ಭಾನುವಾರ, ಡಿಸೆಂಬರ್ 8, 2019
21 °C
ಅಯೋಧ್ಯೆಯಲ್ಲಿ ರಾಮ ಮಂದಿರ ಸ್ಥಾಪನೆಗೆ ಎಸ್‌ಡಿಪಿಐ ವಿರೋಧ

ಬಾಬರಿ ಮಸೀದಿ ಮರುನಿರ್ಮಾಣಕ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಚಾಮರಾಜನಗರ: ಅಯೋಧ್ಯೆಯಲ್ಲಿ ಧ್ವಂಸಗೊಂಡಿರುವ ಬಾಬರಿ ಮಸೀದಿಯನ್ನು ಮತ್ತೆ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿ ಎಸ್‌ಡಿಪಿಐನ ಜಿಲ್ಲಾ ಘಟಕದ ಪದಾಧಿಕಾರಿಗಳು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

ನಗರದ ಲಾರಿ ನಿಲ್ದಾಣದ ಸಮೀಪ ಧರಣಿ ಕುಳಿತ ಪ್ರತಿಭಟನಾಕಾರರು ಆರ್‌ಎಸ್‌ಎಸ್‌ ವಿರುದ್ಧ ಘೋಷಣೆಗಳನ್ನು ಕೂಗಿದರು.

ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅಬ್ರಾರ್‌ ಅಹಮದ್‌ ಮಾತನಾಡಿ, ‘ಅಯೋಧ್ಯೆಯಲ್ಲಿ ಕರಸೇವಕರು ಧ್ವಂಸಗೊಳಿಸಿರುವ ಬಾಬರಿ ಮಸೀದಿಯನ್ನು ಮತ್ತೆ ನಿರ್ಮಾಣ ಮಾಡಬೇಕು. ಇದಕ್ಕಾಗಿ ಕಾನೂನು, ಸಂವಿಧಾನ ಚೌಕಟ್ಟಿನಲ್ಲೇ ಹೋರಾಟ ಮಾಡಬೇಕಿದೆ. ಸಂವಿಧಾನ ಬದ್ಧವಾಗಿ ಹೋರಾಟ ನಡೆಸುವ ಹಕ್ಕು ನಮಗಿದೆ’ ಎಂದರು.

‘ಅಯೋಧ್ಯೆ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿದೆ. ಅಲ್ಲಿ ರಾಮ ಹುಟ್ಟಿದ್ದಾನೋ, ರಹೀಮ ಹುಟ್ಟಿದ್ದಾನೋ ಎಂಬುದನ್ನು ಅದು ನೋಡುವುದಿಲ್ಲ. ದಾಖಲೆಗಳ ಆಧಾರದಲ್ಲಿಯೇ ಅದು ತೀರ್ಪು ನೀಡಲಿದೆ’ ಎಂದು ಹೇಳಿದರು.

‘ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ದೇಶದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ನಾವು ಕಾನೂನಾತ್ಮಕ ಹೋರಾಟದ ಮೂಲಕ ನೆಲೆ ಹಾಗೂ ಶಾಂತಿಯನ್ನು ಕಂಡುಕೊಳ್ಳಬೇಕಾಗಿದೆ’ ಎಂದರು.

ನಿರಂತರ ಹೋರಾಟ: ‘ಅಯೋಧ್ಯೆಯಲ್ಲಿ ಬಾಬರಿ ಮಸೀದಿಯನ್ನು ಮತ್ತೆ ನಿರ್ಮಾಣ ಮಾಡಬೇಕು ಎಂಬ ಕೂಗು ಜೋರಾದರೆ, ಸರ್ಕಾರ ಅದಕ್ಕೆ ಮಣಿಯಲೇ ಬೇಕಾಗುತ್ತದೆ. ಎಸ್‌ಡಿಪಿಐ ನಿರಂತರವಾಗಿ ಹೋರಾಟ ಮಾಡಲಿದೆ’ ಎಂದು ಹೇಳಿದರು.

ಎಸ್‌ಡಿಪಿಐ ಜಿಲ್ಲಾ ಉಪಾಧ್ಯಕ್ಷ ಸಮೀವುಲ್ಲಾ ಖಾನ್‌, ಜಿಲ್ಲಾ ಕಾರ್ಯದರ್ಶಿ ಜಬೀ ನೂರ್‌, ನಗರಸಭಾ ಸದಸ್ಯರಾದ ಮಹೇಶ್‌, ಮಹಮ್ಮದ್‌ ಅಮೀಖ್‌, ಖಲೀವುಲ್ಲಾ, ಪಿಎಫ್‌ಐ ಜಿಲ್ಲಾ ಅಧ್ಯಕ್ಷ ಅಜೀಂ ಉಲ್ಲಾ ಇದ್ದರು. 

ಅರ್ಧ ಗಂಟೆ ಅವಕಾಶ: ಪೊಲೀಸ್‌ ಇಲಾಖೆ ಪ್ರತಿಭಟನೆ ನಡೆಸಲು ಎಸ್‌ಡಿಪಿಐಗೆ ಅರ್ಧಗಂಟೆ ಅವಕಾಶ ಕೊಟ್ಟಿತ್ತು. ಸುತ್ತಮುತ್ತ ಬಿಗಿ ಬಂದೋಬಸ್ತ್‌ ಕೈಗೊಳ್ಳಲಾಗಿತ್ತು.

‘ದೇಶ ಸಂವಿಧಾನ ಬದ್ಧವಾಗಿರುವುದಿಲ್ಲ’
ಬಾಬರಿ ಮಸೀದಿ ಇದ್ದ ಜಾಗದಲ್ಲಿ ರಾಮ ಮಂದಿರ ನಿರ್ಮಾಣ ಆದರೆ ದೇಶ ಸಂವಿಧಾನ ಬದ್ಧವಾಗಿರುವುದಿಲ್ಲ. ಆಗ ಹಿಂದುತ್ವದ ಆಧಾರದಲ್ಲಿ ದೇಶ ನಿರ್ಮಾಣವಾದಂತೆ ಆಗುತ್ತದೆ. ಸಂವಿಧಾನ ಉಳಿಯಬೇಕಾದರೆ, ಬಾಬರಿ ಮಸೀದಿ ನಿರ್ಮಾಣ ಆಗಲೇಬೇಕು ಎಂದು ಅಬ್ರಾರ್‌ ಅಹಮದ್‌ ಹೇಳಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು