ಶುಕ್ರವಾರ, ನವೆಂಬರ್ 15, 2019
20 °C

ಚಿಕ್ಕಬಳ್ಳಾಪುರದಲ್ಲಿ ಉಬ್ಬುಶಿಲ್ಪಗಳ ದೇಗುಲ

Published:
Updated:
Prajavani

‘ಉಬ್ಬುಶಿಲ್ಪಗಳ ದೇಗುಲ’ ಎಂಬ ಶೀರ್ಷಿಕೆ ಓದಿದ ಕೂಡಲೇ, ಇದ್ಯಾವುದೋ ಬೇಲೂರು, ಹಳೇಬೀಡು, ಸೋಮನಾಥಪುರ ಹೊಯ್ಸಳ ದೇವಾಲಯಗಳ ಬಗ್ಗೆ ಹೇಳುತ್ತಿದ್ದೇನೆ ಎಂದುಕೊಳ್ಳಬೇಡಿ.

ಅಂಥದ್ದೇ ಉಬ್ಬುಶಿಲ್ಪಗಳ ದೇವಾಲಯವೊಂದು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಪಟ್ಟಣದಲ್ಲಿದೆ. ಅದು ಎರಡು ಶತಮಾನಗಳ ಹಿಂದೆ ವೈಶ್ಯ ಸಮುದಾಯದವರು ನಿರ್ಮಾಣ ಮಾಡಿರುವ ಕನ್ನಿಕಾಪರಮೇಶ್ವರಿ ದೇಗುಲ. ಈ ದೇವಾಲಯದ ಗೋಡೆಗಳ ಮೇಲೆ ಚಂದನೆಯ ಉಬ್ಬು ಶಿಲ್ಪಗಳಿವೆ. ಹೊಯ್ಸಳರ ಶಿಲ್ಪಕಲೆಯನ್ನೇ ಹೋಲುತ್ತವೆ. ಅಲ್ಲಿರುವಂತೆ ಈ ದೇಗುಲದ ಕಲ್ಲು ಕೋಡೆಯ ಮೇಲೆ ರಾಮಾಯಣ ಮಹಾಕಾವ್ಯದ ದೃಶ್ಯಗಳನ್ನು ಕೆತ್ತಲಾಗಿದೆ.

ಈ ದೇವಾಲಯದಲ್ಲಿ ಮೂರು ಗರ್ಭಗುಡಿಗಳಿವೆ. ಎಡದಿಂದ ಬಲಕ್ಕೆ ಕ್ರಮವಾಗಿ ವಾಸವಿ ದೇವಿ, ಲಕ್ಷ್ಮೀ ಜನಾರ್ದನ ಹಾಗೂ ನಗರೇಶ್ವರ ಸ್ವಾಮಿ ದೇವರುಗಳ ಮೂರ್ತಿಗಳಿವೆ. ಚೌಕಾಕಾರದಲ್ಲಿರುವ ಈ ದೇಗುಲವನ್ನು ನಾಲ್ಕು ಆನೆಗಳು ಹೊತ್ತು ನಿಂತಿರುವ ಪರಿಕಲ್ಪನೆಯಲ್ಲಿ ಸಂಪೂರ್ಣವಾಗಿ ಕಲ್ಲು ಚಪ್ಪಡಿಗಳಿಂದ ನಿರ್ಮಿಸಲಾಗಿದೆ. ನಾಲ್ಕು ದಿಕ್ಕುಗಳ ಹೊರ ಭಿತ್ತಿಗಳಲ್ಲಿ ನೂರಾರು ವಿಭಿನ್ನ ಉಬ್ಬು ಶಿಲ್ಪಗಳಿವೆ. ಒಳ ಭಿತ್ತಿಗಳಲ್ಲೂ ಋಷಿ ಮುನಿಗಳು, ದೇವಾನು ದೇವತೆಗಳು, ಪ್ರಾಣಿಗಳ ಶಿಲ್ಪಗಳಿವೆ. ಎಲ್ಲಾ ದೇವಾಲಯಗಳಲ್ಲಿರುವಂತೆ ಇಲ್ಲಿಯೂ ವಾತ್ಸಾಯನದ ಹಲವು ಭಂಗಿಗಳ ಮಿಥುನ ಶಿಲ್ಪಗಳಿವೆ.

ಪ್ರಮುಖ ಶಿಲ್ಪಗಳು

ರಾಮಾಯಣದ ಘಟನೆಗಳನ್ನು ಪರಿಚಯಿಸುವ ಶಿಲ್ಪಗಳಿವೆ. ಅದರಲ್ಲಿ ಆಂಜನೇಯ ಸೀತಾಮಾತೆಯ ಹುಡುಕಿಕೊಂಡು ಅಶೋಕವನಕ್ಕೆ ಹೋಗಿ, ಅಲ್ಲಿ ಸೀತೆಯನ್ನು ಭೇಟಿಯಾಗುವ ದೃಶ್ಯ, ಶ್ರೀರಾಮನ ಪಟ್ಟಾಭಿಷೇಕ ವೀಕ್ಷಿಸುತ್ತಿರುವ ಪ್ರಜೆಗಳು, ಪನ್ನಗ ಶಯನನಾದ ವಿಷ್ಣುವಿನ ಸೇವೆ ಮಾಡುತ್ತಿರುವ ಲಕ್ಷ್ಮೀ, ಮಾರ್ಕಂಡೇಯ ಪುರಾಣದ ಘಟನೆಗಳಿವೆ.

ಪಂಚಮುಖಿ ಆಂಜನೇಯ, ವಿರಳವಾಗಿ ಕಾಣ ಸಿಗುವ ಹತ್ತು ತಲೆ ಹಾಗೂ ಇಪ್ಪತ್ತು ಕೈಗಳಿರುವ ರಾವಣ, ಮಹಾಭಾರತದ ಯುದ್ಧಕ್ಕೆ ಹೋಗುತ್ತಿರುವ ಸೈನಿಕರು, ಹೊಸ್ತಿಲ ಮೇಲೆ ಕುಳಿತ ಉಗ್ರ ನರಸಿಂಹ ಹಿರಣ್ಯಕಶ್ಯಪುವಿನ ಕರಳು ಬಗೆಯುತ್ತಿರುವ ಶಿಲ್ಪವಿದೆ. ಶಿವಪುರಾಣದಲ್ಲಿ ಉಲ್ಲೇಖಿಸಲಾದ ಬ್ರಹ್ಮ ಕಪಾಲದ ಘಟನೆ ವಿವರಿಸುವ ಶಿಲ್ಪಗಳೂ ಆಕರ್ಷಕವಾಗಿವೆ.

ವೈವಿಧ್ಯಮಯ ಕೆತ್ತನೆಗಳು

ಶಿವಲಿಂಗಕ್ಕೆ ತನ್ನ ಕೆಚ್ಚಲಿನಿಂದಲೇ ಹಾಲನ್ನು ಹಿಂಡಿ ಅಭಿಷೇಕ ಮಾಡುತ್ತಿರುವ ಕಾಮಧೇನು, ಪಂಚತಂತ್ರ ಕತೆಗಳಲ್ಲಿ ಒಂದಾದ ಕೋತಿ ಮತ್ತು ಮೊಸಳೆಯ ಕತೆಯ ಸಾರಾಂಶ ತಿಳಿಸುವ ಶಿಲ್ಪಗಳಿವೆ. ಮಕ್ಕಳಿಗೆ ಕಥೆ ಹೇಳಲು ಈ ಚಿತ್ರಗಳು ನೆರವಾಗುತ್ತವೆ. ರೆಕ್ಕೆಗಳನ್ನು ಹೊಂದಿರುವ ಆನೆ, ಕುದುರೆ ಮತ್ತಿತರ ಪ್ರಾಣಿಗಳ ಕಾಲ್ಪನಿಕ ಶಿಲ್ಪಗಳು ಇಲ್ಲಿನ ಮತ್ತೊಂದು ಆಕರ್ಷಣೆ.

ಗಂಡು–ಹೆಣ್ಣು ಪರಸ್ಪರ ಕೈ ಕಾಲುಗಳನ್ನು ಹಿಡಿದುಕೊಂಡು ಗಾಲಿಯಂತೆ ಉರುಳುವ ಮಾನವ ಚಕ್ರ, ಕಾಲ್ಪನಿಕ ಪಕ್ಷಿ ಗಂಡ ಭೇರುಂಡ ಚಿತ್ರಗಳು ಎದ್ದು ಕಾಣುತ್ತವೆ. ಮರದ ಕೊಂಬೆಯಲ್ಲಿ ಕುಳಿತಿರುವ ಹದಿನಾಲ್ಕು ಗಿಣಿಗಳ ಶಿಲ್ಪಗಳನ್ನು ಸೂಕ್ಷ್ಮವಾಗಿ ಗಮನಿಸಿಯೇ ನೋಡಬೇಕು. ಈ ಶಿಲ್ಪಗಳು ಶಿಲ್ಪಿಯ ಪ್ರೌಢಿಮೆಗೆ ಸಾಕ್ಷಿಯಾಗಿದೆ.

ಜ್ಯೋತಿಷ್ಯ ಶಾಸ್ತ್ರದ ನವಗ್ರಹ ಕುಂಡಲಿ, ದ್ವಾದಶ ರಾಶಿ ಚಕ್ರ, ಯಕ್ಷಿಣಿಯರ ಶಿಲ್ಪಗಳು ನೋಡುಗರನ್ನು ಬೆರಗುಗೊಳಿಸುತ್ತವೆ. ದೇವಾಲಯದ ಮುಂಭಾಗದಲ್ಲಿರುವ ಬೃಹತ್ ಗಾತ್ರದ ಎರಡು ತುಳಸಿ ಕಟ್ಟೆಗಳ ರಚನೆ ಆಕರ್ಷಣೀಯವಾಗಿದೆ.

ಪುರಾಣ ಕಥೆಗಳ ತಾಣ

ರಾಮಾಯಣ, ಮಹಾಭಾರತ, ಶಿವಪುರಾಣ, ಜಾನಪದ, ಜ್ಯೋತಿಷ್ಯ ಹೀಗೆ ಹಲವು ವಿಭಾಗಗಳಿಗೆ ಸಂಬಂಧಿಸಿದ ಉಬ್ಬು ಶಿಲ್ಪಗಳನ್ನು ಒಂದೇ ದೇವಾಲಯದಲ್ಲಿ ನೋಡಲು ಸಿಗುವುದು ವಿರಳವೆನ್ನುತ್ತಾರೆ. ಈ ನಿಟ್ಟಿನಲ್ಲಿ ಕನ್ನಿಕಾಪರಮೇಶ್ವರಿ ದೇವಾಲಯ ಶಿಲ್ಪಕಲೆಯ ವಿಶಿಷ್ಟ ತಾಣವಾಗಿದೆ.

ಚಿಂತಾಮಣಿ ಪಟ್ಟಣವು, ರಾಜಧಾನಿ ಬೆಂಗಳೂರಿನಿಂದ ಕೇವಲ 75 ಕಿ.ಮೀ ದೂರದಲ್ಲಿದ್ದು, ಸಾರ್ವಜನಿಕ ಸಾರಿಗೆ ಅಥವಾ ಸ್ವಂತ ವಾಹನಗಳ ಮೂಲಕ ಇಲ್ಲಿಗೆ ಬರಬಹುದು. ಚಿಂತಾಮಣಿ ಬಸ್ ನಿಲ್ದಾಣದಿಂದ ಸುಮಾರು ಅರ್ಧ ಕಿ.ಮೀ ದೂರದಲ್ಲಿರುವ ಈ ದೇವಾಲಯವನ್ನು ಆಜಾದ್ ಚೌಕ ರಸ್ತೆ ಮತ್ತು ಡೈಮಂಡ್ ಟಾಕೀಸ್ ರಸ್ತೆ ಎರಡೂ ಕಡೆಗಳಿಂದಲೂ ತಲುಪಬಹುದು. 

40ಹೆಚ್ಚು ದೇಗುಲಗಳು

ಆರ್ಯ ವೈಶ್ಯರು ಮೂಲತಃ ಆಂಧ್ರಪ್ರದೇಶದವರು. ವ್ಯಾಪಾರ ಉದ್ದೇಶದಿಂದ ಕಾಲಕ್ರಮೇಣ ದಕ್ಷಿಣಭಾರತದ ಇತರೆ ರಾಜ್ಯಗಳಲ್ಲಿ ನೆಲೆಯೂರಿದರು. ಆರ್ಯ ವೈಶ್ಯ ಜನಾಂಗದ ಕುಲದೇವತೆ ಕನ್ನಿಕಾಪರಮೇಶ್ವರಿ. ಇದು 10 ನೇ ಶತಮಾನದ ವಾಸವೀ ಪುರಾಣದಲ್ಲಿ ಉಲ್ಲೇಖವಿದೆ. ಈ ಸಮುದಾಯದವರು ತಮ್ಮ ಆರಾಧ್ಯ ದೇವತೆಯ ದೇವಾಲಯಗಳನ್ನು ಆಂಧ್ರಪ್ರದೇಶ, ತಮಿಳುನಾಡು, ಕರ್ನಾಟಕಗಳಲ್ಲಿ 40 ಕ್ಕೂ ಅಧಿಕ ಸ್ಥಳಗಳಲ್ಲಿ ನಿರ್ಮಿಸಿದ್ದಾರೆ. ಎಲ್ಲ ದೇವಾಲಯಗಳೂ ವಿಭಿನ್ನ ಶೈಲಿಯಲ್ಲಿವೆ. ಇವುಗಳಲ್ಲಿ ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿರುವ ವಾಸವಿ ಕನ್ನಿಕಾ ಪರಮೇಶ್ವರಿ ದೇವಾಲಯವು ಪ್ರಮುಖವಾಗಿದೆ.

ಚಿತ್ರಗಳು:ಲೇಖಕರವು

ಪ್ರತಿಕ್ರಿಯಿಸಿ (+)