ಶಾಲೆ ಉಳಿಸಿದ ‘ಫೇಸ್‌ಬುಕ್‌‘

ಬುಧವಾರ, ಮೇ 22, 2019
29 °C
ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದ ನಂಜಯ್ಯಗಾರಹಳ್ಳಿ ಸರ್ಕಾರಿ ಶಾಲೆ

ಶಾಲೆ ಉಳಿಸಿದ ‘ಫೇಸ್‌ಬುಕ್‌‘

Published:
Updated:
Prajavani

ಅದು 2012–13ರ ಸಮಯ. ಆಗ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ನಗರಗೆರೆ ಹೋಬಳಿಯ ನಂಜಯ್ಯಗಾರಹಳ್ಳಿ ಆಸುಪಾಸಿನಲ್ಲಿ ಎರಡು ಖಾಸಗಿ ಶಾಲೆಗಳು ಆರಂಭವಾದವು. ಖಾಸಗಿ ಶಾಲೆಗಳು ಶುರುವಾಗಿವೆ ಎಂದ ಮೇಲೆ ಕೇಳಬೇಕೇ? ಸರ್ಕಾರಿ ಶಾಲೆಗೆ ಸೇರುವ ಮಕ್ಕಳೆಲ್ಲ ಯೂನಿಫಾರಂ ತೊಟ್ಟು, ಬೆಲ್ಟು, ಟೈ ಕಟ್ಟಿ, ಬೂಟು ತೊಟ್ಟು, ಬೆನ್ನಿಗೆ ಬ್ಯಾಗ್ ಹಾಕ್ಕೊಂಡು ಲಂಚ್‌ ಬ್ಯಾಗ್ ಹಿಡಿದು ಶಾಲೆಯ ಬಸ್ ಏರಿ ಖಾಸಗಿ ಶಾಲೆಗಳತ್ತ ಹೊರಟರು. ಪರಿಣಾಮ ಸುತ್ತಮುತ್ತಲಿನ ಹಳ್ಳಿಗಳಲ್ಲಿದ್ದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕುಸಿಯಿತು. ಇದೇ ಕಾರಣಕ್ಕೆ ಕೋಟಪ್ಪನಹಳ್ಳಿ, ಕಮತಾರ್ಲಹಳ್ಳಿ ಸರ್ಕಾರಿ ಶಾಲೆಗಳು ಬಂದ್‌ ಆದವು. ಮುಂದಿನ ಸರದಿ ನಂಜಯ್ಯಗಾರನಹಳ್ಳಿಯ ಶಾಲೆಯದ್ದಾಯಿತು!

ಇದೇ ವೇಳೆ ಆ ಶಾಲೆಯ ಶಿಕ್ಷಕ ಸಮೂಹಕ್ಕೆ ಒಂದೆಡೆ ‘ಈ ಶಾಲೆಯೂ ಮುಚ್ಚಿಬಿಟ್ಟರೆ’ ಎಂಬ ಆತಂಕ. ಇನ್ನೊಂದೆಡೆ ‘ಏನಾದರೂ ಮಾಡಿ ಶಾಲೆಯನ್ನು ಉಳಿಸಿಕೊಳ್ಳಬೇಕು’ ಎಂಬ ತುಡಿತ. ಮೊದಲ ಹಂತವಾಗಿ ಸಹ ಶಿಕ್ಷಕ ನಾಗೇಶ್ ಅವರು ತಮ್ಮ ಶಾಲೆಯ ಚಟುವಟಿಕೆಗಳು, ಮಕ್ಕಳ ಕಲಿಕೆಯ ಪರಿ, ಶಾಲೆ ಎದುರಿಸುತ್ತಿರುವ ಸಮಸ್ಯೆಗಳನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡರು. ‘ಅನಗತ್ಯ ವಿಷಯಗಳೇ ವೈರಲ್‌ ಆಗುವ ಈ ಕಾಲದಲ್ಲಿ ಈ ಶಾಲೆಯ ವಿಷಯವನ್ನು ಯಾರು ನೋಡುತ್ತಾರೆ’ ಎಂದುಕೊಳ್ಳುತ್ತಿರುವಾಗಲೇ, ನಂಜಯ್ಯಗಾರನಹಳ್ಳಿ ಸರ್ಕಾರಿ ಶಾಲೆ ಕಥೆ ಅನೇಕ ‘ಮುಖಪುಟ ಗೆಳೆಯರ’ ಹೃದಯ ತಟ್ಟಿತು.

ಈ ಶಾಲೆಯ ಶಿಕ್ಷಕರ ಉತ್ಸಾಹ ಗಮನಿಸಿದ ಫೇಸ್‌ಬುಕ್‌ ಗೆಳೆಯ ದಕ್ಷಿಣಕನ್ನಡ ಜಿಲ್ಲೆಯ ಸುಳ್ಯದ ಶಿವಪ್ರಸಾದ್ ಮಕ್ಕಳಿಗೆ ಉಚಿತವಾಗಿ ಟೈ ಮತ್ತು ಬೆಲ್ಟ್ ಕೊಡಿಸಿ ನೆರವಿನ ನಾಂದಿ ಹಾಡಿದರು. ಮುಂದೆ ರಾಜೇಂದ್ರ ಬಿ. ಶೆಟ್ಟಿ ಎಂಬುವವರು ನಂಜಯ್ಯಗಾರನಹಳ್ಳಿಗೆ ಬಂದು, ಶಾಲೆಗೆ ಭೇಟಿ ಕೊಟ್ಟು ಮಕ್ಕಳಿಗೆ ನೋಟ್ ಪುಸ್ತಕಗಳನ್ನು ವಿತರಿಸಿದರು. ಕೆನರಾಬ್ಯಾಂಕ್‌ನ ಕ್ಯಾನ್‌ಫಿನ್ ಹೋಮ್ಸ್ ಸಂಸ್ಥೆಯ ಮಧುಶೆಟ್ಟಿ, ಮಕ್ಕಳಿಗೆ ಕುಳಿತುಕೊಳ್ಳಲು ಡೆಸ್ಕ್‌, ದೃಶ್ಯ ಮಾಧ್ಯಮದ ಮೂಲಕ ಕಲಿಕೆಗಾಗಿ ಪ್ರೊಜೆಕ್ಟರ್ ಕೊಡಿಸಿದರು. ಅದನ್ನು ಬಳಸಲು ವಿದ್ಯುತ್ ಅಡಚಣೆಯಾಗಬಾರದು ಎಂದು ಯುಪಿಎಸ್ – ಬ್ಯಾಟರಿ ವ್ಯವಸ್ಥೆ ಮಾಡಿಕೊಟ್ಟರು.

ನೆರವು ನೀಡುವವರ ಪರಿಧಿ ದೇಶದ ಗಡಿ ದಾಟಿ ಹೋಯಿತು. ಹೊರದೇಶದಲ್ಲಿರುವ ಫೇಸ್‌ಬುಕ್‌ ಗೆಳೆಯರಾದ ಯೋಗೇಶ ಕಾಸರಗೋಡು, ರೇಣುಕಾ ನಂಬಿಯಾರ್‌, ಬೆಂಗಳೂರಿನ ಬಿ.ವಿ.ಮಂಜುಳಾ, ಪದ್ಮಾ, ನಾಗಮ್ಮ, ಚನ್ನರಾಯಪಟ್ಟಣದ ಸುನೀಲ, ಕೊರಟಗೆರೆಯ ಸ್ನೇಹಾ ಕೃಷ್ಣ, ಗುಡಿಬಂಡೆಯ ಜಿ.ವಿ.ವಿಶ್ವನಾಥ, ನರಸಿಂಹಮೂರ್ತಿ, ಗುರು, ಪೂರ್ಣಿಮಾ, ನರೇಂದ್ರಬಾಬು ಪ್ರಶಾಂತ, ರಾಘವೇಂದ್ರ ಜೋಶಿ, ಬಾಬಾಜಾನ್, ಸಂತೋಷಕುಮಾರ್ ಎಲ್‌.ಎಂ, ರಾಜೇಶ್ವರಿ ಬೆಳಗಾಂ.. ಹೀಗೆ ಸರದಿ ರೀತಿಯಲ್ಲಿ ಒಬ್ಬೊಬ್ಬರೂ ಒಂದೊಂದು ಸೌಲಭ್ಯ ಕಲ್ಪಿಸಿದರು.

ಸೇವಾ ಹೃದಯ ದೀವಿಗೆ ಮತ್ತು ಹ್ಯುಮ್ಯಾನಿಟಿ ಸಂಸ್ಥೆ ಕೂಡ ಶಾಲೆಯ ಅಭಿವೃದ್ಧಿಗೆ ಸಹಾಯಾಸ್ತ ಚಾಚಿತು. ಶಾಲೆಯ ಅಭಿವೃದ್ಧಿ ಕಂಡ ಗ್ರಾಮ ಪಂಚಾಯ್ತಿ, ತಾಲ್ಲೂಕು ಮತ್ತು ಜಿಲ್ಲಾ ಪಂಚಾಯ್ತಿ ಸದಸ್ಯರು, ಜನಪ್ರತಿನಿಧಿಗಳು, ಊರಿನ ಮುಖಂಡರು ತಾವು ಕೈ ಜೋಡಿಸಲು ಮುಂದಾದರು. ಶಾಲೆಯ ಶೌಚಾಲಯ ನವೀಕರಣಕ್ಕೆ ಸಂಸದರ ನಿಧಿಯಿಂದ ₹1 ಲಕ್ಷ ಅನುದಾನ ಸಿಕ್ಕಿತ್ತು. ಕನ್ನಡ ಅಭಿವೃದ್ಧಿ ಪ್ರಾಧಿಕಾರ ₹ 20 ಸಾವಿರ ವೆಚ್ಚದಲ್ಲಿ ಗ್ರೀನ್ ಬೋರ್ಡ್‌ ವ್ಯವಸ್ಥೆ ಮಾಡಿತು. ಆಗ ಮುಚ್ಚಿ ಹೋಗುವ ಭೀತಿಯಲ್ಲಿದ್ದ ನಂಜಯ್ಯಗಾರನಹಳ್ಳಿ ಶಾಲೆಯಲ್ಲಿ ಈಗ ಮಕ್ಕಳ ಸಂಖ್ಯೆ ಏರಿದೆ. ಈಗ ಸುತ್ತಮುತ್ತಲಿನ ಗ್ರಾಮಗಳಾದ ಕೋಟಪ್ಪನಹಳ್ಳಿ, ಕಮತಾರ್ಲಹಳ್ಳಿ, ಬಂದಾರ್ಲಹಳ್ಳಿ, ನಂಜಯ್ಯಗಾರನಹಳ್ಳಿ, ನಗರಗೆರೆತಯಂತಹ ಹಳ್ಳಿಗಳಿಂದ ಮಕ್ಕಳು ಶಾಲೆಗೆ ಬರುತ್ತಿದ್ದಾರೆ. ಈಗ ಶಾಲೆಯಲ್ಲಿ ಕಲಿಯುವ ಮಕ್ಕಳ ಸಂಖ್ಯೆ 105ಕ್ಕೆ ಏರಿದೆ. ಅದರಲ್ಲಿ 51 ಬಾಲಕರು. 54 ಬಾಲಕಿಯರು.

‘ಮಕ್ಕಳ ಮನೆ’ ಪರಿಕಲ್ಪನೆ

ಸರ್ಕಾರಿ ಶಾಲೆ ಉಳಿಯಬೇಕೆಂದರೆ, ಒಂದನೇ ತರಗತಿಯಿಂದಲೇ ಮಕ್ಕಳ ಸಂಖ್ಯೆ ಹೆಚ್ಚಾಗಬೇಕು. ಆದರೆ, ಬಹುತೇಕ ಹಳ್ಳಿಗಳಲ್ಲಿ ಈಗ ಮಕ್ಕಳನ್ನು ಕಾನ್ವೆಂಟ್‌ನಲ್ಲಿ ಪ್ರೀ ನರ್ಸರಿಗೆ (ಯುಕೆಜಿ, ಎಲ್‌ಕೆಜಿ) ಸೇರಿಸುತ್ತಾರೆ. ಆ ಮಕ್ಕಳು ಮುಂದೆ ಒಂದನೇ ತರಗತಿಯಿಂದ ಖಾಸಗಿ ಶಾಲೆಯಲ್ಲೇ ವಿದ್ಯಾಭ್ಯಾಸ ಮುಂದುವರಿಸುತ್ತಾರೆ.

‘ನಮ್ಮ ಶಾಲೆಯಲ್ಲಿ ಹೀಗಾಗಬಾರದು’ ಎಂದು ಯೋಚಿಸಿದ ಶಿಕ್ಷಕರು, ಶಾಲೆಯ ಆವರಣದಲ್ಲೇ ಎಲ್‌ಕೆಜಿ ಮತ್ತು ಯುಕೆಜಿ ಮಾದರಿಯ ‘ಮಕ್ಕಳ ಮನೆ’ ಎಂಬ ‘ಪ್ರೀ ನರ್ಸರಿ’ ಆರಂಭಿಸಿದರು. ಮಕ್ಕಳಿಗೆ ಆಟ–ಪಾಠ ಎಲ್ಲವನ್ನೂ ನರ್ಸರಿ ಮಾದರಿಯಲ್ಲೇ ನೀಡಲಾರಂಭಿಸಿದರು. ಹೀಗಾಗಿ ಇಲ್ಲಿ ಕಲಿತ ಮಕ್ಕಳು ಮುಂದೆ, ಇದೇ ಶಾಲೆಯಲ್ಲೇ 1ನೇ ತರಗತಿಗೆ ಸೇರುತ್ತಿದ್ದಾರೆ. ಈಗ ‘ಮಕ್ಕಳ ಮನೆ’ಯಲ್ಲಿ 20 ಮಕ್ಕಳಿದ್ದಾರೆ (10 ಬಾಲಕಿಯರು, 10 ಬಾಲಕರು). ಈ ಮಕ್ಕಳಿಗೆ ಎರಡು ಮತ್ತು ನಾಲ್ಕನೇ ಶನಿವಾರ ‘ನೋ ಬ್ಯಾಗ್‌ ಡೇ’. ಅಂದರೆ ಬ್ಯಾಗ್‌ –ಪುಸ್ತಕ ತರುವುದಿಲ್ಲ. ಅಂದು ಅವರು ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಾರೆ.

ಮಕ್ಕಳ ಮನೆಯಿಂದಾಗಿ, ಈ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗಿಲ್ಲ. ಹಾಗೆಯೇ, ಹೊಸದಾಗಿ ಶಾಲೆಗೆ ಮಕ್ಕಳನ್ನು ಸೇರಿಸಲು ಪೋಷಕರು ಹಿಂಜರಿಯುತ್ತಿಲ್ಲ. ‘ಸರ್ಕಾರಿ ಶಾಲೆ ಬಗ್ಗೆ ಹಲವು ಪೋಷಕರಲ್ಲಿ ಸೌಕರ್ಯಗಳ ಕೊರತೆ ಮತ್ತು ಉತ್ತಮ ಶಿಕ್ಷಣ ಸಿಗುವುದಿಲ್ಲ ಎಂಬ ಭಾವನೆ ಇದೆ. ಸೌಕರ್ಯ ಕೊಟ್ಟು, ಉತ್ತಮ ಶಿಕ್ಷಣ ನೀಡಿದರೆ ಎಲ್ಲರೂ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುತ್ತಾರೆ. ಇದಕ್ಕೆ ನಮ್ಮ ಶಾಲೆಯೇ ಸಾಕ್ಷಿ’ ಎನ್ನುತ್ತಾರೆ  ಸಹ ಶಿಕ್ಷಕ ಟಿ.ಕೆ.ನಾಗೇಶ್.

ನಾಗೇಶ್ ಅವರು ಶಾಲೆ ಉಳಿಸಿಕೊಳ್ಳಲು ತೋರಿಸಿದ ಆಸಕ್ತಿಗೆ ಶಾಲೆಯ ಮುಖ್ಯಶಿಕ್ಷಕಿ ವಿ.ಜಯಂತಿ, ಸಹಶಿಕ್ಷಕರಾದ ಆರ್.ನಾರಾಯಣಪ್ಪ ಜಿ.ಉಮಾ, ಕೆ.ವಿ.ವೆಂಕಟರತ್ನಮ್ಮ ನೀರೆರೆದಿದ್ದಾರೆ. ಇದರೊಂದಿಗೆ ‘ಮಕ್ಕಳ ಮನೆ’ಯ ಶಿಕ್ಷಕಿ ಶೈಲಜಾ ಅವರು ಸಾಥ್ ನೀಡಿದ್ದಾರೆ. ಎಲ್ಲರ ಪ್ರಯತ್ನದಿಂದಾಗಿಯೇ ನಂಜಯ್ಯಗಾರನಹಳ್ಳಿಯ ಸರ್ಕಾರಿ ಶಾಲೆ, ಸಹಶಿಕ್ಷಕಿ ವೆಂಕಟರತ್ನಮ್ಮ ಅವರ ವರ್ಲಿ ಕಲೆಯ ಅಲಂಕಾರದೊಂದಿಗೆ ಕಂಗೊಳಿಸುತ್ತಿದೆ. ಈ ಸರ್ಕಾರಿ ಶಾಲೆ ಕುರಿತ ಹೆಚ್ಚಿನ ಮಾಹಿತಿಗಾಗಿ ಟಿ.ಕೆ.ನಾಗೇಶ್‌ ಅವರ ದೂರವಾಣಿ
ಸಂಖ್ಯೆ: 97424 49664  

ನಟ ಪ್ರಕಾಶ್ ರೈ ನೆರವು

2018ರ ಮೇ ತಿಂಗಳಲ್ಲಿ ‘ಸಮಾನ ಶಿಕ್ಷಣಕ್ಕಾಗಿ ಜನಾಂದೋಲನ’ದ ಎಚ್.ವಿ. ವಾಸು ಹಾಗೂ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಎಚ್‌.ವಿ.ಮಂಜುನಾಥ್ ಅವರೊಂದಿಗೆ ನಟ ಪ್ರಕಾಶ್ ರೈ ಒಮ್ಮೆ ನಂಜಯ್ಯಗಾರನಹಳ್ಳಿಯ ಈ ಶಾಲೆಗೆ ಭೇಟಿ ನೀಡಿದ್ದರು.

ಶಾಲೆಯಲ್ಲಿರುವ ಮಕ್ಕಳ ಉತ್ಸಾಹ, ಶಿಕ್ಷಕರ ಆಸಕ್ತಿ ಗಮನಿಸಿ, ತಮ್ಮ ಪ್ರತಿಷ್ಠಾನದ ಮೂಲಕ ಅದೇ ವರ್ಷ ಸೆಪ್ಟೆಂಬರ್‌ನಿಂದ ರಂಗಶಿಕ್ಷಕಿ ಅಮರಾವತಿ ಅವರನ್ನು ಶಾಲೆಗೆ ನಿಯೋಜಿಸಿದರು.

ಈ ನಾಲ್ಕು ತಿಂಗಳ ಅವಧಿಯಲ್ಲಿ ಅಮರಾವತಿಯವರು ಮಕ್ಕಳಿಗೆ ರಂಗ ತರಬೇತಿ ನೀಡಿದರು. ಇದರ ಫಲವಾಗಿ ಈ ಶಾಲೆ ಮಕ್ಕಳು ಮಂಡ್ಯದಲ್ಲಿ ನಡೆದ ಸರ್ಕಾರಿ ಶಾಲೆಗಳ ನಾಟಕೋತ್ಸವದಲ್ಲಿ ಸಾಹಿತಿ ಕೋಟಗಾನಹಳ್ಳಿ ರಾಮಯ್ಯ ರಚಿತ ‘ನಾಯಿ ತಿಪ್ಪ’ ನಾಟಕ ಪ್ರದರ್ಶಿಸಿದರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 15

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !