ಶಾಲಾ ಮಕ್ಕಳ ಸುರಕ್ಷತೆಗೆ ಕಡ್ಡಾಯ ನಿಯಮಗಳು

ಮಂಗಳವಾರ, ಮಾರ್ಚ್ 26, 2019
33 °C
ಮಕ್ಕಳ ಸುರಕ್ಷತೆ ಶಾಲೆಗಳ ಆದ್ಯ ಕರ್ತವ್ಯ

ಶಾಲಾ ಮಕ್ಕಳ ಸುರಕ್ಷತೆಗೆ ಕಡ್ಡಾಯ ನಿಯಮಗಳು

Published:
Updated:

ಬೆಂಗಳೂರು: ರಾಜ್ಯದಲ್ಲಿ 1 ರಿಂದ ಪ್ರೌಢ ಶಿಕ್ಷಣ ಹಂತದವರೆಗಿನ ಶಾಲಾ ಮಕ್ಕಳ ಸುರಕ್ಷತೆ ಮತ್ತು ಭದ್ರತೆಗಾಗಿ ರಾಜ್ಯ ಸರ್ಕಾರ ಕಠಿಣ ಕಾನೂನು ರೂಪಿಸಿದ್ದು, ಈ ಸಂಬಂಧ ಅಧಿಸೂಚನೆ ಹೊರಡಿಸಿದೆ.

ರಾಜ್ಯ ಸರ್ಕಾರವು ಪೋಷಕರ ಸಲಹೆ, ಸೂಚನೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅದರ ಅನ್ವಯ ಅಧಿಸೂಚನೆ ಅಂತಿಮಗೊಳಿಸಿದೆ. ಮಕ್ಕಳ ರಕ್ಷಣೆಗಾಗಿ ಹಲವು ಕಡ್ಡಾಯ ಕ್ರಮಗಳನ್ನು ಸೂಚಿಸಿದೆ.

ಮೂಲಸೌಕರ್ಯ, ಆರೋಗ್ಯ ಮತ್ತು ಸಾರಿಗೆ, ವೈಯಕ್ತಿಕ ಮತ್ತು ಲೈಂಗಿಕ ಸುರಕ್ಷತೆ, ಸಾಮಾಜಿಕ ಮತ್ತು ಭಾವನಾತ್ಮಕ ಸುರಕ್ಷತೆ, ಸೈಬರ್ ಸುರಕ್ಷತೆ ಮತ್ತು ತುರ್ತು ಸನ್ನದ್ಧತೆ, ದೈಹಿಕ ಸುರಕ್ಷತೆಗೆ ಮಹತ್ವ ನೀಡಲಾಗಿದೆ. ಎಲ್ಲ ಶಾಲೆಯೂ ಕಡ್ಡಾಯವಾಗಿ ಪಾಲಿಸಬೇಕಾದ ಹೊಸ ನಿಯಮಗಳ ಪ್ರಮುಖ ಅಂಶಗಳು ಈ ಕೆಳಕಂಡಂತಿವೆ.

ಮೂಲಸೌಕರ್ಯ, ಆರೋಗ್ಯ ಸಾರಿಗೆ: ಪ್ರತಿ ಶೈಕ್ಷಣಿಕ ಸಂಸ್ಥೆಯೂ ಕಾಂಪೌಂಡ್‌ ಗೋಡೆ ಹೊಂದಿರಬೇಕು. ಇಲ್ಲವೇ ಬೇಲಿಯನ್ನು ಹೊಂದಿರಬೇಕು. ಸಂಸ್ಥೆಯ ಆವರಣ ಮತ್ತು ತರಗತಿಗಳಲ್ಲಿ ನಿಗದಿಪಡಿಸಿದ ಸ್ಥಳಗಳಲ್ಲಿ ಬಾಗಿಲುಗಳು ಮತ್ತು ಕಿಟಕಿ ಇರಬೇಕು. ಗಾಳಿ– ಬೆಳಕು ಚೆನ್ನಾಗಿ ಇರಬೇಕು.

ಎಲ್ಲ ವಿದ್ಯುಚ್ಛಕ್ತಿ ವೈರಿಂಗ್‌ಗಳನ್ನು ಮರೆ ಮಾಚುವಂತೆ ಅಥವಾ ವಿದ್ಯುತ್‌ ಶಾಖ ತಾಕದಂತೆ ಅಳವಡಿಸಬೇಕು. ಬೆಂಚುಗಳು, ಡೆಸ್ಕ್‌ಗಳು ಗಟ್ಟಿಮುಟ್ಟಾಗಿರಬೇಕು. ಶಾಲೆಗಳಲ್ಲಿರುವ ಚರಂಡಿ, ಸಂಪುಗಳು, ಕೊಳವೆ ಬಾವಿಗಳು ಮತ್ತು ಎತ್ತರದ ಟ್ಯಾಂಕ್‌ಗಳನ್ನು ಮುಚ್ಚಿರಬೇಕು.

