ಇದೊಂದು ಮಾದರಿ ಹಸಿರು ಶಾಲೆ

7
ತಿಮ್ಮರಾಜೀಪುರ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 500ಕ್ಕೂ ಹೆಚ್ಚು ಗಿಡಮರಗಳು

ಇದೊಂದು ಮಾದರಿ ಹಸಿರು ಶಾಲೆ

Published:
Updated:
Prajavani

ಕೊಳ್ಳೇಗಾಲ: ಹಚ್ಚ ಹಸಿರಿನಿಂದ ಕಣ್ಮನ ಸೆಳೆಯುವ ಹಸಿರು ಮರ ಗಿಡಗಳು, ಸುಂದರವಾದ ಕೈತೋಟ, ವಿವಿಧ ಬಗ್ಗೆಯ ಹೂ ಗಿಡಗಳು, ಸುತ್ತ ಮುತ್ತ ಬೆಟ್ಟ ಗುಡ್ಡಗಳು...

– ಇದು ಯಾವುದೇ ರೆಸಾರ್ಟ್‌, ಬಂಗಲೆಯ ಚಿತ್ರಣ ಎಂದುಕೊಳ್ಳಬೇಡಿ. ‌ತಾಲ್ಲೂಕಿನ ಒಂದು ಶಾಲೆಯ ಸುತ್ತಮುತ್ತ ಕಂಡು ಬರುವ ಚಿತ್ರಣ ಇದು.

ತಾಲ್ಲೂಕಿನ ತಿಮ್ಮರಾಜೀಪುರ ಗ್ರಾಮದ ಹೊರವಲಯದ ಬೆಟ್ಟ ಗುಡ್ಡಗಳ ತಪ್ಪಲಿನಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯು ಸರ್ಕಾರಿ ಮಾತ್ರವಲ್ಲದೆ ಖಾಸಗಿ ಶಾಲೆಗಳಿಗೆ ಮಾದರಿಯಾಗಿ ನಿಲ್ಲಬಲ್ಲುದು. 

13 ಎಕರೆ ವಿಸ್ತೀರ್ಣದಲ್ಲಿ ಹರಡಿಕೊಂಡಿರುವ ಈ ಶಾಲೆಯಲ್ಲಿ 250 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಒಂದು ಶಾಲೆಗೆ ಬೇಕಾದ ಎಲ್ಲ ವ್ಯವಸ್ಥೆಗಳೂ ಇಲ್ಲಿವೆ.

ಸುಸಜ್ಜಿತ ಶಾಲಾ ಕಟ್ಟಡ, ಕಂಪ್ಯೂಟರ್ ಲ್ಯಾಬ್, ವಿಜ್ಞಾನ ಪ್ರಯೋಗಾಲಯ, ಗ್ರಂಥಾಲಯ, ಗಂಡು ಮತ್ತು ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಶೌಚಾಲಯ, ಎಲ್ಲ ತರಗತಿಗಳಲ್ಲೂ ವಿದ್ಯಾರ್ಥಿಗಳಿಗೆ ಬೇಕಾದ ಬೆಂಚು ಡೆಸ್ಕ್‌ಗಳು, ಕೊಠಡಿಗಳಿಗೆ ಫ್ಯಾನ್‌, ಬೆಳಕಿನ ವ್ಯವಸ್ಥೆ ಸೇರಿದಂತೆ ಎಲ್ಲ ಸೌಕರ್ಯಗಳು ಇಲ್ಲಿವೆ. ಇದಲ್ಲದೇ ಕೆಲ ಕೊಠಡಿಯ ಗೋಡೆಗಳ ಮೇಲೆ ಪಠ್ಯಕ್ಕೆ ಸಂಬಂಧಿಸಿದ ಬೋಧನಾ ಸಲಕರಣೆಗಳೂ ಇವೆ.

500ಕ್ಕೂ ಹೆಚ್ಚು ಗಿಡಗಳು: ಎಲ್ಲಕ್ಕಿಂತಲೂ ಹೆಚ್ಚಾಗಿ ಈ ಶಾಲೆ ಗಮನ ಸೆಳೆಯುವುದು ಅಲ್ಲಿರುವ ಹಸಿರು ವಾತಾವರಣದಿಂದ. ಶಾಲೆಯ ಸುತ್ತಮುತ್ತ 500ಕ್ಕೂ ಹೆಚ್ಚು ಗಿಡಮರಗಳಿವೆ. ಶಾಲಾ ಮೈದಾನದ ಸುತ್ತ ಸಾಲು ಸಾಲು ಮರಗಳು ಆಕರ್ಷಣೆಯ ಕೇಂದ್ರ ಬಿಂದುಗಳು. ಮಕ್ಕಳಿಗೆ ಪರಿಸರ, ಸಸ್ಯಗಳ ಬಗ್ಗೆ ಹೆಚ್ಚು ಒತ್ತು ನೀಡಿ ಬೋಧಕರು ಮಾಹಿತಿ ನೀಡುತ್ತಾರೆ.

ತೇಗು, ಮಾವು, ಹಲಸು, ಹೊಂಗೆ, ಅರಳಿ, ಬೇವು, ಬಸವನಗಿಡ, ಬಾದಾಮಿ ಸೇರಿದಂತೆ ವಿವಿಧ ಬಗೆಯ ಕಾಡು ಜಾತಿಯ ಗಿಡಗಳನ್ನು ಇಲ್ಲಿ ನೆಡಲಾಗಿದೆ. ವಾರಕ್ಕೊಮ್ಮೆ ಶಿಕ್ಷಕರು ಮಕ್ಕಳಿಗೆ ಮರಗಳ ಬಗ್ಗೆ ಪರಿಚಯವನ್ನೂ ಮಾಡಿಕೊಡುತ್ತಿದ್ದಾರೆ.

ಮಾದರಿ ಕೈ ತೋಟ: ಎರಡು ಕೈತೋಟಗಳು ಶಾಲೆಯ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಿವೆ. ಶಾಲೆಯ ಮುಂದೆ ಮತ್ತು ಪಕ್ಕದಲ್ಲಿ ಈ ಕೈತೋಟಗಳಿವೆ.

ತರಹೇವಾರಿ ಗುಲಾಬಿ, ಅಲಂಕಾರಿಕ ಗಿಡಗಳೂ ಇವೆ. ಅಡುಗೆಗೆ ಬಳಸುವ ವಿವಿಧ ಸೊಪ್ಪುಗಳನ್ನೂ ಶಾಲೆಯ ಆವರಣದಲ್ಲಿ ಬೆಳೆಲಾಗುತ್ತದೆ. ಪಾಲಾಕ್, ಕರಿಬೇವು, ಪುದೀನಾ, ಕೊತ್ತಂಬರಿ, ಸಬ್ಬಸಿಗೆ, ದಂಟು, ಬದನೇಕಾಯಿ, ನುಗ್ಗೇಕಾಯಿಯಂತಹ ಕಾಯಿ ಪಲ್ಲೆಗಳನ್ನೂ ಇಲ್ಲೇ ಬೆಳೆಯಲಾಗುತ್ತಿದೆ. ಅವುಗಳನ್ನೇ ಅಡುಗೆಗೆ ಬಳಸುತ್ತಾರೆ. ಅಮೃತಬಳ್ಳಿ, ತುಳಸಿಯಂತಹ ಔಷಧೀಯ ಗುಣಗಳುಳ್ಳ ಅನೇಕ ಗಿಡಗಳೂ ಇಲ್ಲಿವೆ.

ವಿವಿಧ ಬಗೆಯ ಹಣ್ಣಿನ ಗಿಡಗಳು

ಬಾಳೆಗಿಡ, ಸೀಬೆಹಣ್ಣು, ಪಪ್ಪಾಯ, ನೆಲ್ಲಿಕಾಯಿ, ಬೆಟ್ಟದ ನೆಲ್ಲಿಕಾಯಿ, ನೆರಳೆ, ಮಾವು, ದಾಳಿಂಬೆ, ಸಪೋಟ ಗಿಡ ಸೇರಿದಂತೆ 50ಕ್ಕೂ ಹೆಚ್ಚು ಹಣ್ಣಿನಗಿಡಗಳನ್ನು ಶಾಲೆಯ ಆವರಣದಲ್ಲಿ ನೆಡಲಾಗಿದೆ.

ಗಿಡ ಮರಗಳು, ಕೈತೋಟಗಳ ಲಾಲನೆ ಪಾಲನೆಯನ್ನು ಮಕ್ಕಳೇ ಮಾಡುತ್ತಾರೆ. ಶಾಲೆಯ ಆಟದ ಸಮಯ ಹಾಗೂ ಬಿಡುವಿನ ಸಮಯದಲ್ಲಿ ಗಿಡಗಳಿಗೆ ನೀರುಣಿಸುತ್ತಾರೆ.

ಸಂಗ್ರಹ ಮಾಡಿದ ತರಗೆಲೆ ಹಾಗೂ ಇತರ ಕಸಗಳನ್ನು ಗೊಬ್ಬರವಾಗಿ ಮಾಡಿ ಗಿಡಗಳಿಗೆ ಬಳಸಲಾಗುತ್ತದೆ.

ಬರಹ ಇಷ್ಟವಾಯಿತೆ?

 • 9

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !