾರ್ಮಿಕರ ಅಸಮಾಧಾನ

7
ರಾಜ್ಯ ಪೌರಕಾರ್ಮಿಕ ಮುಖಂಡರ ಸಭೆ

ಸಿಗದ ಕಾಯಮಾತಿ: ಪೌರಕಾರ್ಮಿಕರ ಅಸಮಾಧಾನ

Published:
Updated:
Prajavani

ಬೆಂಗಳೂರು: ಪೌರ ಕಾರ್ಮಿಕರ ಕಾಯಮಾತಿ ಪೂರ್ಣ ಪ್ರಮಾಣದಲ್ಲಿ ಇನ್ನೂ ಆಗದ ಕುರಿತು ನಗರದಲ್ಲಿ ಶುಕ್ರವಾರ ನಡೆದ ರಾಜ್ಯ ಪೌರಕಾರ್ಮಿಕ ಮುಖಂಡರ ಸಭೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಯಿತು. 

‘ಹಿಂದಿನ ಸರ್ಕಾರ ನಮ್ಮನ್ನು (ಪೌರ ಕಾರ್ಮಿಕರನ್ನು) ಕಾಯಂಗೊಳಿಸುವುದಾಗಿ ಭರವಸೆ ನೀಡಿತ್ತು. ಆದರೆ, ಅದು ಕಾರ್ಯಗತ ಆಗಿಲ್ಲ. ಈ ಸಂಬಂಧಿಸಿದ ಆದೇಶ ತಿರುಚಲಾಗಿದೆ. ಅಂಥ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು’ ಎಂದು ಮುಖಂಡರು ಒತ್ತಾಯಿಸಿದರು.  

ವೇತನ, ರಜೆ, ಆರೋಗ್ಯ ಸೌಲಭ್ಯ, ಭತ್ಯೆ, ಸ್ವಚ್ಛತಾ ಸಲಕರಣೆ ಕೊಡುವುದೂ ಸೇರಿದಂತೆ ಹಲವು ಬೇಡಿಕೆಗಳನ್ನು ಶೀಘ್ರ ಈಡೇರಿಸುವಂತೆ ಕಾರ್ಮಿಕರು ಕೋರಿದರು.

‘ಸಂಕಷ್ಟದಲ್ಲಿರುವ ಸಫಾಯಿ ಕಾರ್ಮಿಕರಿಗೆ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ನೀಡಬೇಕು. ವಸತಿ ಯೋಜನೆಯಲ್ಲಿ ಇಲ್ಲಿಯವರೆಗೂ ಮನೆಗಳನ್ನು ನೀಡಿಲ್ಲ. ರಾಜಕೀಯ ನಾಯಕರದ್ದು ಕೇವಲ ಚುನಾವಣಾ ಬೂಟಾಟಿಕೆ ಅಷ್ಟೆ. ಎಷ್ಟೋ ಮಂದಿಯ ನೇರ ನೇಮಕಾತಿ ದಾಖಲೆಗಳು ಕಳೆದುಹೋಗಿವೆ. ಇದರಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಕೈವಾಡವಿದೆ’ ಎಂದು ಸಂಘಟನೆಯ ಅಧ್ಯಕ್ಷ ನಾರಾಯಣ ಟೀಕಿಸಿದರು.

ಹಾವೇರಿಯ ಸುಭಾಷ್, ‘ಗುರುತಿನ ಚೀಟಿ ನೀಡುವಂತೆ ಕೇಳಿದರೆ ಅಧಿಕಾರಿಗಳು ಕಾರ್ಮಿಕರ ಮೇಲೆ ದಬಾಯಿಸುತ್ತಾರೆ. ನೀನು ಪೌರಕಾರ್ಮಿಕ ಎಂಬುದಕ್ಕೆ ಸಾಕ್ಷಿ ಏನು? ಎಂಬುದಾಗಿ ಕೇಳುತ್ತಾರೆ’ ಎಂದು ನೋವು ತೋಡಿಕೊಂಡರು. ಇದಕ್ಕೆ ಕಾರವಾರದ ಕಿರಣ್‌ ದನಿಗೂಡಿಸಿದರು.  

ಚಿತ್ರದುರ್ಗದ ದುರ್ಗೇಶ್, ಧಾರವಾಡದ ವಿಜಯ್ ಮಾತನಾಡಿ, 'ಪೌರಕಾರ್ಮಿಕರಿಗೆ ಆಗುತ್ತಿರುವ ಅನ್ಯಾಯಗಳ ವಿರುದ್ಧ ಹೋರಾಟ ಮಾಡಿದ್ದಕ್ಕೆ ಅಧಿಕಾರಿಗಳು ನನ್ನ ಮೇಲೆ ಪ್ರಕರಣ ದಾಖಲಿಸಿದ್ದಾರೆ.
ನಕಲಿ ಪೌರಕಾರ್ಮಿಕರ ಸಂಖ್ಯೆ ಹೆಚ್ಚಾಗಿದೆ. ಅವರಿಗೆ ಕೂಡಲೇ ಕಡಿವಾಣ ಹಾಕಬೇಕು' ಎಂದು ಒತ್ತಾಯಿಸಿದರು.

ಆಂಜನೇಯ ಭರವಸೆ

‘ಖಾಲಿಯಿರುವ 10 ಸಾವಿರ ಪೌರ ಕಾರ್ಮಿಕರ ಹುದ್ದೆಗಳನ್ನು ಭರ್ತಿ ಮಾಡುವಂತೆ ಮತ್ತು ಕಾಯಮಾತಿ ಬಗ್ಗೆ ಸಿದ್ದರಾಮಯ್ಯ ಅವರು ಹೊರಡಿಸಿದ ಆದೇಶವನ್ನೇ ಯಥಾವತ್ತಾಗಿ ಜಾರಿಗೆ ತರುವಂತೆ ಸಮ್ಮಿಶ್ರ ಸರ್ಕಾರಕ್ಕೆ ಮನವಿ ಮಾಡುತ್ತೇನೆ. ಕಾರ್ಮಿಕರ ಸಭೆಯೊಂದನ್ನು ಕರೆಯಲು ಸೂಚಿಸುತ್ತೇನೆ’ ಎಂದು ಕಾಂಗ್ರೆಸ್‌ ಮುಖಂಡ ಎಚ್‌.ಆಂಜನೇಯ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !