ಶುಕ್ರವಾರ, ಏಪ್ರಿಲ್ 10, 2020
19 °C
ಸ್ಪರ್ಧೆ ಕುರಿತು ತೀರ್ಪುಗಾರರ ಮಾತು

‘ಭೂಮಿಕಾ ಲಲಿತಾ ಪ್ರಬಂಧ ಸ್ವರ್ಧೆ 2019‘ರ ಫಲಿತಾಂಶ

ಎಂ.ಎಸ್. ಶ್ರೀರಾಮ್, ವೈದೇಹಿ Updated:

ಅಕ್ಷರ ಗಾತ್ರ : | |

ಪ್ರಜಾವಾಣಿ ಭೂಮಿಕಾ ಪುರವಣಿಯ ಸಂಕ್ರಾಂತಿ ಲಲಿತ ಪ್ರಬಂಧ ಸ್ಪರ್ಧೆಗೆ ನಾಡಿನ ಎಲ್ಲ ಭಾಗಗಳಿಂದಲೂ ಪ್ರಬಂಧಗಳು ಬಂದಿದ್ದವು. ಬಂದಿದ್ದ ಒಟ್ಟು ಪ್ರಬಂಧಗಳ ಸಂಖ್ಯೆ ಮುನ್ನೂರಕ್ಕಿಂತಲೂ ಹೆಚ್ಚು. ನಾಡಿನ ಖ್ಯಾತ ಕಥೆಗಾರರಾದ ವೈದೇಹಿ ಮತ್ತು ಎಂ. ಎಸ್‌. ಶ್ರೀರಾಮ್‌ ಅವರು ತೀರ್ಪುಗಾರರಾಗಿ ಸ್ಪರ್ಧೆಯ ವಿಜೇತರನ್ನು ಆಯ್ಕೆ ಮಾಡಿಕೊಟ್ಟಿದ್ದಾರೆ. ಪ್ರಬಂಧಕಾರರಿಗೆ ಕಿವಿಮಾತನ್ನೂ ಹೇಳಿದ್ದಾರೆ. ಈ ಇಬ್ಬರಿಗೂ ಕೃತಜ್ಞತೆಗಳು.

ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಧನ್ಯವಾದಗಳು. ವಿಜೇತರಿಗೆ ಅಭಿನಂದನೆಗಳು. ನಿಮ್ಮ ಸಾಹಿತ್ಯಪ್ರೇಮ ಹೀಗೆಯೇ ಮುಂದುವರೆಯುತ್ತದೆ ಎಂಬ ಆಶಯ ನಮ್ಮದು.

ಸಂಪಾದಕ

 –––––

ಫಲಿತಾಂಶದ ವಿವರ

l ಮೊದಲನೆಯ ಬಹುಮಾನ: ₹7,500
ಸೀರೆಯಲ್ಲಡಗಿದ ಅಂತರಂಗಗಳು / ಜಯಶ್ರೀ ಹೆಗಡೆ
l ಎರಡನೆಯ ಬಹುಮಾನ: ₹ 5,000
ಒಂದು ಕಪ್‌ ಚಹಾ ಸಿಗಬಹುದೇ? / ಆರತಿ ಪಟ್ರಮೆ
l ಮೂರನೆಯ ಬಹುಮಾನ: ₹ 2,500
ಅಜ್ಜನ ಮನೆಯ ಕರಿಕೋಣವೂ ನಾನೂ 
| ಗಾಯಿತ್ರಿ ಹೆಗಡೆ

ಮೆಚ್ಚುಗೆ ಪಡೆದ ಪ್ರಬಂಧಗಳು
l ಕವಿಗಳ ಕಣ್ಣಲ್ಲಿ ಹೆಣ್ಣು / ಲಲಿತಾ
l ಇದು ಕಲಿಗಾಲವಲ್ಲ ಇಲಿಗಾಲ / ಸ್ಮಿತಾ ಅಮೃತರಾಜ್

***

ತೀರ್ಪುಗಾರರ ಮಾತು

ಈ ಬಾರಿ ಪ್ರಜಾವಾಣಿಯ ಲಲಿತಪ್ರಬಂಧ ಸ್ಪರ್ಧೆ 2019ಕ್ಕೆ 300ಕ್ಕೂ ಹೆಚ್ಚು ಲಲಿತ ಪ್ರಬಂಧಗಳು ಬಂದಿದ್ದವು. ಅದರಲ್ಲಿ ಪ್ರಜಾವಾಣಿ ಸಿಬ್ಬಂದಿ ವರ್ಗ ಹದಿಮೂರು ಲಲಿತಪ್ರಬಂಧಗಳನ್ನು ಆಯ್ಕೆ ಮಾಡಿ ನಮಗೆ ಕಳುಹಿಸಿದ್ದರು. ಕಥೆ ಕಾದಂಬರಿಗಳಷ್ಟು ಲಲಿತಪ್ರಬಂಧ ಮತ್ತು ಪ್ರಬಂಧಗಳಿಗೆ ನಮ್ಮ ಸಾಹಿತ್ಯದಲ್ಲಿ ಪ್ರಾಮುಖ್ಯವನ್ನು ನಾವು ನೀಡಿಲ್ಲ. ಪ್ರಬಂಧ ಅನ್ನುವ ಬರವಣಿಗೆಯ ಪರಿ ಗಂಭೀರವಾಗಿ ಬರಬಹುದಾದ ಸಾಮಾಜಿಕ ಸಾಂಸ್ಕೃತಿಕ ವಿಶ್ಲೇಷಣೆ ಮತ್ತು ಹಾಸ್ಯದಿಂದ ಬರುವ ನಗೆಬರಹಗಳ ನಡುವೆ ನಲುಗಿಹೋಗಿದೆ. ಹೀಗಾಗಿ ಈ ಕ್ಷೇತ್ರದಲ್ಲಿ ಮುಖ್ಯರೆಂದು ಗುರುತಿಸಿಕೊಂಡ ಮೂರ್ತಿರಾಯರು ಮತ್ತು ಸುನಂದಾ ಬೆಳಗಾವಕರ್ ನಂತರ ಪ್ರತ್ಯೇಕ ಲಲಿತಪ್ರಬಂಧಕಾರರಾಗಿ ಗುರುತಿಸಿಕೊಂಡವರು ಕಡಿಮೆ. ನಿಜಕ್ಕೂ  ಒಂದು ಉತ್ತಮ ಲಲಿತಪ್ರಬಂಧದ ಮಾದರಿಯನ್ನು ನೋಡಬೇಕಾದರೆ ನಾವು ಬಿಜಿಎಲ್ ಸ್ವಾಮಿಯವರ ಬರವಣಿಗೆಗಳನ್ನು ನೋಡಬೇಕು. ಸ್ವಾಮಿಯವರು ಪ್ರಬಂಧವನ್ನು ಕಟ್ಟಿಕೊಡುವುದರಲ್ಲಿ ಒಂದು ಅದ್ಭುತ ಚೌಕಟ್ಟಿದೆ - ಮೂಲವಿಷಯ ಅದಕ್ಕೆ ತಕ್ಕಂತಹ ಪಾಂಡಿತ್ಯ, ವಿಷಯಕ್ಕೆ ಸಂಬಂಧಿಸಿದ ಘಟನಾವಳಿ, ಎರಡನ್ನೂ ವಿವರಿಸುವುದರಲ್ಲಿನ ಹದ ಮತ್ತು ಹಾಸ್ಯ-ವ್ಯಂಗ್ಯ-ಶುಷ್ಕತೆಯ ಲೇಪ.

ಈ ಹಿನ್ನೆಲೆಯನ್ನು ಇಟ್ಟು ನಮಗೆ ಕೊಟ್ಟ ಪ್ರಬಂಧಗಳನ್ನು ನೋಡಿದಾಗ ತುಸು ನಿರಾಶೆಯೇ ಆಯಿತೆನ್ನಬೇಕು. ನಿರಾಶೆ ಬರವಣಿಗೆಯನ್ನು ನಿಭಾಯಿಸುವ ಸಾಮರ್ಥ್ಯ ಅಥವಾ ಭಾಷೆಯ ಬಗೆಗಿನದ್ದಲ್ಲ. ಬದಲಿಗೆ ವಿಷಯವನ್ನು ಒಂದು ಗಂಭೀರ ಪಾಂಡಿತ್ಯಪೂರ್ಣ ಹಿನ್ನೆಲೆಯಲ್ಲಿ ಯಾವುದೇ ಪ್ರಬಂಧ ನೋಡುತ್ತಿಲ್ಲ ಎನ್ನುವ ನಿರಾಶೆ.

ಉದಾಹರಣೆಗೆ ನಮಗೆ ಬಂದ ಪ್ರಬಂಧಗಳಲ್ಲಿ ‘ಹೀಗೊಂದು ಉದರ ಕರಗಿಸುವ ಯಾಗ’ ‘ಮುಟ್ಟು ಎಂಬ ಲಹರಿಯಲ್ಲಿ’  ಮತ್ತು ‘ಸಿದ್ದಾಪುರದ ಸಂತೆ’ ಎನ್ನುವ ಪ್ರಬಂಧಗಳು ಅನಭವಕಥನಗಳಾಗಿ, ನೆನಪಿನ ದೋಣಿಗಳಾಗಿ ತೇಲಿ ಬರುತ್ತವೆ. ಹೊಟ್ಟೆ ಕರಗಿಸುವ ಪ್ರಯತ್ನ ಎಲ್ಲರ ದಿನನಿತ್ಯದ ಮತ್ತು ಈಗಿನ ಕಾಲದ ಅನುಭವ. ಇದನ್ನು ಒಂದು ಉತ್ತಮ ಪ್ರಬಂಧದ ಮಟ್ಟಕ್ಕೆ ಏರಿಸಬೇಕಾದರೆ ಅನುಭವಕ್ಕಿಂತ ಮಿಗಲಾದದ್ದು ವಿಶಿಷ್ಟವಾದದ್ದ ಏನಾದರೂ ಇರಬೇಕಾಗುತ್ತದೆ  ಮುಟ್ಟಿನ ಬಗ್ಗೆ ಒಂದು ಉತ್ತಮ ಲಲಿತಪ್ರಬಂಧದಲ್ಲಿ ಅದರ ವೈಜ್ಞಾನಿಕ ಅಂಶಗಳೂ, ಸಾಮಾಜಿಕ ರಿವಾಜುಗಳೂ, ಅನುಭವದ ವಿರೋಧಾಭಾಸಗಳೂ ಇದ್ದರೆ ಅದು ಬರವಣಿಗೆಯ ಯಶಸ್ವೀ ಮಾದರಿಯಾಗುತ್ತದೆ. ಹಾಗೆಯ ಸಿದ್ದಾಪುರದ ಸಂತೆಯೂ ಒಂದು ನೆನಪಿನ ಗುಚ್ಛವಾಗುತ್ತದೆಯೇ ಹೊರತು ಸಂತೆಯಿಂದ ಆಧುನಿಕತೆಯ ಕಡೆಗೆ ಮಾರುಕಟ್ಟೆಗಳು ಹೇಗೆ ಹೊರಳಿವೆ - ಅದರ ಒಳಿತು–ಕೆಡಕುಗಳೇನು ಎನ್ನುವುದರ ಬಗ್ಗೆ ಚರ್ಚೆಗೆ ಪ್ರಯತ್ನಿಸುವುದಿಲ್ಲ. ಅನುಭವಕಥನಗಳೇ ಪ್ರಬಂಧಕಾರರಿಗೆ ಮೂಲವಸ್ತು ಎನ್ನುವುದನ್ನು ಇನ್ನಷ್ಟು ಪ್ರಬಂಧಗಳು ನಿರೂಪಿಸುತ್ತಿವೆ. ‘ಅಜ್ಜಿ ಎಂಬ ಪೋಷಕ ಪಾತ್ರ’, ‘ನನ್ನ ಚಿತ್ತ ಕೇಶದತ್ತ’ ಕೂಡ ಅನುಭವದ ದಾಖಲೆಯಾಗಿ ಉಳಿದುಬಿಡುತ್ತವೆ.

‘ಮೆಟ್ರೋ ಮಾಯಾಂಗನೆಯ ಮಡಿಲಲ್ಲಿ’ ಎನ್ನುವ ಪ್ರಬಂಧವೂ ಮೆಟ್ರೋ ಪ್ರಯಾಣದ ಅನುಭವ ಕಥನವಾಗಿ ಉಳಿಯುತ್ತದೆಯೇ ಹೊರತು ಅಲ್ಲಿಂದ ಮೇಲಕ್ಕೇರುವುದಿಲ್ಲ. ಮೇಲಕ್ಕೇರುವುದಿಲ್ಲ ಎನ್ನುವುದನ್ನು ವಿವರಿಸಬೇಕಾದರೆ ನಾವು ಕೇಳಬೇಕಾದ ಪ್ರಶ್ನೆಯಿದು - ಮೆಟ್ರೋ ಜಾಗದಲ್ಲಿ ಅದು ಬಿಎಂಟಿಸಿ ಬಸ್ಸಾಗಿದ್ದರೆ ಎಷ್ಟು ಅನುಭವಗಳು ಭಿನ್ನವಾಗಿರುತ್ತಿದ್ದುವು? ಈ ರೀತಿಯ ಪ್ರಶ್ನೆಗಳಲ್ಲಿ ಬರಹಗಾರು ಕೇಳಿಕೊಂಡಾಗ ತಾವೇ ಪ್ರಬಂಧಕ್ಕೆ ಹೆಚ್ಚಿನ ತಿರುಳನ್ನು ತುಂಬುತ್ತಾರೆ. ‘ಅಳು’ ಎನ್ನುವ ಪ್ರಬಂಧಗಳು ಆ ಕೆಟೆಗರಿಗೆ ಸೇರಿದ್ದು. ಅಜ್ಜಿಯ ಪಾತ್ರ ಮತ್ತು ಅಳುವಿನ ರೀತಿಯ ವೈವಿಧ್ಯವನ್ನು ದಾಖಲಿಸುವ ಈ ಪ್ರಬಂಧಗಳು ಇನ್ನಷ್ಟು ವಿಸ್ತಾರವಾಗಿದ್ದರೆ ಆಯ್ಕೆಗೆ ಕಷ್ಟವಾಗಿ ನಾವು ಆನಂದಬಾಷ್ಪ ಸುರಿಸಬಹುದಿತ್ತೇನೋ! ‘ನೀರಿಳಿಯದ ಗಂಟಲೊಳ್’ ಕೂಡ ಹೀಗೇ ಒಂದು ಲಹರಿಯಲ್ಲಿ ಬರೆದ ಉಪಾಖ್ಯಾನಗಳ ಸರಣಿಯಂತೆ ಕಾಣುತ್ತದೆ.

ಬಹುಮಾನಕ್ಕೆ ಪಾತ್ರವಾಗದಿದ್ದರೂ ಈ ಎಂಟು ಪ್ರಬಂಧಗಳು ನಮ್ಮ ಪರಿಗಣನೆಗೆ ಬಂದಿದ್ದರಿಂದ ಅವುಗಳು ಮಿಕ್ಕ ಮುನ್ನೂರರಲ್ಲಿ ಉತ್ತಮವಾಗಿದ್ದುವು ಎಂದು ಪ್ರಜಾವಾಣಿ ಸಂಪಾದಕೀಯ ಬಳಗ ತೀರ್ಮಾನಿಸಿದ್ದರಿಂದ ಅದನ್ನು ನಾವು ಚರ್ಚಿಸಿರುವುದು ಮತ್ತು ಅವುಗಳು ಹೇಗೆ ಉತ್ತಮಗೊಳ್ಳಬಹುದೆಂದು ಆಯಾ ಬರಹಗಾರರಿಗೆ ಸೂಚಿಸುವುದು ನಮ್ಮ ಕರ್ತವ್ಯ ಎನ್ನುವ ದೃಷ್ಟಿಯಿಂದ ಇಲ್ಲಿ ಚರ್ಚಿಸಿದ್ದೇವೆ. 

ನಮ್ಮ ಮೆಚ್ಚುಗೆಗೆ ಪಾತ್ರವಾದವು ಎರಡು ಪ್ರಬಂಧಗಳು

1.  ಕವಿಗಳ ಕಣ್ಣಲ್ಲಿ ಹೆಣ್ಣು: ಈ ಪ್ರಬಂಧದಲ್ಲಿ ಒಂದು ಪ್ರಬಂಧಕ್ಕಿರಬೇಕಾದ ಅನೇಕ ಅಂಶಗಳಿವೆ. ವ್ಯಂಗ್ಯ, ಹುಸಿಕೋಪದಿಂದ ಕೂಡಿದ ಈ ಪ್ರಬಂಧದಲ್ಲಿ ಪಾಂಡಿತ್ಯವಿದೆ, ವಸ್ತುವಿನ ಬಗ್ಗೆ ಒಂದು ಶ್ರದ್ಧೆಯಿದೆ ಹಾಗೂ ಅದನ್ನು ಕಾಲಾನುಕ್ರಮದಲ್ಲಿ ನೋಡು ಪರಿಯೂ ಇದೆ. ಒಂದು ಕಡೆ ಗಂಭೀರ ವಿಮರ್ಶೆಯ ವಸ್ತುವೂ ಆಗಬಹುದಾಗಿದ್ದ ಈ ವಸ್ತುವನ್ನು ಲೇಖಕರು ಲಘು ಮಟ್ಟದಲ್ಲಿ ಚರ್ಚಿಸಿದ್ದಾರೆ. ಇದಕ್ಕೆ ತುಸು ಅನುಭವಕಥನವನ್ನೂ ಲೇಪಿಸಿದ್ದರೆ ಇದೊಂದು ಸಶಕ್ತ ಪ್ರಬಂಧವಾಗುತ್ತಿತ್ತು.

2. ಇದು ಕಲಿಗಾಲವಲ್ಲ, ಇಲಿಗಾಲ: ಲಘುಶೈಲಿಯಲ್ಲಿ ಬರೆದ ಈ ಪ್ರಬಂಧದಲ್ಲಿ ಒಂದು ಲಹರಿಯಿದೆ. ಅನುಭವಗಳ ಸರಣಿಯಾದರೂ ಅದನ್ನು ಕಟ್ಟುವ ಕೊಂಡಿಗಳಿವೆ ಮತ್ತು ಭಿನ್ನ ಕ್ಷೇತ್ರಗಳ (ಧಾರ್ಮಿಕ ಸಾಮಾಜಿಕ) ವಿಚಾರಗಳನ್ನು ಸಶಕ್ತವಾಗಿ ಬರಹಗಾರರು ತಮ್ಮ ಪ್ರಬಂಧದಲ್ಲಿ ಪೋಣಿಸಿದ್ದಾರೆ.

ಬಹುಮಾನಕ್ಕೆ ಪಾತ್ರವಾದ ಮೂರು ಪ್ರಬಂಧಗಳು ಹೀಗಿವೆ

ಮೊದಲ ಬಹುಮಾನ: ಸೀರೆಯಲ್ಲಿ ಅಡಗಿದ ಅಂತರಂಗಗಳು. ಒಂದು ಲಲಿತ ಪ್ರಬಂಧದಲ್ಲಿರಬಹುದಾದ ಉತ್ತಮ ಲಕ್ಷಣಗಳು ಈ ಪ್ರಬಂಧದಲ್ಲಿವೆ. ಒಂದು ವಿಷಯವನ್ನು ಆಯ್ದು ಅದರ ಅನೇಕ ಆಯಾಮಗಳನ್ನು ಪದರಪದರವಾಗಿ ಬಿಚ್ಚುತ್ತಾ, ಕಟ್ಟುತ್ತಾ ಹೋಗುವ ಈ ಪ್ರಬಂಧದಲ್ಲಿ ವಿಷಯ ವಿಸ್ತಾರವೂ ಇದೆ, ಇದು ಸುಪುಷ್ಟವಾದ ಚಿಂತನೆಯೂ ಇದೆ ಹಾಗೂ ಪ್ರಬಂಧಕ್ಕಿರಬೇಕಾದ ಲಾಲಿತ್ಯವೂ ಇದೆ. ಹೀಗಾಗಿ ಇದು ಪ್ರಥಮ ಬಹುಮಾನಕ್ಕೆ ಅರ್ಹವಾದ ಪ್ರಬಂಧ ಎಂದು ನಾವಂದುಕೊಳ್ಳುತ್ತಿದ್ದೇವೆ.

ಎರಡನೆಯ ಬಹುಮಾನ:  ಒಂದು ಕಪ್ ಚಹಾ ಸಿಗಬಹುದೆ? - ಇದು ಒಂದು ಅಚ್ಚುಕಟ್ಚಾದ ಪ್ರಬಂಧ. ಚಹಾದ ಬಗ್ಗೆ ಎಷ್ಟು ಮತ್ತು ಹೇಗಾದರೂ ಬರೆಯಬಹುದು. ಅದು ದಿನನಿತ್ಯದ ಮತ್ತು ಸಾಮಾನ್ಯದ ವಿಚಾರ. ಆ ವಸ್ತುವನ್ನಾಯ್ದು ಒಂದು ಹೊಸರೀತಿಯಲ್ಲಿ ಮಂಡನೆ ಮಾಡಬಹುದು ಎಂದು ನಿರೂಪಿಸಿರುವ ಈ ಬರಹಗಾರರ ಪ್ರಬಂಧಕ್ಕೆ ಎರಡನೇ ಬಹುಮಾನ ನೀಡಬೇಕೆಂದು ನಮ್ಮ ಅಭಿಪ್ರಾಯ.

ಮೂರನೇ ಬಹುಮಾನ: ಅಜ್ಜನಮನೆಯ ಕರಿಕೋಣವೂ ನಾನೂ - ಅನುಭವಗಳನ್ನು ದಾಖಲಿಸುವ ಹಲವು ಪ್ರಬಂಧಗಳಲ್ಲಿ ಗಟ್ಟಿಯಾಗಿ ಕಟ್ಟಿರುವುದು ಇದೊಂದು ಎಂದು ನಾವು ಭಾವಿಸಿದ್ದೇವೆ. ಈ ಪ್ರಬಂಧ ಸುಂದರವಾಗಿ ನಿರೂಪಿಸಲ್ಪಟ್ಟಿದೆ ಹಾಗೂ ಮೂರನೆಯ ಬಹುಮಾನಕ್ಕೆ ಅರ್ಹವಾಗಿದೆ ಎನ್ನುವುದು ನಮ್ಮ ನಂಬಿಕೆ. ಈ ಸ್ಪರ್ಧೆಯಲ್ಲಿ ನಮಗೂ ಒಂದು ಪಾಲನ್ನು ಕೊಟ್ಟು ಪ್ರಬಂಧಗಳ ಬಗ್ಗೆ ವಿಚಾರ ಮಾಡಲು, ಹೊಸ ಪ್ರಬಂಧಗಳನ್ನು ಓದಲು ಅವಕಾಶ ಮಾಡಿಕೊಟ್ಟ ಪ್ರಜಾವಾಣಿ ಬಳಗಕ್ಕೆ ನಾವು ಋಣಿಗಳಾಗಿದ್ದೇವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)