ಶಕೀಲಾ ಲುಕ್‌ನ ಕ್ಯಾಲೆಂಡರ್!

7

ಶಕೀಲಾ ಲುಕ್‌ನ ಕ್ಯಾಲೆಂಡರ್!

Published:
Updated:
Prajavani

ಸಿನಿಮಾ ಬಿಡುಗಡೆಗೂ ಮೊದಲು ಆ ಸಿನಿಮಾದ ಲುಕ್‌ ವಿಷಯವನ್ನೇ ಇಟ್ಟುಕೊಂಡು ಟೇಬಲ್‌ ಟಾಪ್ ಕ್ಯಾಲೆಂಡರ್ ತರುವುದು ಅಪರೂಪದ ವಿದ್ಯಮಾನ. ಹೊಸತಿಗೆ ಹಾತೊರೆವ ಇಂದ್ರಜಿತ್ ಲಂಕೇಶ್ ಹೀಗೊಂದು ವಿಶಿಷ್ಟ ಪ್ರಯೋಗ ಮಾಡಿದ್ದಾರೆ. ಒಂದೊಂದು ತಿಂಗಳೂ ಒಂದೊಂದು ಸಿನಿಮಾ ಪಾತ್ರದಂತೆ ಹೊಸ ನೋಟದಲ್ಲಿ ರಿಚಾ ಚಡ್ಡಾ ಕಣ್ಸೆಳೆಯುತ್ತಾರೆ. ಶಕೀಲಾ ಪಾತ್ರವಾದ್ದರಿಂದ ಗ್ಲ್ಯಾಮರ್ ಇದ್ದೇ ಇದೆ. ಜೊತೆಗೆ ಮಜವಾದ ಸಿನಿಮಾ ಟೈಟಲ್‌ಗಳೂ ಹಿಂದಿಯಲ್ಲಿರುವುದು ಸಿನಿಮೀಯ ವಾತಾವರಣ ಹಿಡಿದಿಟ್ಟಿವೆ.

ಇಂದ್ರಜಿತ್ ಲಂಕೇಶ್ ನಿರ್ದೇಶನದ ಹತ್ತನೇ ಸಿನಿಮಾ ‘ಶಕೀಲಾ’ ಹಿಂದಿಯಲ್ಲಿ ನಿರ್ಮಾಣವಾಗಿದ್ದು ಚಿತ್ರಕಥೆ ನಟಿ ಶಕೀಲಾ ಜೀವನ ಆಧರಿಸಿದೆ. ಶೂಟಿಂಗ್‌ ಪೂರ್ಣಗೊಂಡು, ಡಬ್ಬಿಂಗ್‌ ಪೂರೈಸಿ ಪೋಸ್ಟ್‌ ಪ್ರೊಡಕ್ಷನ್‌ ಕಾರ್ಯ ಸಾಗಿದೆ. ಏಪ್ರಿಲ್‌– ಮೇ ತಿಂಗಳಲ್ಲಿ ಬಿಡುಗಡೆ ಮಾಡುವ ಉದ್ದೇಶ. ಈಗಾಗಲೇ ಅಂತರರಾಷ್ಟ್ರೀಯ ಮಾಧ್ಯಮಗಳಲ್ಲಿ ಕೂಡ ಸುದ್ದಿಯಾಗಿರುವ ಚಿತ್ರದ ಬಗ್ಗೆ ನಿರೀಕ್ಷೆ ಗರಿಗೆದರಿದೆ.

ದಕ್ಷಿಣ ಭಾರತದವರನ್ನೆಲ್ಲ ಒಟ್ಟಾಗಿ ಮದ್ರಾಸಿ ಎಂದು ಕಟಕಿಯಾಡುವ ಬಾಲಿವುಡ್‌ ಅಂಗಳದಲ್ಲಿ ಕನ್ನಡಿಗರು ಕೆಲಸ ಮಾಡುವುದು ಸುಲಭವೇನಲ್ಲ. ಆದರೆ ಇದು ಮೊದಲೂ ಅಲ್ಲ. ದಶಕಗಳ ಬಳಿಕ ಕನ್ನಡದ ನಿರ್ದೇಶಕರೊಬ್ಬರು ಈ ಸಾಹಸಕ್ಕೆ ಕೈ ಹಾಕಿದ್ದು ವಿಶೇಷ. ಅಲ್ಲಿಯೂ ಸೈ ಎನಿಸಿಕೊಳ್ಳುವುದೊಂದು ಬಾಕಿ.

ಚಿತ್ರದ ಬಗ್ಗೆ ಹಲವು ಸ್ವಾರಸ್ಯಕರ ವಿಷಯ ಹಂಚಿಕೊಳ್ಳಲೆಂದು ಕರೆದ ಆಯ್ದ ಮಾಧ್ಯಮದವರೆದುರು ಇಂದ್ರಜಿತ್ ಬಿಚ್ಚಿಡುತ್ತ ಹೋದ ವಿವರಗಳು ಕೇಳಿದವರ ಕಣ್ಣರಳುವಂತಿದ್ದವು. ಇದು ಕನ್ನಡದಲ್ಲಿ ಸಿನಿಮಾ ಮಾಡಿ ಹಿಂದಿಗೆ ಡಬ್‌ ಮಾಡಿದ್ದಲ್ಲ, ಕನ್ನಡದವರೊಬ್ಬರು ಮಾಡಿದ ಹಿಂದಿ ಸಿನಿಮಾನೇ, ಆದರೆ ಭಾರತೀಯ ಸಿನಿಮಾ ಎಂದರೇ ಸೂಕ್ತ ಆಗಬಹುದೇನೊ. ಕನ್ನಡ, ತುಳು, ಮಲಯಾಳಿ, ಬಿಹಾರಿ ನಟರು– ತಂತ್ರಜ್ಞರು ತಂಡದಲ್ಲಿದ್ದಾರೆ. ನಟಿಯೊಬ್ಬಳು ಯಶಸ್ಸಿನ ರುಚಿಯುಂಡು ಮತ್ತೆ ಅದೇ ಹಳೆಯ ದಿನಗಳನ್ನು ಪುನಃ ಬದುಕುವಂತಾಗುವುದು ಆಸಕ್ತಿ ಮೂಡಿಸಿದೆ. ವರ್ಷಕ್ಕೆ ನೂರಿಪ್ಪತ್ತು ಸಿನಿಮಾ ಮಾಡಿದ ಉದಾಹರಣೆಗಳಂತೆಯೇ ಸುಮಾರು 40 ಸಿನಿಮಾಗಳಾದರೂ ಸೆನ್ಸಾರ್ ಮಂಡಳಿಯ ಅನುಮತಿಯ ಬಳಿಕವೂ ಪ್ರದರ್ಶನಕ್ಕೆ ತಡೆ ಎದುರಿಸಿವೆ. ಬಿಡುಗಡೆಯಾಗದ ಸಿನಿಮಾಗಳು ಇವೆ. ಮಹಿಳೆಯರ ಯಶಸ್ಸಿಗೆ ಪುರುಷಾಹಂಕಾರ ಒಡ್ಡುವ ಪ್ರತಿರೋಧ ಇರಬಹುದು; ಆಕೆಯ ಕೆಲವು ಗೊಂದಲ, ತಪ್ಪು ನಿರ್ಧಾರಗಳಿಂದಾಗಿಯೊ ಒಟ್ಟಿನಲ್ಲಿ ಯಶಸ್ಸಿನಿಂದ ಮತ್ತೆ ಸರಿದುಬಿಡುವುದು ಎಲ್ಲವೂ ಬಹುಶಃ ಎಲ್ಲ ಕ್ಷೇತ್ರಗಳಲ್ಲಿ ಇಂದಿನ ಮಹಿಳೆಯರ ಪ್ರತಿನಿಧಿಯಂತೆ ಎನಿಸಿದೆ ಅವರಿಗೆ. ಆಕೆಯ ನೋವು–ಯಶಸ್ಸು ತುಂಬಿದ ಬದುಕನ್ನೇ ಕತೆಯಾಗಿಸಿ ಯಾಕೆ ಸಿನಿಮಾ ಮಾಡಬಾರದು ಎಂಬ ಯೋಚನೆ ಹುಟ್ಟಿದ್ದರಲ್ಲಿ ಆಶ್ಚರ್ಯವೇನಿದೆ? ಇಂದ್ರಜಿತ್‌ ಜತೆಗಿನ ದಶಕಗಳ ನಂಟಂತೂ ಇತ್ತಲ್ಲ, ಕಡೆಗೆ ಆಕೆಯೂ ಒಪ್ಪಿದ್ದಾಗಿದೆ. ಮುಖ–ಮೈಮಾಟ ಮ್ಯಾಚ್‌ ಆಗಲಿ ಎಂದು ನಟಿಯ ಹುಡುಕಿದ್ದಲ್ಲ, ಪಾತ್ರದೊಳಗೆ ಪ್ರವೇಶಿಸಿ ನಟಿಸಲು ಸೂಕ್ತ ಆದವರು ರಿಚಾ. ಶಕೀಲಾ ಪಾತ್ರದಲ್ಲಿ ರಿಚಾ ಚಡ್ಡಾ ಅಭಿನಯಿಸಿದ್ದು ನ್ಯೂಟನ್, ಮಿರ್ಜಾಪುರ ಸಿನಿಮಾ ಖ್ಯಾತಿಯ ಪಂಕಜ್‌ ತ್ರಿಪಾಠಿ ಮುಖ್ಯ ಪಾತ್ರವೊಂದನ್ನು ಮಾಡಿದ್ದಾರೆ. ಬೇಬಿ ಡಾಲ್‌ ಮತ್ತು ಚಿಟಿಯಾ ಕಲೈಯ್ಯಾವೇ ಹಾಡಿನ ಖ್ಯಾತಿಯ ಮೀತ್‌ ಬ್ರದರ್ಸ್ ಸಂಗೀತವೂ ಮುಖ್ಯ ಆಕರ್ಷಣೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಬಿಡುಗಡೆ ಆಗಲಿದೆ. ವೈಭವೀಕರಣ ಅಥವಾ ಸಮರ್ಥನೆ ಇಲ್ಲದೇ ವಾಸ್ತವ ಮಾತ್ರ ಬಿಂಬಿಸುವ ಈ ಯತ್ನ ಇಂದ್ರಜಿತ್ ಅವರಿಗೆ ಸೃಜನಾತ್ಮಕವಾಗಿ ತೃಪ್ತಿ ತಂದುಕೊಡುವಂತಿದೆಯಂತೆ. ಸಿನಿಮಾರಂಗಕ್ಕೆ ಬರುವ ಯುವ ನಟಿಯರಿಗೆ ಇದೊಂದು ನಿದರ್ಶನವಾಗಿ ನಿಲ್ಲಲಿದೆ. ಕಥೆ ಹೇಳಬೇಕು, ಎರಡು ಗಂಟೆಯಲ್ಲಿ, ಎಷ್ಟು ಸಾಧ್ಯವೊ ಅಷ್ಟೂ ಜನರನ್ನು ತಲುಪಬೇಕು. ಅಂದಹಾಗೆ ಪಿ. ಲಂಕೇಶರ ‘ಹುಳಿಮಾವಿನ ಮರ’ವನ್ನೂ ಹೀಗೊಂದು ಬಯೊಪಿಕ್ ಮಾಡಿ ತೆರೆಗೆ ತರಬಹುದಲ್ಲ ಎಂದ ಮಾತಿಗೆ ‘ಲಂಕೇಶ್ ಪತ್ರಿಕೆ ಮಾಡುವಾಗ ನಾನಿನ್ನೂ ಇಪ್ಪತ್ತರ ಆಸುಪಾಸಿನಲ್ಲಿದ್ದವ ಅಂಥದೊಂದು ವಿಷಯ ನಿಭಾಯಿಸಲು ಅವಸರ ಮಾಡಿದೆ ಎಂದು ಅನಿಸಿದೆ. ಬಹುಶಃ ಇನ್ನೈದು ವರ್ಷಗಳ ನಂತರ ಆಗಬಹುದು. ಆ ಪ್ರಬುದ್ಧತೆ ಬೇಡುತ್ತದೆ ಅಂತಹ ಕೆಲಸ’ ಎಂದು ಪ್ರಾಮಾಣಿಕವಾಗಿ ಒಪ್ಪಿಕೊಂಡರು.

ಶಕೀಲಾ ಎಂದರೇನೇ ಗ್ಲ್ಯಾಮರ್, ಆದರೆ ಸಿನಿಮಾ ಪೂರ್ತಿ ಅದೇ ಇಲ್ಲ, ಖಂಡಿತ ತುಸುವಾದರೂ ಗ್ಲ್ಯಾಮರ್ ಇದ್ದೇ ಇದೆ. ಅಂದಹಾಗೆ ಶಕೀಲಾ ಕೂಡ ಶೂಟಿಂಗ್‌ ಸ್ಥಳಕ್ಕೆ ಬಂದದ್ದುಂಟಂತೆ. ಏನೇ ಇರಲಿ, 2019ರ ಈ ಬೇಸಿಗೆ ಬಹಳಷ್ಟು ಬೆವರಿಳಿಸಲಿದೆ ಎಂಬುದಂತೂ ನಿಜ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !