ಸೋಮವಾರ, ಆಗಸ್ಟ್ 26, 2019
20 °C
ಬ್ಯಾಂಕ್‌ ಖಾತೆಗೆ ಆಧಾರ್‌ ಸಂಪರ್ಕ ಕಲ್ಪಿಸದೆ ತೊಂದರೆ

2.67 ಲಕ್ಷ ಮಂದಿ ವಿದ್ಯಾರ್ಥಿವೇತನ ವಂಚಿತ?

Published:
Updated:

ಬೆಂಗಳೂರು: ಬ್ಯಾಂಕ್‌ ಖಾತೆಗೆ ಆಧಾರ್‌ ಸಂಪರ್ಕ ಜೋಡಿಸಿಲ್ಲ ಎಂಬ ಕಾರಣಕ್ಕೆ ಈ ಬಾರಿಯೂ ಲಕ್ಷಾಂತರ ವಿದ್ಯಾರ್ಥಿಗಳು ಸರ್ಕಾರದಿಂದ ಸಿಗುವ ವಿದ್ಯಾರ್ಥಿವೇತನದಿಂದ ವಂಚಿತರಾಗುವ ಸಾಧ್ಯತೆ ಇದೆ.

ಕಳೆದ ವರ್ಷ ಇದೇ ಕಾರಣಕ್ಕೆ 4.5 ಲಕ್ಷ ಮಕ್ಕಳು ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನದಿಂದ ವಂಚಿತರಾಗಿದ್ದರು. ಈ ವರ್ಷ 2.67 ಲಕ್ಷ ಮಕ್ಕಳ ಬ್ಯಾಂಕ್‌ ಖಾತೆಗಳಿಗೆ ಆಧಾರ್‌ ಸಂಪರ್ಕವನ್ನು ಜೋಡಿಸಿಲ್ಲ. ಅವರಿಗೆ ಈ ಬಾರಿ ವಿದ್ಯಾರ್ಥಿವೇತನ ಸಿಗದೆ ಇರುವ ಸಾಧ್ಯತೆ ಕಂಡುಬಂದಿದೆ.

ಕಳೆದ ವರ್ಷದ ಸೆಪ್ಟೆಂಬರ್‌ನಿಂದೀಚೆಗೆ ವಿದ್ಯಾರ್ಥಿಗಳ ವಿದ್ಯಾರ್ಥಿವೇತನವನ್ನು ಆಧಾರ್‌ ಆಧರಿತ ರಾಜ್ಯ ವಿದ್ಯಾರ್ಥಿವೇತನ ಪೋರ್ಟಲ್‌ (ಎಸ್‌ಎಸ್‌ಪಿ) ಮೂಲಕ ಕೊಡುವ ವ್ಯವಸ್ಥೆ ಮಾಡಲಾಗಿದೆ. ಏಕಗವಾಕ್ಷಿ, ಕಾಗದರಹಿತ ಅರ್ಜಿ ನಮೂನೆಯ ಮೂಲಕ ಈ ವ್ಯವಸ್ಥೆ ಜಾರಿಗೆ ಬರಬೇಕು ಎಂಬ ಉದ್ದೇಶ ಇದರ ಹಿಂದೆ ಇತ್ತು. ಫಲಾನುಭವಿಗೆ ನೇರವಾಗಿ ಫಲ ಸಿಗಬೇಕು ಎಂಬ ಇನ್ನೊಂದು ಉದ್ದೇಶವೂ ಇತ್ತು.

ಈ ಬಾರಿ ಆಧಾರ್‌ ಸಂಪರ್ಕ ದೊರಕದ ವಿದ್ಯಾರ್ಥಿಗಳಲ್ಲಿ ಉತ್ತರ ಕರ್ನಾಟಕ ಭಾಗದವರೇ ಅಧಿಕ ಎಂಬುದು ದಾಖಲೆಗಳಿಂದ ತಿಳಿದುಬಂದಿದೆ.

‘42 ಲಕ್ಷ ವಿದ್ಯಾರ್ಥಿಗಳು ತಮ್ಮ ಬ್ಯಾಂಕ್‌ ಖಾತೆಗಳಿಗೆ ಆಧಾರ್‌ ಜೋಡಣೆ ಮಾಡಿಸಿದ್ದಾರೆ ಎಂದಾದರೆ ಉಳಿದವರಿಗೆ
ಏನು ತೊಂದರೆ ಆಗಿದೆ? ಅರ್ಹತೆ ಗಳಿಸಿದ ವಿದ್ಯಾರ್ಥಿಗಳ ಪಟ್ಟಿ ನಮ್ಮ ಬಳಿ ಇದೆ. ಆದರೆ ಆಧಾರ್‌ ಜೋಡಣೆ ಮಾಡದ ಕಾರಣ ಅವರಿಗೆ ವಿದ್ಯಾರ್ಥಿವೇತನ ನೀಡುವುದು ಸಾಧ್ಯವಾಗುವುದಿಲ್ಲ’ ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಇ ಆಡಳಿತ) ರಾಜೀವ್‌ ಚಾವ್ಲಾ ಹೇಳಿದರು.

ಇನ್ಫೊಸಿಸ್‌ ಪ್ರತಿಷ್ಠಾನದ ನೆರವಿನೊಂದಿಗೆ ಎಸ್‌ಎಸ್‌ಪಿಯನ್ನು ವಿದ್ಯಾರ್ಥಿಗಳ ಸಾಧನೆ ಪರಿಶೀಲನಾ ವ್ಯವಸ್ಥೆಯೊಂದಿಗೆ (ಎಸ್‌ಎಟಿಎಸ್‌) ಜೋಡಿಸಲಾಗಿದೆ. 1.20 ಕೋಟಿ ಶಾಲಾ ವಿದ್ಯಾರ್ಥಿಗಳ ಮಾಹಿತಿ ಇಲ್ಲಿ ಲಭ್ಯ ಇದ್ದು, ವಿಶಿಷ್ಟ ಗುರುತಿನ ಸಂಖ್ಯೆಯಿಂದಾಗಿ ಮೆಟ್ರಿಕ್‌
ಪೂರ್ವ ವಿದ್ಯಾರ್ಥಿವೇತನಕ್ಕೆ ಅರ್ಹರಾಗುವವರ ಪಟ್ಟಿಯೂ ನಿಖರವಾಗಿ ಗೊತ್ತಾಗುತ್ತದೆ.

Post Comments (+)