ಮಂಗಳವಾರ, ಡಿಸೆಂಬರ್ 10, 2019
26 °C

ಧಾರಾವಾಹಿಯಲ್ಲಷ್ಟೇ ಈಕೆ ಪತಿ ಪೀಡಕಿ

Published:
Updated:
Deccan Herald

‘ಪಾಪ ಪಾಂಡು’ ಧಾರಾವಾಹಿಯಲ್ಲಿ ಕಾರುವ ಕಣ್ಣಲ್ಲಿ, ಹಾಕುವ ಗುಟುರಿನಲ್ಲೇ ಪತಿ ಪಾಂಡುವನ್ನು ಹಿಡಿದಿಡುವ ‘ಶ್ರೀಮತಿ’ ಪಾತ್ರಧಾರಿ ಶಾಲಿನಿ  ಅನಿಲ್‌ ನಿಜಜೀವನದಲ್ಲಿ ಪತಿಗೆ ಸ್ನೇಹಿತೆಯ ಹಾಗೆ.

ಗಂಡ ಪಾಂಡು ಮತ್ತು ಸೊಸೆ ಚೌಕಾಶಿ ಬಗ್ಗೆ ಕೆಂಡ ಕಾರುತ್ತಲೇ ಇರುವ ಶ್ರೀಮತಿ, ಅಸಲಿಗೆ ಒಳ್ಳೆಯ ಮನಸ್ಸುಳ್ಳವಳು. ಅವರಿಬ್ಬರಿಗೂ ಒಂದಿಷ್ಟು ನೋವಾದರೂ ಮರುಗುವ ಗುಣವೂ ಅವಳಲ್ಲಿದೆ ಎಂದು ಹೇಳುತ್ತಾರೆ ಶಾಲಿನಿ.

‘ಪಾಪ ಪಾಂಡು ಹೇಳಿಕೇಳಿ ಹಾಸ್ಯ ಧಾರಾವಾಹಿ. ಹಾಗಾಗಿ ಪಾಂಡು ಮತ್ತು ಶ್ರೀಮತಿಯ ಪ್ರೀತಿ ಮತ್ತು ಕೋಪವನ್ನು ನಗುವಿನಲ್ಲೇ ಮುಕ್ತಾಯವಾಗುವಂತೆ ಚಿತ್ರಿಸಲಾಗಿದೆ. ಒಂದೋ ಪಾಂಡುವನ್ನು ನೋಡಿ ವೀಕ್ಷಕರು ನಗುತ್ತಾರೆ ಇಲ್ಲವೇ ಶ್ರೀಮತಿಯ ಪಾಡಿಗೆ ನಗುತ್ತಾರೆ. ನಿಜಜೀವನದಲ್ಲಿ ಗಂಡ ಹೆಂಡತಿ ಜಗಳವಾಡದೆ ಇರುವುದುಂಟೆ? ಎಲ್ಲಾ ಭಿನ್ನಾಭಿಪ್ರಾಯಗಳೂ, ಮನಸ್ತಾಪಗಳೂ ಜಗಳದಲ್ಲೇ ಮುಕ್ತಾಯವಾಗಬೇಕು ಎಂದೇನಿಲ್ಲವಲ್ಲ? ನನ್ನ ಗಂಡ ಅನಿಲ್‌ ಜೊತೆಗೂ ಇವೆಲ್ಲಾ ಇರುತ್ತದೆ. ಇನ್ನೇನು ಬೆಂಕಿ ಹತ್ಕೊಂಡು ಉರಿಯುತ್ತೇನೋ ಎಂದುಕೊಳ್ಳುವಷ್ಟರಲ್ಲಿ ಅದಕ್ಕೆ ಹಾಸ್ಯದ ಲೇಪನ ಕೊಡುತ್ತೇವೆ. ಅಷ್ಟು ಹೊತ್ತಿನ ವಾಗ್ವಾದ ಮರೆತು ಇಬ್ಬರೂ ನಕ್ಕು ಹಗುರಾಗುತ್ತೇವೆ’ ಎಂದು ತಮ್ಮ ಮನೆಯ ಕತೆ ಬಿಚ್ಚಿಡುತ್ತಾರೆ ಶಾಲಿನಿ.

‘ಧಾರಾವಾಹಿ, ಹಾಸ್ಯ ಮತ್ತು ಅತ್ತೆಯನ್ನು ವಿಭಿನ್ನ ಚೌಕಟ್ಟಿನಲ್ಲಿ ಕಟ್ಟಿಕೊಟ್ಟಿರುವುದು ‘ಪಾಪ ಪಾಂಡು’ವಿನ ಹೆಗ್ಗಳಿಕೆ. ಅಸೂಯೆ, ದ್ವೇಷ, ಸಂಬಂಧಗಳ ಮಧ್ಯೆ ಹುಳಿಹಿಂಡುವ ಕುತಂತ್ರಗಳು, ರೌಡಿಯಿಸಂನ ನಾನಾ ಅವತಾರಗಳನ್ನು ಬೇರೆ ಬೇರೆ ತಂತ್ರಗಾರಿಕೆಗಳಲ್ಲಿ ತೋರಿಸುವುದೇ ಧಾರಾವಾಹಿ ಎಂಬ ಸಿದ್ಧಸೂತ್ರ ಚಾಲ್ತಿಯಲ್ಲಿ ಇದೆ. ಹಾಸ್ಯದ ವಿಷಯಕ್ಕೆ ಬಂದರೆ ಅಶ್ಲೀಲ ಸಂಭಾಷಣೆ, ಪ್ರತಿಯೊಬ್ಬರನ್ನೂ ಅವರ ದೇಹದ ಆಕಾರಕ್ಕಾಗಿ ಅಪಹಾಸ್ಯ ಮಾಡುವುದು, ಅತ್ತೆ ಎಂದರೆ ದೊಡ್ಡ ದೊಡ್ಡ ಒಡವೆ ಮತ್ತು ಭಾರಿ ರೇಷ್ಮೆ ಸೀರೆ ಇಲ್ಲವೇ ಯಾವುದಾದರೂ ಸೀರೆ ಧರಿಸಿರುವಂತೆ ಚೌಕಟ್ಟು ಹಾಕಿಕೊಡಲಾಗಿದೆ. ಆದರೆ ಹಳೆಯ ಪಾಪ ಪಾಂಡು ಧಾರಾವಾಹಿಯಲ್ಲೂ ಪಾಚು ಸೀರೆ ಉಟ್ಟಿದ್ದು ವಿರಳ. ಹೀಗೆ ಮೂರು ಸಿದ್ಧಸೂತ್ರಗಳನ್ನು ಮುರಿದು ಹೊಸ ಪರಿಕಲ್ಪನೆ ಕೊಡುವ ಯತ್ನ ನಮ್ಮ ಈ ಧಾರಾವಾಹಿಯಲ್ಲಿದೆ’ ಎಂದು ವಿವರಣೆ ನೀಡುತ್ತಾರೆ ‘ಶ್ರೀಮತಿ’ ಯಾನೆ ಶಾಲಿನಿ.

ಶಾಲಿನಿ ಮತ್ತು ಶ್ರೀಮತಿಗೆ ಏನಾದರೂ ಹೋಲಿಕೆ ಇದೆಯೇ ಎಂದು ಕೇಳಿದರೆ ಇಬ್ಬರೂ ಪ್ರೀತಿಗೆ ಕರಗುತ್ತಾರಂತೆ.. ‘ನಾನು ಇಷ್ಟಪಟ್ಟವರು ಯಾರನ್ನಾದರೂ ಕೊಲೆ ಮಾಡಿದರೂ ಅವರನ್ನು ಬಚಾವ್‌ ಮಾಡಲು ಯತ್ನಿಸುತ್ತೇನೆ. ಶ್ರೀಮತಿಯೂ ಹಾಗೇ ಅಲ್ವಾ? ಸೊಸೆಯನ್ನೂ ಸೇರಿಸಿದಂತೆ ಎಲ್ಲರಿಗೂ ಚಾಟಿ ಬೀಸುತ್ತಲೇ ಪ್ರೀತಿಯನ್ನೂ ತೋರಿಸುತ್ತಾಳೆ. ಶ್ರೀಮತಿ ವಯ್ಯಾರಿ. ಮನೇಲೂ ಮೇಕಪ್‌ ಮಾಡ್ಕೊಂಡು ಒಳ್ಳೊಳ್ಳೆ ಬಟ್ಟೆ ಹಾಕ್ಕೊಂಡು ಇರೋಳು. ಈ ಶಾಲಿನಿ ಮನೇಲಿ ತುಂಬಾ ಸಿಂಪಲ್‌‘ ಅಂತಾರೆ.

ಶ್ರೀಮತಿ ಕಳೆದ ಬಾರಿ ಚೂಡಿದಾರ್‌ ಮಾತ್ರ ಧರಿಸಿದ್ದರೆ ಈ ಬಾರಿ ಟ್ರೆಂಡಿ ಉಡುಗೆ ತೊಡುಗೆ ಧರಿಸಿದ್ದಾಳೆ. ದಪ್ಪಗಿರುವ ಹೆಣ್ಮಕ್ಕಳೂ ಯಾವುದೇ ಬಗೆಯ ಉಡುಗೆ ತೊಡುಗೆ ಧರಿಸಬಹುದು ಎಂಬ ಸಂದೇಶ ಸಾರುವ ಪ್ರಯತ್ನ ಇದಂತೆ.

‘ಬಿಗ್‌ಬಾಸ್‌ ರಿಯಾಲಿಟಿ ಶೋದಲ್ಲಿ ಒಮ್ಮೆ ಸ್ಪರ್ಧಿಸಿದರೆ ಅವರ ಅದೃಷ್ಟವೇ ಬದಲಾಗುತ್ತದೆ. ಕಿರುತೆರೆ, ಹಿರಿತೆರೆಯಲ್ಲಿ ಅವಕಾಶಗಳು ಧಂಡಿಯಾಗಿ ಸಿಗ್ತಾವೆ ಎಂಬ ಕಲ್ಪನೆ ಕೆಲವರಿಗಿದೆ. ಬಿಗ್‌ಬಾಸ್‌ಗೆ ಹೋಗುವುದಕ್ಕೆ ಮೊದಲೂ ನನಗೆ ಕೈತುಂಬಾ ಅವಕಾಶಗಳಿದ್ದವು. ಆಮೇಲೂ ಅಷ್ಟೇ. ನಮ್ಮಲ್ಲಿ ಪ್ರತಿಭೆ ಇದ್ದರೆ ವೇದಿಕೆಗಳೂ ಸಿಗ್ತಾವೆ. ಶೋಗಳ ನಿರೂಪಣೆ ಮತ್ತು ಧಾರಾವಾಹಿಯಲ್ಲಿ ಬ್ಯುಸಿ ಇರುವ ಕಾರಣ ಚಿತ್ರರಂಗದ ಆಫರ್‌ಗಳನ್ನು ಬಿಟ್ಟಿದ್ದೇನೆ’ ಎನ್ನುತ್ತಾರೆ ಶಾಲಿನಿ.

ಹಾಸ್ಯವನ್ನು ಅಶ್ಲೀಲವಾಗಿ ಮತ್ತು ಅಪಹಾಸ್ಯವಾಗಿ ಬಳಸುವ ಯಾವುದೇ ಆಫರ್‌ಗಳನ್ನೂ ಶಾಲಿನಿ ಒಪ್ಪಿಕೊಳ್ಳುವುದಿಲ್ಲವಂತೆ. ಆದರೆ ‘ಸಿಟ್‌ಅಪ್‌ ಕಾಮಿಡಿ’ ಸರಣಿಯಂತೆ ಪ್ರಸಾರವಾಗುತ್ತಿರುವ ‘‍ಪಾಪ ಪಾಂಡು’ ಮಾತ್ರ ಸಾವಿರಾರು ಸಂಚಿಕೆ ಓಡಿದರೂ ‘ಶ್ರೀಮತಿ’ಯಾಗಿರಲು ಇಷ್ಟಪಡುತ್ತಾರಂತೆ.

ಮಕ್ಕಳಿಗೂ ‘ಪಾಪ...’

ಮನೆ ಮಂದಿಯೆಲ್ಲರೂ, ಮಕ್ಕಳನ್ನೂ ಜೊತೆಗಿಟ್ಟುಕೊಂಡು ನೋಡಬಹುದಾದ ಬೆರಳೆಣಿಕೆಯ ಧಾರಾವಾಹಿಗಳಲ್ಲೊಂದು ‘ಪಾಪ ಪಾಂಡು’.

ಮಧ್ಯಮ ವರ್ಗದ ತುಂಬು ಕುಟುಂಬವೊಂದರ ದೈನಿಕ ಚಟುವಟಿಕೆಗಳನ್ನು ಹಾಸ್ಯದಲ್ಲಿ ಅದ್ದಿ ವೀಕ್ಷಕರು ಕಚಗುಳಿ ಇಟ್ಟಂತೆ ನಗುವಂತೆ ಮಾಡುವುದು ಈ ಧಾರಾವಾಹಿಯ ವೈಶಿಷ್ಟ್ಯ. 2001ರಿಂದ 2006ರವರೆಗೆ ಕಿರುತೆರೆಯಲ್ಲಿ ಪ್ರಸಾರವಾಗಿದ್ದ ‘ಪಾಪ ಪಾಂಡು’ ಧಾರಾವಾಹಿ 12 ವರ್ಷಗಳ ಬಳಿಕ ಮತ್ತೆ ವೀಕ್ಷಕರಿಗೆ ಕಚಗುಳಿ ಇಡುತ್ತಿದೆ. 

ಮಕ್ಕಳಿಗೆ ಮನರಂಜನೆ!

‘ಪಾಪ ಪಾಂಡು’ ಫ್ಯಾಮಿಲಿ ಪ್ಯಾಕೇಜ್‌ನಂತಹ ಧಾರಾವಾಹಿ. ಶಾಲಿನಿ ಹೇಳುವಂತೆ, ಮಕ್ಕಳ ಮನರಂಜನೆಯನ್ನೇ ಗುರಿಯಾಗಿಟ್ಟುಕೊಂಡು ಮಾಡಲಾಗಿರುವ ಧಾರಾವಾಹಿ. ಗ್ರಾಫಿಕ್‌ ಮತ್ತು ಕ್ಯಾಮೆರಾ ಗಿಮಿಕ್‌ಗಳನ್ನು ಬಳಸಿ ಪಾತ್ರಗಳ ಚಲನವಲನಗಳನ್ನು ಹಾಸ್ಯಮಯವಾಗಿ ತೋರಿಸುತ್ತಿದ್ದರೆ ಮಕ್ಕಳು ಹೊಟ್ಟೆ ಹುಣ್ಣಾಗುವಂತೆ ನಗುತ್ತಾರೆ. ಆದರೆ ಎಷ್ಟೋ ಮಕ್ಕಳಿಗೆ ಈ ಧಾರಾವಾಹಿಯನ್ನು ನೋಡುವ ಅವಕಾಶ ಸಿಗುವುದಿಲ್ಲ. 

ಇದಕ್ಕೆ ಕಾರಣ ಪ್ರಸಾರವಾಗುವ ಸಮಯ. ರಾತ್ರಿ 10ರಿಂದ 10.30ರವರೆಗೆ ‘ಪಾಪ ಪಾಂಡು’ ಪ್ರಸಾರವಾಗುತ್ತದೆ. ವಾರಾಂತ್ಯಗಳಲ್ಲಿ ಧಾರಾವಾಹಿಗೆ ರಜೆ. ಹಾಗಾಗಿ ಮಕ್ಕಳನ್ನು ರಂಜಿಸಬಹುದಾದ ಧಾರಾವಾಹಿ ಅವರಿಗೆ ಸೂಕ್ತವಾದ ವೇಳೆಯಲ್ಲಿ ಪ್ರಸಾರವಾಗುತ್ತಿಲ್ಲ ಎಂಬ ದೂರೂ ಇದೆ.

ಪ್ರತಿಕ್ರಿಯಿಸಿ (+)