ಶಾಲೆಯಲ್ಲಿ ಬಾಲಕರು ಮತ್ತು ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯಗಳಿರಬೇಕು. ಶೌಚಾಲಯಗಳು ನೈರ್ಮಲ್ಯವಾಗಿ ಸುಸ್ಥಿತಿಯಲ್ಲಿರಬೇಕು.

ಶಾಲೆಗಳ ಸಮೀಪ ಅಶ್ಲೀಲ ವಸ್ತುಗಳನ್ನು ಪ್ರದರ್ಶಿಸುವುದು ಅಥವಾ ಮಾದಕ ವಸ್ತುಗಳ ಮಾರಾಟ ಮಾಡುವುದು ಕಂಡು ಬಂದಲ್ಲಿ ಶಿಕ್ಷಣ ಇಲಾಖೆಗೆ ವರದಿ ನೀಡುವುದು ಕಡ್ಡಾಯ.

ಆರೋಗ್ಯ: ಶಾಲೆಯಲ್ಲಿ ತುರ್ತು ಸನ್ನಿವೇಶಗಳಿಗೆ ಅಗತ್ಯವಾದ ಸಾಧನಗಳನ್ನು ಒಳಗೊಂಡ ಪ್ರಥಮ ಚಿಕಿತ್ಸಾ ಕಿಟ್‌ ಇರಬೇಕು. ಹತ್ತಿರ ಲಭ್ಯವಿರುವ ವೈದ್ಯರು, ಆಸ್ಪತ್ರೆ, ಅಂಬುಲೆನ್ಸ್‌ ದೂರವಾಣಿ ಸಂಖ್ಯೆಯನ್ನು ಶಾಲೆಯಲ್ಲಿ ದೊಡ್ಡದಾಗಿ ಪ್ರದರ್ಶಿಸಬೇಕು.

ಜಂಕ್‌ಫುಡ್‌ಗಳಿಗೆ ಪರ್ಯಾಯವಾಗಿ ಸಮತೋಲಿತ ಆಹಾರ, ಪೌಷ್ಠಿಕ ಆಹಾರ ನಿಯಮಿತವಾಗಿ ಸೇವಿಸುವ ಅಭ್ಯಾಸಗಳು, ವೈಯಕ್ತಿಕ ಸ್ವಚ್ಛತೆ  ಕುರಿತು ಮಕ್ಕಳಿಗೆ ಆರೋಗ್ಯ ಶಿಕ್ಷಣ ನೀಡಬೇಕು ಎಂದು ಶಿಫಾರಸು ಮಾಡಲಾಗಿದೆ.

ಸಾರಿಗೆ: ಶಾಲಾ ವಾಹನಗಳಿಗೆ ಚಾಲಕರನ್ನು ನೇಮಿಸುವಾಗ ಅವರ ಹಿನ್ನೆಲೆಯನ್ನು ಪರಿಶೀಲಿಸಬೇಕು. ಚಾಲಕರು ಹಿಂದಿನ ಯಾವುದೇ ಸಂಚಾರಿ ಅಪರಾಧಗಳಲ್ಲಿ ಭಾಗಿಯಾಗಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಮದ್ಯಪಾನದಿಂದ ಪ್ರಭಾವಿತ
ನಲ್ಲ ಎಂಬುದನ್ನೂ ಖಚಿತಪಡಿಸಿಕೊಳ್ಳಬೇಕು.

ಅಲ್ಲದೆ, ಬಾಲಕಿಯರ ಶಾಲಾ ಬಸ್ಸಿನಲ್ಲಿ ಮಹಿಳಾ ಪರಿಚಾರಕಿ ಕೊನೆಯ ನಿಲ್ದಾಣದವರೆಗೂ ಇರಬೇಕು. ಆಟೋರಿಕ್ಷಾಗಳಲ್ಲಿ ಶಾಲೆಗೆ ಬರುವ ಮಕ್ಕಳ ಸುರಕ್ಷತೆಯನ್ನು ಸಂಬಂಧಪಟ್ಟ ಪ್ರಾಧಿಕಾರವು ಖಚಿತಪಡಿಸಿಕೊಳ್ಳಬೇಕು. ಆರ್‌ಟಿಇ ನಿಯಮದ ಪ್ರಕಾರ ಬಾಡಿಗೆಗೆ ಸೀಮಿತಗೊಳಿಸಿದ ಸಂಖ್ಯೆಗೆ ಅನುಗುಣವಾಗಿ ಆಟೋದಲ್ಲಿ ಇದೆಯೇ ಎಂಬುದನ್ನು ಶಾಲೆಯು ಖಚಿತಪಡಿಸಿಕೊಳ್ಳಬೇಕು.

ಸಾಮಾಜಿಕ ಮತ್ತು ಭಾವನಾತ್ಮಕ ಸುರಕ್ಷತೆ: ಭಾವನಾತ್ಮಕ ಮತ್ತು ಆರೋಗ್ಯಕರ ಸಂಬಂಧಗಳನ್ನು ರೂಪಿಸಲು ಮಕ್ಕಳಿಗೆ ಸೂಕ್ತ ಸಾಮಾಜಿಕ ಕೌಶಲ್ಯಗಳ ಬಗ್ಗೆ ಮಾರ್ಗದರ್ಶನ ಮತ್ತು ತರಬೇತಿ ನೀಡಬೇಕು. ಜೀವನ ಕೌಶಲ್ಯಗಳು, ಪರೀಕ್ಷೆ ಸಿದ್ಧತೆಯ ಮೇಲೆ ವಿದ್ಯಾರ್ಥಿಗಳಿಗಾಗಿ ಸಭೆಗಳನ್ನು ನಡೆಸಬೇಕು ಮತ್ತು ಭಯವನ್ನು ಹೋಗಲಾಡಿಸಲು ಕೌಶಲ್ಯ ಕಲಿಸಬೇಕು.

ವಿದ್ಯಾರ್ಥಿಗಳಿಗಾಗಿ ಯೋಗ, ಧ್ಯಾನ ಮತ್ತು ಸ್ವಯಂ ರಕ್ಷಣೆ ಕಾರ್ಯಕ್ರಮಗಳನ್ನು ಆಯೋಜಿಸಬೇಕು.

ಸೈಬರ್‌ ಸುರಕ್ಷತೆ:‌ ಇಂಟರ್‌ನೆಟ್‌ ಸೇರಿದಂತೆ ಸಾಮಾಜಿಕ ಜಾಲತಾಣಗಳ ಬಳಕೆಯ ಒಳಿತು ಮತ್ತು ಕೆಡಕುಗಳ ಮಾಹಿತಿಯನ್ನು ಮಕ್ಕಳಿಗೆ ನೀಡಬೇಕು. ಈ ಮಾಧ್ಯಮದ ಮೂಲಕ ಕಿರುಕುಳ, ಕೀಟಲೆಗಳನ್ನು ನಡೆಸುವುದನ್ನು ನಿಲ್ಲಿಸಲು ಕ್ರಮ ತೆಗೆದುಕೊಳ್ಳಬೇಕು.

 ವೈಯಕ್ತಿಕ–ಲೈಂಗಿಕ ಸುರಕ್ಷತೆ
ಯಾವುದೇ ಬಾಲಕ/ಬಾಲಕಿಯರನ್ನು ದುರುಪಯೋಗಪಡಿಸಿಕೊಳ್ಳುವ ಅಥವಾ ಸುರಕ್ಷತಾ ನಿಯಮ ಉಲ್ಲಂಘನೆಗಳನ್ನು ಮಾಡಿದವರ ವಿರುದ್ಧ ಶಾಲೆಯು ಮಕ್ಕಳ ಸುರಕ್ಷತಾ ನೀತಿಯಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕು. ಶಿಕ್ಷಕರು 1 ರಿಂದ 12 ನೇ ತರಗತಿಯವರೆಗಿನ ವಯಸ್ಸಿನ ಮಕ್ಕಳಿಗೆ ಲಿಂಗಸೂಕ್ಷ್ಮತೆ ಕುರಿತು ಸೂಕ್ತ ತರಬೇತಿಗೆ ಸೇರಿಸಬೇಕು.

*
ಮಕ್ಕಳ ದೃಷ್ಟಿಯಿಂದ ಇವು ಉತ್ತಮ ನಿಯಮಗಳು. ಎಲ್ಲ ಖಾಸಗಿ ಮತ್ತು ಸರ್ಕಾರಿ ಶಾಲೆಗಳಿಗೂ ಕಡ್ಡಾಯವಾಗಿ ಅನ್ವಯವಾಗುತ್ತದೆ.
-ನಾಗಸಿಂಹ ರಾವ್, ಸಂಚಾಲಕ, ಆರ್‌ಟಿಇ ಕಾರ್ಯಪಡೆ

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !