ಹಸಿರು ತೊಟ್ಟ ಶಾಲೆಗೆ ‘ಪರಿಸರ ಮಿತ್ರ’ ಪ್ರಶಸ್ತಿಯ ಗರಿ

ಶುಕ್ರವಾರ, ಏಪ್ರಿಲ್ 26, 2019
24 °C
ಪುಟ್ಟ ತೋಟದ ದಟ್ಟ ಹಸಿರಿನೊಳಗೆ ಕಂಗೊಳಿಸುವ ಕಂಡಯ್ಯನಪಾಳ್ಯ ಕಿರಿಯ ಪ್ರಾಥಮಿಕ ಶಾಲೆ

ಹಸಿರು ತೊಟ್ಟ ಶಾಲೆಗೆ ‘ಪರಿಸರ ಮಿತ್ರ’ ಪ್ರಶಸ್ತಿಯ ಗರಿ

Published:
Updated:
Prajavani

ಹನೂರು: ಈ ಶಾಲೆಯೊಳಗೆ ಪ್ರವೇಶಿಸುತ್ತಿದ್ದಂತೆ ಬೀಸುವ ತಂಗಾಳಿ, ಮುಂಭಾಗದಲ್ಲಿ ಕೈತೋಟದಂತ ಆಹ್ಲಾದಕರ ಅನುಭವ ನೀಡುವ ಹಸಿರು, ಕೊಠಡಿಯ ಗೋಡೆಗಳನ್ನು ತಬ್ಬಿಕೊಂಡಂತೆ ಬೆಳೆದಿರುವ ವಿವಿಧ ಬಗೆಯ ಗಿಡಗಳು, ಗೋಡೆಯ ಮೇಲಿನ ಜಾಗೃತಿ ಮೂಡಿಸುವ ಬರಹಗಳು, ಶಾಲಾ ಆವರಣವನ್ನು ಸುತ್ತುವರಿದ ಮರಗಳು....

ಹೀಗೆ ಪುಟ್ಟ ತೋಟದ ದಟ್ಟ ಹಸಿರಿನ ನಡುವೆ ತಾಲ್ಲೂಕಿನ ಕಂಡಯ್ಯನಪಾಳ್ಯ ಕಿರಿಯ ಪ್ರಾಥಮಿಕ ಶಾಲೆ ಕಂಗೊಳಿಸುತ್ತಿದೆ. ಶಾಲೆಯ ಮಕ್ಕಳು, ಶಿಕ್ಷಕರ ಹಸಿರು ಪ್ರೀತಿಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನೀಡುವ ‘ಪರಿಸರ ಮಿತ್ರ’ ಪ್ರಶಸ್ತಿಯ ಕಿರೀಟ ತನ್ನದಾಗಿಸಿಕೊಂಡಿದೆ.

ಸ್ವಚ್ಛ ಶೌಚಾಲಯ ಪ್ರಶಸ್ತಿ: ಶಾಲೆಯಲ್ಲಿರುವ 27 ವಿದ್ಯಾರ್ಥಿಗಳಿಗೆ ಎರಡು ಕೊಠಡಿಗಳಿವೆ. 2017ರಲ್ಲಿ ಸ್ವಚ್ಛಶಾಲೆ ಮತ್ತು ಸ್ವಚ್ಛ ಶೌಚಾಲಯ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಶೈಕ್ಷಣಿಕ ವರ್ಷದಲ್ಲಿ ‘ಪರಿಸರ ಮಿತ್ರ’ ಪ್ರಶಸ್ತಿ ಲಭಿಸಿರುವುದು ಶಿಕ್ಷಕರು ಹಾಗೂ ಗ್ರಾಮಸ್ಥರಲ್ಲಿ ಹುರುಪು ತಂದಿದೆ.

ವಿದ್ಯಾರ್ಥಿಗಳಿಗೆ ಕೊಠಡಿಗಳ ಸುತ್ತಲೂ ಇದ್ದ ಖಾಲಿ ಸ್ಥಳದಲ್ಲಿ ಗಿಡ ಬೆಳೆಸುವ ಅಭ್ಯಾಸ ಮಾಡಿಸಿದ ಪರಿಣಾಮ ಇಂದು ಶಾಲೆಯಲ್ಲಿ ಉತ್ತಮ ಕೈದೋಟ ನಿರ್ಮಾಣವಾಗಿದೆ. ಇದಕ್ಕೆ ಶಾಲಾಭಿವೃದ್ಧಿ ಸಮಿತಿ ಸದಸ್ಯರ ಸಹಕಾರ ಅತ್ಯಂತ ಮುಖ್ಯವಾಗಿದೆ ಎಂದು ಶಿಕ್ಷಕರು ಸ್ಮರಿಸಿಕೊಳ್ಳುತ್ತಾರೆ. 

ನಿರ್ವಹಣೆಗೆ ತಂಡ ರಚನೆ: ಕೈ ತೋಟದ ನಿರ್ವಹಣೆಗಾಗಿ ಶಾಲೆಯ ವಿದ್ಯಾರ್ಥಿಗಳ ತಂಡ ರಚಿಸಲಾಗಿದೆ. ನೀರಿನ ಮಿತ ಬಳಕೆ, ನಿರ್ವಹಣೆ, ಸ್ವಚ್ಛತೆ ಸೇರಿದಂತೆ ವಿವಿಧ ಜವಾಬ್ದಾರಿಗಳನ್ನು ಒಂದೊಂದೇ ತಂಡಕ್ಕೆ ವಹಿಸಲಾಗಿದೆ. ‘ನಿಗದಿತ ವೇಳಾಪಟ್ಟಿಯಂತೆ ವಿದ್ಯಾರ್ಥಿಗಳೇ ಎಲ್ಲವನ್ನು ನಿರ್ವಹಣೆ ಮಾಡುತ್ತಾರೆ. ಪ್ರಶಸ್ತಿಯ ಅಪೇಕ್ಷೆಯಿಂದ ಈ ಪ್ರಯತ್ನ ಮಾಡಲಿಲ್ಲ. ವಿರಾಮದ ವೇಳೆ ವಿದ್ಯಾರ್ಥಿಗಳಿಗೆ ಸಸ್ಯ ಪ್ರಭೇದದ ಬಗ್ಗೆ ಪ್ರಾಯೋಗಿಕವಾಗಿ ತಿಳಿಸಿಕೊಡುವ ಉದ್ದೇಶದಿಂದ ಆರಂಭಿಸಲಾಯಿತು. ಪ್ರವೃತ್ತಿ ಬಳಿಕ ಅಭ್ಯಾಸವಾಗಿ ಬೆಳೆಯಿತು’ ಎಂದು ಶಿಕ್ಷಕ ಶಾಂತರಾಜು ‘ಪ್ರಜಾವಾಣಿ’ಗೆ ಹೇಳಿದರು.

ಬೇಸಿಗೆ ಸಮಯದಲ್ಲಿ ಗಿಡಗಳಿಗೆ ನಿರುಣಿಸಲು ಗ್ರಾಮದಲ್ಲಿ ಒಬ್ಬರಿಗೆ ಹೇಳಲಾಗಿದೆ. ಅವರು ನಿತ್ಯವೂ ಗಿಡಗಳಿಗೆ ನೀರು ಹಾಕಿ ನಿರ್ವಹಿಸುತ್ತಾರೆ ಎಂದು ಶಾಲೆಯ ಮುಖ್ಯಶಿಕ್ಷಕಿ ತನುಜಾ ಫಾತಿಮಾ ಬ್ರಿಟ್ಟೋ ಹೇಳಿದರು.

ಕಲಿಕೆಯಲ್ಲೂ ಸೈ: ಉತ್ತಮ ಶಾಲಾ ಪರಿಸರದ ಮೂಲಕ ಗಮನಸೆಳೆದಿರುವ ಈ ಶಾಲೆಯಲ್ಲಿ ಮಕ್ಕಳ ಕಲಿಕೆಗೂ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಶಾಲಾ ಅವಧಿ ಮುಗಿದ ನಂತರ ಮಕ್ಕಳಿಗೆ ಪ್ರಚಲಿತ ವಿದ್ಯಮಾನ ಹಾಗೂ ನವೋದಯ, ಆದರ್ಶ ಶಾಲೆಯ ಪ್ರವೇಶ ಪರೀಕ್ಷೆಗೆ ಸಜ್ಜುಗೊಳಿಸಲಾಗುತ್ತದೆ. ಇದರ ಪರಿಣಾಮ ಕಳೆದ ಶೈಕ್ಷಣಿಕ ವರ್ಷದಲ್ಲಿ ಶಾಲೆಯ ಮೂರು ಮಕ್ಕಳು ಆದರ್ಶ ಹಾಗೂ ಒಬ್ಬ ವಿದ್ಯಾರ್ಥಿ ನವೋದಯ ಶಾಲೆಗೆ ಆಯ್ಕೆಯಾಗಿದ್ದಾರೆ. ಸರ್ಕಾರಿ ಶಾಲೆ ಎಂದರೆ ಮೂಗು ಮುರಿಯುವ ಇಂದಿನ ದಿನಗಳಲ್ಲಿ ಖಾಸಗಿ ಶಾಲೆಗೂ ಸೆಡ್ಡು ಹೊಡೆದು ನಿಲ್ಲುವ ಸರ್ಕಾರಿ ಶಾಲೆಗಳಿವೆ ಎನ್ನುವುದನ್ನು ಸಾಕ್ಷಿಕರಿಸಲು ಈ ಶಾಲಾ ಶಿಕ್ಷಕರು, ಮಕ್ಕಳು, ಶಾಲಾ ಅಭಿವೃದ್ಧಿ ಸಮಿತಿ ಹಾಗೂ ಗ್ರಾಮಸ್ಥರು ಸ್ಪಷ್ಟ ಉದಾಹಣೆಯಾಗಿದ್ದಾರೆ. 

ಬಿಸಿಯೂಟಕ್ಕೆ ‘ತಾಜಾ’ ತರಕಾರಿ ಇಲ್ಲೇ ಸಿಗುತ್ತದೆ

ಸರ್ಕಾರಿ ಶಾಲೆಯಾದ್ದರಿಂದ ಮಧ್ಯಾಹ್ನದ ಬಿಸಿಯೂಟಕ್ಕೆ ಬೇಕಾದ ‘ತಾಜಾ’ ಸೊಪ್ಪು–ತರಕಾರಿಗಳನ್ನು ಕೈತೋಟದಲ್ಲೆ ಬೆಳೆದುಕೊಳ್ಳುತ್ತೇವೆ. ನಮ್ಮದೆ ಖರ್ಚಿನಲ್ಲಿ ಹನಿ ನೀರಾವರಿ, ತುಂತುರು ನೀರಾವರಿ ವ್ಯವಸ್ಥೆ ಮಾಡಿಸಲಾಗಿದೆ. ಸಸ್ಯ ಪ್ರಭೇದಗಳ ಬಗ್ಗೆ ವಿದ್ಯಾರ್ಥಿಗಳಿಗೆ ಪ್ರಾಯೋಗಿಕವಾಗಿ ತಿಳಿಸಿಕೊಡಲು ಔಷಧಿ ಸಸ್ಯಗಳನ್ನು ಕೂಡ ನೆಡಲಾಗಿದೆ. ಬೇಸಿಗೆಯಲ್ಲಿ ಈ ಕೈತೋಟಕ್ಕೆ ಬರುವ ಪಕ್ಷಿಗಳಿಗೆ ಅನುಕೂಲ ಕಲ್ಪಿಸಲು ಗಿಡಮರಗಳಲ್ಲಿ ನೀರಿನ ಡಬ್ಬಗಳನ್ನು ಇಡಲಾಗಿದೆ. ಪ್ರತಿದಿನ ಶಾಲೆಗೆ ಬರುವ ಮಕ್ಕಳು ಇದನ್ನು ಚಾಚೂ ತಪ್ಪದೆ ಮಾಡುತ್ತಾರೆ ಎಂದು ಶಿಕ್ಷಕ ಶಾಂತರಾಜು ಖುಷಿ ಹಂಚಿಕೊಡರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !