ಶಿವ: ಸಂಸಾರವನ್ನು ಪ್ರೀತಿಸುವ ವೈರಾಗ್ಯಮೂರ್ತಿ

ಮಂಗಳವಾರ, ಮಾರ್ಚ್ 19, 2019
28 °C

ಶಿವ: ಸಂಸಾರವನ್ನು ಪ್ರೀತಿಸುವ ವೈರಾಗ್ಯಮೂರ್ತಿ

Published:
Updated:
Prajavani

ಶಿವನೆಂದ ಕ್ಷಣ ಕಣ್ಣಿಗೆ ಕಟ್ಟುವ ಚಿತ್ರಗಳೆಂದರೆ ಅರ್ಧನಿಮಿಲಿತ ನೇತ್ರಗಳ ಅಧ್ಯಾತ್ಮದ ಉತ್ತುಂಗ ಸ್ಥಿತಿಯ ಧ್ಯಾನಸ್ಥ ಶಿವ ಮತ್ತು ಅಪ್ಪಟ ಸಂಸಾರಿಯಾಗಿ ವರದಹಸ್ತೆ ಪಾರ್ವತಿ ಮತ್ತಿಬ್ಬರು ಮಕ್ಕಳೊಂದಿಗೆ ಇರುವ ಚಿತ್ರ. ಪೂರ್ಣಸಂಸಾರದ ದೇವರು ಇನ್ನೊಬ್ಬನಿಲ್ಲವೇನೋ ಎನ್ನುವಂತೆ ಈ ಚಿತ್ರ,

ನಮ್ಮ ಸಂಸ್ಕೃತಿಯ ಭಾಗವಾದಂತೇ ಧ್ಯಾನಸ್ಥ ಶಿವನೂ ಅಷ್ಟೇ ಅಪ್ಯಾಯಮಾನವಾಗಿ ಕಾಣುತ್ತಾನೆ. ಬದುಕಿನ ಎರಡು ತೀರಗಳ, ಎರಡು ಗಮ್ಯಗಳ ನಡುವಿನ ಸೇತುವೆಯಂತಿದ್ದಾನೆ ಪರಶಿವ. ಅದೊಂದು ನಾಟಕ, ಶಿವ, ನಂಜುಂಡನಾಗಿ ಭೂಲೋಕದಲ್ಲಿ ಬದುಕು ನಡೆಸುತ್ತಿರುವ ಸ್ವಾರಸ್ಯಕರ ಜಾನಪದ ಹಂದರವುಳ್ಳ ಕಥೆ.

ಪತ್ನಿ ಪಾರ್ವತಿಯಿದ್ದೂ ಶಿವ, ಚೆಲುವೆ ಚಾಮುಂಡಿಯ ಒಲವಿನ ಬಲೆಗೆ ಬಿದ್ದವ. ನಾಟಕದ ಒಂದೊಂದು ಪಾತ್ರವೂ, ಸಂಭಾಷಣೆಯೂ ಅದೆಷ್ಟು ಖುಷಿ ನೀಡುತ್ತಿತ್ತು ಎನ್ನುವುದಕ್ಕೆ ಪ್ರೇಕ್ಷಕರ ಶಿಳ್ಳೆ, ಚಪ್ಪಾಳೆ ಸಾಕ್ಷಿಯಾಗಿತ್ತು. ಅದುವರೆಗೂ ನಮ್ಮ ಮನದಲ್ಲಿ ಅರ್ಧನಿಮಿಲಿತ ನೇತ್ರಗಳ ಧ್ಯಾನಸ್ಥ ಶಿವನ ಬಿಂಬವೇ ಮೂರ್ತವಾಗಿದ್ದರೂ ಆ ಹೊತ್ತಿನಲ್ಲಿ ಮನದಲ್ಲಿ ಶಿವ ಮತ್ತವನ ಸಂಸಾರದ ಕುರಿತಾದ ಹೊಸ ಚೌಕಟ್ಟು ಮುದ ನೀಡುತ್ತಿತ್ತು. ಕೈಲಾಸವಾಸ ಗೌರೀಶನಾದ ಪರಶಿವ ಇಬ್ಬರು ಹೆಂಡಿರ ನಡುವೆ ಸಿಕ್ಕಿ ಪೇಚಿಗೆ ಬೀಳುವ ಸನ್ನಿವೇಶ, ಪ್ರೇಕ್ಷಕರಿಗೆ ಪ್ರಾಯಶಃ ದೇವನೂ ಮಾನವನ ಮಟ್ಟಕ್ಕೆ ಇಳಿದುದು ಅವನನ್ನು ಗ್ರಹಿಸಲು ಸುಲಭವಾಯಿತೇನೋ ಎನ್ನುವಂತೇ ತೃಪ್ತಿ ನೀಡಿತ್ತು.

ಹೀಗೆ, ಪರಶಿವ, ಎಲ್ಲ ಸ್ತರಗಳಲ್ಲೂ ಎಲ್ಲರಿಗೂ ಏಕಕಾಲದಲ್ಲಿ ದಕ್ಕುವ ಅಪರೂಪದ ದೇವರ ದೇವ.  ಹೆಣ್ಣಿಗೆ, ಕೃಷ್ಣ ನೀಡಿದಷ್ಟೇ ಮಹತ್ವ ಕೊಟ್ಟ ಇನ್ನೊಬ್ಬ ದೇವರೆಂದರೆ ಅದು ಪರಶಿವ. ತನ್ನ ಶರೀರದ ಅರ್ಧಭಾಗವನ್ನೇ ಪಾರ್ವತಿಗೆ ನೀಡಿ ಅರ್ಧನಾರೀಶ್ವರನಾದ ಶಿವ ಒಂದೊಮ್ಮೆ ತನ್ನ ಪತ್ನಿ ಸತಿಗಾದ ಅವಮಾನ ತಾಳಲಾರದೇ ಸಮಸ್ತವನ್ನೂ ನಾಶ ಮಾಡಲು ಹೊರಟವ. ಹೆಣ್ಣಿಗೆ ಮೋಹ ಮೂಡಲು ಇಷ್ಟು ಸಾಲದೇ! ತನ್ನ ಸತಿಯ ಆತ್ಮಘನತೆಯನ್ನು ಗೌರವಿಸಿದ ಶಿವನನ್ನು ಹಾಗೆ ಪಾರ್ವತಿ ಅಷ್ಟು ಕಠಿಣ ತಪಸ್ಸು ಮಾಡಿ ಒಲಿಸಿಕೊಂಡು ಲಗ್ನವಾಗಿದ್ದು. ಅಷ್ಟಕ್ಕೂ ಹೆಣ್ಣಿಗೆ ಬೇಕಿದ್ದುದು ಅಷ್ಟೇ, ತನ್ನನ್ನು ಗೌರವಿಸುವ ಗಂಡು. ಪ್ರೇಮದಲ್ಲಿ ಕೊಂಚ ಹೆಚ್ಚು ಕಡಿಮೆಯಾದರೂ ಹೆಣ್ಣು ಸಹಿಸುತ್ತಾಳೆ, ಆದರೆ ಗೌರವದಲ್ಲಿ ಏರುಪೇರಾದರೆ ಆಕೆ ಸಹಿಸಲಾರಳು.

ಹಾಗೆ ನೋಡಿದರೆ ಶಿವನಂಥ ಮುಗ್ಧ, ಸರಳ, ಸಾಮಾನ್ಯ ಅಗತ್ಯಗಳ ಗಂಡ ಸಿಗಲಾರನೇನೋ! ಸ್ಮಶಾನವಾಸಿ, ಅಭಿಷೇಕ ಮಾತ್ರದಿಂದಲೇ ತೃಪ್ತನಾಗುವ, ಕಪಾಲದಲ್ಲಿ ಕೊಟ್ಟರೂ ಉಣ್ಣುವ, ಚರ್ಮಾಂಬರಧಾರಿ ಶಿವ, ಪಾರ್ವತಿಯ ಮಾತೃತ್ವಕ್ಕೆ ಗೌರವ ಕೊಟ್ಟು ಆನೆಮುಖದ ಗಣಪತಿಯನ್ನೂ ಮಗನೆಂದು ತಬ್ಬಿಕೊಂಡವ. ಪತ್ನಿ ಪಾರ್ವತಿಯನ್ನು ತೊಡೆಯ ಮೇಲೆ ಕುಳ್ಳಿರಿಸಿಕೊಂಡವ. ಹೆಣ್ಣು ಆಶಿಸುವ ಸಮಾನತೆ, ಪ್ರೀತಿಯನ್ನು ಮೊಗೆದು ಕೊಟ್ಟು ಮೇಲ್ಪಂಕ್ತಿ ಹಾಕಿದವನು ಪರಶಿವ. 

ಹೆಣ್ಣಿಗೆ ಪ್ರಕೃತಿ ಸಹಜವಾಗಿ ಪ್ರೀತಿ ಬೇಕು ಮತ್ತು ಅಷ್ಟೇ ಸಹಜವಾಗಿ ಮುಕ್ತತೆಯೂ ಬೇಕೇ ಬೇಕು. ಶಿವನ ಅರ್ಧಾಂಗಿಯಾದ ಗೌರಿ ಈ ಎರಡೂ ವಿಶೇಷತೆಗಳನ್ನು ಸಮೃದ್ಧವಾಗಿ ಪಡೆದವಳು. ಗೌರಿಪಾರ್ವತಿ, ಶಕ್ತಿಯಾಗಿ ತನ್ನ ಅಪೂರ್ವ ವ್ಯಕ್ತಿತ್ವದಿಂದಲೇ ಪುರಾಣವನ್ನು ವಾಙ್ಮಯವನ್ನೂ ತುಂಬಿದವಳು. ಶಿವನ ಹೊರತಾಗಿಯೂ ಅವಳಿಗೆ ಅವಳದ್ದೇ ಆದ ಅಸ್ತಿತ್ವವಿದೆ. ಆದರೆ ಅವಳ ವಿಸ್ಮಯಗೊಳಿಸುವ ಅಸ್ತಿತ್ವದಿಂದ ಶಿವ ಕೊಂಚನೂ ಅಧೀರನಾಗದೇ ಅವಳನ್ನು ಮತ್ತಷ್ಟೂ ಮೆಚ್ಚುಗೆಯಿಂದಲೇ ಶರೀರದ ಭಾಗವಾಗಿಸಿಕೊಂಡ. ನಿಜಕ್ಕೂ ‘ಈ ಪರಿಯ ಪತಿ ಯಾವ ಲೋಕದಲೂ ಕಾಣೆ’ ಎಂದು ಹಾಡುವಷ್ಟೂ ಶಿವನು ಹೆಣ್ಣಿನ ಆಶಯಗಳಿಗೆ ಭಾವಗಳಿಗೆ ಉತ್ತರವಾಗುತ್ತಾನೆ. ಪತ್ನಿಯೊಂದಿಗೆ ಪಗಡೆಯಾಡಬಲ್ಲ, ಪತ್ನಿಯೊಂದಿಗೆ ನಾಟ್ಯವನ್ನೂ ಮಾಡಬಲ್ಲ. ಅವಳನ್ನು ಸಾಮಾನ್ಯ ಗಂಡಸಂತೆ ಸೋಲಿಸಲು ಕಾಲನ್ನು ಮೇಲೆತ್ತಿ ನಟರಾಜನಾಗಿ ಮೆರೆಯಲೂ ಬಲ್ಲ, ಅವಳ ಶಕ್ತಿಗೆ ಬೆರಗಾಗಿ ಅವಳ ಪಾದಧೂಳಿಯನ್ನು ಬಳಿದುಕೊಳ್ಳಲೂ ಬಲ್ಲ ಶಿವ, ಹೆಣ್ಣಿನ ಮನದಲ್ಲಿ ನವರಸಗಳನ್ನೂ ಸ್ಫುರಿಸಿ ಶಾಂತದಲ್ಲಿ ಮುಕ್ತವಾಗಿಸುತ್ತಾನೆ.

ಸಂಸಾರಿಯಾಗಿಯೂ ವೈರಾಗ್ಯವನ್ನು ಹೊದ್ದುಕೊಂಡ ಶಿವ ಎರಡನ್ನೂ ಸರಿದೂಗಿಸಿಕೊಂಡು ಹೋಗುವ ಸರಳಸೂತ್ರದ ರೂವಾರಿ. ಕುಟುಂಬ, ಮಡದಿ, ಮಕ್ಕಳೂ ಎಲ್ಲವೂ ಇದ್ದು, ಏನೂ ಇಲ್ಲದಂತಿರುವ ಶಿವನ ಬದುಕು ಸಮಚಿತ್ತದ, ಮನೋನಿಗ್ರಹದ, ಶಮದ ಸಾಕ್ಷಾತ್ಕಾರವಾಗಿದೆ.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !