ಮಂಗಳವಾರ, ಮಾರ್ಚ್ 2, 2021
31 °C
ಮಾನ ಮನಸ್ಕ ದಲಿತ–ಪ್ರಗತಿಪರ ಸಂಘಟನೆಳು ಭಾಗಿ

ತೇಲ್ತುಂಬ್ಡೆ ಬಂಧನ ಖಂಡಿಸಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಸುಪ್ರೀಂಕೋರ್ಟ್‌ ನಿರ್ದೇಶನವನ್ನು ಪಾಲಿಸದೇ ದಲಿತ ಚಿಂತಕ ಆನಂದ್‌ ತೇಲ್ತುಂಬ್ಡೆ ಅವರನ್ನು ಬಂಧಿಸಿದ್ದ ಪುಣೆ ಪೊಲೀಸರ ಕ್ರಮವನ್ನು ಖಂಡಿಸಿ ಸಮಾನ ಮನಸ್ಕ ದಲಿತ–ಪ್ರಗತಿಪರ ಸಂಘಟನೆಗಳ ಸದಸ್ಯರು ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.

ಪುರಭವನ ಎದುರು ಸೇರಿದ್ದ ಪ್ರತಿಭಟನಾಕಾರರು, ‘ತೇಲ್ತುಂಬ್ಡೆ ಅವರ ವಿರುದ್ಧ ದಾಖಲಿಸಿರುವ ಸುಳ್ಳು ಮೊಕದ್ದಮೆಯನ್ನು ಕೂಡಲೇ ಹಿಂಪಡೆಯಬೇಕು’ ಎಂದು ಒತ್ತಾಯಿಸಿದರು.

‘ಭೀಮಾಕೋರೆಗಾಂವ್ ಗ್ರಾಮದಲ್ಲಿ 200 ವರ್ಷಗಳ ಹಿಂದೆ ನಡೆದಿದ್ದ ಚಾರಿತ್ರಿಕ ಘಟನೆಯನ್ನು ಸ್ಮರಿಸುವುದಕ್ಕಾಗಿ ದಲಿತ ಸಂಘಟನೆಗಳು  2018ರ ಜ.1ರಂದು ಕಾರ್ಯಕ್ರಮ ಸಂಘಟಿಸಿದ್ದವು. ಕಾರ್ಯಕ್ರಮಕ್ಕೆ ಆಹ್ವಾನವಿದ್ದರೂ ತೇಲ್ತುಂಬ್ಡೆ ಅವರು ಭಾಗವಹಿಸಿರಲಿಲ್ಲ. ಅಷ್ಟಾದರೂ ಅವರ ವಿರುದ್ಧ ಸ್ಥಳೀಯ ಪೊಲೀಸರು, ’ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ)’ ಅಡಿ ಪ್ರಕರಣ ದಾಖಲಿಸಿಕೊಂಡಿದ್ದು ಖಂಡನೀಯ’ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಕೆ.ಮರುಳಸಿದ್ದಪ್ಪ, ‘ದಲಿತರು ಹಾಗೂ ಶೋಷಿತರ ಧ್ವನಿಯಾಗಿರುವ ತೇಲ್ತುಂಬ್ಡೆ ಅವರ ಮೇಲಿನ ಆರೋಪ ಸುಳ್ಳು. ಬಂಧನದ ಸಾಧ್ಯತೆ ಅರಿತಿದ್ದ ಅವರು ಈ ಹಿಂದೆಯೇ ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದರು.  ಕೆಳಹಂತದ ನ್ಯಾಯಾಲಯದಲ್ಲಿ ಜಾಮೀನು ಪಡೆಯಲು ಅವಕಾಶ ನೀಡಿದ್ದ ಕೋರ್ಟ್‌, ಫೆ. 11ರವರೆಗೂ ಅವರನ್ನು ಬಂಧಿಸದಂತೆ ಪೊಲೀಸರಿಗೆ ನಿರ್ದೇಶನ ನೀಡಿತ್ತು’ ಎಂದು ಹೇಳಿದರು.

‘ಜನಸಾಮಾನ್ಯರು ನ್ಯಾಯಾಂಗ ನಿಂದನೆ ಮಾಡಿದರೆ ಶಿಕ್ಷಾರ್ಹವಾಗುತ್ತದೆ. ಇಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಪುಣೆ ಪೊಲೀಸರು ನ್ಯಾಯಾಂಗ ನಿಂದನೆ ಮಾಡಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

‘ತೇಲ್ತುಂಬ್ಡೆ ಅವರದ್ದು ಅಕ್ರಮ ಬಂಧನವೆಂದು ಪುಣೆ ನ್ಯಾಯಾಲಯವೇ ಅಭಿಪ್ರಾಯಪಟ್ಟು, ಅವರನ್ನು ಬಿಡುಗಡೆ ಮಾಡಿದೆ. ನ್ಯಾಯಾಲಯದ ಆದೇಶವನ್ನು ನಾವು ಸ್ವಾಗತಿಸುತ್ತೇವೆ’ ಎಂದರು.

ಬಹುಭಾಷಾ ನಟ ಪ್ರಕಾಶ್ ರಾಜ್ (ರೈ), ವಿನಯ್ ಶ್ರೀನಿವಾಸನ್, ಟಿ.ಸುರೇಂದ್ರರಾವ್, ಗೋಪಾಲಕೃಷ್ಣ ಹಾರನಹಳ್ಳಿ,  ಮಾವಳ್ಳಿ ಶಂಕರ್, ಡಾ. ಕೆ.ಷರೀಫ್, ಕೆ.ನೀಲಾ  ಪ್ರತಿಭಟನೆಯಲ್ಲಿದ್ದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು