30 ವರ್ಷಗಳಿಂದ ಮಠಕ್ಕೆ ತರಕಾರಿ ರವಾನಿಸುತ್ತಿರುವ ಮಲ್ಲಣ್ಣ

7
ಪ್ರತಿ ತಿಂಗಳು ಮಾರುಕಟ್ಟೆಯಲ್ಲಿ ವರ್ತಕರಿಂದ ತರಕಾರಿ, ಆಹಾರ ಧಾನ್ಯಗಳನ್ನು ಸಂಗ್ರಹಿಸಿ ಮಠಕ್ಕೆ ರವಾನಿಸುವ ವ್ರತ ಪಾಲಿಸಿಕೊಂಡು ಬಂದ ಭಕ್ತ

30 ವರ್ಷಗಳಿಂದ ಮಠಕ್ಕೆ ತರಕಾರಿ ರವಾನಿಸುತ್ತಿರುವ ಮಲ್ಲಣ್ಣ

Published:
Updated:

ಚಿಕ್ಕಬಳ್ಳಾಪುರ: ನಗರದ ಬಿ.ಬಿ.ರಸ್ತೆಯ ಹಣ್ಣಿನ ವ್ಯಾಪಾರಿ ಮಲ್ಲಣ್ಣ ಅವರಿಗೂ ಮತ್ತು ಸಿದ್ಧಗಂಗಾ ಮಠಕ್ಕೂ ಅವಿನಾಭಾವದ ನಂಟು. ಕಳೆದ 51 ವರ್ಷಗಳಿಂದ ಮಠದ ಒಡನಾಟ ಹೊಂದಿರುವ ಮಲ್ಲಣ್ಣ 30 ವರ್ಷಗಳಿಂದ ಪ್ರತಿ ತಿಂಗಳು ಮಾರುಕಟ್ಟೆಯಲ್ಲಿ ವರ್ತಕರಿಂದ ತರಕಾರಿ, ಆಹಾರ ಧಾನ್ಯಗಳನ್ನು ಸಂಗ್ರಹಿಸಿ ಮಠಕ್ಕೆ ಕಳುಹಿಸಿಕೊಡುತ್ತ ಬಂದಿದ್ದಾರೆ.

ಸಿದ್ಧಗಂಗಾ ಮಠಾಧಿಪತಿ ಶಿವಕುಮಾರ ಸ್ವಾಮೀಜಿ ಚಿಕ್ಕಬಳ್ಳಾಪುರ ತಾಲ್ಲೂಕು ಸುಮಾರು 30ಕ್ಕೂ ಹೆಚ್ಚು ಬಾರಿ ಭೇಟಿ ನೀಡಿದ್ದಾರೆ. ಅದರಲ್ಲಿ ಆರು ಬಾರಿ ಮಲ್ಲಣ್ಣನವರ ಮನೆಗೆ ಭೇಟಿ ನೀಡಿದ್ದಾರೆ ಎನ್ನಲಾಗಿದೆ.

ಶಿವಕುಮಾರ ಸ್ವಾಮೀಜಿ ಅವರು ದೂರದ ಸಂಬಂಧಿಯಾದರೂ (ತಾಯಿಯ ಮೂರನೇ ತಂಗಿಯ ಭಾವನ ಮಗ) ಅದನ್ನು ಹೇಳಿಕೊಳ್ಳದ ಮಲ್ಲಣ್ಣ ಅವರು ತಮ್ಮ ಸಾಮಾಜಿಕ ಕಳಕಳಿಯಿಂದಲೇ ಮಠದೊಂದಿಗೆ ಸೇವಾ ಸಂಬಂಧ ಇಟ್ಟುಕೊಂಡು ಬಂದಿದ್ದಾರೆ.

ಮಲ್ಲಣ್ಣ ಅವರು ಪ್ರತಿ ತಿಂಗಳು ಮಾರುಕಟ್ಟೆಯಲ್ಲಿ ವರ್ತಕರಿಂದ 10 ಟನ್‌ಗಿಂತಲೂ ಹೆಚ್ಚು ತರಕಾರಿ, ಆಹಾರ ಧಾನ್ಯಗಳನ್ನು ಸಂಗ್ರಹಿಸಿ, ತಮ್ಮ ಕೈಲಾದ ಒಂದಷ್ಟು ಸೇರಿಸಿ ಸಿದ್ಧಗಂಗಾ ಮಠಕ್ಕೆ ಕಳುಹಿಸಿಕೊಡುವುದನ್ನು ಒಂದು ವ್ರತದಂತೆ ಪಾಲಿಸಿಕೊಂಡು ಬಂದಿದ್ದಾರೆ. ಮಲ್ಲಣ್ಣ ಅವರ ಭಕ್ತಿಗೆ ಮಾರುಹೋಗಿದ್ದ ಸ್ವಾಮೀಜಿ ಸಹ ಇವರು ಮಠಕ್ಕೆ ಹೋದಾಗಲೆಲ್ಲ ಪ್ರೀತಿಯಿಂದ ಮಾತನಾಡಿಸುತ್ತಿದ್ದರು ಎಂದು ಸ್ಮರಿಸಿಕೊಳ್ಳುತ್ತಾರೆ.

‘ನಾನು ಪ್ರತಿ ಬಾರಿ ಮಠಕ್ಕೆ ಹೋದಾಗಲೆಲ್ಲ ಸ್ವಾಮೀಜಿ ‘ಮಲ್ಲಣ್ಣ’ ಎಂತಲೇ ನನ್ನನ್ನು ಪ್ರೀತಿಯಿಂದ ಕರೆದು ಮಾತನಾಡಿಸಿ, ವಿಚಾರಿಸುತ್ತಿದ್ದರು. ಅನಾರೋಗ್ಯದಿಂದಾಗಿ ಒಂದು ವರ್ಷದಿಂದ ಈಚೆಗೆ ಅವರಿಗೆ ನನ್ನ ಗುರುತು ಸಿಗುತ್ತಿರಲಿಲ್ಲ. ಅಂತಹ ತ್ರಿವಿಧ ದಾಸೋಹಿಗಳು ಮತ್ತೆ ಹುಟ್ಟುವುದು ಅಪರೂಪ’ ಎಂದು ಮಲ್ಲಣ್ಣ ಹೇಳಿದರು.

‘ಸ್ವಾಮೀಜಿ ಅವರ ಸೇವಾ ಕಾರ್ಯ ಕಂಡು ಅನೇಕರು ತಾಲ್ಲೂಕಿನಲ್ಲಿ ತಮ್ಮ ಆಸ್ತಿಗಳನ್ನು ಮಠಕ್ಕೆ ಬರೆದಿದ್ದಾರೆ. ಪಾಲಾಕ್ಷಯ್ಯ ಎಂಬುವರು ಶಿಡ್ಲಘಟ್ಟ ರಸ್ತೆಯಲ್ಲಿ ಶಾಲೆಯೊಂದನ್ನು ಹೊಂದಿರುವ 7 ಎಕರೆ ಜಮೀನು, ನಗರ್ತ ಪೇಟೆಯಲ್ಲಿ ಎರಡು ಮಹಡಿ ಮನೆ, ದೊಡ್ಡಭಜನೆ ಮನೆ ರಸ್ತೆಯ ನಿವಾಸಿ, ವಕೀಲ ಲಕ್ಷ್ಮೀಕಾಂತ್ ಎಂಬುವರು ಮನೆಯನ್ನು ದಾನವಾಗಿ ಬರೆದಿದ್ದಾರೆ. ಚಿಕ್ಕಬಳ್ಳಾಪುರ ತಾಲ್ಲೂಕು ಒಂದರಲ್ಲೇ ಮಠಕ್ಕೆ ಸೇರಿದ ಸುಮಾರು ₹30 ಕೋಟಿ ರೂಪಾಯಿ ದಾನದ ಆಸ್ತಿ ಇದೆ’ ಎಂದು ಮಲ್ಲಣ್ಣ ತಿಳಿಸಿದರು.

ಬರಹ ಇಷ್ಟವಾಯಿತೆ?

 • 73

  Happy
 • 0

  Amused
 • 0

  Sad
 • 3

  Frustrated
 • 1

  Angry

Comments:

0 comments

Write the first review for this !