‘ಪ್ರಜಾಪ್ರಭುತ್ವ ಉಳಿಸಲು ಹೋರಾಟ ಅನಿವಾರ್ಯ’

ಮಂಗಳವಾರ, ಏಪ್ರಿಲ್ 23, 2019
27 °C
ಕಾಳಿದಾಸ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಎಸ್.ಎ.ಜಿದ್ದಿ ಅಮೃತ ಮಹೋತ್ಸವ

‘ಪ್ರಜಾಪ್ರಭುತ್ವ ಉಳಿಸಲು ಹೋರಾಟ ಅನಿವಾರ್ಯ’

Published:
Updated:
Prajavani

ವಿಜಯಪುರ: ‘ಮನುಷ್ಯನಲ್ಲಿ ದುರಾಸೆ ಹೆಚ್ಚಾಗಿರುವ ಕಾರಣ, ವರ್ಷದಿಂದ ವರ್ಷಕ್ಕೆ ಹಗರಣಗಳ ಮೊತ್ತವೂ ಹೆಚ್ಚಾಗುತ್ತಿದೆ. ಇಂದು ಪ್ರಜಾಪ್ರಭುತ್ವ ಉಳಿಸಲು ಹೋರಾಟ ಮಾಡುವುದು ಅನಿವಾರ್ಯವಾಗಿದೆ’ ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ಹೇಳಿದರು.

ನಗರದ ಕಾಳಿದಾಸ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಭಾನುವಾರ ನಡೆದ ಕಾಳಿದಾಸ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಎಸ್.ಎ.ಜಿದ್ದಿ ಅವರ ಅಮೃತ ಮಹೋತ್ಸವ ಹಾಗೂ ಕರುಣಾಮಯಿ ಅಭಿನಂದನ ಗ್ರಂಥ ಸಮರ್ಪಣೆ ಸಮಾರಂಭ ಉದ್ಘಾಟಿಸಿದ ಅವರು ಮಾತನಾಡಿದರು.

‘ಪ್ರಸ್ತುತ ಸಮಾಜದಲ್ಲಿ ತೃಪ್ತಿ ಮತ್ತು ಮಾನವೀಯತೆ ಇಲ್ಲವಾಗಿರುವುದರಿಂದ ಸ್ವಾರ್ಥ ಹೆಚ್ಚಾಗಿ, ದುರಾಸೆಯೇ ತುಂಬಿಕೊಂಡಿದೆ. ಇದು ಬದಲಾಗಬೇಕಾದರೆ ಪ್ರತಿಯೊಬ್ಬರಲ್ಲೂ ತೃಪ್ತಿ ಹಾಗೂ ಮಾನವೀಯತೆ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಪ್ರಜಾಪ್ರಭುತ್ವದ ರಾಜಕೀಯ ನೀತಿ ತುಂಬಾ ಕೆಟ್ಟಿದೆ. ಜನರಿಗಾಗಿ ಹೋರಾಟ ಮಾಡುವ ರಾಜಕಾರಣಿಗಳು ಇಲ್ಲವಾಗಿದ್ದಾರೆ. ಭ್ರಷ್ಟಾಚಾರ ಮಾಡಿ ಜೈಲಿಗೆ ಹೋಗಿ ಬಂದವರು ಸಮಾಜದಲ್ಲಿ ಹಾರ ಹಾಕಿಕೊಂಡು ತಿರುಗುತ್ತಿದ್ದಾರೆ’ ಎಂದು ಕಿಡಿಕಾರಿದರು.

‘ಭಾಷೆ, ಸಂಸ್ಕೃತಿ, ಧರ್ಮಗಳ ಆಧಾರದ ಮೇಲೆ ದೇಶವನ್ನು ಛಿದ್ರಗೊಳಿಸುತ್ತಿದ್ದಾರೆ. ಇಂದು ಸಮಾಜ ಸಂಪೂರ್ಣ ಹಾಳಾಗಿದ್ದು, ಈ ವ್ಯವಸ್ಥೆಯನ್ನು ಯುವಕರು ಬದಲಾವಣೆ ಮಾಡಬೇಕು. ಅವರಿಗೆ ವ್ಯವಸ್ಥೆ ಬದಲಾವಣೆ ಮಾಡುವ ಶಕ್ತಿ ಇದೆ’ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಮಾಜಿ ವಿಧಾನ ಪರಿಷತ್ ಸದಸ್ಯ ಎಸ್.ಎ.ಜಿದ್ದಿ, ‘ನಾನು ಭವಿಷ್ಯತ್ತಿನಲ್ಲಿ ಏನನ್ನೂ ಸಾಧಿಸುವುದಿಲ್ಲ. ತನ್ನಿಂದ ತಾನೇ ಪದವಿ, ಅಧಿಕಾರ ಹುಡುಕಿಕೊಂಡು ಬಂದಿವೆ. ಅದಕ್ಕಾಗಿ ಕಳೆದ ದಿನಗಳು ಮರಳಿ ಸಿಗುವುದಿಲ್ಲ. ಬದುಕು ಸುಂದರವಾಗಬೇಕಾದರೆ ಈಗಿನಿಂದಲೇ ಬದುಕಿನ ಗಾಂಭೀರ್ಯತೆ ಅರಿತು ಆತ್ಮವಿಶ್ವಾಸ ಬೆಳೆಸಿಕೊಂಡು ಗಟ್ಟಿ ಬದುಕನ್ನು ಕಟ್ಟಿಕೊಳ್ಳಬೇಕು’ ಎಂದು ಹೇಳಿದರು.

ಇದೇ ವೇಳೆ ಸಾಂಗಲಿಯ ಡಾ.ರತ್ನಮಾಲಾ ಮತ್ತು ರಾಜು ಅಡೂರ ದಂತಿಗಳಿಂದ ಎಸ್.ಎ.ಜಿದ್ದಿ ಅವರಿಗೆ ತುಲಾಭಾರ ನಡೆಯಿತು. ಸಿಕ್ಯಾಬ್ ಮಹಿಳಾ ವಿದ್ಯಾಲಯದ ಡಾ.ಶ್ರೀಕೃಷ್ಣ ಕಾಖಂಡಕಿ ಉಪನ್ಯಾಸ ನೀಡಿದರು. ಸಿಂದಗಿ ಸಾರಂಗಮಠದ ಪ್ರಭುಸಾರಂಗದೇವ ಶಿವಾಚಾರ್ಯ ಸಾನ್ನಿಧ್ಯ ವಹಿಸಿದ್ದರು.

ಮಾಜಿ ಶಾಸಕ ಆರ್.ಆರ್ ಕಲ್ಲೂರ, ಅಮೃತ ಮಹೋತ್ಸವ ಸಮಿತಿ ಗೌರವಾಧ್ಯಕ್ಷ ಡಾ.ಕಂಠೀರವ ಕುಲ್ಲೊಳ್ಳಿ, ಸಾಹಿತಿ ಮಹಾಂತ ಗುಲಗಂಜಿ, ಕೆ.ಆರ್. ನಾಗೋಡ, ಪ್ರೊ.ವಿ.ಡಿ.ವಸ್ತ್ರದ, ಕೆ.ಆರ್.ಜಾಧವ, ಎನ್.ಎಸ್.ಸಜ್ಜನ, ಎಸ್.ಪಿ.ಬಿರಾದಾರ, ಐ.ಎನ್.ಕಂಬಾರ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !