ಸಂಡಾಸ್ ಬಂದ್ರೇ ಭಯ ಆಗ್ತದ್ರಿ..! ತಪ್ಪದ ಸ್ಥಳೀಯರ ಗೋಳಾಟ

7
ವರ್ಷವಾದರೂ ಶೌಚಾಲಯಗಳಿಗಿಲ್ಲ ಒಳಚರಂಡಿ ಸಂಪರ್ಕ

ಸಂಡಾಸ್ ಬಂದ್ರೇ ಭಯ ಆಗ್ತದ್ರಿ..! ತಪ್ಪದ ಸ್ಥಳೀಯರ ಗೋಳಾಟ

Published:
Updated:
Deccan Herald

ವಿಜಯಪುರ: ‘ಗಂಡನಿಗೆ ವಯಸಾಗಿದ್ರೀ. ಎದ್ರೆ ಕುಂದ್ರಾಕ ಬರಲ್ಲ. ಕುಂತ್ರ ಏಳಾಕ್‌ ಆಗಲ್ಲ. ಸಂಡಾಸ್‌ಗ ಎತ್ಕೊಂಡೇ ಹೋಗ್ಬೇಕು. ಮನ್ಯಾಗ ಪಾಯಖಾನಿ ಇದ್ರ ತ್ರಾಸ್‌ ತಪ್ತಿತ್ರಿ. ಗಂಡ್ಸುರು, ಹೆಂಗ್ಸುರೂ ಒಂದೇ ಜಾಗದಲ್ಲಿ ಸಂಡಾಸ್‌ಗ ಕುಂದ್ರೋ ದುಃಸ್ಥಿತಿ ಬಂದೈತ್ರಿ. ಅಂಗವಿಕಲರ ಸ್ಥಿತಿಯೂ ಬಾಳ ತ್ರಾಸ್‌ ಐತಿ ನೋಡ್ರಿ..!’

ಇಲ್ಲಿನ ರೈಲ್ವೆ ನಿಲ್ದಾಣದ ಬಳಿಯ ವಾರ್ಡ್‌ ನಂಬರ್‌ 15ರ ವ್ಯಾಪ್ತಿಯ ಭಾರತ ನಗರದಲ್ಲಿ ಐತಿಹಾಸಿಕ ಗೋಳಗುಮ್ಮಟ ಆವರಣಕ್ಕೆ ಹೊಂದಿಕೊಂಡಿರುವ, ಕೋಟೆ ಬದಿಯಲ್ಲಿ ವಾಸಿಸುವ ಕುಟುಂಬಗಳಿಗೆ ವರ್ಷದ ಹಿಂದೆ ಮಹಾನಗರ ಪಾಲಿಕೆ ನೀಡಿರುವ ಶೌಚಾಲಯಗಳಿಗೆ ಇಂದಿಗೂ ಒಳಚರಂಡಿ ಸಂಪರ್ಕ ಇಲ್ಲದಿರುವುದರಿಂದ ನಿತ್ಯ ಶೌಚಕ್ಕಾಗಿ ತ್ರಾಸ್‌ ಎದುರಿಸುತ್ತಿರುವ ಜನರ ನೋವಿನ ಮಾತುಗಳಿವು.

‘ಎಲ್ರೂ ಮನೆ ಹಿಂಬದಿಯ ಕೋಟೆ ಗೋಡೆಯ ಪಕ್ಕದಲ್ಲಿ ಸಂಡಾಸ್‌ಗೆ ಹೋಗ್ತಾರ. ಆದ್ರ ನಾನು ಅಂಗವಿಕಲ ಅದೀನ್ರಿ. ಅಲ್ಲಿ ಹೋಗಾಕ ಆಗೋದಿಲ್ಲ. ಅನಿವಾರ್ಯವಾಗಿ ದಿನಾಲೂ ಸೈಕಲ್‌ ಮೋಟರ ತಗೊಂಡು ದೂರದ ಪ್ರದೇಶಕ್ಕೆ ಹೋಗಿ ಶೌಚ ಮುಗ್ಸಕೊಂಡು ಬರ್ತೀನಿ. ಈ ತ್ರಾಸ್‌ದಿಂದ ಒಮ್ಮೊಮ್ಮೆ ಸಂಡಾಸಾದ್ರೂ ಯಾಕ್ ಬರ್ತಾತ ಅನ್ಸುತೈತಿ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಎಲ್ಲರ ಮನೆಗೂ ಶೌಚಾಲಯ ಕೊಟ್ಟಾರ, ಒಳ ಚರಂಡಿ ಸಂಪರ್ಕ ಕಲ್ಪಿಸದ್ದಕ್ಕೆ ನಮ್ಮ ಗೋಳಾಟ ಮುಂದುವರೆದಿದೆ’ ಎಂದು ಪಾಪಾಮೀಯಾ ಗಂಗನಳ್ಳಿ ತಮ್ಮ ಅಳಲು ತೋಡಿಕೊಂಡರು.

‘ಬ್ಯಾರೆ ಕಡೆ ಜಾಗ ಇಲ್ಲದಕ್ಕೆ ಬಾಳ ವರ್ಷಗಳಿಂದ ಗಂಡ್ಸುರು, ಹೆಂಗ್ಸರೂ ದಿನಾ ಕೋಟೆ ಗೋಡೆ ಹಿಂದ ಸಂಡಾಸ್‌ಗ ಹೋಗ್ತಿದ್ದ ಗೋಳಾಟ ನೋಡಿ, ಪಾಲಿಕೆಯವರು ವರ್ಷದ ಹಿಂದೆ ಎಲ್ಲರ ಮನೆಗೂ ಶೌಚಾಲಯ ಕೊಟ್ರು ಅನ್ಕೊಂಡಿದ್ವಿ. ಆದ್ರಾ ಇವತ್ತಿಗೂ ಒಳಚರಂಡಿ ಸಂಪರ್ಕ ಕಲ್ಪಿಸದೆ ಇರೋದನ್ನು ನೋಡಿದ್ರೇ, ಸರ್ಕಾರದ ಬಿಲ್‌ ಎತ್ತಾಕ ಮಾಡ್ಯಾರ್‌ ಅನ್ಸಾಕತೈತಿ. ಅದು ಅಲ್ಲದೆ ಶೌಚಾಲಯ ಕೊಡಾಗ ಪ್ರತಿ ಮನೆಯವರಿಂದ ₹ 1500 ಇಸ್ಕೊಂಡಾರ. ನಮ್ಮ ಗೋಳಾಟ ಕುರಿತು ಅಧಿಕಾರಿಗಳಿಗೆ, ವಾರ್ಡ್ ಸದಸ್ಯರಿಗೆ ಹಲವು ಬಾರಿ ತಿಳಿಸಿದರೂ ಪ್ರಯೋಜನವಾಗಿಲ್ಲ’ ಎನ್ನುತ್ತಾರೆ ಸುರುಬಾಯಿ ಕಲಾಲ್‌.

‘ಭಾರತ ನಗರದ ಜನರ ಸಮಸ್ಯೆ ಅರಿತು ವರ್ಷದ ಹಿಂದೆ 55 ಕುಂಟುಂಬಗಳಿಗೆ ಶೌಚಾಲಯ ನೀಡಲಾಗಿದೆ. ಪಾಲಿಕೆಗೆ ₹ 1000 ತುಂಬಿದರೆ ಒಳಚರಂಡಿ ಸಂಪರ್ಕ ಕಲ್ಪಿಸಲಾಗುವುದು ಎಂದು ತಿಳಿಸಲಾಗಿತ್ತು. ಕೆಲ ದಿನಗಳಾದರೂ ಸಂಪರ್ಕ ಮಾಡಿಕೊಳ್ಳಲಿಲ್ಲ. ಕಡೆಗೆ ಪಾಲಿಕೆಗೆ ತುಂಬುವ ಬದಲಾಗಿ ನೀವಾಗಿಯೇ ಸಂಪರ್ಕ ಮಾಡಿಕೊಳ್ಳಿ ಎಂದು ಹೇಳಿದರೂ ಯಾರು ಒಪ್ಪುತ್ತಿಲ್ಲ. ಹೀಗಾಗಿ ಪಾಲಿಕೆಯಿಂದ ಮಾಡಿಸಿಕೊಡಲು ನಿರ್ಧರಿಸಿದ್ದೇನೆ.

ಆದರೆ, ಸಾಕಷ್ಟು ಬಿಲ್‌ ಬಾಕಿ ಇರುವುದರಿಂದ ಯಾವೊಬ್ಬ ಗುತ್ತಿಗೆದಾರನು ಕೆಲಸ ಮಾಡಲು ಮುಂದೆ ಬರುತ್ತಿಲ್ಲ. ಈ ಎಲ್ಲಾ ಕಾರಣದಿಂದ ಸಮಸ್ಯೆ ಉಳಿದುಕೊಂಡಿದೆ. ಶೌಚಾಲಯದ ಕೆಳ ಭಾಗದಲ್ಲಿ ಕಟ್ಟಿ ನಿರ್ಮಿಸಲು ಗುತ್ತಿಗೆದಾರರು ಒಂದೊಂದು ಕುಟುಂಬದಿಂದ ₹ 1000, ₹ 1500 ತಗೊಂಡಿರಬಹುದು’ ಎಂದು ವಾರ್ಡ್‌ನ ಸದಸ್ಯ ವಿಜಯಕುಮಾರ ಮಂಗಳವೇಡೆ ‘ಪ್ರಜಾವಾಣಿ‘ಗೆ ತಿಳಿಸಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !