ಬುಧವಾರ, ಜೂನ್ 23, 2021
23 °C
ವಾರದ ಸಂದರ್ಶನ: ಡಾ.ಛಾಯಾ ದೇಗಾಂವಕರ್‌

‘ಪ್ರತ್ಯೇಕತೆ’ಯ ಕೂಗಿಗೆ ‘ಅಭಿವೃದ್ಧಿ’ಯೇ ಉತ್ತರ

ರಾಜೇಶ್‌ ರೈ ಚಟ್ಲ Updated:

ಅಕ್ಷರ ಗಾತ್ರ : | |

Deccan Herald

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗು ವಾದ-ವಿವಾದದ ಸುಳಿಗಾಳಿ ಎಬ್ಬಿಸಿದೆ. ಅಭಿವೃದ್ಧಿಯಲ್ಲಿ ಅನ್ಯಾಯ– ತಾರತಮ್ಯವಾಗಿದೆ ಎಂಬ ಕಾರಣಕ್ಕೆ ಈ ಭಾಗದ ಜನ ಪ್ರತ್ಯೇಕತೆಯ ಬೇಡಿಕೆ ಮುಂದಿಟ್ಟಿದ್ದಾರೆ. ನಿಜವಾಗಿ ತರತಮವಾಗಿದೆಯೇ, ಪ್ರತ್ಯೇಕ ರಾಜ್ಯದ ಕೂಗಿಗೆ ನಿಜದ ನೆಲೆ ಇದೆಯೇ ಎಂಬ ಬಗ್ಗೆ ಗು‌ಲ್ಬರ್ಗ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರು ಹಾಗೂ ಸಮಾಜ ನಿಕಾಯ ಡೀನ್‌ ಆಗಿದ್ದ ಡಾ. ಛಾಯಾ ದೇಗಾಂವಕರ್‌ ಮಾತನಾಡಿದ್ದಾರೆ. ಈ ಭಾಗದ ವಸ್ತುಸ್ಥಿತಿಯನ್ನು ತಲಸ್ಪರ್ಶಿ ಅಧ್ಯಯನ ಮಾಡಿರುವ ಅವರು, ಈ ಕುರಿತು ವ್ಯಾಖ್ಯಾನಿಸಿದ್ದಾರೆ.

* ಉತ್ತರ ಕರ್ನಾಟಕ ಭಾಗದ ‘ಅಭಿವೃದ್ಧಿ’ಯನ್ನು ನೀವು ಹೇಗೆ‌ ವ್ಯಾಖ್ಯಾನಿಸುತ್ತೀರಿ?

ಆರ್ಥಿಕತೆ, ಉದ್ದಿಮೆ, ಉತ್ತಮ ರಸ್ತೆಗಳೇ ಅಭಿವೃದ್ಧಿ ಎಂಬ ಪರಿಕಲ್ಪನೆ ಈಗ ಬದಲಾಗಿದೆ. ಮಾನವ ಅಭಿವೃದ್ಧಿ ಸೂಚ್ಯಂಕ ಬಂದ ಬಳಿಕ ‘ಮಾನವ ಅಭಿವೃದ್ಧಿ’ಯೇ ಅಂತಿಮವಾದ ಅಭಿವೃದ್ಧಿ. ಉತ್ತಮ ಆರೋಗ್ಯ, ಗುಣಮಟ್ಟದ ಶಿಕ್ಷಣದ ಮೂಲಕ ಜೀವನಮಟ್ಟ ಸುಧಾರಣೆ ಅಭಿವೃದ್ಧಿ ಅಳೆಯುವ ಮಾನದಂಡಗಳಾಗಿವೆ. ಆ ದೃಷ್ಟಿಯಲ್ಲಿ ನೋಡಿದಾಗ ಉತ್ತರ ಕರ್ನಾಟಕ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಪ್ರಾದೇಶಿಕ ಅಸಮಾನತೆ ಇಲ್ಲಿ ಸ್ಪಷ್ಟವಾಗಿ ಗುರುತಿಸಬಹುದು. ಮುಂಬೈ ಕರ್ನಾಟಕ, ಹೈದರಾಬಾದ್‌ ಕರ್ನಾಟಕ ಭಾಗದ ಭೌಗೋಳಿಕ ಭಿನ್ನತೆ, ಹವಾಮಾನ, ಮಣ್ಣಿನ ಗುಣಲಕ್ಷಣ, ಸಂಪರ್ಕ ವ್ಯವಸ್ಥೆ, ಜೀವನಶೈಲಿ, ರಾಜಕೀಯ–ಐತಿಹಾಸಿಕ ಹಿನ್ನೆಲೆ, ಆರ್ಥಿಕ ಸಾಮಾಜಿಕ ನೆಲೆಗಳೇ ಬೇರೆ.

* ಅಭಿವೃದ್ಧಿಯಲ್ಲಿ ಈ ಭಾಗ ಹಿಂದುಳಿಯಲು ಸಂಪನ್ಮೂಲ ಹರಿವಿನ ಕೊರತೆ ಕಾರಣವೇ?

ದಕ್ಷಿಣ ಕರ್ನಾಟಕ ಮತ್ತು ಉತ್ತರ ಕರ್ನಾಟಕವನ್ನು ತುಲನೆ ಮಾಡಿದರೆ ಅಭಿವೃದ್ಧಿಯಲ್ಲಿರುವ ವ್ಯತ್ಯಾಸವನ್ನು ಎಲ್ಲರೂ ಒಪ್ಪಿಕೊಳ್ಳಲೇಬೇಕು. ಫಜಲ್‌ ಅಲಿ ಸಮಿತಿ ವರದಿ 1954ರಲ್ಲೇ ಇದನ್ನು ಹೇಳಿದೆ. ಡಾ.ಡಿ.ಎಂ. ನಂಜುಂಡಪ್ಪ ಸಮಿತಿ (2002) ವೈಜ್ಞಾನಿಕವಾಗಿ ವಿಶ್ಲೇಷಣೆ ಮಾಡಿದೆ. ಸಂಪನ್ಮೂಲ ಹೆಚ್ಚು ಹರಿದರೆ ಮಾತ್ರ ಆರ್ಥಿಕ ಅಭಿವೃದ್ಧಿ ಸಾಧ್ಯ ಎಂದೂ ಈ ವರದಿಗಳು ಅಭಿಪ್ರಾಯಪಟ್ಟಿವೆ. ಶಿಕ್ಷಣ, ಆರೋಗ್ಯ ವಿಷಯಗಳಲ್ಲಿನ ಯೋಜನೆ ದಕ್ಷಿಣ ಕರ್ನಾಟಕಕ್ಕೆ ಅವಶ್ಯವಾದರೆ, ಉತ್ತರ ಕರ್ನಾಟಕಕ್ಕೆ ಅನಿವಾರ್ಯವಾಗಿದೆ.

* ಅಭಿವೃದ್ಧಿಯ ದಿಕ್ಕುದೆಸೆಯನ್ನು ನಿಖರವಾಗಿ ಗುರುತಿಸುವ ಪ್ರಯತ್ನಗಳು ಆಗಿಲ್ಲವೇ?

2014ರಲ್ಲಿ ಜಿಲ್ಲಾಮಟ್ಟದ ಮಾನವ ಅಭಿವೃದ್ಧಿ ಸೂಚ್ಯಂಕ ವರದಿ ಬಂದಿದೆ. ಅದರ ಆ‌ಧಾರದಲ್ಲಿ ಜಿಲ್ಲಾವಾರು ಸ್ಥಾನಮಾನ ಗುರುತಿಸಲಾಗಿದೆ. ವಿಪರ್ಯಾಸವೆಂದರೆ, ಈ ಪಟ್ಟಿಯ ಕೊನೆಯ 14 ಸ್ಥಾನಗಳಲ್ಲಿರುವ ಜಿಲ್ಲೆಗಳಲ್ಲಿ ಚಾಮರಾಜನಗರ ಹೊರತುಪಡಿಸಿ ಉಳಿದೆಲ್ಲ ಜಿಲ್ಲೆಗಳು ಉತ್ತರ ಕರ್ನಾಟಕ ಭಾಗದಲ್ಲಿವೆ. ‘ಹಿಂದುಳಿದಿದೆ’ ಎನ್ನಲು ಇನ್ನೇನು ಸಾಕ್ಷ್ಯಬೇಕು.

* ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಏನಿದೆ?

ಇಡೀ ರಾಜ್ಯದ ಜನರ ಜೀವನಮಟ್ಟದ ಚಿತ್ರಣವಿದೆ. ಅಭಿವೃದ್ಧಿ ಮತ್ತು ಹಿಂದುಳಿಯುವಿಕೆಯನ್ನು ವಸತಿ ಸೌಲಭ್ಯ, ಜೀವನೋಪಾಯ, ತಲಾ ಆದಾಯ, ಆರೋಗ್ಯ ಮತ್ತಿತರ ಅಂಶಗಳ ಆಧಾರದಲ್ಲಿ ನಿರ್ದಿಷ್ಟವಾಗಿ ಗುರುತಿಸಲಾಗಿದೆ. ವರದಿ ಪ್ರಕಾರ ಆರೋಗ್ಯ ವಲಯದಲ್ಲಿ ಯಾದಗಿರಿ ಜಿಲ್ಲೆಗೆ ಕೇವಲ 0.08 ಅಂಕ ಸಿಕ್ಕಿದೆ. ಬೆಂಗಳೂರು ಪೂರ್ಣ ಒಂದು ಅಂಕ ಪಡೆದಿದೆ. ಬೀದರ್‌, ಬಾಗಲಕೋಟೆ ಜಿಲ್ಲೆಗಳೂ ಹಿಂದುಳಿದಿವೆ. ದಲಿತ ಸಮುದಾಯದ ಸ್ಥಿತಿ ಮತ್ತಷ್ಟು ಕೆಳಮಟ್ಟದಲ್ಲಿದೆ. ಶೇ 55ರಷ್ಟು ಮಕ್ಕಳು ಪೌಷ್ಟಿಕಾಂಶ ಕೊರತೆಯಿಂದ ಬಳಲುತ್ತಿದ್ದಾರೆ. 2001–2011ರ ಜನಗಣತಿ ಗಮನಿಸಿದರೆ, ವಿಜಯಪುರ ಜಿಲ್ಲೆ ಶೈಕ್ಷಣಿಕ ಮಟ್ಟದಲ್ಲಿ ಸಾಧಿಸಿರುವ ಪ್ರಗತಿ ಶೇ 2ಕ್ಕಿಂತಲೂ ಕಡಿಮೆ.

* ಪ್ರತ್ಯೇಕತೆಯ ಕೂಗು ತಪ್ಪಲ್ಲ ಎನ್ನುವುದು ನಿಮ್ಮ ಮಾತಿನ ಅರ್ಥವೇ?

ಖಂಡಿತಾ ಅಲ್ಲ. ಪ್ರತ್ಯೇಕ ರಾಜ್ಯದಿಂದ ಪರಿಹಾರ ಆಗುವುದಿಲ್ಲ. ಅಖಂಡ ಕರ್ನಾಟಕದ ಸಮಾನ ಅಭಿವೃದ್ಧಿಗೆ ಒತ್ತು ನೀಡಬೇಕು. ಆರ್ಥಿಕತೆ– ಜೀವನಮಟ್ಟ ಸುಧಾರಣೆಗೆ ದಾರಿ ಮಾಡಿಕೊಡಬೇಕು.

* ಹಾಗಿದ್ದರೆ, ಅಭಿವೃದ್ಧಿ– ಹಿಂದುಳಿಯುವಿಕೆಗೆ ಪರಿಹಾರವೇನು?

ಎಲ್ಲ ಕ್ಷೇತ್ರಗಳಲ್ಲಿ ಏಕಕಾಲಕ್ಕೆ ಅಭಿವೃದ್ಧಿಗೆ ಒತ್ತು ನೀಡಬೇಕು. ಶಿಕ್ಷಣ– ಆರೋಗ್ಯ ಜೊತೆಜೊತೆಯಲ್ಲಿ ಹೋಗಬೇಕು. ಅಂಗನವಾಡಿ ಹಂತದಿಂದಲೇ ಸುಧಾರಣೆ ಅಗತ್ಯ. ಉತ್ತಮ, ಗುಣಮಟ್ಟದ ಹಾಗೂ ಉನ್ನತ ಮಟ್ಟದ ಶಿಕ್ಷಣದ ಕೊರತೆ ನೀಗಬೇಕು. ಸ್ತ್ರೀ ಶಕ್ತಿ ಸಂಘಟನೆಗಳನ್ನು ಸಶಕ್ತಗೊಳಿಸಬೇಕು. ಸಮಗ್ರ ಕೃಷಿ ಪದ್ಧತಿ, ಮಾರುಕಟ್ಟೆ ವ್ಯವಸ್ಥೆಯಲ್ಲಿ ಸುಧಾರಣೆಯಾಗಬೇಕು. ರೈತ ಸಂಪರ್ಕ ಕೇಂದ್ರಗಳ ಸ್ಥಾಪನೆ, ಸಂಗ್ರಹವಾದ ಉತ್ಪನ್ನಗಳನ್ನು ಕಾಪಿಡಲು ವ್ಯವಸ್ಥೆ, ಸಣ್ಣ ಕೈಗಾರಿಕೆಗಳ ಸ್ಥಾಪನೆ ಅಗತ್ಯವಿದೆ. ಕೌಶಲ ತರಬೇತಿ, ಪೂರಕವಾಗಿ ಉದ್ಯಮಶೀಲತೆಗೆ ಪ್ರೋತ್ಸಾಹ ನೀಡಬೇಕಿದೆ. ಮಾಹಿತಿ, ಸಂಪರ್ಕ ಮತ್ತು ಶಿಕ್ಷಣ (ಐಸಿಇ) ಮೂಲಕ ಅರಿವು ಮೂಡಿಸಬೇಕಾದ ತುರ್ತು ಕೂಡಾ ಇದೆ. ಆರ್ಟ್ಸ್‌ ಲೆಕ್ಚರರ್‌ಗಳೇ ವಿಜ್ಞಾನ ಕಲಿಸುತ್ತಿದ್ದಾರೆ ಎಂಬ ಅಪವಾದ ಇದ್ದರೂ ಈ ಭಾಗದಲ್ಲಿ ಅದು ಸಾಮಾನ್ಯ. ಈ ಸ್ಥಿತಿ ಬದಲಾಗಬೇಕು.

* ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ (ನರೇಗಾ), ‘ಅನ್ನ ಭಾಗ್ಯ’ದಿಂದ ಬದಲಾವಣೆ ಆಗಿಲ್ಲವೇ?

ಈ ಯೋಜನೆಗಳಿಂದ ಬದಲಾವಣೆ ಆಗಿಲ್ಲ ಎಂದಲ್ಲ. ಸದ್ಯದ ಪರಿಸ್ಥಿತಿಯನ್ನು ನಿಭಾಯಿಸಲು ಮಾತ್ರ ಸಾಧ್ಯವಾಗಿದೆ. ಆದರೆ, ಸುಸ್ಥಿರ ಅಭಿವೃದ್ಧಿಯಾಗಿಲ್ಲ. ಇಂತಹ ಅಲ್ಪಕಾಲೀನ ಯೋಜನೆಗಳಿಗಿಂತಲೂ ದೀರ್ಘಕಾಲೀನ ಯೋಜನೆಗಳು ಅಗತ್ಯವಾಗಿದೆ.

* ಜನ ಗುಳೆ ಹೋಗುವ ಸ್ಥಿತಿ ಈಗಲೂ ಇದೆಯಲ್ಲ?

ಬಳ್ಳಾರಿ, ಯಾದಗಿರಿ, ಚಿತ್ರದುರ್ಗ ಭಾಗದ ಜನರ ವಲಸೆ ಪ್ರಮಾಣ ಇನ್ನೂ ಹೆಚ್ಚಿದೆ. ಈ ಕುರಿತ ಅಧ್ಯಯನ ವರದಿಯೇ ಈ ಸತ್ಯವನ್ನು ತೆರೆದಿಟ್ಟಿದೆ. ಬಡತನ ರೇಖೆಯ ಅಂಚಿನಲ್ಲಿರುವ ಜನ ಆರೋಗ್ಯ, ಕೌಟುಂಬಿಕ ಅಗತ್ಯಗಳಿಗೆ ಸಾಲದ ಮೊರೆ ಹೋಗುತ್ತಾರೆ. ಹರಕೆ, ಮೂಢನಂಬಿಕೆಗಳಿಗೂ ಸಾಕಷ್ಟು ವ್ಯಯ ಮಾಡುತ್ತಾರೆ. ಸಾಲದ ಶೂಲದಿಂದ ತಪ್ಪಿಸಿಕೊಳ್ಳಲು ಕೂಲಿ ಹುಡುಕಿ ಮಹಾನಗರಗಳ ಕಡೆಗೆ ಮುಖ ಮಾಡುತ್ತಾರೆ. ಕೂಲಿ ಹೆಚ್ಚು ಸಿಗುತ್ತದೆ ಎಂಬ ಮನೋಭಾವ ಇದಕ್ಕೆ ಕಾರಣ.

* ಹಾಗಿದ್ದರೆ ನಾವು ಸೋತಿದ್ದು ಎಲ್ಲಿ?

ಯೋಜನೆಗಳ ಅನುಷ್ಠಾನ ಪೂರ್ಣಮಟ್ಟದಲ್ಲಿ ಗುರಿ ಮುಟ್ಟುವುದಿಲ್ಲ. ಅಸಮರ್ಪಕ ಯೋಜನೆಗಳಿಂದಾಗಿಯೂ ಗುರಿ ಮಟ್ಟಲು ವಿಫಲರಾಗಿದ್ದೇವೆ. ಮೇಲುಸ್ತುವಾರಿಯೇ ಇಲ್ಲ. ಎಲ್ಲಿಯವರೆಗೆ ಅನುಷ್ಠಾನ ಪೂರ್ಣ ಆಗುವುದಿಲ್ಲವೊ ಅಲ್ಲಿಯವರೆಗೆ ಗುರಿ ತಲುಪುವುದೂ ಕಷ್ಟ. ಸಮಸ್ಯೆಗಳ ಶಾಶ್ವತ ಪರಿಹಾರಕ್ಕೆ ಪ್ರಾದೇಶಿಕ ಅಭಿವೃದ್ಧಿ ನೀತಿ ರೂಪಿಸಬೇಕು. ನಂಜುಂಡಪ್ಪ ವರದಿ ಕೂಡಾ ಅದನ್ನೇ ಪ್ರತಿಪಾದಿಸಿದೆ. ಜೊತೆಗೆ ಅನುಷ್ಠಾನ ವಿಚಾರದಲ್ಲೂ ಸೋತಿದ್ದೇವೆ. ಕಾಲಮಿತಿಯೊಳಗೆ ಯೋಜನೆ ಪೂರ್ಣಗೊಳ್ಳದಿದ್ದರೆ ವೆಚ್ಚ ಹೆಚ್ಚುತ್ತದೆ. ಫಲಾನುಭವಿಗಳೂ ಸಂಕಷ್ಟ ಪಡೆಬೇಕಾಗುತ್ತದೆ.

* ನಿಮ್ಮ ಸಲಹೆ?

371 (ಜೆ) ಕಲಮಿನಡಿ ವಿಶೇಷ ಸ್ಥಾನಮಾನ ಸಿಕ್ಕಿದ ಪರಿಣಾಮ ಹೈದರಾಬಾದ್ – ಕರ್ನಾಟಕ ಭಾಗದ ಜನ ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಮುಂದುವರಿಯುತ್ತಿದ್ದಾರೆ. ಇದರ ದೂರಗಾಮಿ ಪರಿಣಾಮವನ್ನು ಮುಂದಿನ ಕೆಲವೇ ವರ್ಷಗಳಲ್ಲಿ ಸ್ಪಷ್ಟವಾಗಿ ಕಾಣಬಹುದು. ಅದೇ ರೀತಿ, ಉ‌ತ್ತರ ಕರ್ನಾಟಕ ಭಾಗದ ಇತರ ಜಿಲ್ಲೆಗಳಿಗೂ ಪ್ರತ್ಯೇಕ ಪ್ರಾದೇಶಿಕ ಅಭಿವೃದ್ಧಿ ನೀತಿ ಅಗತ್ಯವಿದೆ. ನಂಜುಂಡಪ್ಪ ವರದಿಯಲ್ಲೂ ಈ ಪ್ರಸ್ತಾವವಿದೆ. ಶಿಕ್ಷಣದ ಮೂಲಕ ಜನಸಂಖ್ಯೆ ಹೆಚ್ಚಳದ ಮೇಲೆ ನಿಯಂತ್ರಣ ಅಗತ್ಯ. ಲಿಂಗ ಮತ್ತು ಸಾಮಾಜಿಕವಾಗಿ ಹಿಂದುಳಿದ ಸಮುದಾಯವೆಂಬ ತಾರತಮ್ಯಕ್ಕೆ ಅವಕಾಶ ನೀಡದೆ, ಎಲ್ಲರನ್ನೂ ಒಳಗೊಳ್ಳುವ ಸಮಗ್ರ ಮಾನವ ಅಭಿವೃದ್ಧಿಯ ಕಾರ್ಯತಂತ್ರಗಳಿಗೆ ಒತ್ತು ನೀಡಬೇಕು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು