18ರಂದು ರೈತರಿಂದ ವಿಧಾನ ಸೌಧ ಮುತ್ತಿಗೆ

7
ಸಕ್ಕರೆ ಕಾರ್ಖಾನೆಗಳ ವಿರುದ್ಧ ಕಂದಾಯ ವಸೂಲಿ ಬಾಕಿ ಆದೇಶಕ್ಕೆ ಆಗ್ರಹ

18ರಂದು ರೈತರಿಂದ ವಿಧಾನ ಸೌಧ ಮುತ್ತಿಗೆ

Published:
Updated:
Deccan Herald

ಚಾಮರಾಜನಗರ: ಕಬ್ಬು ಬೆಳೆಗಾರರ ಹಾಗೂ ರೈತರ ಇತರೆ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲು, ‘ಕೃಷಿ ಸಾಲ ನೀಡಿ, ಇಲ್ಲವೇ ಬ್ಯಾಂಕ್‌ ಮುಚ್ಚಿ’ ಚಳವಳಿ ಮೂಲಕ ಸೆಪ್ಟೆಂಬರ್‌ 18ರಂದು ವಿಧಾನ ಸೌಧ ಮುತ್ತಿಗೆ ಹಾಕಲಾಗುವುದು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್‌ ಸೋಮವಾರ ಹೇಳಿದರು. 

ಸಕ್ಕರೆ ಕಾರ್ಖಾನೆಗಳು ರೈತರಿಗೆ ಕೊಡಬೇಕಾಗಿರುವ ಬಾಕಿ ಹಣ ನೀಡಬೇಕು. ಬ್ಯಾಂಕುಗಳು ರೈತರಿಗೆ ಕೃಷಿ ಸಾಲ ನೀಡದೇ ಸತಾಯಿಸುತ್ತಿವೆ. ಇದರ ಬಗ್ಗೆ ಸರ್ಕಾರದ ಗಮನ ಸೆಳೆಯಲು ಈ ಪ್ರತಿಭಟನೆ ಆಯೋಜಿಸಲಾಗಿದೆ. ಇದರಲ್ಲಿ ರೈತರು ಭಾಗವಹಿಸಬೇಕು ಎಂದು ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿದರು.

ರೈತರಿಗೆ ಬಾಕಿ ಹಣ ನೀಡದಿರುವ ರಾಜ್ಯದ ಎಲ್ಲ ಸಕ್ಕರೆ ಕಾರ್ಖಾನೆಗಳ ವಿರುದ್ಧ ಸರ್ಕಾರ ಕಂದಾಯ ವಸೂಲಿ ಬಾಕಿ ಆದೇಶ ಹೊರಡಿಸಬೇಕು. ಕಾನೂನುಬದ್ಧ ದ್ವಿಪಕ್ಷೀಯ ಒಪ್ಪಂದವನ್ನು ರಾಜ್ಯ ಸರ್ಕಾರ ಜಾರಿ ಮಾಡಿದ್ದರೂ ಕಾರ್ಖಾನೆಗಳು ಪಾಲನೆ ಮಾಡುತ್ತಿಲ್ಲ. ಕೂಡಲೇ, ದ್ವಿಪಕ್ಷೀಯ ಒಪ್ಪಂದ ಜಾರಿಗೆ ತರಬೇಕು. ರೈತರ ಸಮಸ್ಯೆ ಪರಿಹಾರಕ್ಕೆ ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

2017–18ನೇ ಸಾಲಿನಲ್ಲಿ ಕಬ್ಬು ಸರಬರಾಜು ಮಾಡಿದ ರೈತರಿಗೆ ರಾಜ್ಯ ಸಲಹಾ ಬೆಲೆ(ಎಸ್‌ಎಪಿ) ದರದ ಅಂತಿಮ ಕಂತು ಬಣ್ಣಾರಿ ಸಕ್ಕರೆ ಕಾರ್ಖಾನೆಯಿಂದ ಕೊಡಿಸಲು ಕ್ರಮಕೈಗೊಳ್ಳಬೇಕು ಎಂದರು.

ಕೇಂದ್ರ ಸರ್ಕಾರ 2018– 19ನೇ ಸಾಲಿಗೆ ಕಬ್ಬಿನ ನ್ಯಾಯಬದ್ಧ ಲಾಭದಾಯಕ ಬೆಲೆ (ಎಫ್‌ಆರ್‌ಪಿ) ನಿಗದಿ ಮಾಡುವಾಗ ಸಕ್ಕರೆ ಅಂಶವನ್ನು 9.5ರಿಂದ 10ಕ್ಕೆ ಏರಿಕೆ ಮಾಡಿ ಟನ್‌ ಕಬ್ಬಿಗೆ ₹2,750 ನಿಗದಿಗೊಳಿಸಿದೆ. ಕಾರ್ಖಾನೆಗಳ ಅವೈಜ್ಞಾನಿಕ ನೀತಿಯಿಂದ ಕಬ್ಬು ಹೆಚ್ಚು ಬೆಳೆಯುವ ರೈತರಿಗೆ ಸಂಕಷ್ಟ ಎದುರಾಗಿದೆ ಎಂದರು.

ಈ ಬಗ್ಗೆ ಪುನರ್‌ಪರಿಶೀಲನೆ ಮಾಡುವಂತೆ ರಾಜ್ಯ ಸರ್ಕಾರ ಹಾಗೂ ಸಂಸದರು ಕೇಂದ್ರ ಸರ್ಕಾರವನ್ನು ಒತ್ತಾಯಿಸಬೇಕು ಎಂದು ಮನವಿ ಮಾಡಿದರು.

ರಾಜ್ಯ ಸರ್ಕಾರ ಎಸ್‌ಎಪಿ ದರ ನಿಗದಿಗೆ ರಚಿಸಿರುವ ಕಬ್ಬು ಖರೀದಿ ಮಂಡಳಿಯಲ್ಲಿ ಖಾಸಗಿ ಸಕ್ಕರೆ ಕಾರ್ಖಾನೆಗಳ ಸಂಘಕ್ಕೆ ಪ್ರಾತಿನಿಧ್ಯ ನೀಡದೆ, ರಾಜ್ಯ ಕಬ್ಬು ಬೆಳೆಗಾರರ ಸಂಘಕ್ಕೆ ಪ್ರಾತಿನಿಧ್ಯ ನೀಡಬೇಕು ಎಂದು ಹೇಳಿದರು.

ರಾಜ್ಯ ಕಬ್ಬು ಬೆಳೆಗಾರರ ಸಂಘದ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಕಾರ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್‌, ಜಿಲ್ಲಾ ಘಟಕದ ಅಧ್ಯಕ್ಷ ಪಿ.ಸೋಮಶೇಖರ್, ತಾಲ್ಲೂಕು ಅಧ್ಯಕ್ಷ ಎಚ್.ಮೂಕಹಳ್ಳಿ ಮಹದೇವಸ್ವಾಮಿ, ರೈತ ಸಂಘದ ಅಧ್ಯಕ್ಷ ಹೊನ್ನೂರು ಪ್ರಕಾಶ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !