ಮಕ್ಕಳ ಕೈಯಲ್ಲಿ ಅರಳುವ ಕರಕುಶಲ ವಸ್ತುಗಳು

ಶನಿವಾರ, ಮಾರ್ಚ್ 23, 2019
34 °C
ಸಂತೇಮರಹಳ್ಳಿ: ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಬೇಕಾದ ಪರಿಕರಗಳನ್ನು ತಯಾರಿಸುವ ವಿದ್ಯಾರ್ಥಿಗಳು‌

ಮಕ್ಕಳ ಕೈಯಲ್ಲಿ ಅರಳುವ ಕರಕುಶಲ ವಸ್ತುಗಳು

Published:
Updated:
Prajavani

ಸಂತೇಮರಹಳ್ಳಿ: ಶಾಲೆಗಳಲ್ಲಿ ಆಗಲಿ ಅಥವಾ ಹೊರಗಡೆ‌ಯೇ ಆಗಲಿ ನೃತ್ಯ, ರೂಪಕ ಸೇರಿದಂತೆ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಈಗ ಕರಕುಶಲ ವಸ್ತುಗಳು (ಕ್ರಾಪ್ಟ್ಸ್‌) ಬಳಕೆಯಾಗುತ್ತವೆ. ಮಾರುಕಟ್ಟೆಯಲ್ಲಿ ಇಂತಹ ವಸ್ತುಗಳನ್ನು ಬಾಡಿಗೆಗೆ ಕೊಡುವ ಅಥವಾ ಸಿದ್ಧಪಡಿಸಿ ಮಾರುವ ಮಳಿಗೆಗಳು ಸಾಕಷ್ಟು ಇವೆ.

ಆದರೆ, ಸಂತೇಮರಹಳ್ಳಿಯ ಗಿಲ್‌ಫ್ರೆಡ್‌ ಆಂಗ್ಲಮಾಧ್ಯಮ ಶಾಲೆಯ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಬೇಕಾದ ಪರಿಕರಗಳನ್ನು ತಾವೇ ಸಿದ್ಧಪಡಿಸಿಕೊಳ್ಳುತ್ತಾರೆ. ಇಲ್ಲಿನ ಶಿಕ್ಷಕರು ಪಾಠದ ಜೊತೆಗೆ ಆಕರ್ಷಕ ವಸ್ತುಗಳನ್ನು ಸಿದ್ಧಪಡಿಸುವುದನ್ನೂ ಮಕ್ಕಳಿಗೆ ಹೇಳಿಕೊಡುತ್ತಿದ್ದಾರೆ. ದೈನಂದಿನ  ಚಟುವಟಿಕೆಗಳಲ್ಲಿ ಪಠ್ಯ ಹಾಗೂ ಕ್ರೀಡಾ ಚಟುವಟಿಕೆಗಳು ಮುಗಿಯುತ್ತಿದ್ದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಬೇಕಾದ ಪರಿಕರಗಳನ್ನು ತಯಾರಿಸಲು ಮಕ್ಕಳು ಕುಳಿತುಕೊಳ್ಳುತ್ತಾರೆ.

ಶಾಲೆಯಲ್ಲಿ ನಡೆಯುವ ವಾರ್ಷಿಕೋತ್ಸವ ಸಮಾರಂಭ, ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ, ರಾಜ್ಯೋತ್ಸವ ಕಾರ್ಯಕ್ರಮಗಳಿಗೆ ವಿದ್ಯಾರ್ಥಿಗಳು ಬಳಸಬಹುದಾದ ಪರಿಕರಗಳನ್ನು ತಯಾರಿಸುವ ವಿಧಾನವನ್ನು ಕರಕುಶಲ ತರಗತಿಯಲ್ಲಿ ವಿದ್ಯಾರ್ಥಿಗಳು ಶಿಕ್ಷಕರ ಜೊತೆಗೂಡಿ ಕಲಿಯುತ್ತಾರೆ.

ಥರ್ಮಾಕೋಲ್, ರಬ್ಬರ್, ಪ್ಲಾಸ್ಟಿಕ್, ಪೇಪರ್ ಹಾಗೂ ವಿವಿಧ ಬಣ್ಣಗಳನ್ನು ಬಳಸಿಕೊಂಡು ವಿವಿಧ ಬಗೆಯ ಹೂಗಳು, ಕಂಸಾಳೆ, ತ್ರಿಶೂಲ, ಖಡ್ಗ, ಪೇಟ, ತಮಟೆ, ಟೋಪಿಗಳನ್ನು ಕಲಾತ್ಮಕವಾಗಿ ತಯಾರಿಸಿಕೊಳ್ಳುತ್ತಾರೆ. ಸಣ್ಣಮಕ್ಕಳಿಗೆ ಚಿಟ್ಟೆ, ದೋಣಿ, ಟೋಪಿ, ಬೊಂಬೆಗಳನ್ನು ತಯಾರು ಮಾಡಲು ಹೇಳಿಕೊಡುತ್ತಾರೆ.

ಶಾಲೆಯಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹೊರಗಡೆಯಿಂದ ಯಾವ ವಸ್ತುಗಳನ್ನೂ ತರುವುದಿಲ್ಲ. ನಾಟಕ, ಜಾನಪದ ನೃತ್ಯ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳ ಪಾತ್ರಗಳಿಗೆ ಅಗತ್ಯವಾಗಿ ಬೇಕಾಗಿರುವ ವಸ್ತುಗಳನ್ನು ಶಿಕ್ಷಕರ ಸಹಾಯ ಪಡೆದು ತಯಾರಿಸುತ್ತಾರೆ. ಆ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮೆರುಗು ನೀಡುತ್ತಾರೆ.

‘ಮಕ್ಕಳಿಗೆ ಬಾಲ್ಯದಿಂದಲೇ ರಾಷ್ಟ್ರನಾಯಕರು ಹಾಗೂ ಅವರ ಸಾಧನೆ ಬಗ್ಗೆ ತಿಳಿಸಿಕೊಡುವ ಸಲುವಾಗಿ ಅವರು ಬಳಸುತ್ತಿದ್ದ ವಸ್ತುಗಳನ್ನು ಮಕ್ಕಳಿಂದಲೇ ತಯಾರಿಸಲಾಗುತ್ತದೆ. ಇದು ಅವರಲ್ಲಿ ಸೃಜನಶೀಲತೆ ಬೆಳೆಯಲು ಸಹಕಾರಿಯಾಗಿದೆ’ ಎಂದು ಎಂದು ಮುಖ್ಯಶಿಕ್ಷಕ ಮೋಹನ್ ‘ಪ್ರಜಾವಾಣಿ’ಗೆ ತಿಳಿಸಿದರು. 

ಬೌದ್ಧಿಕಮಟ್ಟ ಹೆಚ್ಚಲು ನೆರವು
‘ಥರ್ಮಾಕೋಲ್ ಹಾಗೂ ಇತರ ವಸ್ತುಗಳನ್ನು ಕತ್ತರಿಯ ಮೂಲಕ ಕತ್ತರಿಸಿ ವಸ್ತುಗಳನ್ನು ತಯಾರಿಸುವಾಗ ಮಕ್ಕಳು ತುಂಬಾ ಆಸಕ್ತಿಯಿಂದ ಆಲಿಸುತ್ತಾರೆ. ಜತೆಗೆ, ಅವುಗಳಿಗೆ ಬಣ್ಣ ಹಚ್ಚಿ ಅದಕ್ಕೊಂದು ರೂಪ ಕೊಡಲು ಅವರಿಗೆ ತಿಳಿಸಲಾಗುತ್ತದೆ. ಖುಷಿಯಿಂದಲೇ ಮಕ್ಕಳು ಹೇಳಿದಂತೆ ಮಾಡುತ್ತಾರೆ. ಇದು ಮಕ್ಕಳಲ್ಲಿ ಬೌದ್ಧಿಕಮಟ್ಟ ಹೆಚ್ಚಲು ನೆರವಾಗುತ್ತದೆ’ ಎಂದು ಶಿಕ್ಷಕಿ ಶೀಲಾ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !