ಶಬರಿಮಲೆ ವಿವಾದ; ಸಂಪ್ರದಾಯದ ವಿರುದ್ಧದ ದಾಳಿ

7

ಶಬರಿಮಲೆ ವಿವಾದ; ಸಂಪ್ರದಾಯದ ವಿರುದ್ಧದ ದಾಳಿ

Published:
Updated:

ಬೆಂಗಳೂರು: ಶಬರಿಮಲೆಗೆ ಮಹಿಳೆಯರ ಪ್ರವೇಶ ಸಂಬಂಧಿಸಿದ ವಿವಾದವು ದೇವಸ್ಥಾನದ ಮೂಲ ಸಂಪ್ರದಾಯದ ವಿರುದ್ಧ ನಡೆದ ದಾಳಿ ಎಂದು ಪ್ರಜ್ಞಾಪ್ರವಾಹ್‌ ಸಂಘಟನೆಯ ರಾಷ್ಟ್ರೀಯ ಸಂಚಾಲಕ ಜೆ.ನಂದಗೋಪಾಲ್‌ ಅಭಿಪ್ರಾಯಪಟ್ಟರು. 

ಶಬರಿಮಲೆ ಅಯ್ಯಪ್ಪ ಸಂರಕ್ಷಣಾ ಸಮಿತಿ ಆಶ್ರಯದಲ್ಲಿ ಜಯನಗರದ ರಾಷ್ಟ್ರೋತ್ಥಾನ ಸಮಿತಿಯ ಯೋಗ ಮತ್ತು ಫಿಟ್ನೆಸ್‌ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ‘ಶಬರಿಮಲೆಯಲ್ಲಿ ಏನು ನಡೆಯುತ್ತಿದೆ’ ಶೀರ್ಷಿಕೆಯ ವಿಶೇಷ ಉಪನ್ಯಾಸದಲ್ಲಿ ಅವರು ಮಾತನಾಡಿದರು. 

‘ಕೇರಳದಲ್ಲಿ ಶಬರಿಮಲೆ ದೇವಸ್ಥಾನದ ವಿಚಾರದಲ್ಲಿ ಗೊಂದಲ ಮೂಡಿಸಲಾಗುತ್ತಿದೆ. ಒಂದಿಷ್ಟು ಎಡ, ಪ್ರಗತಿಪರ ಹೆಸರಿನ ಶಕ್ತಿಗಳು ಮುನ್ನೆಲೆಯಲ್ಲಿ ಕಾಣಿಸಿಕೊಂಡು ಹೋರಾಟ ಮಾಡುತ್ತಿವೆ. ಇದಕ್ಕೆ ಕೇರಳ ಸರ್ಕಾರದ ಕುಮ್ಮಕ್ಕೂ ಇದೆ. ವಿವಾದದ ಕಾರಣದಿಂದಲೇ ದೇವಸ್ಥಾನಕ್ಕೆ ಸುಮಾರು ₹ 100 ಕೋಟಿಯಷ್ಟು ನಷ್ಟ ಉಂಟಾಗಿದೆ’ ಎಂದು ಅವರು ವಿವರಿಸಿದರು. 

‘ಅಧಿಕಾರ ಶಕ್ತಿ, ಬಂಡವಾಳಶಾಹಿ ಶಕ್ತಿ, ಮತ್ತು ಸರ್ಕಾರ ಒಟ್ಟಾಗಿ ಸೇರಿ ದೇವಸ್ಥಾನದ ಪಾವಿತ್ರ್ಯತೆಗೆ ಭಂಗ ತಂದಿವೆ. ಇಂಥ ಸೂಕ್ಷ್ಮ ಸಂದರ್ಭಗಳು ಬಂದಾಗ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಬೇಕು. ಈ ವಿಚಾರವು ಸಮವರ್ತಿ ಪಟ್ಟಿಯಲ್ಲಿ ಬರುವುದರಿಂದ ಕೇಂದ್ರ, ರಾಜ್ಯ ಸರ್ಕಾರಗಳೆರಡೂ ಒಟ್ಟಾಗಿ ಸಮಾಲೋಚಿಸಿ ಸರಿಯಾದ ಕಾನೂನೊಂದನ್ನು ರೂಪಿಸಬೇಕು’ ಎಂದರು. 

‘ಅಯ್ಯಪ್ಪನ ಉಗಮ, ಆತ ಬೆಟ್ಟವನ್ನೇರಿ ಕುಳಿತ ಕಥೆಯ ಕಾಲಘಟ್ಟದಲ್ಲಿ ಅಲ್ಲಿ ಮುಸ್ಲಿಮರೇ ಇರಲಿಲ್ಲ. ಅಲ್ಲಿರುವುದು ವಾವರ ಅಲ್ಲ, ವಾಬರ. ವಾಬರ ಶಿವಗಣಗಳಲ್ಲೊಬ್ಬ. ಆದರೆ, ಕಾಲಕ್ರಮೇಣ ಅದನ್ನು ವಾವರ ಮಸೀದಿಯಾಗಿ ಪರಿವರ್ತಿಸಲಾಯಿತು. ಈ ಮಸೀದಿಯವರು ನಮಗೆ (ಹಿಂದೂಗಳಿಗೆ) ಬೂದಿ ಕೊಡುತ್ತಾರೆ. ಮಸೀದಿಯೊಳಗಿನ ಸಮಾಧಿಗೆ ಅದೇ ಬೂದಿಯನ್ನು ಹಾಕುತ್ತಾರೆಯೇ?’ ಎಂದು ಪ್ರಶ್ನಿಸಿದರು.  

‘ದೇವಸ್ಥಾನಗಳಿಗೆ ಮಹಿಳೆಯರು ಪ್ರವೇಶಿಸಲು ಅವಕಾಶ ಕೊಡಬೇಕು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಆದರೆ, ಶಬರಿಮಲೆಯನ್ನೇ ಗುರಿಯಾಗಿರಿಸಿಕೊಂಡು ಹೇಳಿಲ್ಲ. ಇದಕ್ಕೂ ಮುನ್ನ ನೀಡಲಾದ ತೀರ್ಪುಗಳು ಶಬರಿಮಲೆಯ ಸಂಪ್ರದಾಯ, ಪಾವಿತ್ರ್ಯತೆ ಕಾಪಾಡಬೇಕಾದ ವಿಚಾರಗಳ ಕುರಿತು ಸ್ಪಷ್ಟವಾಗಿ ಹೇಳಿವೆ. ಇದನ್ನು ಈಗ ಹೋರಾಡುವವರು ಗಮನಿಸಬೇಕು’ ಎಂದು ಹೇಳಿದರು.

‘ಅಲ್ಲಿನ ಸಂಪ್ರದಾಯ ಉಳಿಸುವ ಬಗ್ಗೆ ಹೋರಾಡಿದ 5 ಸಾವಿರಕ್ಕೂ ಹೆಚ್ಚು ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ಎಲ್ಲ ಗೊಂದಲಗಳ ವಿರುದ್ಧ ಕಾನೂನುಬದ್ಧವಾಗಿ ಹೋರಾಡಲು ಶಬರಿಮಲೆ ಆಚಾರ ವಿಚಾರ ಸಂರಕ್ಷಣಾ ಸಮಿತಿ ರಚಿಸಿದ್ದೇವೆ. ಜತೆಗೆ ಶಬರಿಮಲೆ ಅಯ್ಯಪ್ಪ ಸಂರಕ್ಷಣಾ ಸಮಿತಿಯೂ ಹೋರಾಡುತ್ತಿದೆ’ ಎಂದು ಅವರು ಹೇಳಿದರು. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !