ದಲಿತರ ಮೇಲಿನ ದೌರ್ಜನ್ಯ: ಬೆಂಗಳೂರಿನಲ್ಲೇ ಹೆಚ್ಚು

7

ದಲಿತರ ಮೇಲಿನ ದೌರ್ಜನ್ಯ: ಬೆಂಗಳೂರಿನಲ್ಲೇ ಹೆಚ್ಚು

Published:
Updated:

ಬೆಂಗಳೂರು: ರಾಜಧಾನಿ ಬೆಂಗಳೂರು ಸಂಸ್ಕೃತಿಗಳ ಸಮ್ಮಿಶ್ರಣದ ನಗರ. ಇಲ್ಲಿನ ಜನರು ಎಲ್ಲವನ್ನೂ ಎಲ್ಲರನ್ನೂ ಮುಕ್ತ ಮನಸ್ಸಿನಿಂದ ಸ್ವಾಗತಿಸುತ್ತಾರೆ ಎಂಬ ಭಾವನೆಯಿದೆ. ಆದರೆ, ದಲಿತರ ಮೇಲಿನ ದೌರ್ಜನ್ಯದ ಹೆಚ್ಚು ಪ್ರಕರಣಗಳು ನಗರ ಜಿಲ್ಲೆಯಲ್ಲಿ ದಾಖಲಾಗಿವೆ ಎಂದು ವರದಿಯೊಂದು ಹೇಳುತ್ತಿದೆ.

ಬೆಂಗಳೂರು ನಗರ ಜಿಲ್ಲೆಯಲ್ಲಿ 2017ರಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಮೇಲಿನ ದೌರ್ಜನ್ಯದ 196 ಪ್ರಕರಣಗಳು ದಾಖಲಾಗಿವೆ. ಹಾಗೆಯೇ ಬೆಂಗಳೂರು ಗ್ರಾಮಾಂತರದಲ್ಲಿ 106 ಪ್ರಕರಣಗಳು ವರದಿಯಾಗಿವೆ. 

‘ಪರಿಶಿಷ್ಟರ ಮೇಲಿನ ದೌರ್ಜನ್ಯ ತಡೆ ಕಾಯ್ದೆ’ ಅನುಷ್ಠಾನದ 2017ರ ವಾರ್ಷಿಕ ರಾಜ್ಯ ವರದಿಯ ಅಂಕಿಅಂಶಗಳಿವು. 

‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲ್ವಿಚಾರಣೆ ಮತ್ತು ಬಲವರ್ಧನ ಸಮಿತಿ’ ಹಾಗೂ ‘ಕರ್ನಾಟಕ ದಲಿತ ಮಹಿಳಾ ವೇದಿಕೆ’ ಸಿದ್ಧಪಡಿಸಿರುವ ಈ ವಾರ್ಷಿಕ ವರದಿಯನ್ನು ಸಮಾಜ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಗಂಗಾರಾಮ್‌ ಬಡೇರಿಯಾ ಅವರು ಮಂಗಳವಾರ ಬಿಡುಗಡೆ ಮಾಡಿದರು.

ಆರು ವರ್ಷಗಳಿಂದ ನಗರ ಜಿಲ್ಲೆಯಲ್ಲೇ ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ. ಕುಂಬಳಗೋಡು, ಚನ್ನಸಂದ್ರ, ಹಾರೋಹಳ್ಳಿ ಪ್ರದೇಶಗಳಲ್ಲಿ ದೌರ್ಜನ್ಯದ ಹೆಚ್ಚು ಪ್ರಕರಣಗಳು ಘಟಿಸಿವೆ. ಇತರೆ ಜಿಲ್ಲೆಗಳಿಗೆ ಹೋಲಿಸಿದರೆ, ಬೆಂಗಳೂರಿನಲ್ಲೆ ಹೆಚ್ಚು ಅತ್ಯಾಚಾರಗಳು(17) ದಲಿತ ಸಮುದಾಯದವರ ಮೇಲೆ ನಡೆದಿವೆ. 

 ‘ಇಂದಿನ ದಿನಮಾನದಲ್ಲಿ ಪರಿಶಿಷ್ಟ ಸಮುದಾಯ ಮಹಿಳೆಯರು ದೈಹಿಕವಾಗಿ, ಮಾನಸಿಕವಾಗಿ ಮತ್ತು ಲೈಂಗಿಕವಾಗಿ ಹೆಚ್ಚು ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ಇವರು ಸರ್ಕಾರ ಮತ್ತು ನ್ಯಾಯಾಂಗದಿಂದಲೂ ನಿರ್ಲಕ್ಷೆ ಒಳಗಾಗಿದ್ದಾರೆ. ಈಗಿನ ಮೀಟೂ ಚಳವಳಿಯಲ್ಲಿ ಇಂತಹ ಸಮುದಾಯದ ಮಹಿಳೆಯರಿಗೆ ಧ್ವನಿಯಾಗುವುದು ನಮ್ಮ ಕರ್ತವ್ಯವಾಗಿದೆ’ ಎಂದು ದಲಿತಾ ಮಹಿಳಾ ವೇದಿಕೆ ಸಂಚಾಲಕಿ ಪಿ.ಯಶೋಧಾ ಹೇಳಿದರು.

ರಾಜ್ಯದಲ್ಲಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರ ಮೇಲಿನ ದೌರ್ಜನ್ಯಗಳ ಪ್ರಕರಣಗಳ ಪ್ರಮಾಣ ಶೇ 11.92ರಷ್ಟು ಹೆಚ್ಚಾಗಿವೆ. ಆರೋಪಿಗಳಿಗೆ ಶಿಕ್ಷೆಯಾಗುವ ಪ್ರಮಾಣ ಶೇ 3.79 ಮಾತ್ರ ಇದೆ. ಕೊಲೆ ಯತ್ನದ ಪ್ರಕರಣಗಳು ಶೇ 6.4ರಷ್ಟು ಕಡಿಮೆಯಾದರೂ ಅತ್ಯಾಚಾರದ ಪ್ರಕರಣಗಳು ಶೇ 15.85ರಷ್ಟು ಹೆಚ್ಚಾಗಿವೆ. 

 ಕಳೆದ ವರ್ಷ 2,140 ದೌರ್ಜನ್ಯ ಪ್ರಕರಣಗಳು ದಾಖಲಾಗಿದ್ದವು. ಇವುಗಳಲ್ಲಿ ಕೇವಲ 121 ಪ್ರಕರಣಗಳಲ್ಲಿ ತನಿಖೆ ನಡೆಯುತ್ತಿದೆ. ಉಳಿದವು ಇತ್ಯರ್ಥವಾಗಿಲ್ಲ. 375 ಪ್ರಕರಣಗಳಲ್ಲಿ (ಶೇ 17.52) ಬಿ ರಿಪೋರ್ಟ್‌ ಸಲ್ಲಿಕೆಯಾಗಿದೆ. ನ್ಯಾಯಾಲಯದ ಮೆಟ್ಟಿಲೇರಿದ ಪ್ರಕರಣಗಳ ಸಂಖ್ಯೆ 2016ರ ಸಾಲಿಗಿಂತ ಶೇ 22.57ರಷ್ಟು ಹೆಚ್ಚಾಗಿದೆ.

****
ಉತ್ತರ ಪ್ರದೇಶ, ಗುಜರಾತ್‌, ಒಡಿಶಾ, ಜಾರ್ಖಂಡ್‌ ರಾಜ್ಯಗಳಿಗಿಂತ ನಾವು ಹೆಚ್ಚು ಪರಿಣಾಮಕಾರಿಯಾಗಿ ದೌರ್ಜನ್ಯ ತಡೆ ಕಾಯ್ದೆ ಜಾರಿ ಮಾಡಿದ್ದೇವೆ. ಹಾಗಾಗಿ ಇಲ್ಲಿನ ಪರಿಸ್ಥಿತಿ ಅಲ್ಲಿಗಿಂತ ಉತ್ತಮವಾಗಿದೆ.

– ಗಂಗಾರಾಮ್‌ ಬಡೇರಿಯಾ, ಕಾರ್ಯದರ್ಶಿ, ಸಮಾಜ ಕಲ್ಯಾಣ ಇಲಾಖೆ

ಬಹುತೇಕ ಪ್ರಕರಣಗಳಲ್ಲಿ ಶಿಕ್ಷೆ ಆಗುತ್ತಿಲ್ಲ. ಹಾಗಾಗಿ ದೌರ್ಜನ್ಯಕಾರರಿಗೆ ಭಯ ಇಲ್ಲದಂತಾಗಿದೆ. ಈ ವಿಷಯಗಳಲ್ಲಿ ಅಧಿಕಾರಿಗಳು ಮತ್ತು ನ್ಯಾಯಾಧೀಶರು ಮತ್ತಷ್ಟು ಸಂವೇದನಾಶೀಲರಾಗಬೇಕಿದೆ.

– ಪಿ.ಯಶೋಧಾ, ಸಂಚಾಲಕಿ, ದಲಿತಾ ಮಹಿಳಾ ವೇದಿಕೆ

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 1

  Sad
 • 0

  Frustrated
 • 4

  Angry

Comments:

0 comments

Write the first review for this !