ಬಾನಾಡಿಗಳ ದಾಹ ನೀಗಲು ಕಾಳು–ನೀರಿನ ಸೇವೆ

ಶುಕ್ರವಾರ, ಏಪ್ರಿಲ್ 19, 2019
30 °C
ಮಕ್ಕಳ ಜಲ ದಾಸೋಹದಲ್ಲಿ ಶಿಕ್ಷಕರು ಭಾಗಿ, ಸ್ಥಳೀಯರಲ್ಲೂ ಜಾಗೃತಿ ಮೂಡಿಸುವ ಕೆಲಸ

ಬಾನಾಡಿಗಳ ದಾಹ ನೀಗಲು ಕಾಳು–ನೀರಿನ ಸೇವೆ

Published:
Updated:
Prajavani

ಯಳಂದೂರು: ಈ ಸರ್ಕಾರಿ ಶಾಲೆಯ ಸುತ್ತಮುತ್ತ ಹಸಿರುಟ್ಟ ಗಿಡ, ಮರಗಳಲ್ಲಿ ಈಗ ನೀರಿನ ಬಟ್ಟಲುಗಳ ತೋರಣ ಸ್ವಾಗತಿಸುತ್ತವೆ. ಬೇಸಿಗೆಯಲ್ಲಿ ಪಕ್ಷಿಗಳ ಬಾಯಾರಿಕೆ ನೀಗಲು ವಿದ್ಯಾರ್ಥಿಗಳು ಮಾಡಿದ ವ್ಯವಸ್ಥೆ ಇದು. ಬಿಸಿಲಿನ ತೀವ್ರತೆಗೆ ಬಾನಾಡಿಗಳಿಗೆ ಆಹಾರ ಅರಸುವುದು ಕಷ್ಟವಾಗುವುದು ಬೇಡ ಎಂದು ಕಾಳುಗಳನ್ನೂ ಇಡುತ್ತಿದ್ದಾರೆ.

ಅಷ್ಟೇ ಅಲ್ಲ, ನೆರೆಹೊರೆಯವರ ಮನೆಗೆ ತೆರಳಿ ಮನೆ ಮೇಲೆ ಕಾಳು, ನೀರು ಇಟ್ಟು ಹಕ್ಕಿಗಳಿಗೆ ನೆರವಾಗುವಂತೆ ಜಾಗೃತಿ ಮೂಡಿಸುತ್ತಿದ್ದಾರೆ.  

ಬಳೆಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು, ಶಾಲೆಯ ಸುತ್ತಮುತ್ತಲ ಪೋಷಕರು ಮತ್ತು ಹಿರಿಯರು ರಾಗಿ, ಅಕ್ಕಿ, ಜೋಳ ಇಟ್ಟು ಪಕ್ಷಿಗಳಿಗೆ ನೆರವಾಗುತ್ತಿದ್ದಾರೆ.

‘ದಿನದಿಂದ ದಿನಕ್ಕೆ ಬಿಸಿಲ ತಾಪ ಹೆಚ್ಚಾಗುತ್ತಿದೆ. ಹಕ್ಕಿಗಳು ನೀರು ಕುಡಿಯಲು ಪರದಾಡುತ್ತಿವೆ. ಉರಿಯುವ ಬಿಸಿಲಿನ ನಡುವೆ ನೀರು ಆಹಾರ ಅರಸಿ ಬರುವ ಪಕ್ಷಿಗಳು ನಿತ್ರಾಣಗೊಂಡು ಗಿಡಮರಗಳ ಮೇಲೇರುತ್ತವೆ. ಇಂತಹ ಸ್ಥಿತಿಯಲ್ಲಿ ಶಾಲೆ, ಸೂರು, ಗಿಡಗಳಲ್ಲಿ ಒಂದಿಷ್ಟು ನೀರು ತುಂಬಿ ಇಟ್ಟರೆ ಇವುಗಳಿಗೆ ಚೈತನ್ಯ ತುಂಬುತ್ತದೆ. ಹಾಗಾಗಿ, ಮನೆಯವರು ಕಾಳು, ಬಟ್ಟಲಿನಲ್ಲಿ ನೀರು ಇಡುವ ಮೂಲಕ ಮಾನವೀಯತೆ ಮೆರೆಯುತ್ತಾರೆ. ಬೇಸಿಗೆಯಲ್ಲಿ ಮಕ್ಕಳು ಇಂತಹ ಜಲಜಾಗೃತಿ ಹಮ್ಮಿಕೊಂಡು ಮನೆಮನೆಗೂ ತೆರಳಿ ನೆರವಾಗುತ್ತಾರೆ’ ಎಂದು ಹೇಳುತ್ತಾರೆ ಶಿಕ್ಷಕ ವೈ.ಎಂ.ಮಂಜುನಾಥ.

‘ಬಳೆಪೇಟೆ ಪಕ್ಷಿಪ್ರೇಮಿಗಳು ತಮ್ಮ ಮನೆಯ ಕಿಟಕಿ, ಅಂಗಳದಲ್ಲಿರುವ ಗಿಡಗಳಿಗೆ ಮಡಕೆ, ಬಟ್ಟಲುಗಳನ್ನು ಕಟ್ಟಿ ಅದರಲ್ಲಿ ಆಹಾರ ತುಂಬುತ್ತಾರೆ. ನೀರು ಇಲ್ಲದೆ ಸಾಯುವ ಸ್ಥಿತಿ ಯಾವ ಪಕ್ಷಿಗಳಿಗೂ ಬರಬಾರದು. ಶಾಲಾ ಆವರಣದಲ್ಲಿ ಹತ್ತಕ್ಕೂ ಹೆಚ್ಚು ಗಿಡಗಳಿಗೆ ಪ್ಲಾಸ್ಟಿಕ್ ಬಟ್ಟಲು ಕಟ್ಟಲಾಗಿದೆ. ನೆಲದಲ್ಲಿ ಪ್ಲಾಸ್ಟಿಕ್ ಹಾಳೆ ಹೊದಿಸಿ ಪುಟ್ಟ ಜಲಾವರ ಸೃಷ್ಟಿಸಲಾಗಿದೆ. ಆ ಮೂಲಕ ಮಕ್ಕಳಿಗೂ ಪರಿಸರ ಪಾಠ ಬಾಲ್ಯದಲ್ಲೇ ಮಾಡಿದಂತೆ ಆಗುತ್ತದೆ’ ಎಂದು ಹೇಳುತ್ತಾರೆ ಮುಖ್ಯ ಶಿಕ್ಷಕಿ ಸಾವಿತ್ರಮ್ಮ. 

‘ಮಕ್ಕಳಿಗೆ ಪರಿಸರ ಅಧ್ಯಯನ ಪಠ್ಯವೂ ಕಲಿಕೆಯ ಭಾಗವಾಗಿದೆ. ಇದರ ಭಾಗವಾಗಿ ನಮ್ಮ ಸುತ್ತಮುತ್ತಲಿರುವ ಪಕ್ಷಿಗಳ ಬಗ್ಗೆ ತಿಳಿಯುವ ಹಾಗೂ ಇತರರಲ್ಲಿ ಈ ಬಗ್ಗೆ ಆಸಕ್ತಿ ಮೂಡಿಸುವ ಮಕ್ಕಳ ಕಾಯಕ ಇತರರಿಗೂ ಮಾದರಿ ಆಗಲಿ’ ಎಂದು ಬಿಇಒ ವಿ.ತಿರುಮಲಾಚಾರಿ ತಿಳಿಸಿದರು.

‘ಜನರಿಂದಲೂ ಸಿಕ್ಕಿದೆ ಸಹಕಾರ’

‘ಪ್ರತಿದಿನ ಎಲ್ಲೆಲ್ಲೋ ಇರುವ ಗುಬ್ಬಚ್ಚಿಗಳು ಶಾಲೆಯ ಸುತ್ತಮುತ್ತ ಇಣುಕುತ್ತವೆ. ಕೆಲವು ಬಣ್ಣದ ಬಾನಾಡಿಗಳು ಗುಂಪುಗೂಡಿ ನೀರು ಕುಡಿಯುತ್ತವೆ. ಹಲವು ಹಕ್ಕಿಗಳು ಕುಳಿತು ಕೂಗುವುದನ್ನು ನೋಡುವ ಕ್ಷಣ ಉಲ್ಲಾಸ ತುಂಬುತ್ತದೆ. ಅವುಗಳನ್ನು ಗಮನಿಸುತ್ತ ಪಕ್ಷಿಲೋಕದ ಪರಿಚಯ ಆಗುತ್ತದೆ’ ಎಂದು ಶಾಲೆಯ ವಿದ್ಯಾರ್ಥಿಗಳು ಹೇಳಿದರು.

‘ಕೋಗಿಲೆ, ಪಾರಿವಾಳ, ಮರಕುಟಿಕ, ಸೋರೆ, ಮಿಂಚುಳ್ಳಿಗಳು ಸುಳಿದಾಡುತ್ತಿವೆ. ಇವುಗಳಿಂದ ಫಲ–ಪುಷ್ಪಗಳ ಹಣ್ಣಿನ ತಳಿಗಳ ವಂಶಾಭಿವೃದ್ಧಿಯೂ ನಡೆದು ಸಸಿಗಳು ಚಿಗುರುತ್ತವೆ. ಶಾಲೆಯ ಸುತ್ತಲ ಜನರು ನಮ್ಮ ಜಲ ಕಾಯಕಕ್ಕೆ ಕೈ ಜೋಡಿಸಿದ್ದಾರೆ. ವೃದ್ಧರೂ ಪ್ರತಿದಿನ ಸಂಜೆ ಮತ್ತು ಮುಂಜಾನೆ ಮನೆ ಮಾಡಿನಲ್ಲಿ ಜೀಜಗಳನ್ನು ಸುರಿದು ನೆರವಾಗುತ್ತಾರೆ’ ಎಂದು ವಿದ್ಯಾರ್ಥಿಗಳಾದ ಚಂದ್ರು, ಆಯಿಷಾ, ಸಿಂಧು ಮತ್ತು ಕೋಮಲಾ ಸಂತಸ ವ್ಯಕ್ತಪಡಿಸಿದರು. 

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !