ಲೈಂಗಿಕ ಕಿರುಕುಳ; ಕ್ರಿಮಿನಾಶಕ ಕುಡಿದ ಗೃಹಿಣಿ

7
ಚನ್ನಮ್ಮನಕೆರೆ ಪೊಲೀಸರಿಂದ ಆರೋಪಿಯ ಬಂಧನ

ಲೈಂಗಿಕ ಕಿರುಕುಳ; ಕ್ರಿಮಿನಾಶಕ ಕುಡಿದ ಗೃಹಿಣಿ

Published:
Updated:

ಬೆಂಗಳೂರು: ಪತಿ ಕೆಲಸಕ್ಕೆ ತೆರಳಿದ ನಂತರ ಮನೆಗೆ ನುಗ್ಗಿ 23 ವರ್ಷದ ಗೃಹಿಣಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪದಡಿ ಪ್ರಕಾಶ್ ಎಂಬಾತನನ್ನು ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರು ಬಂಧಿಸಿದ್ದಾರೆ.

ಆತನ ಕಿರುಕುಳ ತಾಳಲಾರದೆ ಸಂತ್ರಸ್ತೆ ಮಂಗಳವಾರ ಕ್ರಿಮಿನಾಶಕ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದರು. ಸದ್ಯ ಅವರು ಕೆ.ಸಿ.ಜನರಲ್ ಆಸ್ಪತ್ರೆಗೆ ದಾಖಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬುದ್ಧಿ ಮಾತಿಗೂ ಬಗ್ಗಲಿಲ್ಲ: ‘ನಾನು, ಪತಿ ಹಾಗೂ 4 ವರ್ಷದ ಮಗನೊಂದಿಗೆ ಬನಶಂಕರಿಯಲ್ಲಿ ನೆಲೆಸಿದ್ದೇನೆ. ಐದು ತಿಂಗಳ ಹಿಂದೆ ಪ್ರಕಾಶ್ ನನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದ. ಆ ವಿಷಯವನ್ನು ಪತಿಗೆ ತಿಳಿಸಿದ್ದೆ. ಅವರು ಆತನನ್ನು ಮನೆಗೆ ಕರೆಸಿ ಬೈದು ಬುದ್ಧಿ ಹೇಳಿದ್ದರು. ಆನಂತರ ಕೆಲ ದಿನಗಳವರೆಗೆ ಸುಮ್ಮನಿದ್ದ ಪ್ರಕಾಶ್, ಈಗ ಮತ್ತೆ ಚಾಳಿ ಮುಂದುವರಿಸಿದ್ದಾನೆ’ ಎಂದು ಸಂತ್ರಸ್ತೆ ಪೊಲೀಸರಿಗೆ ಹೇಳಿಕೆ ಕೊಟ್ಟಿದ್ದಾರೆ.

‘ಡಿ.7ರ ಬೆಳಿಗ್ಗೆ ಮನೆಯೊಳಗೇ ಬಂದಿದ್ದ ಆತ, ‘ನಿನ್ನ ಗಂಡ ಮನೆಯಲ್ಲಿಲ್ಲ. ನನ್ನೊಂದಿಗೆ ಸಹಕರಿಸು’ ಎಂದು ಕೈ ಹಿಡಿದು ಎಳೆದಾಡಿದ್ದ. ಕೂಗಾಡಿ ಜನ ಸೇರಿಸುವುದಾಗಿ ಹೇಳಿದ ಬಳಿಕ ಹೊರಟು ಹೋಗಿದ್ದ. ಈ ವಿಚಾರ ಪತಿಗೆ ಗೊತ್ತಾದರೆ ನನ್ನನ್ನೂ ಮನೆಯಿಂದ ಹೊರಹಾಕುತ್ತಾರೆ ಎಂಬ ಭಯ ಶುರುವಾಯಿತು. ಹೀಗಾಗಿ, ಆ ವೇದನೆಯನ್ನು ಮನಸ್ಸಿನಲ್ಲೇ ಅದುಮಿಟ್ಟುಕೊಂಡಿದ್ದೆ.’

‘ಆದರೆ, ನಂತರದ ದಿನಗಳಲ್ಲೂ ಆತ ಮನೆ ಹತ್ತಿರ ಬಂದು ಮೊಬೈಲ್‌ ನಂಬರ್ ಕೇಳುತ್ತಿದ್ದ. ‘ಪ್ರತಿ ರಾತ್ರಿ ಕರೆ ಮಾಡಿ ನನ್ನೊಂದಿಗೆ ಮಾತನಾಡಬೇಕು’ ಎಂದು ಪೀಡಿಸುತ್ತಿದ್ದ. ಆತನ ಕಿರುಕುಳ ಹೆಚ್ಚಾಗಿದ್ದರಿಂದ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದೆ. ಕ್ರಿಮಿನಾಶಕದ ಪುಡಿಯನ್ನು ನೀರಿನಲ್ಲಿ ಹಾಕಿಕೊಂಡು ಕುಡಿದಿದ್ದೆ. ಮಹಿಳೆ ಮೇಲೆ ಕನಿಷ್ಠ ಗೌರವವೂ ಇಲ್ಲದ ಹಾಗೂ ಇಷ್ಟೊಂದು ವಿಕೃತ ಮನಸ್ಸುಳ್ಳ ಪ್ರಕಾಶ್‌ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು’ ಎಂದು ಸಂತ್ರಸ್ತೆ ಮನವಿ
ಮಾಡಿದ್ದಾರೆ.

‘ಸಹಜ ಮಾತುಕತೆ ಅಷ್ಟೇ’

‘ಸಂತ್ರಸ್ತೆ ಆತ್ಮಹತ್ಯೆಗೆ ಯತ್ನಿಸಿದ ವಿಷಯ ತಿಳಿದು ಪ್ರಕಾಶ್ ಮನೆ ತೊರೆದಿದ್ದ. ಪೋಷಕರಿಂದ ಕರೆ ಮಾಡಿಸಿ ಆತನನ್ನು ಮನೆಗೆ ಕರೆಸಿಕೊಂಡು ವಶಕ್ಕೆ ಪಡೆದೆವು. ‘ಎಲ್ಲ ಸ್ಥಳೀಯರನ್ನು ಮಾತನಾಡಿಸುವಂತೆ ಆ ಮಹಿಳೆಯನ್ನೂ ಮಾತನಾಡಿಸುತ್ತಿದ್ದೆ. ಅದರಲ್ಲಿ ಕೆಟ್ಟ ಉದ್ದೇಶ ಇರಲಿಲ್ಲ. ಇನ್ನುಮುಂದೆ ಅವರ ತಂಟೆಗೇ ಹೋಗುವುದಿಲ್ಲ’ ಎಂದು ಆರೋಪಿ ಹೇಳಿಕೆ ಕೊಟ್ಟಿದ್ದಾನೆ. ಇನ್ನೂ ವಿಚಾರಣೆ ನಡೆಯುತ್ತಿದೆ’ ಎಂದು ಪೊಲೀಸರು ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 9

  Happy
 • 0

  Amused
 • 4

  Sad
 • 0

  Frustrated
 • 0

  Angry

Comments:

0 comments

Write the first review for this !