ಗಡಿಜಿಲ್ಲೆಯ ನಂಟು ಹೊಂದಿದ್ದ ‘ಕಾಯಕ ಯೋಗಿ’

7
ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹೆಚ್ಚು ಭಾಗಿ, ಹಲವರ ಮನೆಗಳಲ್ಲಿ ಪಾದಪೂಜೆ

ಗಡಿಜಿಲ್ಲೆಯ ನಂಟು ಹೊಂದಿದ್ದ ‘ಕಾಯಕ ಯೋಗಿ’

Published:
Updated:
Prajavani

ಚಾಮರಾಜನಗರ: ಸೋಮವಾರ ಶಿವೈಕ್ಯರಾಗಿರುವ ‘ಕಾಯಕ ಯೋಗಿ’, ‘ಅಭಿನವ ಬಸವಣ್ಣ’ ಎಂದೇ ಖ್ಯಾತರಾಗಿದ್ದ ತುಮಕೂರಿನ ಸಿದ್ಧಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿ ಅವರು ಗಡಿ ಜಿಲ್ಲೆಯೊಂದಿಗೂ ನಂಟು ಹೊಂದಿದ್ದರು.

ಜಿಲ್ಲೆಯಾದ್ಯಂತ ಸಾಕಷ್ಟು ಶಿಷ್ಯರು ಹಾಗೂ ಭಕ್ತರನ್ನು ಹೊಂದಿದ್ದರು. ಸಿದ್ಧಗಂಗಾ ಮಠ ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳು ಜಿಲ್ಲೆಯಲ್ಲಿ ಇಲ್ಲದಿದ್ದರೂ ತುಮಕೂರಿನಲ್ಲಿರುವ ಅವರ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡಿದ ನೂರಾರು ಮಂದಿ ಜಿಲ್ಲೆಯಲ್ಲಿದ್ದಾರೆ. ಈ ಪೈಕಿ ಹಲವರು ಉನ್ನತ ಹುದ್ದೆಗೂ ಏರಿದ್ದಾರೆ.

ಜಿಲ್ಲೆಯ ವಿವಿಧ ತಾಲ್ಲೂಕುಗಳಿರುವ ಮಠಗಳಿಗೆ ಭೇಟಿ ನೀಡಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಶ್ರೀಗಳು ಭಾಗವಹಿಸಿದ್ದಾರೆ. ಕೆಲವು ಭಕ್ತರು ಶ್ರೀಗಳನ್ನು ಮನೆಗೆ ಕರೆದುಕೊಂಡು ಬಂದು ಪಾದಪೂಜೆಯನ್ನೂ ನೆರವೇರಿಸಿದ್ದಾರೆ. 

ಸಾರ್ವಜನಿಕ ಕಾರ್ಯಕ್ರಮಗಳಿಗಾಗಿ ಶ್ರೀಗಳು ಜಿಲ್ಲೆಗೆ ಬಂದಿದ್ದು ಕಡಿಮೆ. 1995ರಲ್ಲಿ ಗುಂಡ್ಲುಪೇಟೆಯ ಬೆಳವಾಡಿಯಲ್ಲಿ ದೇವಸ್ಥಾನ ಉದ್ಘಾಟನೆ ಕಾರ್ಯಕ್ರಮದಲ್ಲಿ ನಡೆದ ಗುರುವಂದನೆ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿದ್ದರು. 2006ರ ಜೂನ್‌ 3ರಂದು ಚಾಮರಾಜನಗರ ತಾಲ್ಲೂಕಿನ ಕೊತ್ತಲವಾಡಿ ಗ್ರಾಮಸ್ಥರು ಶ್ರೀಗಳಿಗೆ ಗುರುವಂದನಾ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಈ ಸಂದರ್ಭದಲ್ಲಿ ಶಿವಕುಮಾರ ಸ್ವಾಮೀಜಿಗಳು ಗ್ರಾಮಕ್ಕೆ ಬಂದು ಎಲ್ಲರನ್ನೂ ಹರಸಿದ್ದರು. ಸುತ್ತೂರು ಮಠದ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಕೂಡ ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

‘ಬೆಳವಾಡಿಯಲ್ಲಿ ನಡೆದ ಕಾರ್ಯಕ್ರಮವನ್ನು ನೋಡಿ ನಮ್ಮ ಗ್ರಾಮದಲ್ಲೂ ಗುರುವಂದನೆ ಕಾರ್ಯಕ್ರಮ ಆಯೋಜಿಸಲೇ ಬೇಕು ಎಂದು ತೀರ್ಮಾನಿಸಿದ್ದೆವು. ಅವರನ್ನು ಊರಿಗೆ ಕರೆತರಲು ನಾವು ಏಳು ತಿಂಗಳು ಕಾಯಬೇಕಾಯಿತು’ ಎಂದು ಹೇಳುತ್ತಾರೆ ಕೊತ್ತಲವಾಡಿಯ ಸ್ಥಳೀಯ ಮುಖಂಡ ಕುಮಾರ್‌.

ಒಂದೂವರೆ ಕಿ.ಮೀ ನಡೆದಿದ್ದರು: ಶ್ರೀಗಳನ್ನು ವೇದಿಕೆವರೆಗೆ ಮೆರವಣಿಗೆ ಮೂಲಕ ಕರೆದೊಯ್ಯಲು ವ್ಯವಸ್ಥೆ ಮಾಡಿದ್ದೆವು. ಆಗ ಶ್ರೀಗಳಿಗೆ 97 ವರ್ಷ. 20 ಸಾವಿರಕ್ಕೂ ಹೆಚ್ಚು ಜನ ಸೇರಿದ್ದರು. ಆದರೆ ಜೀಪಿನಲ್ಲಿ ಮೆರವಣಿಗೆ ಹೋಗಲು ಒಪ್ಪಲಿಲ್ಲ. ಇಷ್ಟು ಜನ ತಮ್ಮ ಮೇಲೆ ಪ್ರೀತಿ ತೋರಿಸುವಾಗ ಜೀಪು ಏರಲಾರೆ. ನಡೆದುಕೊಂಡು ಹೋಗುವುದಾಗಿ ಪಟ್ಟು ಹಿಡಿದರು. ಅಲ್ಲಿಯೇ ಇದ್ದ ಸುತ್ತೂರು ಶ್ರೀಗಳು ಹಲವು ಬಾರಿ ಹೇಳಿದರೂ ಕೇಳಲಿಲ್ಲ. ನಡೆದುಕೊಂಡೇ ವೇದಿಕೆಗೆ ಬಂದರು. ಸುತ್ತೂರು ಶ್ರೀಗಳು ಸೇರಿದಂತೆ ಅಲ್ಲಿ ನೆರೆದಿದ್ದವರಿಗೆಲ್ಲ ಅಚ್ಚರಿಯಾಯಿತು’ ಎಂದು ಕೊತ್ತಲವಾಡಿ ಕುಮಾರ್‌ ಅವರು ಸ್ಮರಿಸಿದರು.

ಒಂದೂವರೆ ಗಂಟೆ ಮಾತು: ‘ಗುರುವಂದನೆ ಕಾರ್ಯಕ್ರಮದಲ್ಲಿ ಸಿದ್ಧಗಂಗಾ ಶ್ರೀಗಳು ಒಂದೂವರೆ ಗಂಟೆ ನಿರರ್ಗಳವಾಗಿ ಮಾತನಾಡಿದ್ದರು. ಬಸವ ತತ್ವ– ಕಾಯಕ ಸಮಾಜದ ಬಗ್ಗೆ ಪ್ರಸ್ತಾಪಿಸಿದ್ದರು. ಮೇಲು ಕೀಳು, ಜಾತಿ ಭೇದವಿಲ್ಲದೇ ಎಲ್ಲರೂ ಒಟ್ಟಾಗಿ ಇರುವಂತೆ ಕಿವಿ ಮಾತು ಹೇಳಿದ್ದರು. ಸಮಾಜದ ಅಭಿವೃದ್ಧಿಗೆ ಶ್ರಮಿಸುವಂತೆ ಆಶೀರ್ವದಿಸಿದ್ದರು’ ಎಂದು ಅವರು ಹೇಳಿದರು.

ಕೊಳ್ಳೇಗಾಲಕ್ಕೆ ಭೇಟಿ: 1994ರಲ್ಲಿ ಕೊಳ್ಳೇಗಾಲದ ಎಂಜಿಎಸ್‌ವಿ ಕಾಲೇಜು ಮೈದಾನದಲ್ಲಿ ನಡೆದಿದ್ದ ಸುತ್ತೂರು ಜಯಂತಿ ಸಮಾವೇಶದಲ್ಲಿ ಸಿದ್ಧಗಂಗಾ ಶ್ರೀಗಳು ಪಾಲ್ಗೊಂಡಿದ್ದರು.  ತದ ನಂತರ ಶ್ರೀಗಳ 100ನೇ ಹುಟ್ಟುಹಬ್ಬದ ಅಂಗವಾಗಿ ಕೊಳ್ಳೇಗಾಲ ತಾಲ್ಲೂಕಿನ ವಿವಿಧ ಮಠಗಳು ಆಯೋಜಿಸಿದ್ದ ಸಾರ್ವಜನಿಕ ಕಾರ್ಯಕ್ರಮದಲ್ಲೂ ಅವರು ಭಾಗವಹಿಸಿದ್ದರು ಎಂದು ಹೇಳುತ್ತಾರೆ ಹಿರಿಯರು.

50 ವರ್ಷಗಳ ನಂಟು: ಚಾಮರಾಜನಗರ ತಾಲ್ಲೂಕಿನ ಮರಿಯಾಲ ಮಠಕ್ಕೂ ಸಿದ್ಧಗಂಗಾ ಶ್ರೀಗಳಿಗೂ 50 ವರ್ಷಗಳ ನಂಟು ಇದೆ. ಆಗಾಗ ಅವರು ಮಠಕ್ಕೆ ಭೇಟಿ ನೀಡುತ್ತಿದ್ದರು.

‘ಶ್ರೀಗಳ ಹಾಗೂ ಮಠದ ಸಂಬಂಧ 40ರಿಂದ 50 ವರ್ಷಗಳಷ್ಟು ಹಳೆಯದು. ಹಲವು ಬಾರಿ ನಮ್ಮ ಮಠಕ್ಕೆ ಬಂದಿದ್ದಾರೆ. ಹಿರಿಯ ಸ್ವಾಮೀಜಿ ಪೀಠ ಏರುವಾಗ ಬಂದಿದ್ದರು. ತದ ನಂತರ ಆರಾಧನೆಗಳಿಗೂ ಅವರು ಬಂದಿದ್ದರು. 2001ರಲ್ಲಿ ನಾವು ಪಟ್ಟಕ್ಕೆ ಏರುವಾಗಲೂ ಉಪಸ್ಥಿತರಿದ್ದರು. ಆ ಬಳಿಕ ಸಿದ್ದಗಂಗಾ ಕಿರಿಯ ಶ್ರೀಗಳು ಮಠಕ್ಕೆ ಭೇಟಿ ನೀಡುತ್ತಿದ್ದಾರೆ’ ಎಂದು ಮರಿಯಾಲದ ಮರಿಯಾಲಯದ ಇಮ್ಮಡಿ ಮುರುಘರಾಜೇಂದ್ರ ಸ್ವಾಮೀಜಿ ‘ಪ್ರಜಾವಾಣಿ’ಗೆ ತಿಳಿಸಿದರು.

ರಾತ್ರಿ ಇಡೀ ನಾಟಕ ನೋಡಿದ್ದರು...

‘1998ರ ಜನವರಿಯಲ್ಲಿ ಚಾಮರಾಜನಗರ ತಾಲ್ಲೂಕಿನ ಯರಗನಹಳ್ಳಿಯಲ್ಲಿ ಸಿದ್ಧಗಂಗಾ ಮಠದ ಮಾಲೀಕತ್ವದ ಸಿದ್ಧಲಿಂಗೇಶ್ವರ ಕೃಪಾಪೋಷಿಕತ ನಾಟಕ ಮಂಡಳಿಯ ಕಲಾವಿದರು ‌‘ಜಗಜ್ಯೋತಿ ಬಸವೇಶ್ವರ’ ಎಂಬ ನಾಟಕ ಪ್ರದರ್ಶಿಸಿದ್ದರು. ಈ ನಾಟಕ ಮಂಡಳಿಯವರು ಗ್ರಾಮ ಗ್ರಾಮಗಳಿಗೆ ಹೋಗಿ ಬಸವಣ್ಣನವರ ತತ್ವ ಸಿದ್ಧಾಂತಗಳನ್ನು ಪ್ರಚುರ ಪಡಿಸುತ್ತಿದ್ದರು. ಆ ಸಂದರ್ಭದಲ್ಲಿ ಯರಗನಹಳ್ಳಿಗೆ ಬಂದಿದ್ದ ಸಿದ್ಧಗಂಗಾ ಶ್ರೀಗಳು ರಾತ್ರಿ ಇಡೀ ಕುಳಿತು ನಾಟಕ ವೀಕ್ಷಿಸಿದ್ದರು’ ಎಂದು ಶಿಕ್ಷಕ ಸದಾನಂದ ಸ್ವಾಮಿ ಅವರು ನೆನಪಿಸಿಕೊಂಡರು. 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !