ಗ್ರಾಮೀಣ ಮಕ್ಕಳಿಗೆ ದಾರಿ ದೀಪವಾದ ಶಾಲೆ

7
ಹೊನ್ನೂರಿನ ಡಾ.ಭೀಮ್‌ರಾವ್‌ ರಾಮ್‌ಜೀ ಪ್ರೌಢಶಾಲೆಗೆ 27ರ ಸಂಭ್ರಮ

ಗ್ರಾಮೀಣ ಮಕ್ಕಳಿಗೆ ದಾರಿ ದೀಪವಾದ ಶಾಲೆ

Published:
Updated:
Prajavani

ಯಳಂದೂರು: ವರ್ತನೆಯಲ್ಲಿ ಪರಿವರ್ತನೆ ತರುವಲ್ಲಿ ಶಿಕ್ಷಣ ಪ್ರಮುಖ ಅಸ್ತ್ರ. ಶಿಕ್ಷಣ ಪಡೆಯುವುದು ಪ್ರತಿಯೊಬ್ಬರ ಹಕ್ಕು. ಹುಟ್ಟಿದ ನಂತರ ಮನುಷ್ಯನನ್ನು ಸುಸಂಸ್ಕೃತ ವ್ಯಕ್ತಿಯನ್ನಾಗಿ ರೂಪಿಸುವಲ್ಲಿ ಕಲಿಕೆ ಮಹತ್ವದ ಪಾತ್ರ ವಹಿಸುತ್ತದೆ ಎಂಬುದನ್ನು ಮನಗಂಡು 90ರ ದಶಕದಲ್ಲಿ ಗ್ರಾಮೀಣ ಭಾಗವಾದ ತಾಲ್ಲೂಕಿನ ಹೊನ್ನೂರಿನಲ್ಲಿ ಆರಂಭವಾದ ಡಾ. ಭೀಮ್‌ರಾವ್‌ ರಾಮ್‌ಜೀ ಪ್ರೌಢಶಾಲೆ ಸಾವಿರಾರು ವಿದ್ಯಾರ್ಥಿಗಳಲ್ಲಿ ಜ್ಞಾನದ ಬೆಳಕು ಮೂಡಿಸಿದೆ. 

ಹಳ್ಳಿಗಾಡಿನ ಮಕ್ಕಳಿಗೆ ವಿದ್ಯಾರ್ಜನೆ ಮಾಡುವ ಈ ಶಾಲೆಗೀಗ 27ರ ಹರೆಯ. 1992ರಲ್ಲಿ 31 ವಿದ್ಯಾರ್ಥಿಗಳಿಂದ ಪ್ರಾರಂಭವಾದ ಪ್ರೌಢಶಾಲೆ ದಶಕದಿಂದಲೂ ಫಲಿತಾಂಶದಲ್ಲಿ ಉತ್ತಮ ಸಾಧನೆ ತೋರುತ್ತಿದೆ. ಪರೀಕ್ಷೆಗಳಲ್ಲಿ ಶೇ 90–ಶೇ 100ರಷ್ಟು ಫಲಿತಾಂಶ ಬರುತ್ತಿದೆ. ಎಲ್ಲಾ ವಿಷಯ ಶಿಕ್ಷಕರು, ಅತ್ಯುತ್ತಮ ಆಟದ ಮೈದಾನ ಮತ್ತು ವಿಜ್ಞಾನ ಪ್ರಯೋಗಾಲಯ, ಕ್ರೀಡಾ ಸಾಮಗ್ರಿ, ಸಮಾಜ ವಿಜ್ಞಾನ ಗ್ಯಾಲರಿ ಮತ್ತು 1000 ಪುಸ್ತಕಗಳ ಗ್ರಂಥಾಲಯ ಸೇರಿದಂತೆ ಮಕ್ಕಳ ಜ್ಞಾನಾರ್ಜನೆಗೆ ಬೇಕಾದ ಎಲ್ಲ ಸ‌ವಲತ್ತನ್ನು ಹೊಂದಿರುವ ಈ ಶಾಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ 172 ಮಕ್ಕಳು ಕಲಿಯುತ್ತಿದ್ದಾರೆ.

ಕ್ರೀಡಾ ಚಟುವಟಿಕೆಯಲ್ಲಿ ಮುಂದು: ಶಾಲೆಯ ಮಕ್ಕಳಿಗೆ ಕ್ರೀಡೆಯಲ್ಲಿ ಹೆಚ್ಚಿನ ತರಬೇತಿ ನೀಡಲಾಗುತ್ತಿದೆ. ಇಲ್ಲಿನ ಮಕ್ಕಳ ಕ್ರೀಡಾ ಸಾಧನೆಯೇ ಅದಕ್ಕೆ ಸಾಕ್ಷಿ. 1994 ರಿಂದ ಸತತವಾಗಿ ಜಿಲ್ಲಾ ಮಟ್ಟದ ಕೊಕ್ಕೊ ಆಟದಲ್ಲಿ ಪ್ರಥಮ ಸ್ಥಾನ ದಾಖಲಿಸುತ್ತಲೇ ಬಂದಿದೆ. 2014ರಲ್ಲಿ ಬಾಲ್‌ಬ್ಯಾಡ್ಮಿಂಟನ್‌ನಲ್ಲಿ ಮೊದಲ ಸ್ಥಾನ ಗಳಿಸಿದ್ದರೆ, 2018–19ರಲ್ಲಿ 200 ಮೀಟರ್‌ ಓಟದಲ್ಲಿ ವಿದ್ಯಾರ್ಥಿನಿ ಎಂ. ಭಾಗ್ಯ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದರು. 2017–18ರಲ್ಲಿ ಶಶಿಧರ್ ರಾಷ್ಟ್ರಮಟ್ಟದಲ್ಲಿ ಬಾಲ್‌ಬ್ಯಾಡ್ಮಿಂಟನ್‌ ಪ್ರಶಸ್ತಿಗಾಗಿ ಸೆಣಸಿದ್ದಾರೆ. ಕಲೋತ್ಸವ ವಿಭಾಗದಲ್ಲಿ ಜಾನಪದ ನೃತ್ಯಕ್ಕೆ 3 ವರ್ಷಗಳಿಂದ ರಾಜ್ಯಮಟ್ಟ ಪ್ರತಿನಿಧಿಸುತ್ತಿದ್ದಾರೆ.

ಪರಿಸರ ಪ್ರೀತಿ ಬಿಂಬಿಸಲು ಪ್ರತಿ ದೀಪಾವಳಿಗೆ ಶಾಲೆಯಲ್ಲಿ ನಡೆಯುವ ‘ಸಾವಿರ ದೀಪೋತ್ಸವ’ ಎಂಬ ವಿಶೇಷ ಕಾರ್ಯಕ್ರಮ ಜನಮನ್ನಣೆ ಗಳಿಸಿದೆ.

‘ಈ ಕಾ‌ರ್ಯಕ್ರಮದ ಮೂಲಕ ಪೋಷಕರಲ್ಲಿ ಪರಿಸರ ಮಾಲಿನ್ಯದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ’ ಎಂದು ಮುಖ್ಯೋಪಾಧ್ಯಾಯ ಕೆ.ಎನ್‌. ಪ್ರಮೋದ್‌ಚಂದ್ರನ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಇಂದು ವಾರ್ಷಿಕೋತ್ಸವ: ಶನಿವಾರ ಸಂಜೆ ಶಾಲೆಯ ವಾರ್ಷಿಕೋತ್ಸವ ನಡೆಯಲಿದೆ. ಕಾರ್ಯಕ್ರಮದಲ್ಲಿ  ಶಾಲೆಯ ಕಾರ್ಯದರ್ಶಿ ಡಾ.ಕೆ.ಎನ್. ಪ್ರಸಾದ್‌, ಶಾಸಕ ಮಹೇಶ್, ಜಿ.ಪಂ. ಸದಸ್ಯರಾದ ಉಮಾವತಿ ಸಿದ್ದರಾಜು, ತಾ.ಪಂ.ಅಧ್ಯಕ್ಷ ಎಂ. ನಿರಂಜನ್, ಗ್ರಾ.ಪಂ.ಅಧ್ಯಕ್ಷ ನಂಜುಂಡಯ್ಯ, ಉಪನಿರ್ದೇಶಕಿ ಮಂಜುಳಾ, ಬಿಇಒ ವಿ. ತಿರುಮಲಾಚಾರಿ, ನಿವೃತ್ತ ಉಪನಿರ್ದೇಶಕ ಡಾ.ಎನ್. ಚಂದ್ರೇಗೌಡ, ಎಸ್‌.ವಿ.ಜಿ. ಸ್ಟೋನ್‌ ವ್ಯವಸ್ಥಾಪಕ ಎನ್. ಸುದರ್ಶನರೆಡ್ಡಿ, ಕೆ.ಆರ್‌. ನಗರ ರಾಮ್‌ಜೀ ಪ್ರೌಢಶಾಲಾ ಅಧ್ಯಕ್ಷರಾದ ಪಿ. ಬಸವಯ್ಯ, ಯಜಮಾನರು, ಗ್ರಾಮಸ್ಥರು, ಬೋಧಕ ವೃಂದ ಹಾಗೂ ವಿದ್ಯಾರ್ಥಿಗಳು ಭಾಗವಹಿಸುತ್ತಾರೆ.

ಶಿಕ್ಷಣ ವಂಚಿತರಿಗೆ ಸ್ಪಂದಿಸಬೇಕು ಎಂಬುದೇ ಪ್ರೇರಣೆ

ಶಾಲೆ ಸ್ಥಾಪನೆಗೆ ಪ್ರೇರಣೆ ನೀಡಿದ ಎಚ್‌.ಸಿ. ಭಾಗ್ಯರತ್ನ ಅವರು ಹೊನ್ನೂರಿನ ಚಾಮಯ್ಯರವರ ಮಗಳು. ಮೈಸೂರು ಭಗಿನಿ ಸಮಾಜದಲ್ಲಿ ಪಿಯು ತನಕ ಶಿಕ್ಷಣ ಪಡೆದು ಸಮಾಜಮುಖಿ ಕೆಲಸಗಳಿಗೆ ತೊಡಗಿಕೊಂಡವರು ಅವರು. ಕೆ.ಆರ್‌. ನಗರದ ಕೆ. ನಂಜಯ್ಯನವರನ್ನು ವರಿಸಿದಾಗ ತನ್ನ ತವರಿನಲ್ಲಿ ಶಿಕ್ಷಣ ವಂಚಿತರ ಸಮಸ್ಯೆಯನ್ನು ನಿವಾರಿಸಲು ಮನಸ್ಸು ಮಾಡಿದರು. ಕಿತ್ತೂರಿಂದ 20 ಕಿ.ಮೀ ದೂರದಿಂದ ನಡೆದು ಬರುವ ಮಕ್ಕಳ ಸಂಕಷ್ಟ ಇವರಿಗೂ ಅರ್ಥವಾಗಿತ್ತು. ಮೈಸೂರು ಜಿಲ್ಲೆ ಮತ್ತು ಹೊನ್ನೂರು ಭಾಗದಲ್ಲಿ ತವರಿನ ಆಸೆಗೆ ಕಟ್ಟುಬಿದ್ದು, ಅದಮ್ಯ ಉತ್ಸಾಹದಿಂದ ಪ್ರೌಢಶಾಲೆ ತೆರೆದರು.

ಅವರ ನಿಧನಾ ನಂತರ ಅವರ ಮಕ್ಕಳು ಶಾಲೆಯನ್ನು ವ್ಯವಸ್ಥಿತವಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ. ವಿವಿಧ ಕಂಪನಿಗಳ ಮೂಲಕ ಮಕ್ಕಳಿಗೆ ಪ್ರತಿ ವರ್ಷ ಉಚಿತ ಸಮವಸ್ತ್ರ, ಚೀಲಗಳನ್ನು ಕೊಡಿಸಿ, ಶಿಕ್ಷಣಕ್ಕೆ ನೆರವಾಗುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !