ಸೀರೆಯಲ್ಲಡಗಿದ ಅಂತರಂಗಗಳು

7

ಸೀರೆಯಲ್ಲಡಗಿದ ಅಂತರಂಗಗಳು

Published:
Updated:
Prajavani

ದೇಶೋ ವಿಶಾಲವಾಗಿ ಹರಡಿಕೊಂಡು, ಉತ್ತರದ ಹಿಮಾಲಯದಿಂದ ದಕ್ಷಿಣದ ಕಡಲತೀರದ ವರೆಗೂ ಮನಸೆಳೆವ ಸೀರೆಯ ವಿವಿಧ ವಿನ್ಯಾಸಗಳ ಬಗೆಗೆ ಕೌತುಕವಿತ್ತೇ ಹೊರತು ಈ ಸೀರೆ ಎಂಬ ಪದಾರ್ಥದಲ್ಲಿ ನಾನಾ ಸ್ತರದ ಅಂತರಂಗಗಳು ಅಡಗಿಕೊಂಡಿರುವ ಸಂಗತಿ ನನಗೆ ತಿಳಿದಿರಲೇ ಇಲ್ಲ. ನಮ್ಮ ಸಿನಿಮಾಗಳಲ್ಲಿ ತೋರಿಸುವಂತೆ ಗಾಳಿಗೆ ಅಲೆ ಅಲೆಯಾಗಿ ತೇಲುವ ಸೀರೆಯ ಸೆರಗು ನಲ್ಲನ ನೂರು ಭಾವಗಳ ಒರತೆ ಎಂದಷ್ಟೆ ಅಂದುಕೊಂಡಿದ್ದೆ. ಆದರೆ ಪರದೆಯಿಂದಾಚೆ ಕಣ್ಣು ಹೊರಳಿಸಿ ಸುತ್ತೆಲ್ಲ ನಿರುಕಿಸಿದಾಗ ಈ ಸೀರೆಯ ಬಹುರೂಪಕ್ಕೆ ಬೆರಗಾಗಿಬಿಟ್ಟೆ! ಒಮ್ಮೆ ಜೀವನಾಸಕ್ತಿಯ ಪ್ರತಿರೂಪವಾಗಿ, ಇನ್ನೊಮ್ಮೆ ಪ್ರೀತಿಯನ್ನಳೆವ ಮಾನದಂಡವಾಗಿ, ಅಂತಸ್ತು ಸಾರುವ ಪ್ರತಿಷ್ಠೆಯಾಗಿ, ಸಂಬಂಧಗಳನ್ನು ಬೆಸೆವ ಸಾಧನವಾಗಿ, ಅಂತರಂಗಕ್ಕೆ ದರ್ಪಣವಾಗಿ, ವ್ಯಕ್ತಿತ್ವದ ಪ್ರಕಟರೂಪವಾಗಿ, ಮನಸು ಮುರಿವ , ಕಟ್ಟುವ, ಅಬ್ಬಬ್ಬಬ್ಬಾ.....ಯಾವ ಕ್ಷಣದಲ್ಲಿ ಯಾವ ರೂಪವಾಗಿಯೂ ಕಾಣಿಸಿಕೊಳ್ಳುವ ಈ ಸೀರೆ ಅವರವರ ಭಾವ, ಭಕುತಿಗಳನ್ನು ಅಭಿವ್ಯಕ್ತಿಸುವ ಅದ್ಭುತ ಸಾಧನವೆನ್ನುವದಂತೂ ಖಚಿತವಾಯಿತು. ಸ್ತ್ರೀಯ ಬದುಕನ್ನೇ ಬಂಧಿಸಿಟ್ಟ ಈ ಸೀರೆಯನ್ನು ಬಿಡುವುದು ಸುಲಭದ ಮಾತಲ್ಲವೆಂದೇ ಅದನ್ನು ತೊರೆದವರು ಮನುಷ್ಯನ ಇತಿಹಾಸದಲ್ಲಿ ಎಲ್ಲೋ ಅಲ್ಲಿಲ್ಲಿ ಮಹಾಸಾಧಕರಾಗಿ ಜಗದ ಬಟ್ಟೆಗೆ ಬೆಳಕಾಗಿ ನಿಂತಿರುವುದಲ್ಲವೆ?

ಸುಮ್ಮನೆ ಸುತ್ತಮುತ್ತ ಗಮನಿಸಿದರೂ ಸಾಕು, ಈ ಸೀರೆ ಎಂಬ ಕನ್ನಡಿಯಲ್ಲಿ ಹಲವು ಮುಖಗಳು ಹೊಳೆಯತೊಡಗುತ್ತವೆ. ಅಕ್ಕನ ಮಗನ ಮದುವೆ ನಿಶ್ಚಿತವಾಗಿತ್ತು. ಪದ್ಧತಿಯಂತೆ ತವರು ಮನೆಯಿಂದ ಅಕ್ಕ, ಭಾವ, ಮದುಮಗನಿಗೆ ಉಡುಗೊರೆ ಸಲ್ಲಬೇಕು. ಅಕ್ಕ ಬಯಸಿದ ಇಲಕಲ್ ಸೀರೆಯನ್ನು ತಾನೇ ತರುತ್ತೇನೆಂದು ಚಿಕ್ಕಮ್ಮ ಸಂಭ್ರಮದಿಂದ ಉಡುಗೊರೆ ಒಪ್ಪಿಸಿದರು. ಎಷ್ಟೋ ದಿನಗಳಿಂದ ಬಯಸುತ್ತಿದ್ದ ತೌರ್ಬಣ್ಣ ಉಟ್ಕೊಂಡು ನಿಲುಗನ್ನಡಿಯ ಮುಂದೆ ನಲಿಯುತ್ತ ನಿಂತ ಅಕ್ಕ ನಿರಿಗೆ ಹಿಡಿದೂ ಹಿಡಿದು, ಎಲ್ಲೋ ತನ್ನದೆ ತಪ್ಪಾಗಿರಬೇಕೆಂದು ಹೆಜ್ಜೆ ಮುಂದಿಡುವಾಗ ಬಕ್ಕಬಾರ್ಲ ಬಿದ್ದು, ಕನ್ನಡಕದ ಗಾಜು ಒಡೆದು, ತುಟಿಯ ರಕ್ತ ಒಸರಿ, ಕಣ್ಣಲ್ಲಿ ನೀರು ತುಂಬಿದ್ದು, ಬಯಸಿ ಬಯಸಿ ಬಂದ ಸೀರೆ ಉಡದಂತಾದ ಸಂಕಟಕ್ಕೊ, ಬಿದ್ದ ನೋವಿಗೊ ಊಹಿಸುವವರಿಗೆ ಬಿಟ್ಟಿದ್ದು.

‘ನನಗ್ಗೊತ್ತೇ ಇತ್ತು, ಉಡ್ಲಿಕ್ಕೆ ಬರ್ಲಾರದ್ದೇನೊ ಒಂದಿರ್ತದಂತ, ನಾಕ ಮೊಳದ ಲುಂಗಿಯಂಥಾ ಸೀರಿ, ಅದನ್ನೇನ ಮಾಡ್ಯ್ಲ ಇಟಗೊಂಡು?’ ತಿರಗಿ ಕೊಟ್ಟಬಿಟ್ಟೆ. ಆವಾಗರೆ ಅಂಗಡೀಗೆ ಕರ್ಕೊಂಡ ಹೋಗಿ ಬೇಕಾದಂಥ ಸೀರಿ ಕೊಡಸ್ಬೇಕೊ ಬ್ಯಾಡೊ? ‘ಹಂಗಾರ, ಇದು ಛಂದದ ನೋಡು, ಒಂದೇ ಒಂದಸಲಾ ಉಟ್ಟೀನಿ, ತೊಗೋ’ ಅಂತ ಉಟ್ಟ ಸೀರಿ ಕೊಡಬೇಕ ನನಗ?!’

‘ಒಂದು ಬಾರಿ ಉಟ್ಟರೇನಂತೆ? ಹೊಸದೇ ತಾನೆ? ಇಷ್ಟವಾಗಿದ್ದಲ್ಲಿ ತೆಗೆದುಕೊಂಡರೇನು ತಪ್ಪು?’ ಎಂದು ನನಗೆನಿಸಿತಾದರೂ, ಈ ಪ್ರತಿಕ್ರಿಯೆ ಅಕ್ಕನ  ಸಂತಾಪವನ್ನು ಹೆಚ್ಚಿಸುವ ಸಾಧ್ಯತೆಯೇ ಹೆಚ್ಚಾಗಿದ್ದರಿಂದ ಈ ಅಕ್ಷರಗಳನ್ನು ನನ್ನ ಸೀರೆಯ ಮಡಿಕೆಯಲ್ಲಿಯೆ ಮುಚ್ಚಿಟ್ಟೆ.  ನನ್ನ ಮೌನ ಮುರಿಯಬೇಕೆಂದು ಅಕ್ಕ ಮುಂದುವರಿಸಿದಳು.

‘ಅಲ್ಲ, ಜೀವನದಾಗ ಒಂದ್ಸಲಾ, ಅದೂ ಮೊದಲನೆ ಸಲಾ ಮನ್ಯಾಗ ಮದುವಿ ಮಾಡ್ಲಿಕ್ಕೆ ಹತ್ತೀವಿ, ಬೆಳ್ಯಲ್ಲಾ, ಭಂಗಾರಲ್ಲಾ, ನಾನಾಗೆ ಏನ ಕೇಳಿದ್ನ್ಯ ಇವರ್ನ?’ ‘ಎಂಥಾದ್ದ ಬೇಕು, ನಿನಗೆಂಥಾದ್ದ ಬೇಕು ಹೇಳು ಅಂತ ಗಂಟ ಬಿದ್ರು, ಹೆಂಗೂ ಇಲಕಲ್ ಸೀರಿ ತೊಗೋಬೇಕಂತ ಮಾಡಿದ್ದೆ, ಹೇಳಿದ್ನವಾ. ಎರಡ ನಿರಿಗಿ ಆಗುದುಲ್ಲಾ, ಲುಂಗಿಗತೆ ಏನ ಸುತಗೊಂಡ ತಿರಗ್ಲ್ಯಾ, ಇವ್ರ ಉಡುಗೊರಿ ಕೊಟ್ಟಾರಂತ?’

ಚಿಕ್ಕಮ್ಮನ ಪಕ್ಷ ವಹಿಸಿ ಮಾತನಾಡಲು ನನಗೂ ಕಠಿಣವಿತ್ತು. ಹಿಂದೊಮ್ಮೆ ನನ್ನ ಸಾಹಿತ್ಯ ಸಾಧನೆಯ ಅಭಿಮಾನದಿಂದ `ತೊಗೊ, ನಿನಗ ಸೇರುವಂಥಾದ್ದು, ತಿಳಿಬಣ್ಣದ ಸೀರಿ' ಎನ್ನುತ್ತ ಚಿಕ್ಕಮ್ಮ ನನಗಿತ್ತ ಆಕಾಶ ನೀಲಿಬಣ್ಣದ ಆ ಸೀರೆ ನಿಜವಾಗಿಯೂ ನನಗೆ ತುಂಬ ಇಷ್ಟವಾಯಿತು.

ಮರುದಿನವೇ ಸೀರೆಯಲ್ಲಿಯೆ ಇದ್ದ ಬ್ಲವುಜಪೀಸನ್ನು ಕತ್ತರಿಸಿ ಹೊಲಿಸಿ ಆತುರದಿಂದ ಉಟ್ಟುಕೊಳ್ಳತೊಡಗಿದೆ. ಅಯ್ಯೊ ಬ್ಲವುಜಪೀಸ ತೆಗೆಸದಿದ್ದರಾದರೂ ನಾಲ್ಕು ನಿರಿಗೆ ಬರುತ್ತಿತ್ತೊ ಏನೊ, ಮೊದಲೇ ಉಟ್ಟು ನೋಡಬೇಕಿತ್ತೆಂದು ಹಳಹಳಿಸುತ್ತ ಹಾಗೆಯೇ ಇಟ್ಟುಬಿಟ್ಟಿದ್ದೆ. ಅಂದಹಾಗೆ ರೂಢಿಯಂತೆ ಮಣೆಯ ಮೇಲೆ ಕೂರಿಸಿ, ಕುಂಕುಮವಿಟ್ಟು, ಅಕ್ಕಿ ಅಡಕೆ ಮುಂತಾದ ಫಲಗಳೊಂದಿಗೆ ಸೀರೆಯನ್ನು ಮಡಿಲಿಗಿಡದೆ ಅಸಡ್ಡೆಯಿಂದ ಮೈಮೇಲೆ ಎಸೆಯುತ್ತಾರೆಂಬ ಆರೋಪವೂ ಚಿಕ್ಕಮ್ಮನ ಮೇಲೆ ಸಂಪ್ರದಾಯವಾದೀ ಬಳಗದ ನಡುವೆ ಪ್ರಚಲಿತವಾಗಿತ್ತು. ಮೈಮೇಲೆ ಹಾಕಿದರೇನು ಮಡಿಲಿಗಿಟ್ಟರೇನು, ಉಡಲೆಂಬ ಉದ್ದೇಶದಿಂದಲೇ ಅಲ್ಲವೆ ಕೊಡುವುದು? ಎಂದೆನಿಸಿದರೂ ನಾನು ಇಂಥ ವಿಷಯದಲ್ಲಿ ಬಾಯಿ ಮುಚ್ಚಿಕೊಂಡಿರುತ್ತೇನೆ. ನಾನೇನಾದರೂ ಬಾಯಿ ಬಿಟ್ಟರೆ, ಕುಂಕುಮ ಭರಣಿ, ದೇವರ ಫೋಟೊ, ಗೂಡು ಇತ್ಯಾದಿಗಳಿಲ್ಲದ ನನ್ನ ದರವೇಶಿ ಬದುಕಿನ ಹಿಂಜುವಿಕೆ ಪ್ರಾರಂಭವಾಗುತ್ತದೆ. ಅದೇನೆ ಇರಲಿ, ಒಂದೆರಡು ಬಾರಿ ಸರಿ, ಚಿಕ್ಕಮ್ಮನ ಹೊಸ ಸೀರೆಗಳೆಲ್ಲ ಯಾಕೆ ನಾಲ್ಕು ಮೊಳದ್ದಾಗಿರುತ್ತವೆ ಎಂದು ನನಗೆ ಯೋಚನೆಯಾಯಿತು.  

`ನಡೀ, ನಮ್ಮ ಮಾಣಿಕ ಚಂದನ ಅಂಗ್ಡೀಗೆ, ಕಣ್ಣ ಗರಾ ಗರಾ ಅಂತಾವ, ನಾನಾ ಛಂದ, ನನಗ ಅಂವಾ ಫಿಫ್ಟಿ ಪರ್ಸೆಂಟ ಡಿಸ್ಕೌಂಟ ಕೊಡ್ತಾನ,.. ಅಲ್ಲ, ನೋಡೆರೆ ನೋಡು, ಸೇರಿದ್ರ ತೊಗೊ, ತೊಗೊಳ್ದಿದ್ರ ನಮ್ಮನ್ನೇನು ಕಟ್ಟಿ ಹಾಕ್ತಾನೇನು' ಎಂದು ಚಿಕ್ಕಮ್ಮ ಮನೆಗೆ ಬಂದು ಹೋಗುವ ನೆಂಟರನ್ನೆಲ್ಲ ಮಾಣಿಕ ಚಂದನ ಸೀರೆ–ಅಂಗಡಿಗೆ ಅಟ್ಟಿಕೊಂಡು ಹೊರಟುಬಿಡುವದು ಸಾಮಾನ್ಯ. ಥರಾವರಿ ಸೀರೆ ನೋಡಿದ ಮಹಿಳೆ ಎಂದಾದರೂ ಅಂಗಡಿಯಿಂದ ಖಾಲಿ ಕೈಯಿಂದ ಬರುವುದು ಸಾಧ್ಯವೆ? ಪ್ರತಿ ಸಲವೂ ಫಿಫ್ಟಿ ಪರ್ಸೆಂಟ ಡಿಸ್ಕೌಂಟಿನ ಒತ್ತಾಯಕ್ಕೆ ಕಟ್ಟುಬೀಳುವ ಮಾಣಿಕಚಂದ ಹೀಗೆ ಅವಸರಕ್ಕೆ ನಾಕು ಮೊಳ ನೆಯ್ದ ಸೀರೆಗಳನ್ನು ಚಿಕ್ಕಮ್ಮನ ಭಂಡಾರಕ್ಕೆ ಸೇರಿಸುತ್ತಿರಬಹುದೆಂಬ ಗುಮಾನಿ ಉಂಟಾಯಿತು.

ಸೀರೆಯನ್ನಳೆಯಲು ಮೀಟರ ಪಟ್ಟಿ ಇರುವಂತೆ ಈ ಸೀರೆ ಪ್ರೀತಿಯನ್ನಳೆಯುವ ಮಾಪನವಾಗಿಯೂ ಬಳಕೆಯಾಗುತ್ತದೆಂಬ ಹೊಸ ಸಂಗತಿಯೊಂದು ಮೊನ್ನೆ ಗೊತ್ತಾಯಿತು. ಅಕ್ಕನ ಮನೆಯ ಗೃಹಪ್ರವೇಶ. ಅಕ್ಕ ತಂಗಿಯರಿಗೆಲ್ಲ ಒಂದೇ ತೆರನಾದ ಸೀರೆಯನ್ನು ಉಡುಗೊರೆಯಾಗಿತ್ತಳು. ಪ್ರತಿಯೊಬ್ಬರಿಗೂ ಅವರದೇ ಆದ ಬಣ್ಣ ವಿನ್ಯಾಸಗಳ ಅಭಿರುಚಿಗಳಿರುತ್ತವಾದ್ದರಿಂದ ಉಡುಗೊರೆಯಾಗಿ ಬಂದ ಸೀರೆಗಳಲ್ಲಿ ಇಷ್ಟವಾಗದಿರುವ ಸೀರೆಗಳು ಮತ್ಯಾರಿಗೊ ಉಡುಗೊರೆಯಾಗಿ ಹೋಗುತ್ತಿರುತ್ತವೆ. ಎಷ್ಟೆಂದರೂ ಒಡಹುಟ್ಟಿದ ಅಕ್ಕ, ಮತ್ಯಾರಿಗೊ ಅದನ್ನು ದಾಟಿಸಲು ಮನಸ್ಸಾಗದೆ, ಅವಳಿಗೇ ಅದು ಉಪಯೋಗವಾಗಲೆಂದು `ನಿನಗೆ ನೂರೆಂಟು ಸಂದರ್ಭಗಳಿರುತ್ತವೆ, ಮತ್ಯಾರಿಗಾದರೂ ಕೊಡು, ನಾನೇನು ಹೊರಗಿನವಳೆ? ಇಷ್ಟವಾದಾಗ ನೀನುಟ್ಟ ಸೀರೆಯನ್ನೇ ನಾನು ಸೆಳೆದುಕೊಂಡಿಲ್ಲವೆ? ಮತ್ಯಾವಾಗಾದರೂ ಕೊಟ್ಟೀಯಂತೆ' ಎಂದು ಅಕ್ಕನಿಗೇ ಆ ಸೀರೆಯನ್ನು ಕೊಟ್ಟೆ. `ಇವಳು ಸಂಸಾರ ಪರಾರಂಭಿಸಿ ಪರದಾಡುವಾಗ ನಾನು ಕೊಟ್ಟ ಸೀರೆಯನ್ನು ಯಾವ ನಸೆ ನಸೆ ಇಲ್ಲದೆ ಉಟ್ಟುಕೊಳ್ಳತ್ತಿದ್ದವಳು, ಈಗ ನಾನು ಪ್ರೀತಿಯಿಂದ ಕೊಟ್ಟ ಸೀರೆಯನ್ನು ಹಿಂತಿರುಗಿಸಿದಳಲ್ಲ' ಎಂದು ಅಕ್ಕ ಬೇಸರಿಸಿಕೊಡಳಂತೆ. ಅಯ್ಯೊ, ಅಕ್ಕ ನನ್ನನ್ನು ಅರ್ಥೈಸಿಕೊಂಡದ್ದು ಇಷ್ಟೇನೇ? ಎಂದು ನಾನು ಖಿನ್ನಳಾದೆ. ಅಬ್ಬಾ ಈ ಸೀರೆಯ ಸಾಮರ್ಥ್ಯವೆ! ನನ್ನ ಬೆರಳು ಹಿಡಿದು ಹೆಜ್ಜೆ ಹಾಕಲು ಕಲಿಸಿ, ಮದುವೆಯಾಗಿ ಪತಿಯ ಮನೆಗೆ ಹೊರಟಾಗ ನನ್ನನ್ನಪ್ಪಿ ಕಣ್ದುಂಬಿ, ನನಗೊಂದು ಸೀರೆ ಕೊಡಬೇಕಾದರೆ ಅತ್ತೆಯಿಂದ ಸಹಸ್ರನಾಮರ್ಚನೆಯನ್ನು ಮಾಡಿಸಿಕೊಂಡು ಕಣ್ಣೀರು ಹಾಕಿದ ಅಕ್ಕನಿಗೇ ನನ್ನಿಂದ ಬೇಸರ ತರಿಸಿ, ಅವ್ವ ಹೋದ ಮೇಲೆ ತಂಗಿಯ ಪಾಲಿಗೆ ಅವ್ವನೇ ಆಗಿರುವ ಅಕ್ಕ ಇಷ್ಟೇನೆ ಎಂದು ಅಳೆಯುವ ಮೀಟರ ಪಟ್ಟಿಯಾಗಿ, ರಾಮ, ರಾಮಾ! ಈ ಸೀರೆ ಎಲ್ಲೆಲ್ಲಿ ಇನ್ನೇನು ಅಳೆದೂ ಸುರಿದು ಇಟ್ಟಿದೆಯೊ! ಇಷ್ಟೆಲ್ಲ ಸಂಭವಿಸುವ ಬದಲು ಬೇಡಾದ ಸೀರೆಗಳೊಂದಿಗೆ ಆ ಸುಡುಗಾಡು ಸೀರೆಯೂ ಬಿದ್ದಿರುತ್ತಿತ್ತು ಕಪಾಟಿನಲ್ಲಿ ಎಂದು ನಾನು ದುಃಖಿಸುತ್ತ ನನಗರಿವಿಲ್ಲದೆ ಪ್ರೀತಿಯ ಅಕ್ಕ ಕೊಟ್ಟ ಸೀರೆಯನ್ನು ಸುಡುಗಾಡು ಮಾಡಿಬಿಟ್ಟಿದ್ದೆ!

ಅಪ್ಪಟ ಉತ್ತರ ಕರ್ನಾಟಕದ ಸ್ನೇಹಳ ಗಂಡ ಪಕ್ಕಾ ಪಂಜಾಬಿ. ಸ್ನೇಹಳ ಅಮ್ಮ ದೀಪಾವಳಿಯ ಉಡುಗೊರೆಯಾಗಿ ಅವಳ ಗಂಡ ಅತ್ತೆಯ ಸಹಿತವಾಗಿ ಎಲ್ಲರಿಗೂ ಉಡುಗೊರೆ ಕೊಟ್ಟು ಕಳುಹಿಸಿದಳು. ಮನೆ ಮುಟ್ಟಿದ ಸ್ನೇಹ ಅಮ್ಮನಿಗೆ ಕಾಲ್ ಮಾಡಿದವಳೇ ಒಂದೇ ಸವನೆ ಅಳುತ್ತ ಅತ್ತೆ ಪ್ರತಿಯಾಗಿ ಕೊಟ್ಟ ಉಡುಗೊರೆಯನ್ನು ಬಣ್ಣಿಸತೊಡಗಿದಳು.

‘ಅತ್ತೆ ವಿಧವೆಯಾಗಲಿ ಎಂದೇ ನೀನು ಬಿಳಿಬಣ್ಣದ ಸೀರೆ ಕೊಟ್ಟೆಯಂತೆ. ನಮ್ಮ ಮನೆ ಹಾಳು ಮಾಡುವುದೇ ನಿನ್ನ ಉದ್ದೇಶವಂತೆ. ನಮ್ಮ ಕಡೆ ಬಿಳಿಯ ಬಣ್ಣ ಅಶುಭವೇನಲ್ಲ,  ಇಲ್ಲಿ ಹಾಗಂತ ಅಮ್ಮನಿಗೆ ಗೊತ್ತಿಲ್ಲವೆಂದು ಎಷ್ಟು ಹೇಳಿದರೂ ಕೇಳಲಿಲ್ಲ....’ ಸ್ನೇಹ ಬಿಕ್ಕುತ್ತಲೇ ಇದ್ದರೂ ಅಮ್ಮನ ಕೈ ಮೊಬೈಲ ಬಿಟ್ಟು ತಲೆ ಹಿಡಿದುಕೊಂಡಿತು. ಅಂಗಡಿಯಲ್ಲಿ ಸೀರೆಗಳನ್ನೆಲ್ಲ ತಗೆಸೀ ತೆಗೆಸೀ, ನೋಡೀ ನೋಡೀ ಕೊನೆಗೂ ಅವಳಾಯ್ಕೆ ಇಷ್ಟವಾದ ಕೊಕ್ಕರೆ ಬಳುಪಿನ ಸೀರೆಯೇ ಆಗಿರುತ್ತಿತ್ತು. ಶುಭ್ರ ಜಾರ್ಜೆಟಸೀರೆಯಲ್ಲಿ ಸುಂದರವಾದ ತಿಳಿಹಸಿರು ರೇಷ್ಮೆಯ ಕಸೂತಿ. ಅದನ್ನು ಬಿಡಲು ಸಾಧ್ಯವಾಗಲಿಲ್ಲ. ತಾನೇ ಇಟ್ಟುಕೊಳ್ಳಬೇಕೆಂದು ಮನಸ್ಸು ಹಂಬಲಿಸಿತು. ಛೇ, ಈ ವಯಸ್ಸಿನಲ್ಲಿಯೂ ಇದೆಂಥ ಮೋಹ! ತ್ಯಾಗದಲ್ಲಿಯೂ ಸಂತೋಷ ಕಾಣಬೇಕೆಂದು ನಿರ್ಧರಿಸಿ ಕೊನೆಗೂ ಮಗಳ ಅತ್ತೆಗದನ್ನು ದಾನ ಮಾಡಿದ್ದಕ್ಕೆ ಪ್ರತಿಫಲವೆ ಇದು! ಅವಳ ಅಂತರಂಗ ಮಮ್ಮಲ ಮರುಗಿತು. ದಾನವೂ ಸತ್ಪಾತ್ರವಾಗಿರಬೇಕೆಂದು ಇದಕ್ಕೇ ಹೇಳುತ್ತಿರಬೇಕೆಂದು ಸ್ನೇಹಳ ಅಮ್ಮ ನಿಟ್ಟುಸಿರು ಬಿಟ್ಟಳು. ಇದಕ್ಕೆ ಧರ್ಮಭೀರು ಬಂಧುಗಳ ಒಗ್ಗರಣೆ ಬೇರೆ. ಆಚಾರ, ಸಂಪ್ರದಾಯವೆಲ್ಲ ಅರ್ಥವಿಲ್ಲದ್ದೆಂದು ಮೆರೆಯುತ್ತಿದ್ದರೆ ಇನ್ನೇನಾಗುತ್ತದೆ? ಈಗ ದೂರದಲ್ಲಿರುವ ಬೀಗರು, ಮುಂದೆ ಮನೆಮಕ್ಕಳೇ ತಿರುಗಿ ಬೀಳುತ್ತಾರೆ, ಎಂದು ಭವಿಷ್ಯ ಬರೆಯತೊಡಗಿದರು. ಸಮಾಜ ಏನೇ ಅನ್ನಲಿ, ನನಗನಿಸಿದಂತೆ ಇರುತ್ತೇನೆಂದರೆ ಹೀಗೆ ಸಂಬಂಧಗಳು ಹಳಸುತ್ತವೆಂದು ಮಡಿವಂತ ಮಾವ ಘೋಷವಾಕ್ಯ ಪ್ರಕಟಿಸಿದ. ಮನೆಯ ಹೊರಗೆ ಊಟ ತಿಂಡಿಗಳಿರಲಿ, ನೀರನ್ನೂ ಕುಡಿಯಲಾರದ ಮಾವ ಸ್ನೇಹಿತರಿರಲಿ, ಅಕ್ಕ ತಂಗಿಯರ, ಅಣ್ಣ ತಮ್ಮಂದಿರ ಮನೆಯ ಮದುವೆ, ಮುಂಜಿ, ಸಾವು ನೋವುಗಳಿಗೂ ಹೋಗದೆ, ಯಾರು ಏನೇ ಅಂದುಕೊಳ್ಳಲಿ, ನನಗೆ ಧರ್ಮಾಚರಣೆ ದೊಡ್ಡದೆಂದು ಸಾರಿಕೊಂಡಿರುವ ಇವನೆ ಹೀಗೆ ಹೇಳತ್ತಿರುವುದು?! `ಲೋಕದ ಡೊಂಕ ನೀವೇಕೆ ತಿದ್ದುವಿರಿ/ ನಿಮ್ಮನಿಮ್ಮ ಮನವ ಸಂತೈಸಿಕೊಳ್ಳಿ' ಎಂದು ತನ್ನ ಮನಸ್ಸನ್ನು ಸಂತೈಸಿಕೊಳ್ಳುತ್ತ ಸ್ನೇಹಳ ಅಮ್ಮ ಎದ್ದು ದಿನಚರಿಗೆ ತೊಡಗಿದಳು.

ಪಕ್ಕದ ಮನೆಯಾಗಿರಲಿ, ಮೈಲಂತರದ ಮೂಲೆಯ ಮನೆಯಾಗಿರಲಿ, ದೂರದ ಪೇಟೆಯಾಗಿರಲಿ, ಸಣ್ಣೂರಿನ ಸಂತೆಯಾಗಿರಲಿ, ದೊಡ್ಡಮ್ಮ ಜರಿಯಂಚಿನ ಹೊಸ ಸೀರೆ ಉಟ್ಟುಕೊಂಡೇ ಹೊರಬೀಳುವದು. ಅಂದೂ ಯಥಾ ಪ್ರಕಾರ ಝಗ ಝಗಿಸುವ ಸೀರೆಯಲ್ಲಿ ಹೊರಬಂದಾಗ `ನೀನು ಹೋಗುತ್ತಿರುವುದು ಸಾವಿನ ಮನೆಗೆ, ಒಳಗ ಹೋಗಿ ಮೊದಲ ಈ ಕಣ್ಣಿಗೆ ಹೊಡಿಯೂ ಸೀರಿ ಬಿಚ್ಚಿ ಹಾಕಿ ಬಾ' ಎಂದು ದೊಡ್ಡಪ್ಪ ಗದರಿದಾಗ, ದೊಡ್ಡಮ್ಮ ಅನುಮಾನಿಸುತ್ತ ನಿಂತರು. `ಒಳಗ ನಡಿ ಅಂದೆ, ನಾ ಹೇಳಿಧಾಂಗ ಮಾಡು.'  `ಸಾವಿನ ಮನ್ಯಾಗೇನೆಲ್ಲಾರು ಬತ್ಲೆ ಕೂಡ್ತಾರೇನು' ಎಂದು ಗೊಣಗುತ್ತ ದೊಡ್ಡಮ್ಮ ಒಳಗೆ ಹೋದರು. ನನಗಂತೂ ನಗೆ ತಡೆಯದಾಯಿತು. ನಿಜವಾಗಿ `ಉಟ್ಟ ಸೀರೆ ಬಿಚ್ಚಿ ಹಾಕಿ ಬಾ' ಎಂದೇ ಆಗಿತ್ತಲ್ಲವೆ ದೊಡ್ಡಪ್ಪನ ಆಜ್ಞೆ? ಹಾಗೆ ನೋಡಿದರೆ ದೊಡ್ಡಮ್ಮನ ಮಾತು ಈ ಲೋಕದ ದೊಡ್ಡ ಸತ್ಯವನ್ನೇ ಹೇಳಿರಲಿಲ್ಲವೆ? ನಾವೆಲ್ಲ ಎಷ್ಟೆಲ್ಲ ಸಾವು ನೋಡುತ್ತ ಬದುಕುತ್ತಿಲ್ಲ? ನಾನಂತೂ ಚಿಕ್ಕಂದಿನಿಂದ ರಾತ್ರಿ ನಿದ್ದೆಯ ನಡುವೆಯೂ ಹತ್ತಿರದ ಸ್ಮಶಾನದ ರಣಹಲಿಗೆ ಕೇಳುತ್ತ ಬೆಳೆದವಳು. ಕಣ್ಣೆದುರೇ ಅಜ್ಜ, ಅಜ್ಜಿ, ತಂದೆ ತಾಯಿಯ ಸಾವು ನೋಡಿದರೂ ಎಂದಾದರೊಂದು ದಿನ ನಾವೂ ಸಾಯುತ್ತೇವೆಂದು ಚಿಂತಿತರಾಗಿ ದಿನಚರಿ ಬಿಟ್ಟು ಕುಳಿತಿದ್ದೇವೆಯೆ? `ನಮ್ಮ ಭಾವ ತೀರಿಕೊಂಡರಲ್ಲಾ, ಗೃಹ ಪ್ರವೇಶ ಮಾಡಬಾರದಂತೆ ಈ ವರುಷ, ಅಜ್ಜ ತೀರಿಕೊಂಡರಲ್ಲಾ, ಈ ವರುಷ ಮದುವೆ ಮಾಡುತ್ತಿಲ್ಲಾ' – ಹೀಗೆ ಪಂಚಾಂಗ, ಪುರೋಹಿತರ ಮಾತಿಗೆ ಕಟ್ಟು ಬಿದ್ದು ಈ ಎಲ್ಲ ದುಃಖಾಚರಣೆಗಳೇ ಹೊರತು ನಿಜವಾದ ದುಃಖದಿಂದಲ್ಲವೆನ್ನುವದಕ್ಕೆ ಇದಕ್ಕಿಂತ ಬೇರೆ ಮಾತು ಬೇಕೆ?  ಇದೇ ದೊಡ್ಡಮ್ಮನ ಮಗಳ ಮದುವೆಯಲ್ಲಿ ನಾನು ಹಸಿರು ಒಡಲಿನಲ್ಲಿ ಹೊಳೆವ ಚಂದ್ರತಾರೆಯರು ಕಣ್ಸೆಳೆವ ಸೀರೆಯುಟ್ಟು ಕೆಲಸ ಹುಡುಕಿಕೊಳ್ಳುತ್ತ ಅತ್ತಿತ್ತ ಓಡಿಯಾಡುತ್ತಿದ್ದೆ. ದೊಡ್ಡಮ್ಮ ಎದುರು ಬಂದವರೇ ``ಅಯ್ಯ ಇದೇನ ಮುಸಲ್ರ ಸೀರಿ ಉಟಗೊಂಡೀಯ, ತಗೀ ಇದನ್ನ, ಬೇಕಾರ ನನ್ನ ಸೀರಿ ಕೊಡ್ತೀನಿ ಉಟಗೊ'' ಎಂದು ರಬ್ಬ ಕೇಸರಿ ಬಣ್ಣದ ಗೇಣಗಲ ಜರೀ ಅಂಚಿನ ಸೀರೆಯನ್ನು ನನ್ನ ಹೆಗಲಿಗೆ ಹಾಕಿ ತಮ್ಮ ಕೈಯಾರೆ ನನ್ನ ಸಿರೆಯ ನಿರಿಗೆಯನ್ನು ಎಳೆದು ಬಿಟ್ಟರು. ಇಡೀ ಪ್ರಕೃತಿಯ ತುಂಬ ಈಡಾಡುವ ಹಸಿರು, ನೀಲಾಕಾಶದಲ್ಲಿ ಹೊಳೆವ ಚಂದ್ರ ತಾರೆಯರು, ಬಾನು ಬುವಿಗಳೆರಡನ್ನೂ  ನೆನಪಿಸುವ ಈ ಸೀರೆಗಿಂತ ಚೆಲುವಾದ್ದಿಲ್ಲವೆಂದು ಹೆಮ್ಮೆಪಟ್ಟಿದ್ದೆನೆ ಹೊರತು ಹೀಗೆ ಜನಾಂಗ ಜಾತಿಗಳನ್ನೂ ಈ ಸೀರೆ ಎತ್ತಿ ತೋರುತ್ತದೆಂದು ನನಗೆ ಗೊತ್ತಿರಲಿಲ್ಲ. ದೊಡ್ಡಮ್ಮನ ಕೇಸರಿ ಸೀರೆ ಉಡತೊಡಗುತ್ತಲೂ ``ಇದೇನ ಬೇಟಿ ಹಿಂದೂಗೆ ಉಟ್ಕೊಂಡಿದೀಯ'' ಎಂದು ಕೇಸರಿ ಸೀರೆಯ ನಿರಿಗೆ ಎಳೆವ ಚಿತ್ರ ಕಣ್ಮುಂದೆ ಸುಳಿಯಿತು. ಮದುವೆಯ ದಿಬ್ಬಣವಿನ್ನು ನನ್ನ ಮನೋರಂಗದಲ್ಲಿ ಕೋಮು ಗಲಭೆಯಾಗುವ ಮೊದಲೇ ವಿಶಾಲಾಕಾಶವನ್ನು ನೆನಪಿಸುವ ನೀಲಿ ಸೀರೆಯನ್ನು ಎತ್ತಿಕೊಂಡೆ. ಯಾರಿಗೆ ಗೊತ್ತು ಅಂಬೇಡ್ಕರರನ್ನು ನೇತಾರರನ್ನಾಗಿಸಿಕೊಂಡ ದಲಿತರು ಅಪ್ಪಿಕೊಂಡಿರುವ ಬಣ್ಣ ನೀಲಿ ಎಂದು ಯರಾದರೂ.....,ಕೆಂಪಂತೂ ಕಮ್ಯುನಿಷ್ಟರ ಕುದಿವ ರಕ್ತದ ಬಣ್ಣ......, ಇದು ಬಗೆ ಹರಿವ ಮಾತಲ್ಲವೆನಿಸಿತು. ಅಲ್ಲಾ ಈ ವಿಶ್ವದಲ್ಲಿ ಕುಂಕುಮ ಭೂಮಿ, ಆಕಾಶದ ನೀಲಿ, ಕಾಡಿನ ಹಸಿರು,  ಮುಳುಗುವ ಸೂರ್ಯನ ಕೆಂಪು, ಹುಣ್ಣಿಮೆಯ ಹಾಲು ಬಣ್ಣ, ಕಾಮನಬಿಲ್ಲಿನ ಏಳೂ ಬಣ್ಣಗಳು, ಈ ಪ್ರಕೃತಿ ದತ್ತ ಬಣ್ಣಗಳನ್ನೆಲ್ಲ ಒಬ್ಬೊಬ್ಬರೂ ಗುತ್ತಿಗೆ ಹಿಡಿದು ಚೌಕಟ್ಟು ಹಾಕಿ ಮೊಳೆ ಹೊಡೆದು ಕೂರಿಸಿದರೆ ಎಲ್ಲವನ್ನೂ ಪ್ರೀತಿಸು ಎನ್ನುವ ಬಡಪಾಯಿಗಳ ಗತಿಯೇನು? ಬಿಡಿ, ದ್ರೌಪದಿಯ ಸೀರೆಯೇ ಮನುಷ್ಯನ ಸಾವಿರ ಮುಖಗಳನ್ನು ತೋರುವ ಮಹಾಭಾರತ ಮೈದಳೆಯಲು ಕಾರಣವಾಯಿತೆಂದರೆ ಮತ್ತಿನ್ನೇನು?

ಇಷ್ಟೆಲ್ಲ ವೈರುಧ್ಯಗಳಿದ್ದರೂ, ಅಮ್ಮನ ಮೈ ಬಳಸಿ ಮೃದುವಾದ ಸೀರೆಯ ಜೋಲಿಗಿಂತ ಅಪ್ಯಾಯಮಾನವಾದ್ದು ಮತ್ತೆಲ್ಲಿದೆ? ಕೆಲಸಕ್ಕೆ ತೆರಳಿದ ಅಮ್ಮನನ್ನು ಕಾಯುತ್ತ ಸೀರೆಯನ್ನಪ್ಪಿ ನಿದ್ರಿಸಿದ ಮಗುವಿನ ಆ ಚಿತ್ರ! ಯಾವ ಭಾವ ಸಾಗರ ತಾನೆ ಅದರಾಳ ಅಳೆದೀತು? ಏನೇ ಅನ್ನಿ ಸೀರೆಯ ಲಾಸ್ಯವೇ ಲಾಸ್ಯ. ಆ ಲಾಲಿತ್ಯವೇ ಲಾಲಿತ್ಯ. ಸೀರೆ ಚಿಮ್ಮುವ ಅ ನಿರಿಗೆ ನವಿಲು ಗರಿ ಬಿಚ್ಚಿದಂತೆ, ಆ ಬೆಡಗು, ಆ ಬಿನ್ನಾಣ, ಆ ಚೆಲುವು ಮತ್ತಾವ ಉಡುಪುಗಳಿಗಿರಲು ಸಾಧ್ಯ? ತಾತ್ಕಾಲಿಕವಾಗಿ ಇದ್ದು ಹೋಗುವ ನೆಂಟರಂತೆ, ಸ್ಕರ್ಟು, ಮಿಡಿ, ಮ್ಯಾಕ್ಸಿ, ಚೂಡಿ, ಪಂಜಾಬಿ ಇತ್ಯಾದಿಗಳೆಲ್ಲ ಆಗೀಗ ನಿತ್ಯದ ಉಡುಪಾಗಿ ಕಾಣಿಸಿಕೊಂಡು ಕಾಣೆಯಾಗುತ್ತಿವೆ. ನೆಂಟರು ನಾಲ್ಕು ದಿನವಿದ್ದರೆ ಚೆಂದ, ಐದನೆಯ ದಿನ ಹಳಸಲು ಅಲ್ಲವೆ?. ಆದರೆ  ಅಂದಿನಿಂದಿಗೂ ಮದುವೆ, ಆರತಕ್ಷತೆ, ಸೀಮಂತ, ನಾಮಕರಣ, ಯಾವ ಸಮಾರಂಭದಲ್ಲಿಯೂ ಪಂಚವಾದ್ಯದೊಡನೆ ಶೃತಿ ಹಿಡಿವ ಸಂಗೀತವಾಗಿ ಸೀರೆಯ ಸರಭರ ಝೇಂಕರಿಸುತ್ತಲೇ ಇದೆ.

ಹೇಳಲೇ ಬೇಕಾದ ಇನ್ನೊಂದು ಅಂತರಂಗ- ನಾನೊಂದು ನಾಟಕ ಬರೆದು ನಿರ್ದೇಶನ ಮಾಡಿದ ಸಂದರ್ಭದಲ್ಲಿ, ಮೈಸೂರು ಪೇಟವಿಟ್ಟು, ಮುತ್ತಿನ ಹಾರ ಹಾಕಿ, ಶಾಲೊಂದನ್ನು ಹೊದಿಸಿದರು. ಯಾರುಯಾರೊ ಹೀಗೆ ಸನ್ಮಾನಿತರಾದಾಗ ನಾನೂ ಹೀಗೊಮ್ಮೆ ಸನ್ಮಾನಿತಳಾಗಬಾರದೆ ಎಂದು ಹಲುಬುತ್ತಿದ್ದವಳು, ಈ ಗಂಡಸರ ಟೋಪಿ, ಶಾಲುಗಳ ಬದಲು ಒಂದು ಸೀರೆಯನ್ನಾದರೂ ಹೊದಿಸಿದ್ದರೆ ಉಟ್ಟುಕೊಂಡು ಸಂತೋಷ ಪಡುತ್ತಿದ್ದೆ ಎಂದು ಹಳಹಳಿಸಿದೆ, ಇದಲ್ಲವೆ ಸೀರೆಯ ಅನನ್ಯತೆ?

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !