ಅಪಾಯಕ್ಕೆ ಆಹ್ವಾನ ನೀಡುತ್ತಿವೆ ಸೇತುವೆಗಳು

ಬುಧವಾರ, ಮೇ 22, 2019
24 °C
ಸಂತೇಮರಹಳ್ಳಿ: ಶಿಥಿಲಾವಸ್ಥೆ ತಲುಪಿರುವ ಹೋಬಳಿ ವ್ಯಾಪ್ತಿಯ ಕಬಿನಿ ನಾಲೆ ಸೇತುವೆಗಳು

ಅಪಾಯಕ್ಕೆ ಆಹ್ವಾನ ನೀಡುತ್ತಿವೆ ಸೇತುವೆಗಳು

Published:
Updated:
Prajavani

ಸಂತೇಮರಹಳ್ಳಿ: ಹೋಬಳಿ ವ್ಯಾಪ್ತಿಯಲ್ಲಿ ಹರಿಯುತ್ತಿರುವ ಕಬಿನಿ ನಾಲೆಗೆ ಅಲ್ಲಲ್ಲಿ ನಿರ್ಮಿಸಲಾಗಿರುವ ಸೇತುವೆಗಳಲ್ಲಿ ಕೆಲವು ಶಿಥಿಲಾವಸ್ಥೆ ತಲುಪಿದ್ದು, ವಾಹನಗಳು ಹಾಗೂ ಜನ ಸಂಚಾರಕ್ಕೆ ತೊಂದರೆ ಉಂಟುಮಾಡಿರುವುದರ ಜೊತೆಗೆ ಅಪಾಯವನ್ನು ಆಹ್ವಾನಿಸುತ್ತಿವೆ.

ಸಂತೇಮರಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ 33 ಕಿ.ಮೀ ಉದ್ದದಷ್ಟು ಕಬಿನಿ ನಾಲೆ ಇದ್ದು, ಆಲ್ದೂರು, ನವಿಲೂರು ಗ್ರಾಮದಿಂದ ಆರಂಭವಾಗಿ ಗಂಗವಾಡಿ ಗ್ರಾಮದವರೆಗಿನ ಕಬಿನಿ ನಾಲೆಯ ಸೇತುವೆಗಳು ಹಾಳಾಗಿವೆ. ಈ ಮಾರ್ಗದಲ್ಲಿ ಬರುವ ಬಾಗಳಿ, ಕಮರವಾಡಿ, ಬಾಣಹಳ್ಳಿ, ಕಾವುದವಾಡಿ, ಬಸವಟ್ಟಿ, ಸಂತೇಮರಹಳ್ಳಿ, ಚುಂಗಡಿಪುರ, ಕೆಂಪನಪುರ, ಹೊಮ್ಮ, ಗೂಳಿಪುರ, ಇರಸವಾಡಿ ಹಾಗೂ ಮಸಣಾಪುರದಿಂದ ಗಂಗವಾಡಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸುಮಾರು 25 ರಿಂದ 30 ಸೇತುವೆಗಳು ಬರುತ್ತವೆ. ಇವುಗಳಲ್ಲಿ ಕೆಲವು ಸೇತುವೆಗಳು ಶಿಥಿಲಾವಸ್ಥೆ ತಲುಪಿವೆ.

‘ಈ ಭಾಗದಲ್ಲಿ ಕಬಿನಿ ನಾಲೆ ಆರಂಭವಾಗಿ 40 ವರ್ಷಗಳು ಕಳೆದಿವೆ. ಇಲ್ಲಿಯವರೆಗೂ ಸೇತುವೆಗಳನ್ನು ದುರಸ್ತಿಗೊಳಿಸಿಲ್ಲ. ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಆಗಾಗ್ಗೆ ದುಃಸ್ಥಿತಿಗೊಂಡಿರುವ ಸೇತುವೆಗಳ ದುರಸ್ತಿಗೆ ಕ್ರಮ ಕೈಗೊಂಡಿದ್ದರೆ ಸೇತುವೆಗಳು ಸಂಪೂರ್ಣವಾಗಿ ಶಿಥಿಲಾವಸ್ಥೆ ತಲುಪುತ್ತಿರಲಿಲ್ಲ’ ಎಂದು ಈ ಭಾಗದ ಗ್ರಾಮಸ್ಥರು ಹೇಳುತ್ತಾರೆ. 

ನಾಲೆಯು 50ರಿಂದ 100 ಅಡಿಗೂ ಹೆಚ್ಚು ಆಳ ಇದೆ. ಕೆಲವು ಕಡೆಗಳಲ್ಲಿ ಸೇತುವೆಗಳ ತಡೆಗೋಡೆಗಳು ಮುರಿದು ಬಿದ್ದಿರುವುದರಿಂದ ಅಪಘಾತಗಳಾಗಿವೆ.

ವರ್ಷದ ಹಿಂದೆ ಉಮ್ಮತ್ತೂರು ಏಕಲವ್ಯ ಇಂಜಿನಿಯರಿಂಗ್ ವಿದ್ಯಾರ್ಥಿಗಳು ತಿ.ನರಸೀಪುರ ಮಾರ್ಗವಾಗಿ ಕಾರಿನಲ್ಲಿ ಕಾಲೇಜಿಗೆ ಬರುತ್ತಿದ್ದಾಗ ಆಲ್ದೂರು ಬಳಿ ಇರುವ ಸೇತುವೆಯಲ್ಲಿ ತಡೆಗೋಡೆ ಇಲ್ಲದ ಪರಿಣಾಮ ಕಾರು ನಾಲೆಗೆ ಬಿದ್ದಿತ್ತು. ಈ ದುರಂತದಲ್ಲಿ ಇಬ್ಬರು ವಿದ್ಯಾರ್ಥಿಗಳು ದುರ್ಮರಣಕ್ಕೀಡಾಗಿದ್ದರು. 

ಮುಖ್ಯ ರಸ್ತೆಯಲ್ಲಿರುವ ಸೇತುವೆಗಳಿಗೆ ‘ಎಚ್ಚರಿಕೆ’ ಎಂಬ ನಾಮಪಲಕಗಳನ್ನು ಅಳವಡಿಸಿಲ್ಲ. ಇದರಿಂದ ರಾತ್ರಿ ಸಮಯದಲ್ಲಿ ವಾಹನಗಳು ಸೇತುವೆಗೆ ಡಿಕ್ಕಿ ಹೊಡೆದು ಪ್ರಯಾಣಿಕರಿಗೆ ಸಾವು ನೋವುಗಳಾಗಿ ಆಸ್ಪತ್ರೆ ಸೇರಿರುವ ನಿದರ್ಶನಗಳಿವೆ. ಗ್ರಾಮೀಣ ಭಾಗದಲ್ಲಿರುವ ಸೇತುವೆಗಳಲ್ಲಿ ಹೆಚ್ಚು ಭಾರ ಹೊತ್ತು ಲಾರಿಗಳು ಸಂಚರಿಸುತ್ತಿವೆ. ಇದರಿಂದ ಸೇತುವೆಗಳು ಕುಸಿಯುವ ಭೀತಿಯೂ ಎದುರಾಗಿದೆ. ಇಷ್ಟಾಗಿದ್ದರೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಗಮನ ಹರಿಸಿಲ್ಲ ಎಂದು ಸಾರ್ವಜನಿಕರು ದೂರುತ್ತಾರೆ.

ಕೆಲವು ಮುಖ್ಯ ರಸ್ತೆಗಳಿರುವ ಕಡೆಗಳಲ್ಲಿ ರಸ್ತೆ ದುರಸ್ತಿ ಮಾಡಿದಾಗ ರಸ್ತೆಯ ಎತ್ತರ ಹೆಚ್ಚಾಗಿ ಸೇತುವೆಯ ತಡೆಗೋಡೆ ಎತ್ತರ ಕಡಿಮೆಯಾಗಿವೆ. ಸೇತುವೆಗಳು ಶಿಥಿಲಾವಸ್ಥೆ ತಲುಪಿರುವುದರಿಂದ ವಾಹನ ಸವಾರರು ಜಾಗರೂಕತೆಯಿಂದ ಸಂಚರಿಸಬೇಕಾಗಿದೆ. ತಡೆಗೋಡೆಗಳು ಮುರಿದು ಬಿದ್ದಿರುವ ಸೇತುವೆಗಳಲ್ಲಿ ಎದುರು ಬದುರು ವಾಹನಗಳು ಬಂದಾಗ ಅಪಾಯ ತಪ್ಪಿದ್ದಿಲ್ಲ.

ಶಿಥಿಲಾವಸ್ಥೆ ತಲುಪಿರುವ ಸೇತುವೆಗಳನ್ನು ಆದಷ್ಟು ಬೇಗ ಪುನರ್‌ನಿರ್ಮಾಣ ಮಾಡಿ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ವಾಹನ ಸವಾರರು ಮತ್ತು ಸ್ಥಳೀಯರು ಒತ್ತಾಯಿಸಿದ್ದಾರೆ. 

‘ಪ್ರಸ್ತಾವನೆ ಸಲ್ಲಿಸಲಾಗಿದೆ’

‘ಶಿಥಿಲಾವಸ್ಥೆ ತಲುಪಿರುವ ಸೇತುವೆಗಳ ದುರಸ್ತಿ ಕಾರ್ಯಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಸರ್ಕಾರದಿಂದ ಆದೇಶ ಬಂದ ನಂತರ ಸೇತುವೆಗಳ ರಿಪೇರಿಗೆ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಕಾವೇರಿ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರಂಗಸ್ವಾಮಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !