ಮಹಿಳೆಯರು ಹೆಚ್ಚಿರುವಲ್ಲಿ ‘ಸಖಿ’ ಮತಗಟ್ಟೆ

ಭಾನುವಾರ, ಏಪ್ರಿಲ್ 21, 2019
32 °C

ಮಹಿಳೆಯರು ಹೆಚ್ಚಿರುವಲ್ಲಿ ‘ಸಖಿ’ ಮತಗಟ್ಟೆ

Published:
Updated:
Prajavani

ಬೆಂಗಳೂರು: ಮತದಾನ ಜಾಗೃತಿಗಾಗಿ ಕಬ್ಬನ್‌ ಉದ್ಯಾನದಲ್ಲಿ ನಿರ್ಮಿಸಿರುವ ‘ಸಖಿ ಮಾದರಿ ಮತಗಟ್ಟೆ’ಯನ್ನು ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾರಿ ಎನ್‌. ಮಂಜುನಾಥ್‌ ಪ್ರಸಾದ್‌ ಅವರು ಮಂಗಳವಾರ ಉದ್ಘಾಟಿಸಿದರು.

ಮತದಾನದ ಪ್ರಕ್ರಿಯೆಯನ್ನು ತಿಳಿಯುವ ಜತೆಗೆ ಅಣುಕು ಮತದಾನ ಮಾಡುವ ವ್ಯವಸ್ಥೆಯೂ ಇಲ್ಲಿದೆ. ಈ ಮತಗಟ್ಟೆ ಬುಧವಾರ ಸಂಜೆಯವೆಗೂ ತೆರೆದಿರಲಿದೆ. 

ಈ ಮತಗಟ್ಟೆಯಲ್ಲಿನ ಎಲ್ಲ ಅಧಿಕಾರಿಗಳು ಮಹಿಳೆಯರೇ ಇರುವುದು ವಿಶೇಷ. ಮಹಿಳಾ ಮತದಾರರು ಹೆಚ್ಚಿರುವ ಪ್ರದೇಶಗಳಲ್ಲಿ ಈ ಬಾರಿ 250 ಮತಗಟ್ಟೆಗಳನ್ನು ‘ಸಖಿ ಮತಗಟ್ಟೆ’ಯಾಗಿ ರೂಪಿಸಲಾಗುತ್ತಿದೆ. 

ಇಲ್ಲಿ ಮತದಾರರ ಗುರುತಿನ ಚೀಟಿಯ ಕ್ರಮಸಂಖ್ಯೆ, ಹೆಸರು, ಭಾವಚಿತ್ರ, ವಿಳಾಸವನ್ನು ಪರಿಶೀಲಿಸುವ, ಎಡಗೈನ ತೋರು ಬೆರಳಿಗೆ ಶಾಹಿ ಹಚ್ಚುವ ಮತ್ತು ಮತದಾನದ ಇವಿಎಂ ಮತ್ತು ವಿವಿಪ್ಯಾಡ್‌ಗಳನ್ನು ನಿರ್ವಹಿಸುವ ಮತಗಟ್ಟೆಯ ಅಧಿಕಾರಿಗಳೆಲ್ಲ ಮಹಿಳೆಯರೇ ಆಗಿರುತ್ತಾರೆ.

‘ಮಹಿಳೆಯರಲ್ಲಿ ಆತ್ಮವಿಶ್ವಾಸ ತುಂಬಿ ಅವರು ಮತದಾನದೆಡೆಗೆ ಆಕರ್ಷಿಸಲು, ತುಂಬಾ ಉತ್ಸಾಹದಿಂದ ಮತದಾನದಲ್ಲಿ ಪಾಲ್ಗೊಳ್ಳುವಂತೆ ಮಾಡಲು ಸಖಿ ಮತಗಟ್ಟೆಗಳನ್ನು ರೂಪಿಸಲಾಗುತ್ತಿದೆ’ ಎಂದು ಮಂಜುನಾಥ್‌ ಪ್ರಸಾದ್‌ ಹೇಳಿದರು.

ನಟಿ ಪಾವನಾ, ‘ಮಹಿಳೆಯರು ಚುನಾವಣಾ ಪ್ರಕ್ರಿಯೆಯಲ್ಲಿ ಸಂತಸದಿಂದ ಪಾಲ್ಗೊಳ್ಳಲು, ಹೆಚ್ಚಿನ ಸಂಖ್ಯೆಯಲ್ಲಿ ಮತದಾನವಾಗಲು ‘ಸಖಿ’ ಮತಗಟ್ಟೆಗಳು ನೆರವಾಗಲಿವೆ. ಎಲ್ಲ ಮಹಿಳೆಯರು ಮನೆಯ ಇತರ ಸದಸ್ಯರ ನಿರ್ದೇಶನದಂತೆ ಮತಹಾಕದೆ, ಸ್ವತಂತ್ರ ಆಲೋಚನೆಯಿಂದ ಮತ ಚಲಾಯಿಸಬೇಕು’ ಎಂದರು.

*

ಅಂಕಿ–ಅಂಶ

10 – ನಗರದ ಪ್ರತಿ ವಿಧಾನಸಭಾದಲ್ಲಿನ ಸರಾಸರಿ ‘ಸಖಿ’ ಮತಗಟ್ಟೆಗಳು

250 – ಬೆಂಗಳೂರಿನ ಮೂರು ಲೋಕಸಭಾ ಕ್ಷೇತ್ರದಲ್ಲಿನ ‘ಸಖಿ’ ಮತಗಟ್ಟೆಗಳು

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !