'ನೋ ಮೋರ್ ಟಿಯರ್ಸ್' ಬಳಸಿದರೆ, ಮಗುವಿಗೆ ಬರುತ್ತೆ ಅಪಾಯದ ಟಿಯರ್ಸ್

ಗುರುವಾರ , ಏಪ್ರಿಲ್ 25, 2019
32 °C

'ನೋ ಮೋರ್ ಟಿಯರ್ಸ್' ಬಳಸಿದರೆ, ಮಗುವಿಗೆ ಬರುತ್ತೆ ಅಪಾಯದ ಟಿಯರ್ಸ್

Published:
Updated:
Prajavani

ನವದೆಹಲಿ: ಮಕ್ಕಳ ಸ್ನಾನಕ್ಕೆ ಬಳಸುವ ಜನಪ್ರಿಯ ಜಾನ್ಸನ್ ಅಂಡ್ ಜಾನ್ಸನ್ ಕಂಪನಿಯ 'ನೋ ಮೋರ್ ಟಿಯರ್ಸ್' ಶಾಂಪೂನಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆಯಾಗಿದ್ದು ಇದನ್ನು ಬಳಸದಂತೆ ಹಾಗೂ ಮಾರಾಟ ಮಾಡದಂತೆ ರಾಜಸ್ಥಾನ ಔಷಧ ನಿಯಂತ್ರಣ ಇಲಾಖೆ ದೇಶದ ಎಲ್ಲಾ ರಾಜ್ಯಗಳಿಗೆ ಎಚ್ಚರಿಕೆ ನೋಟೀಸ್ ಜಾರಿ ಮಾಡಿದೆ.

ಅಲ್ಲದೆ, ದೇಶದಾದ್ಯಂತ ಇರುವ ಈ ಬೇಬಿ ಶಾಂಪೂಗಳನ್ನು ವಶಪಡಿಸಿಕೊಳ್ಳುವಂತೆ ದೇಶದ ಎಲ್ಲಾ ಆರೋಗ್ಯ ಇಲಾಖೆಗಳು, ಪೊಲೀಸ್ ಇಲಾಖೆಗಳೂ ಸೇರಿದಂತೆ ಎಲ್ಲಾ ಇಲಾಖೆಗಳಿಗೂ ಕಳುಹಿಸಿಕೊಟ್ಟಿದೆ. ಅಮೆರಿಕಾ ಮೂಲದ ಕಂಪನಿಯ ಈ ಶಾಂಪೂ ಬಳಸುವುದರಿಂದ ಉಂಟಾಗುವ 'ಫಾರ್ಮಲ್ ಡಿಹೈಡ್' ಎಂಬ ಅಂಶವು ಮಗುವಿನ ದೇಹದಲ್ಲಿ ಕ್ಯಾನ್ಸರ್ ಉತ್ಪತ್ತಿಯಾಗಲು ಕಾರಣವಾಗುತ್ತದೆ. ಹಿಮಾಚಲ ಪ್ರದೇಶದ ಬಡ್ಡಿ ಪ್ರದೇಶದಲ್ಲಿ ತಯಾರಿಸಿ ಎರಡು ಬ್ಯಾಚ್‌ನಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾದ ಶಾಂಪೂ ಬಾಟಲಿಗಳಲ್ಲಿ ಈ ಅಂಶ ಇರುವುದು ಪತ್ತೆಯಾಗಿದೆ ಎಂದು ನೋಟೀಸ್‌ನಲ್ಲಿ ತಿಳಿಸಲಾಗಿದೆ.

ನಮಗೆ ಶಾಂಪೂನಲ್ಲಿ ಅಧಿಕ ಪ್ರಮಾಣದ ಫಾರ್ಮಲ್ ಡಿಹೈಡ್ ಹೊರಸೂಸುವುದು ಪತ್ತೆಯಾಗಿದೆ. ಇದರಿಂದಾಗಿ ಎಲ್ಲಾ ರಾಜ್ಯಗಳು ಈ ಎರಡು ಬ್ಯಾಚ್‌ನ ಶಾಂಪೂಗಳನ್ನು ಕೂಡಲೇ ವಶಪಡಿಸಿಕೊಳ್ಳಬೇಕು ಎಂದು ಮಾರ್ಚ್ ತಿಂಗಳ ಕೊನೆ ವಾರ ಡ್ರಗ್ ಇನ್ಸ್ ಪೆಕ್ಟರ್ ರಾಜಾ ರಾಮಶರ್ಮ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಈ ಎರಡು ಬ್ಯಾಚಿನ ಶಾಂಪೂಗಳನ್ನು ತಾವು ಪರೀಕ್ಷೆಗೆ ಒಳಪಡಿಸಿದಾಗ ಮಕ್ಕಳಿಗೆ ಉಪಯೋಗಿಸುವ ಗುಣಮಟ್ಟದಲ್ಲಿ ಇವು ಇರಲಿಲ್ಲ. ಅಲ್ಲದೆ, ಅಗತ್ಯ ಮುನ್ನೆಚ್ಚರಿಕೆ ಕ್ರಮ ವಹಿಸದೆ, ಇಂತಹ ಉತ್ಪನ್ನಗಳನ್ನು ಉಪಯೋಗಿಸಬಾರದು ಎಂದು ನೋಟೀಸ್‌ನಲ್ಲಿ ತಿಳಿಸಲಾಗಿದೆ.

ಸರಿಯಾದ ಮಾನದಂಡ ಅನುಸರಿಸಿಲ್ಲ : ಕಂಪನಿ

ನಮ್ಮ ಉತ್ಪನ್ನವನ್ನು ಪರೀಕ್ಷಿಸಲು ಸರ್ಕಾರ ಯಾವ ವಿಧಾನ ಅನುಸರಿಸಿದೆ ಎಂಬುದನ್ನೇ ಬಹಿರಂಗಪಡಿಸಿಲ್ಲ. ಜಯಪುರ ಹಾಗೂ ರಾಜಸ್ಥಾನದದಿಂದ ಡ್ರಗ್ ಕಂಟ್ರೋಲರ್ ಗಳು ಬಂದಿದ್ದರು. ಅವರು ಶಾಂಪೂಗಳ ಎಲ್ಲಾ ಮಾದರಿಗಳನ್ನು ಕೊಡುವಂತೆ ಹೇಳಿದರು. ನಾವು ಕೊಟ್ಟೆವು. ಆದರೆ ನಮಗೆ ಅವರು ಪರೀಕ್ಷೆ ಮಾಡಿದ ವಿಧಾನವನ್ನೇ ಬಹಿರಂಗಪಡಿಸಿಲ್ಲ. ಅಷ್ಟರಲ್ಲಿ ಎಲ್ಲಾ ಕಡೆ ನೋಟೀಸ್ ಜಾರಿ ಮಾಡಿದ್ದಾರೆ ಎಂದು ಕಂಪನಿಯ ವಕ್ತಾರರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಸದರಿ ಪರೀಕ್ಷೆ ನಡೆಸುವಾಗ ಅನುಸರಿಸುವ ಕ್ರಮ ಸರಿಯಾಗಿಲ್ಲ. ಆದ ಕಾರಣ ಕಂಪನಿಯು ಈಗಾಗಲೇ ಸರ್ಕಾರಕ್ಕೆ ಸ್ಪಷ್ಟಪಡಿಸಿದ್ದು, ಜಾನ್ಸನ್ ಬೇಬಿ ಶಾಂಪೂನಲ್ಲಾಗಲಿ ಅಥವಾ ಇದನ್ನು ಹೊರಹಾಕುವ ಇನ್ನಾವುದೇ ಉತ್ಪನ್ನವನ್ನಾಗಲಿ ಅಪಾಯಕಾರಿ ಮಟ್ಟದಲ್ಲಿ ಬಳಸಿಲ್ಲ ಎಂಬುದನ್ನು ಹೇಳಿದ್ದೇವೆ ಎಂದಿದ್ದಾರೆ.

2014ರಲ್ಲಿ ಶಾಂಪೂ ಸೇರಿದಂತೆ ಹಲವು ಉತ್ಪನ್ನಗಳಲ್ಲಿ ಫಾರ್ಮಲ್ ಡಿಹೈಡ್ ಹೊರಸೂಸುವ ರಾಸಾಯನಿಕಗಳು ಹೆಚ್ಚಿನ ಪ್ರಮಾಣದಲ್ಲಿ ಕಂಡುಬಂದಿದ್ದು, ಇವು ತೀವ್ರತರವಾದ ಕ್ಯಾನ್ಸರ್ ಉತ್ಪತ್ತಿಗೆ ಕಾರಣವಾಗುತ್ತವೆ ಎಂಬುದನ್ನು ಪತ್ತೆ ಮಾಡಿದ ಹಲವು ದೇಶಗಳ ಗ್ರಾಹಕರು ಕಂಪನಿಯ ವಿರುದ್ಧ ದೂರು ನೀಡಿದ್ದರು. ಈ ಸಂಬಂಧ ಜಾನ್ಸನ್ ಅಂಡ್ ಜಾನ್ಸನ್ ಕಂಪನಿಯು ಜನವರಿ 2014ರಲ್ಲಿಯೇ ವಿದೇಶೀ ಮಾಧ್ಯಮಗಳ ಮುಂದೆ ಬಂದು ಈ ರಾಸಾಯನಿಕಗಳನ್ನು ಬಳಸುವಾಗ ಗ್ರಾಹಕರು ಮತ್ತು ಪರಿಸರಕ್ಕೆ ಸಂಬಂಧಪಟ್ಟ ಸಂಘಟನೆಗಳಿಂದ ಪರಿಶೀಲನೆಗೆ ಒಳಪಡಿಸಲಾಗುತ್ತದೆ. ಅಲ್ಲದೆ, ನಾವು ಈ ಎರಡು ರಾಸಾಯನಿಕಗಳ ಬಳಕೆಯನ್ನು ನಿಲ್ಲಿಸಿದ್ದು, ಒಂದು ವೇಳೆ ಬಳಸಿದರೂ ಲಕ್ಷಗಟ್ಟಲೆಗೆ ಒಂದರಿಂದ ನಾಲ್ಕು ಭಾಗದಷ್ಟನ್ನು ಮಾತ್ರ ಬಳಸಲಾಗುತ್ತದೆ ಎಂದು ತಿಳಿಸಿತ್ತು.

ಉತ್ಪನ್ನ ಪತ್ತೆ ಪರಿಶೀಲನೆಗೆ

ಕಂಪನಿಯ ಈ ಉತ್ಪನ್ನದಲ್ಲಿ ಕ್ಯಾನ್ಸರ್‌ಕಾರಕ ಅಂಶ ಪತ್ತೆಯಾದ ಹಿನ್ನೆಲೆಯಲ್ಲಿ ಭಾರತ ಸರ್ಕಾರ, ಮಕ್ಕಳಿಗೆ ಬಳಸುವ ಎಲ್ಲಾ ಕಂಪನಿಗಳ ಶಾಂಪೂ, ಬೇಬಿ ಪೌಡರ್ ಸೇರಿದಂತೆ ಇತರೆ ಉತ್ಪನ್ನಗಳನ್ನು ಪರೀಕ್ಷೆಗೆ ಒಳಪಡಿಸಲು ಆರಂಭಿಸಿದೆ.

ಬರಹ ಇಷ್ಟವಾಯಿತೆ?

 • 22

  Happy
 • 1

  Amused
 • 1

  Sad
 • 2

  Frustrated
 • 7

  Angry

Comments:

0 comments

Write the first review for this !