ರುಚಿ ಹೆಚ್ಚಿಸುವ ‘ಸಂಭ್ರಮ ವೆಜ್’

7

ರುಚಿ ಹೆಚ್ಚಿಸುವ ‘ಸಂಭ್ರಮ ವೆಜ್’

Published:
Updated:
Deccan Herald

ಮಂಗಳೂರು ಕಡೆಗೆ ಸಂಭ್ರಮದಿಂದ ಪ್ರವಾಸಕ್ಕೆ ಹೊರಟವರಿಗೆ ಪ್ರಾರಂಭದಲ್ಲಿಯೇ ಸಂಭ್ರಮ ದುಪ್ಪಟ್ಟು ಮಾಡುವ ಸ್ಥಳ, ನೆಲಮಂಗಲ ಸಮೀಪದ ಕುಣಿಗಲ್ ರಸ್ತೆಯಲ್ಲಿರುವ ‘ಸಂಭ್ರಮ ವೆಜ್ ರೆಸ್ಟೊರೆಂಟ್’.

ತಟ್ಟೆ ಇಡ್ಲಿ, ಉದ್ದಿನ ವಡೆ, ಮಸಾಲೆ ದೋಸೆ, ಟೊಮೆಟೊ ಆಮ್ಲೆಟ್, ರಾಗಿ ದೋಸೆ, ವಾಂಗಿ ಬಾತ್ ಇಲ್ಲಿನ ವಿಶೇಷ. ತಟ್ಟೆ ಇಡ್ಲಿಯನ್ನು ಸಾಂಬಾರ್ ಮತ್ತು ಎರಡು ತರಹದ ಚಟ್ನಿಯೊಂದಿಗೆ ಬಾಯಿಗೆ ಇಡುತ್ತಿದ್ದಂತೆ ಕರಗುತ್ತದೆ. ಬಂಗಾರ ವರ್ಣದ ಉದ್ದಿನ ವಡೆ ಮೇಲ್ಭಾಗ ಗರಿಗರಿಯಾಗಿ ಒಳಭಾಗ ಮೃದುವಾಗಿ ಇಡ್ಲಿಗೆ ಒಳ್ಳೆಯ ಜೊತೆಯಾಗಿ ಹೊಟ್ಟೆ ಸೇರುತ್ತದೆ.

ಮಸಾಲೆ ದೋಸೆಯನ್ನು ಆಲೂಗಡ್ಡೆ ಪಲ್ಯದೊಂದಿಗೆ ಸವಿದಾಗ ತುಪ್ಪದ ಘಮ ಬಾಯಿ ತುಂಬ ಆವರಿಸುತ್ತದೆ. ತುಪ್ಪದಲ್ಲಿ ಕರಿದ ಗೋಡಂಬಿ ಮತ್ತು ಅನಾನಸ್ ಕೇಸರಿಬಾತ್ ನಾಲಿಗೆ ರುಚಿ ಹೆಚ್ಚಿಸುತ್ತವೆ. ಇಲ್ಲಿನ ಪೂರಿ ವಿಶೇಷವಾದದ್ದು. ಬತುರಾ ಗಾತ್ರದಲ್ಲಿರುತ್ತವೆ. ಮೃದುವಾಗಿರುವ ಈ ಪೂರಿಯನ್ನು ತರಕಾರಿ ಸಾಗು ಜೊತೆ ತಿನ್ನುತ್ತಿದ್ದರೆ, ಹದವಾಗಿ ಬೆರೆಸಿದ್ದ ತೆಂಗಿನಕಾಯಿ ಮತ್ತು ಹಸಿಮೆಣಸಿನ ಮಸಾಲೆ ಬಾಯಿಯ ರುಚಿ ಹೆಚ್ಚಿಸದೇ ಬಿಡದು.

‘ಸಂಭ್ರಮ’ದಲ್ಲಿ ದೊರೆಯುವ ಮತ್ತೊಂದು ವಿಶೇಷ ತಿಂಡಿ ಎಂದರೆ ಟೊಮೆಟೊ ಆಮ್ಲೆಟ್. ಹುಳಿ ಮತ್ತು ಖಾರ ಮಿಶ್ರಿತ ಆಮ್ಲೆಟ್, ನಾಲಿಗೆಯಲ್ಲಿ ಲಾಲಾರಸ ಚಿಮ್ಮುವಂತೆ ಮಾಡುತ್ತದೆ. ಇವುಗಳೊಂದಿಗೆ ರುಚಿಕರವಾದ ಚಿತ್ರಾನ್ನವೂ ಇಲ್ಲಿ ದೊರೆಯುತ್ತದೆ.

ವಾಂಗಿಬಾತ್‌ನ ಬದನೆಕಾಯಿ ಸ್ವಾದಿಷ್ಟವಾಗಿರುತ್ತದೆ. ಮೆಂತ್ಯ ಬಾತ್‍ಗೆ ಮಿಶ್ರಣ ಮಾಡಿದ್ದ ಚಕ್ಕೆ ಲವಂಗ ಜೀರ್ಣ ಕ್ರಿಯೆಗೆ ಸಹಕರಿಸುತ್ತದೆ. ಪುದೀನ 0ಬಾತ್‍ ಹೊಟ್ಟೆಯನ್ನು ತಂಪಾಗಿಸುತ್ತದೆ. ಏಲಕ್ಕಿ, ಶುಂಠಿ ಬೆರೆಸಿದ ಟೀ ಇಲ್ಲಿನ ಮತ್ತೊಂದು ವಿಶೇಷ. ಇದು ‘ಹೈದರಾಬಾದಿ ದಮ್ ಟೀ’ಯನ್ನು ನೆನಪಿಸುತ್ತದೆ.

ಈ ಹೋಟೆಲ್‌ ಮಾಲೀಕ ಲೋಕೇಶ್‌ (ಅಶೋಕ್‌) ದೊಡ್ಡಬಳ್ಳಾಪುರದವರು. ಅವರಿಗೆ ಈ ಕ್ಷೇತ್ರದಲ್ಲಿ 12 ವರ್ಷಗಳ ಅನುಭವವಿದೆ.

‘ನಾವು ಯಾವುದೇ ಅಡುಗೆಗೆ ಕೃತಕ ಬಣ್ಣಗಳನ್ನು ಬಳಸುವುದಿಲ್ಲ. ಮಾರ್ಚ್‍ನಿಂದ ಜೂನ್ ಅವಧಿಯಲ್ಲಿ ‘ಮಾವಿನಕಾಯಿ ಚಿತ್ರಾನ್ನ’ ಮಾಡುತ್ತೇವೆ. ವಾರಾಂತ್ಯದಲ್ಲಿ ಮಧ್ಯಾಹ್ನ ಊಟಕ್ಕೆ ‘ಬದನೆಕಾಯಿ ಎಣ್ಣೆಗಾಯಿ, ಮಜ್ಜಿಗೆ ಹುಳಿ’ ಕೊಡುತ್ತೇವೆ. ಬೆಳಿಗ್ಗೆಯಿಂದ ಮಧ್ಯಾಹ್ನ 12ರ ವರೆಗೆ ತಿಂಡಿ, 12 ರಿಂದ ಊಟ, ಸಂಜೆ 4ಕ್ಕೆ ಸೌತ್ ಇಂಡಿಯನ್ ಊಟೋಪಹಾರ ಮುಗಿದರೂ ರಾತ್ರಿ 10 ರವರೆಗೆ ನಾರ್ತ್ ಇಂಡಿಯನ್ ಖಾದ್ಯಗಳು ದೊರೆಯುತ್ತವೆ’ ಎಂದು ಹೇಳುತ್ತಾರೆ ಲೋಕೇಶ್‌.

‘ದಿನಾಲೂ ಮಧ್ಯಾಹ್ನ ಸೊಪ್ಪಿನ ಬಸ್ಸಾರು, ಮಸೊಪ್ಪು, ತರಕಾರಿ ಸೊಪ್ಪು, ಮೊಳಕೆ ಕಾಳು, ತರಕಾರಿ ಹೀಗೆ ವಿವಿಧ ಬಗೆಯ ಸಾಂಬಾರುಗಳನ್ನು ಮಾಡುತ್ತೇವೆ. ಸಂಜೆ ಆಲೂ ಬೋಂಡ, ಕ್ಯಾಪ್ಸಿಕಂ ಬಜ್ಜಿ, ಪಕೋಡ ಮತ್ತು ಸೊಪ್ಪು ತರಕಾರಿ ಮಿಶ್ರಿತ ಮಸಾಲೆ ತಟ್ಟೆ ಇಡ್ಲಿ ಇಲ್ಲಿನ ವಿಶೇಷ. ‘ಆನಿಯನ್ ಚಿಲ್ಲಿ ಫ್ರೈಡ್ ರೈಸ್’, ಸಂಭ್ರಮ ಸ್ಪೆಷಲ್ ರೈಸ್ ಬಿರಿಯಾನಿ ಮತ್ತು ಪಲಾವ್‍ನ ಮಿಶ್ರಿತ ರುಚಿ ನೀಡುತ್ತವೆ. ಉಳಿದಂತೆ ಮಶ್ರೂಮ್, ಬೇಬಿಕಾರ್ನ್ ಪೆಪ್ಪರ್ ಡ್ರೈ, ಪನ್ನೀರ್ ಚಿಲ್ಲಿಯನ್ನು ಜನರು ಹೆಚ್ಚು ಇಷ್ಟಪಡುತ್ತಾರೆ’ ಎನ್ನುತ್ತಾರೆ ಅವರು.

‘ವಾರಾಂತ್ಯದಲ್ಲಿ ಸ್ನೇಹಿತರೊಟ್ಟಿಗೆ ಬೆಳಗಿನ ಜಾವ ಜಾಗಿಂಗ್ ಮುಗಿಸಿಕೊಂಡು ಉತ್ತಮ ಹೋಟೆಲ್‍ಗಳನ್ನು ಹುಡುಕಿ ತಿಂಡಿ ತಿನ್ನುವುದು ಹವ್ಯಾಸ. ಸಂಭ್ರಮ ಹೊಟೆಲ್‍ಗೆ ಬರಲು ಶುರು ಮಾಡಿದಾಗಿನಿಂದ ಬೇರೆ ಹೋಟೆಲ್‌ ಹುಡುಕುವುದನ್ನು ಬಿಟ್ಟಿದ್ದೇವೆ. ಇಲ್ಲಿನ ಉತ್ತಮ ಪರಿಸರ, ಸ್ವಚ್ಛತೆ, ಹೆಂಚು ಹಾಸಿನ ಕೆಳಗೆ ತೆರೆದ ಜಾಗದಲ್ಲಿ ಬೀಸುವ ತಂಗಾಳಿ ನೈಸರ್ಗಿಕ ಹವಾ ನಿಯಂತ್ರಿತ ಪ್ರದೇಶದಲ್ಲಿ ತಿಂಡಿ ಸವಿಯುತ್ತಿದ್ದರೆ ಮಜವೇ ಬೇರೆ’ ಎಂದು ಖಾಸಗಿ ಕಂಪನಿ ಉದ್ಯೋಗಿ ದಾಸನಪುರದ ಡಿ.ವಿ.ಗುರುದತ್ ಹೇಳುತ್ತಾರೆ.

ವಿಳಾಸ:

ಹೋಟೆಲ್: ಸಂಭ್ರಮ ವೆಜ್ ರೆಸ್ಟೊರೆಂಟ್

ವಿಶೇಷ: ಟೊಮೆಟೊ ಆಮ್ಲೆಟ್‌, ಪನೀರ್‌ ಚಿಲ್ಲಿ, ಶುಂಠಿ ಏಲಕ್ಕಿ ಚಹಾ

ದರ: ಸ್ಪೆಷಲ್‌ ‌ಪ್ರೈಡ್‌ ರೈಸ್‌ ₹100

ಸ್ಥಳ: ಮರುಳಸಿದ್ದಯ್ಯನಪಾಳ್ಯ, (ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಎದುರು), ಮಹದೇವಪುರ ಅಂಚೆ, ನೆಲಮಂಗಲ, ಕುಣಿಗಲ್ ರಸ್ತೆ

ಸಂಪರ್ಕಕ್ಕೆ: 9741359515

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !