ದ್ವಂದ್ವ

ಭಾನುವಾರ, ಮೇ 26, 2019
33 °C

ದ್ವಂದ್ವ

Published:
Updated:
Prajavani

ಶಿವನ ತಲೆಯ ಮೇಲೆ ಗಂಗೆ,
ತೊಡೆಯ ಮೇಲೆ ಉಮೆ;
ಇಬ್ಬರು ಹೆಂಡಂದಿರಿಗೂ
ಎದೆ ಧಗಧಗ ಕುಲುಮೆ.

ಇಳಿದು, ಶಿವನ ತೊಡೆಯ ಮೇಲೆ
ಕೂರುವಾಸೆ ಗಂಗೆಗೆ;
ತೊಡೆಯ ಬಿಟ್ಟು ಶಿವನ ಮುಡಿಗೆ
ಏರುವಾಸೆ ಉಮೆಗೆ.

‘ಬೇಡ ನನಗೆ ನಿನ್ನ ತಲೆ,
 ನೀಡೊ ತೊಡೆಯ ಸುಖ
ಅಂಗಲಾಚುತ್ತಾಳೆ ಗಂಗೆ,
ಇಳಿಸಿಕೊಳ್ಳೋ, ಸಖ’

‘ಸಾಕಾಗಿದೆ ನಿನ್ನ ತೊಡೆ,
ಮುಡಿಗೇರಿಸೊ, ಶಿವನೇ’
ಬೇಡುತ್ತಾಳೆ, ಕಾಡುತ್ತಾಳೆ
ಉಮೆ ಒಂದೇ ಸಮನೆ.

ಅನ್ನುತ್ತಾನೆ ಶಿವ, ‘ನೀವು
‌ಆದರದಲು ಬದಲು,
ತಲೆಯೂ ಜಡ, ತೊಡೆಯೂ ಜಡ,
ಅತಂತ್ರ ನನ್ನ ಬಾಳು.

ಆದ್ದರಿಂದ ಹೆಂಡಂದಿರೇ
ನೀವಿದ್ದಲ್ಲೇ ಇರಿ;
ಸಂಸಾರದ ಸಮರಸಕ್ಕೆ
ಅದೇ ಬರಾಬರಿ’

ತಲೆಗೊಬ್ಬಳು, ತೊಡೆಗೊಬ್ಬಳು,
ಇದು ಗಂಡಿನ ದ್ವಂದ್ವ;
ಹೆಣ್ಣಿಗೂ ಅನ್ವಯಿಸಬಹುದೇ
ಇಂದೀ ಶಿವತತ್ತ್ವ?

‘ನಮಗೂ ಉಂಟು ತಲೇ, ತೊಡೆ,
ಬೇಡ ಲಿಂಗಭೇದ"
ಗಂಗೆ ಉಮೆಯ ಮಾತಿಗೆ
ಹೌದೆಂದಿದೆ ಸ್ತ್ರೀವಾದ.

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !