ಅಮ್ಮನ ಮಡಿಲಿಗೆ ಬರುವ ಮಗುವಿನಂತೆ...

7

ಅಮ್ಮನ ಮಡಿಲಿಗೆ ಬರುವ ಮಗುವಿನಂತೆ...

Published:
Updated:
Prajavani

‘ಜೋಷಿಯವರ ಹೆಂಡತಿಯನ್ನು ಅಡ್ಮಿಟ್‌ ಮಾಡಿದ್ದಾರಂತೆ. ಅವರು ಒಂದು ವಾರದಿಂದ ಕೋಮಾದಲ್ಲಿ ಇದ್ದಾರಂತೆ. ಅವರ ಶುಗರ್ ತುಂಬಾ ಹೆಚ್ಚಾಗಿದೆಯಂತೆ, ಪಾಪ ಎಷ್ಟು ಬಿಲ್‌ ಆಗುತ್ತದೊ’ ಲಾಫರ್ ಕ್ಲಬ್‌ಗೆ ಹೋದಾಗ ಉಷಾ ಅಂದರು, ಹಿರಿಯ ನಾಗರಿಕರಿಗಾಗಿಯೇ ರೂಪಿಸಿದ ವ್ಯಾಯಾಮಗಳು ಅಲ್ಲಿದ್ದವು. ಕ್ಲಬ್‌ನ ಚಟುವಟಿಕೆಯ ನಂತರ ಎಂದಿನಂತೆ ಎಲ್ಲರೂ ವಾಕ್ ಹೊರಟಾಗ ಎಲ್ಲರ ಮನಸ್ಸಿನಲ್ಲೂ ಏನೋ ಕಳವಳ. ಜೋಷಿಯವರ ಹೆಂಡತಿಗಿಂತ ನಾವು ಪರವಾಗಿಲ್ಲ ಆರೋಗ್ಯವಾಗಿದ್ದೇವೆ ಎಂದು ಸಮಾಧಾನ ಪಟ್ಟುಕೊಂಡರೂ ಎಲ್ಲರಿಗೂ ಭಯ. ಮರಗಳೆಲ್ಲ ಹಳದಿ, ಕೇಸರಿ, ಕನಕಾಂಬರ ಸೀರೆ ಉಟ್ಟುಕೊಂಡಿರುವಂತೆ ಕಾಣುತ್ತಿತ್ತು. ಕೆಳಗೆ ಉದುರಿದ ಎಲೆಗಳಿಂದಾಗಿ ಮೆತ್ತನೆ ರತ್ನಗಂಬಳಿಯ ಮೇಲೆ ನಡೆದಂತೆ. ಆದರೆ ವೇಗವಾಗಿ ಹೆಜ್ಜೆಹಾಕುವ ಯಾರಿಗೂ ಅದನ್ನು ನೋಡಿ ಆನಂದಿಸುವಷ್ಟು ನಿರಾಳವಿರಲಿಲ್ಲ.

‘ನೀವು ಇಂಡಿಯಾಗೆ ಯಾವಾಗ ಹೋಗುವುದು?’ ಮೆಲ್ಲಗೆ ಉಷಾ ಕೇಳಿದರು.

‘ಇನ್ನೂ ಮೂರು ತಿಂಗಳಿದೆ’ ಎಂದರು ಮಂಜುಶ್ರೀ. ‘ಆಗಲೇ ಬಂದು ತಿಂಗಳಾಯಿತು ಅಲ್ಲವಾ?’ ಎಂದರು. ‘ನಾನಂತೂ ದಿನಗಳನ್ನು ಲೆಕ್ಕ ಹಾಕುತ್ತಿರುತ್ತೇನೆ, ನಮ್ಮವರು ತಿಂಗಳುಗಳನ್ನು ಲೆಕ್ಕ ಹಾಕುತ್ತಾರೆ’ ಎಂದರು ಉಷಾ. ಬಂದ ಹೊಸತರಲ್ಲಿ ಎಲ್ಲಿಲ್ಲದ ಖುಷಿ. ಅಲ್ಲಿರುವ ಎಲ್ಲಾ ಸೌಲಭ್ಯ ಮತ್ತು ಸುಖವನ್ನು ಅನುಭವಿಸುವ ಆತುರ. ದಿನವೂ ಮನೆಯ ಎದುರಿನಲ್ಲೇ ಇರುವ ಜಕೂಸಿಗೆ ಹೋಗಿ ಕುಳಿತು ಮೈ ಮನಗಳನ್ನು ಬೆಚ್ಚಗೆ ಮಾಡಿಕೊಳ್ಳುವ ಅಸೆ, ನಮ್ಮ ಬೆಂಗಳೂರಿನಲ್ಲಿ ಕುಡಿಯುವುದಕ್ಕೆ ನೀರಿಲ್ಲ, ಕರೆಂಟ್ ಇಲ್ಲ, ಇಲ್ಲಿರುವ ತನಕ ಮಜಾ ಉಡಾಯಿಸಿಬಿಡೋಣ ಎನ್ನುವ ಅಸೆ, ಇನ್ನು ಅಲ್ಲಿಯ ಆಕರ್ಷಣೀಯ ಸ್ಥಳಗಳನ್ನು ನೋಡಿ ಆನಂದಿಸುವ ಉದ್ವೇಗ, ಆದರೆ ಸ್ವಲ್ಪ ದಿನಗಳಾದ ಮೇಲೆ ಮಕ್ಕಳು ಕೆಲಸಕ್ಕೆ ಹೋದರೆ ಅದೇ ಏಕತಾನತೆ, ಎಷ್ಟೂಂತ ವಾಕ್ ಮಾಡುವುದು, ಎಷ್ಟು ಸಿನಿಮಾಗಳನ್ನು ಟಿ.ವಿ.ಯಲ್ಲಿ ನೋಡುವುದು, ಮೆಲ್ಲಗೆ ಬೇಸರ ಪ್ರಾರಂಭವಾಗುತ್ತದೆ. ದಿನಗಳನ್ನು ಲೆಕ್ಕ ಹಾಕುವಂತಾಗುತ್ತದೆ, ಒಟ್ಟಿನಲ್ಲಿ ಎಲ್ಲರೂ ಹಿಂದಿರುಗುವ ದಿನಗಳಿಗಾಗಿ ಕಾಯುವವರೇ. ಹೋಗುವ ಮುನ್ನ ಈ ಎಲ್ಲವನ್ನೂ ಬಿಟ್ಟು ಹೋಗಲು ಬೇಸರ ಮತ್ತು ಮಕ್ಕಳಿಂದ ದೂರವಾಗುತ್ತೇವೆ ಎಂದು ಅನ್ನಿಸುವುದೂ ಉಂಟು. ಆದರೂ ಒಂದು ದಿನ ಹೋಗಲೇಬೇಕಲ್ಲಾ. ದಿನವಿಡೀ ಹಾರಾಡಿ ಸಂಜೆಯಾದೊಡನೆಯೇ ಗೂಡು ಸೇರುವ ಹಕ್ಕಿಗಳಂತೆ. ನಿಜವಾಗಲೂ ಇಲ್ಲಿ ಎಲ್ಲವೂ ಎಷ್ಟು ಚೆನ್ನಾಗಿದೆ. ಈ ಹಸಿರು ಗಿಡಗಳು, ಮರಗಳು, ಅಗಲವಾಗಿರುವ ರಸ್ತೆಗಳು, ಯಾವುದೋ ಸುಂದರ ರೆಸಾರ್ಟಿನೊಳಗಿರುವಂತೆ, ದೇವನಗರಿಯಲ್ಲಿರುವ ಭಾವವನ್ನುಂಟುಮಾಡುವ ಪರಿಸರ, ಬೇಕಾದಾಗ ಈ ಚಳಿಯಲ್ಲಿ ಬಿಸಿ ನೀರಿನಲ್ಲಿ ಬೆಚ್ಚಗೆ ಮಾಡುವ ಜಕೂಸಿ. ನಾವು ಪಾದಚಾರಿಗಳು ಎಷ್ಟೇ ವೇಗವಾಗಿ ಹೋಗುತ್ತಿದ್ದರೂ ಥಟ್ಟನೆ ನಿಲ್ಲಿಸುವ ವಾಹನಗಳು, ವಾರಕ್ಕೊಮ್ಮೆ ಮಕ್ಕಳೊಡನೆ ಹೋಗುವ ಪ್ರವಾಸಗಳು, ಎಲ್ಲವೂ ಚಂದವೇ. ಆದರೆ ಅಕಸ್ಮಾತ್ ಅರೋಗ್ಯ ಕೆಟ್ಟರೆ ಮಾತ್ರ ಬಹಳ ಕಷ್ಟ. ನಿಜವಾಗಲೂ ಪ್ರಪಂಚದ ಬೇರೆಲ್ಲೆಡೆಗಿಂತ ಇಲ್ಲಿ ಉತ್ತಮ ಆರೋಗ್ಯ ಸೇವೆ ಸಿಗುತ್ತದೆ. ಆದರೆ ಅದಕ್ಕೆ ತೆರಬೇಕಾದ ಬೆಲೆ ಮಾತ್ರ ಬಹಳ ತುಟ್ಟಿ. ಯಾರಿಗೂ ಮಕ್ಕಳಿಗೆ ತೊಂದರೆಯಾಗುವುದು ಇಷ್ಟವಾಗುವುದಿಲ್ಲ. ಎಲ್ಲಾ ತಂದೆ ತಾಯಿಯರ ಭಾವನೆಯೂ ಅಷ್ಟೇ, ಮಕ್ಕಳಿಗಾಗಿ ತಮ್ಮ ಜೀವವನ್ನೇ ತೇಯ್ದುಬಿಡುತ್ತಾರೆ. ಆದರೆ ಅವರಿಗೆ ತೊಂದರೆ ಕೊಡಲು ಮನ ಒಪ್ಪುವುದಿಲ್ಲ. ಎಲ್ಲರ ಮನಸ್ಸಿನಲ್ಲೂ ಏನೋ ಆತಂಕ, ನಮ್ಮ ಅರೋಗ್ಯ ಕೆಟ್ಟು ಬಿಟ್ಟರೆ ಹೇಗೆ ಎನ್ನುವ ಭಯ. ಇದೇ ಜಿಜ್ಞಾಸೆಯಲ್ಲಿಯೇ ಮನೆ ತಲುಪಿದ್ದಾಯಿತು. ಅಮೆರಿಕಾಗೆ ಮಕ್ಕಳ ಮನೆಗೆ ಹೋಗಿಬರುವ ಬಹುತೇಕ ಭಾರತೀಯ ಹಿರಿಯ ನಾಗರಿಕರ ಮನದ ಭಾವವಿದು.

ಮನೆಗೆ ಹೋದೊಡನೆ ಸೊಸೆ ಕೊಟ್ಟ ಬಿಸಿ ಬಿಸಿ ಕಾಫಿ ಕುಡಿಯುತ್ತಿರುವಂತೆಯೇ ಬಾಸ್ಟನ್ನಿಗೆ ಮಗನ ಮನೆಗೆ ಬಂದಿರುವ ಸೋದರತ್ತೆಯ ಫೋನ್ ಬಂದಿತು. ‘ನೀನು ಎರಡು ಬಾರಿ ಫೋನ್ ಮಾಡಿದ್ದೆ, ಆದರೆ ನನಗೆ ಹುಷಾರಿರಲಿಲ್ಲ. ಯೂರಿನರಿ ಇನ್‌ಫೆಕ್ಷನ್ ಆಗಿತ್ತು. ತೋರಿಸಿದರೆ ಕಿಡ್ನಿಯಲ್ಲಿ ಸ್ಟೋನ್ಸ್ ಇದೆ ಎಂದು ಅಡ್ಮಿಟ್ ಮಾಡಿಕೊಂಡರು. ಒಂದು ವಾರ ಅಲ್ಲೇ ಇದ್ದೆ, ಪಾಪ ಮಗ ಒಂದು ವಾರ ರಜಾ ಹಾಕಿ ನನ್ನ ಜೊತೆಯಲ್ಲೇ ಇದ್ದ. ಅವನಿಗೆಷ್ಟು ತೊಂದರೆ, ಎಷ್ಟು ಖರ್ಚಾಯಿತೋ ನನ್ನಿಂದ. ನನ್ನ ಸೊಸೆಗೆ ಹೇಳಿಯೇ ಬಿಟ್ಟೆ ನಾನಿನ್ನು ಮತ್ತೆ ಅಮೆರಿಕಾಗೆ ಬರುವುದಿಲ್ಲ ಎಂದು. ಸಾಕಲ್ಲವಾ ಮತ್ತೆ ಬಂದು ಅವರಿಗೆ ಏಕೆ ತೊಂದರೆ ಕೊಡಬೇಕು. ಅಲ್ವೇನೇ, ಆದರೆ ಪಾಪ ಅವ ನನ್ನನ್ನೇ ಸಮಾಧಾನ ಮಾಡಿದ’ ಎಂದು ಬೇಸರಪಟ್ಟುಕೊಂಡರು.

ನಾವು ನಾಲ್ಕು ತಿಂಗಳಿರಲು ಹೋಗಿದ್ದರಿಂದ ಒಂದು ಬಾರಿ ನಮ್ಮ ಚಿಕ್ಕಮ್ಮನ ಮಗಳ ಮನೆಗೆ ಹೋಗೋಣವೆಂದು ಅವಳಿಗೆ ಫೋನ್ ಮಾಡಿದರೆ ಅವಳದೊಂದು ದೊಡ್ಡ ಕಥೆ– ಅವಳು ಮತ್ತು ಅವಳ ಗಂಡ ಇಬ್ಬರೂ ಅಲ್ಲಿಯ ಸಿಟಿಜನ್ಸ್. ಅವರ ಅತ್ತೆ ಮಾವಂದಿರಿಬ್ಬರೂ ವಯಸ್ಸಾದವರು, ಅವರಿಗೆ ಗ್ರೀನ್ ಕಾರ್ಡಿಗೆ ಪ್ರಯತ್ನಪಡುತ್ತಾ ಇದ್ದಾರೆ. ಇಬ್ಬರ ಆರೋಗ್ಯವೂ ಸರಿಯಾಗಿಲ್ಲ, ‘ಇಲ್ಲಿ ಬಹಳ ವಯಸ್ಸಾದವರನ್ನು ಸಂಭಾಳಿಸುವುದು ಬಹಳ ಕಷ್ಟ, ಅದರಲ್ಲೂ ಅವರಿಗೆ ಓಡಾಡಲು ಮತ್ತೊಬ್ಬರ ಸಹಕಾರ ಬೇಕೆಂದಾಗ ಇನ್ನೂ ಕಷ್ಟ, ನಮ್ಮ ದೇಶದಲ್ಲಾದರೆ ನೋಡಿಕೊಳ್ಳಲು ಜನ ಸಿಕ್ಕುತ್ತಾರೆ. ಅದಕ್ಕೆಂದೇ ಎಜೆನ್ಸಿಗಳಿವೆ. ಅಲ್ಲೂ ಎಲ್ಲವೂ ಸಿಕ್ಕುತ್ತಾದರೂ ಅದನ್ನು ಭರಿಸುವುದು ಕಷ್ಟಸಾಧ್ಯ. ನನಗೆ ಯೋಚನೆಯಾಗಿದೆ ಅಕ್ಕಾ’ ಎಂದು ಅಲವತ್ತುಕೊಂಡಳು. ನಮ್ಮ ದೇಶದಲ್ಲಾದರೆ ಹಿರಿಯ ನಾಗರಿಕರನ್ನು ನೋಡಿಕೊಳ್ಳುವುದು ಅಲ್ಲಿಯಷ್ಟು ಸಮಸ್ಯೆ ಅಲ್ಲ. ಅದಕ್ಕೆ ಬೇಕಾದಷ್ಟು ಅನುಕೂಲಗಳಿವೆ.

ನಾವು ಭಾರತಕ್ಕೆ ಬಂದ ಮೇಲೆ ನಮ್ಮ ಕ್ಲಿನಿಕ್ಕಿಗೆ ಒಬ್ಬರು ಬಂದಿದ್ದರು. ಅವರಿಗೆ ಯೂರಿನರಿ ಇನ್‌ಫೆಕ್ಷನ್ ಆಗಿತ್ತು, ಅದು ಅವರು ಮಗನ ಮನೆಗೆ ಅಮೆರಿಕಾಗೆ ಹೋದಾಗಲೇ ಆಗಿತ್ತಂತೆ. ಆದರೆ ಮಗನಿಗೆ ಖರ್ಚಾಗುತ್ತೆ, ಅವನಿಗೇಕೆ ತೊಂದರೆ ಎಂದುಕೊಂಡು, ಅಲ್ಲಿ ವೈದ್ಯರಿಗೆ ತೋರಿಸದೆ, ಅದನ್ನು ಹಾಗೆಯೇ ಮೀರಿಸಿಕೊಂಡು ಇಲ್ಲಿಗೆ ವಾಪಸ್ ಬಂದಿದ್ದರು. ಪರಿಣಾಮ ಬಹಳಷ್ಟು ದೊಡ್ಡ ಪ್ರಮಾಣದಲ್ಲಿ ಆ್ಯಂಟಿಬಯಾಟಿಕ್ ಔಷಧಿಗಳನ್ನು ತೆಗೆದುಕೊಳ್ಳಬೇಕಾಯಿತು.

ಇಲ್ಲಿಂದ ಹೋಗುವಾಗ ಎಲ್ಲರೂ ಅರೋಗ್ಯ ವಿಮೆ ಮಾಡಿಸಿಕೊಂಡೇ ಹೋಗುವುದು. ಆದರೂ ನಾವು ಇಲ್ಲಿಂದ ಮಾಡಿಸಿಕೊಂಡು ಹೋಗುವ ವಿಮೆ ಸಾಕಾಗುವುದಿಲ್ಲ. ಅದು ಒಂದು ರೀತಿಯ ಮನಸ್ಸಿಗೆ ಸಮಾಧಾನವಷ್ಟೇ ಎನ್ನುವುದು ವಾಸ್ತವ.

ಮಕ್ಕಳಿಗೆ ಸಹಾಯಕ್ಕಾಗಿ ಮತ್ತು ಅವರ ಅಗತ್ಯಕ್ಕಾಗಿ ಬಂದು ಹೋಗುವವರು ಒಂದು ವಯಸ್ಸಾದ ಮೇಲೆ ಅಲ್ಲಿಗೆ ಹೋಗಲು ಹಿಂಜರಿಯುತ್ತಾರೆ. ಅಲ್ಲಿ ಇರುವ ಎಲ್ಲರೂ ಗ್ರೀನ್ ಕಾರ್ಡನ್ನು ಪಡೆದಿರುವುದಿಲ್ಲ ಅಥವಾ ಅಲ್ಲಿನ ಪೌರತ್ವ ಪಡೆದಿರುವುದಿಲ್ಲ. ಆದ್ದರಿಂದ ಅವರಿಗೆ ಮಾತ್ರ ಮೆಡಿಕಲ್ ಇನ್‌ಶೂರೆನ್ಸ್ ಅರ್ಥಾತ್ ಅರೋಗ್ಯ ವಿಮೆ ಇರುತ್ತದೆ. ಅಲ್ಲಿಗೆ ಬಂದ ತಂದೆ ತಾಯಿಯರಿಗೆ ಪ್ರತ್ಯೇಕ ವಿಮೆ ಮಾಡಿಸಬೇಕಾಗುತ್ತದೆ. ಮಕ್ಕಳು ಅಲ್ಲಿಯೇ ಇದ್ದು ತಂದೆ ತಾಯಿಯರನ್ನೂ ತಮ್ಮ ಜೊತೆ ಇಟ್ಟುಕೊಳ್ಳಬಯಸುವವರ ಪರಿಸ್ಥಿತಿ ಸಹ ಸುಲಭವೇನಿಲ್ಲ.

ವಯಸ್ಸಾದ ಕಾಲಕ್ಕೆ ನಮ್ಮ ಮಕ್ಕಳ ಜೊತೆಯಲ್ಲಿಯೇ ಇರೋಣವೆಂದುಕೊಂಡರೂ ಹಿರಿಯ ನಾಗರಿಕರನ್ನು ಒಂದಲ್ಲ ಒಂದು ಕಾಯಿಲೆ ಬಾಧಿಸುತ್ತಲೇ ಇರುತ್ತದೆ. ಹೀಗಿರುವಾಗ ಅವರಿಗೆ ವೈದ್ಯರ ಸಂದರ್ಶನದ ಮತ್ತು ಔಷಧಿಗಳ ಖರ್ಚು ಬಹಳ ತುಟ್ಟಿಯಾಗಿರುತ್ತದೆ. ಮತ್ತು ಇನ್ನೂ ವಯಸ್ಸಾಗಿ ಅವರಿಗೆ ಎಲ್ಲಕ್ಕೂ ಮತ್ತೊಬ್ಬರ ಸಹಕಾರ ಬೇಕೆಂದಾಗ ಸಂಭಾಳಿಸುವುದು ಕಷ್ಟಸಾಧ್ಯವೇ ಸರಿ. ಸಂಪಾದನೆ ಮಾಡುವಾಗ ಒಂದು ಡಾಲರಿಗೆ ಅರವತ್ತೈದು ರೂಪಾಯಿಗಳೆಂದು ಹಿಗ್ಗಿದರೂ ಖರ್ಚು ಮಾಡುವಾಗ ಲೆಕ್ಕ ರೂಪಾಯಿಗಳಲ್ಲೇ ಮಾಡುವುದು ಭಾರತೀಯರ ಜಾಯಮಾನ. ಯೌವನದಲ್ಲಿ ಕೈ ಕಾಲು ಗಟ್ಟಿ ಇದ್ದಾಗ ಅಮೆರಿಕ ಚಂದವೆನಿಸಿದರೂ ಕೊನೆಯ ಕಾಲಕ್ಕೆ ನಮ್ಮ ದೇಶವೇ ಸರಿ. ಅಲ್ಲಿಯ ವೈಭವಕ್ಕೆ ಮಾರುಹೋದ ಜೀವ ಕೂಡ ಭಾರತದ ಮಣ್ಣಿನಲ್ಲೇ ಮಣ್ಣಾಗಲು ಬಯಸುತ್ತದೆ. ಮುಂಜಾನೆಯಿಂದ ಸಂಜೆಯವರೆಗೆ ಊರೆಲ್ಲಾ ಅಲೆದರೂ ಸಂಜೆಯ ಹೊತ್ತಿಗೆ ಅಮ್ಮನ ಮಡಿಲಿಗೆ ಬರುವ ಮಗುವಿನಂತೆ, ಬಾಳ ಸಂಜೆಯಲ್ಲಿ, ಇಳಿ ವಯಸ್ಸಿನಲ್ಲಿ ನಮ್ಮ ದೇಶವೇ ನಮಗೆ ಸರಿ. ಇದೆಲ್ಲ ನೋಡಿದರೆ ಮಾತೃಭೂಮಿಯ ಋಣವ ಅಷ್ಟು ಸುಲಭದಲ್ಲಿ ಮರೆಯಲಾಗದು ಅನಿಸದೇ?

ಬರಹ ಇಷ್ಟವಾಯಿತೆ?

 • 8

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !